ವಿಜಯಪುರ: ನಾನು ಲಿಂಗಾಯಿತ ವಿರೋಧಿ ಎಂದು ಹೇಳಿದವರ ನಾಲಿಗೆಯನ್ನು ದೇವರು ಕತ್ತರಿಸಲಿ. ರಾಜ್ಯದಲ್ಲಿ ದಲಿತ ವ್ಯಕ್ತಿಯಾಗಿ ಇತಿಹಾಸ ನಿರ್ಮಿಸಿಯೇ ಸಾಯುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ವಿಜಯಪುರ ರೈಲು ನಿಲ್ದಾಣದಲ್ಲಿ ಒಂದು ನಿಲ್ದಾಣ, ಒಂದು ಉತ್ಪನ್ನ ಮಳಿಗೆ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೂರು ಬಾರಿ ವಿಜಯಪುರ ಸಂಸದನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಪ್ರಧಾನಿ ಮೊದಿ ಅವರಿಗೆ ದೇಶದ ಚಿಂತನೆ ಅಭಿವೃದ್ದಿ ಬಿಟ್ಟು ಬೇರೆ ಕೆಲಸವಿಲ್ಲ. ರಾಮಮಂದಿರ ನಿರ್ಮಾಣ ಮಾಡಿದರು. ವಿಜಯಪುರ ಜಿಲ್ಲೆಗೆ ಏಳು ರಾಷ್ಟ್ರೀಯ ಹೆದ್ದಾರಿಗಳನ್ನು ಮಾಡಿ ಕೊಟ್ಟಿದ್ದಾರೆ. ಮೋದಿ ಅವರು 3ನೇ ಪ್ರಧಾನಿಯಾಗುವುದನ್ನು ಜಗತ್ತಿನ ಯಾವ ಶಕ್ತಿಯೂ ತಡೆಯಲು ಆಗುವುದಿಲ್ಲ ಎಂದು ಅವರು ಹೇಳಿದರು.
ನಾಲಿಗೆಯನ್ನು ಕತ್ತರಿಸಲಿ, ಆರೋಗ್ಯದ ಬಗ್ಗೆ ಅಪಪ್ರಚಾರ ಸಲ್ಲದು
ರಮೇಶ ಜಿಗಜಿಣಗಿ ಲಿಂಗಾಯತ ವಿರೋಧಿಯೆಂದು ಕೆಲವರು ತೋರಿಸಿದ್ದಾರೆ. ಅವರ ನಾಲಿಗೆಯನ್ನು ದೇವರು ಕತ್ತರಿಸಲಿ ಎಂದು ಆಕ್ರೋಶ ಹೊರ ಹಾಕಿದ ಅವರು, ನಾನು ಜಾತಿ ರಾಜಕಾರಣ ಮಾಡಿಲ್ಲ. ನಾನು ಲಿಂಗಾಯತ ವಿರೋಧಿಯಲ್ಲ. ನನಗೆ ಎಲ್ಲರೂ ಬೇಕು. ಒಂದು ಸಮಾಜವನ್ನು ಮಾತ್ರ ಹಿಡಿದುಕೊಂಡು ಹೋದರೆ ರಾಜಕಾರಣ ಮಾಡಲು ಆಗುವುದಿಲ್ಲ. ಎಲ್ಲ ಸಮಾಜದವರ ಸಹಾಯ ಸಹಕಾರವೂ ಬೇಕು ಎಂದು ಅವರು ಹೇಳಿದರು.
ನಾನು ಲಿಂಗಾಯತ ವಿರೋಧಿಯಲ್ಲ. ನನಗೆ ಎಲ್ಲಾ ಸಮಾಜದವರು ಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜಕೀಯ ಮಾಡಿದ್ದರಿಂದಲೇ ಇಷ್ಟು ದಿನ ರಾಜಕೀಯದಲ್ಲಿ ಇದ್ದೇನೆ. ನಾನು ದ್ವೇಷ ರಾಜಕಾರಣ ಮಾಡಿಲ್ಲ. ನನಗೆ ಕೆಟ್ಟದ್ದನ್ನು ಮಾಡಿದವರಿಗೂ ಒಳ್ಳೇಯದನ್ನೇ ಮಾಡಿದ್ದೇನೆ. ರಾಜ್ಯದ ಮೂಲೆ ಮೂಲೆಗಳಿಂದಲೂ ನನ್ನ ಆರೋಗ್ಯ ಕುರಿತು ಮುಖಂಡರು, ಕಾರ್ಯಕರ್ತರು ಕರೆ ಮಾಡಿ ಆರೋಗ್ಯದ ವಿಚಾರಣೆ ಮಾಡಿದ್ದಾರೆ ಎಂದು ಅವರು ಹೇಳಿದರು.
