ವಿಜಯಪುರ: ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕನಾನ್ ಅಬ್ಬುದ್ ಹಮೀದ್ ಮುಶ್ರಿಫ್ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ಅವರ ಹಿರಿಯ ಪುತ್ರನಾಗಿರುವ ಕನಾನ್ ಪದವೀಧರರಾಗಿದ್ದು, ತಂದೆಯ ಜೊತೆ ಪಕ್ಷ ಸಂಘಟನೆಯಲ್ಲಿ ಸಕ್ರೀಯರಾಗಿದ್ದಾರೆ. ಅಬ್ದುಲ್ ಹಮೀದ್ ಮುಶ್ರಿಫ್ 2018 ಮತ್ತು 2023ರಲ್ಲಿ ವಿಜಯಪುರ ನಗರ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪರಾಜಿತರಾಗಿದ್ದರು. ಈಗ ಅವರ ಪುತ್ರನಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕನಾನ್ ಅಬ್ದುಲ್ ಹಮೀದ್ ಮುಶ್ರಿಫ್, ತಮಗೆ ಹೊಸ ಜವಾಬ್ದಾರಿ ಸಿಕ್ಕಿರುವುದು ಸಂತಸ ತಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ. ಸಚಿವರು ಮತ್ತು ಪಕ್ಷದ ಮುಖಂಡರ ಮಾರ್ಗದರ್ಶನದಲ್ಲಿ ವಿಜಯಪುರ ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪಕ್ಷ ಸಂಘಟನೆಗೂ ಒತ್ತು ನೀಡುತ್ತೇನೆ ಎಂದು ತಿಳಿಸಿದ್ದಾರೆ.