ನನ್ನ ಆರೋಗ್ಯದ ಕುರಿತು ಜನರಲ್ಲಿ ಮನಸ್ಸಿನಲ್ಲಿ ಸಂಶಯಗಳಿವೆ. ನನ್ನ ಆರೋಗ್ಯದ ಕುರಿತು ಯಾರು ಏನೂ ಬೇಕಾದರೂ ಅಂದುಕೊಳ್ಳಲಿ. ನಾನು ಮಾತ್ರ ಪಕ್ಷದ ನಿರ್ಧಾರಕ್ಕೆ ಭದ್ದನಾಗಿದ್ದೇನೆ. ಕೆಲ ಮಾಧ್ಯಮಗಳಲ್ಲಿ ನನ್ನ ಬಗ್ಗೆ ತಪ್ಪು ಸುದ್ದಿ ಮಾಡಿದ್ದಾರೆ. ನನ್ನ ಆರೋಗ್ಯದ ಕುರಿತು ಬಹಳ ಜನರ ಅಪಪ್ರಚಾರ ಮಾಡಿದರು. ನಾನು ಬದುಕುವುದಿಲ್ಲ, ಆಸ್ಪತ್ರೆಯಲ್ಲಿದ್ದೇನೆ ಎಂದು ಸುದ್ದ ಹರಡಿಸಿದುರ. ಆದರೆ, ಎಲ್ಲರಿಗೂ ಬರುವಂತೆ ನನಗೂ ಜ್ವರ ಬಂದಿತ್ತು. ನಾನು ಅನಾರೋಗ್ಯದಿಂದ ಮೃತಪಡುತ್ತೇನೆಂದು ಬಿಜೆಪಿ ರಾಷ್ಟ್ರಾಧ್ಯಕ್ಷರ ಮುಂದೆ ಹೇಳಿದ್ದಾರೆ. ನನ್ನ ಸಾವು ಇವರ ಕೈಯ್ಯಲ್ಲಿ ಇಲ್ಲ ಎಂದು ರಮೇಶ ಜಿಗಜಿಣಗಿ ವಿರೋಧಿಗಳಿಗೆ ಟಾಂಗ್ ನೀಡಿದರು.
ದಲಿತ ವ್ಯಕ್ತಿಯಾಗಿ ಕರ್ನಾಟಕದಲ್ಲಿ ಇತಿಹಾಸ ನಿರ್ಮಿಸುತ್ತೇನೆ
ಲೋಕಸಭೆ ಚುನಾವಣೆ ಟಿಕೆಟ್ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕ್ರಿಕೆಟ್ ಆಡಲು ಬ್ಯಾಟ್ ಹಿಡಿದುಕೊಂಡು ನಿಂತಿದ್ದೇನೆ. ಬಾಲ್ ಬರುವುದನ್ನೇ ಕಾಯುತ್ತಿದ್ದೇನೆ. ಕರ್ನಾಟಕ ರಾಜ್ಯದಲ್ಲಿ ದಲಿತ ವ್ಯಕ್ತಿಯಾಗಿ ಇತಿಹಾಸ ನಿರ್ಮಾಣ ಮಾಡಿದ್ದೇನೆ. ನನಗೆ ವಯಸ್ಸು 83 ಆಗಲಿ, 93 ಆಗಲಿ ಇತಿಹಾಸ ನಿರ್ಮಾಣ ಮಾಡಿಯೇ ಸಾಯುತ್ತೇನೆ. ನಾನೂ ಬದುಕೇ ಬದುಕುತ್ತೇನೆ. ನಾನು ಇತಿಹಾಸ ನಿರ್ಮಾಣ ಮಾಡಲಿ ಎಂದು ದೇವರು ನನ್ನ ಹಣೆ ಬರಹದಲ್ಲಿ ಬರೆದಿದ್ದಾನೆ. ರೇಲ್ವೆ ಸ್ಟೇಷನ್ ಮೇಲೆ ಚಹಾ ಮಾರುವವ ಪ್ರಧಾನಿ ಆಗಲು ದೇವರು ಬರೆದಿದ್ದಾನೆ. ರಾಜ್ಯದಲ್ಲಿ ಕಂದಾಯ ಸಚಿವನಾಗಿದ್ದಾಗ ಸಚಿವ ಸ್ಥಾನ ತ್ಯಾಗ ಮಾಡಿದ್ದೆ. ಯಾರಾದರೂ ತ್ಯಾಗ ಮಾಡುತ್ತಾರಾ? ಚಿಕ್ಕೋಡಿಯಲ್ಲಿ ಮೂರು ಬಾರಿ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ವಿಜಯಪುರದಲ್ಲಿ ಮೂರು ಬಾರಿ ಗೆದಿದ್ದೇನೆ. ದೇವರು ಬರೆದ ಹಣೆ ಬರಹ ಯಾರೂ ಅಳಿಸಲು ಆಗುವುದಿಲ್ಲ. ನಾನು ಬೇಗ ಸಾಯಲಿ, ನಾವೇನಾದರೂ ಆಗಬೇಕೆಂದು ಕೆಲವರು ಹೇಳುತ್ತಿದ್ದಾರೆ. ಅವರು ಜಿಗಜಿಣಗಿ ಲಿಂಗಾಯತ ವಿರೋಧಿ ಎಂದು ಹೇಳುತ್ತಿದ್ಧಾರೆ. ರಾಜ್ಯದಲ್ಲಿ ಇತಿಹಾಸ ನಿರ್ಮಾಣ ಮಾಡುವರೆಗೂ ನಾನು ಸಾಯುವುದಿಲ್ಲ ಎಂದು ಅವರು ಹೇಳಿದರು.
ತಮ್ಮ ಆರೋಗ್ಯದ ಕುರಿತು ಹೈಕಮಾಂಡಿಗೆ ನಿಮ್ಮ ಪಕ್ಷದವರೇ ಹೇಳಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷದವರೇ ನನ್ನ ಆರೋಗ್ಯದ ಕುರಿತು ಮಾತನಾಡಿದ್ದಾರೆ. ನನ್ನ ರಾಜಕಾರಣದ 70 ವರ್ಷಗಳಲ್ಲಿ ನನಗೆ ಯಾರು ಅಡ್ಡ ಬಂದಿದ್ದಾರೆ ಅವರಾರೂ ಬದುಕಿಲ್ಲ. ನನ್ನನ್ನು ವಿರೋಧಿಸಿದವರು ರಾಜಕೀದಲ್ಲಿ ಯಾರೂ ಉಳಿದಿಲ್ಲ. ಅವರು ಉಳಿಯಂಗಿಲ್ಲ. ದೇವರೇ ಅವರನ್ನು ಖಲಾಸ್ ಮಾಡುತ್ತಾನೆ. ಇಂಥ ವಿಷಯಗಳ ಕುರಿತು ಜಾಗೃತಿ ಇರಲಿ ಎಂದು ಅವಕು ಮಾದ್ಯಮಗಳಿಗೆ ಮನವಿ ಮಾಡಿದರು
ಯಾವುನೋ ತಿರುಕ ನನ್ಮಗ ಹೇಳಿದ್ದನ್ನು ಕೇಳಬೇಡಿ. ವಿಜಯಪುರ ಲೋಕಸಭಾ ಚುನಾವಣೆಗೆ ಇಂದು ಅಥವಾ ನಾಳೆ ಟಿಕೆಟ್ ಪೈನಲ್ ಆಗುತ್ತದೆ. ನನ್ನನ್ನು ಬಿಟ್ಟರೆ ಯಾರಿಗೂ ಟಿಕೆಟ್ ಕೊಡುವುದಿಲ್ಲ ಎಂದು ಪಕ್ಷದವರು ನನಗೆ ಸ್ಪಷ್ಟವಾಗಿ ಹೇಳಿದ್ದಾರೆ. ನೀ ಏನು ಚಿಂತೆ ಮಾಡಬೇಡ, ನೀ ಸತ್ತರೂ ಜನ ನಿನ್ನ ಹೆಣಕ್ಕೆ ಮತ ಹಾಕಲಿ ಎಂದು ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ವಿಧಾನ ಪರಿಷತ ಮಾಜಿ ಶಾಸಕ ಅರುಣ ಶಹಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಮುಖಂಡರಾದ ಸುರೇಶ ಬಿರಾದಾರ, ಸಂಜಯ ಪಾಟೀಲ ಕನಮಡಿ ಮುಂತಾದವರು ಉಪಸ್ಥಿತರಿದ್ದರು.