ವಿಜಯಪುರ: ಇದು ನನ್ನ ಕೊನೆಯ ಚುನಾವಣೆ. ಎಲ್ಲ ಪ್ರಚಾರ ಸಭೆಗಳಲ್ಲಿಯೂ ಹೇಳಿದ್ದೇನೆ. ಕನಿಷ್ಠ ಒಂದು ಮತದ ಅಂತರದಿಂದಾದರೂ ಗೆಲ್ಲುತ್ತೇನೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಟಿಕೆಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಚಾರ ಮಾಡುತ್ತಿದ್ದೇನೆ. ನೀವು ಬರಬೇಡಿ, ನಾವು ಮತ ಹಾಕುತ್ತೇವೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಆದರೂ ಕೂಡ ಚುನಾವಣೆಗಾಗಿ ಜಿಲ್ಲೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದೇನೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬಿಜೆಪಿ ಮುಖಂಡರು ನಡೆಸುವ ಸಭೆಗಳಲ್ಲಿ ಭಾಗವಹಿಸುತ್ತಿದ್ದೇನೆ. ನನಗೆ ಟಿಕೆಟ್ ತಪ್ಪಿಸಲು ಹಲವರು ಪ್ರಯತ್ನ ಮಾಡಿದರೂ ಕೊನೆಗೆ ಹೈಕಮಾಂಡ್ ನನಗೆ ಟಿಕೆಟ್ ನೀಡಿದೆ. ಯಾರೇ ವಿರೋಧ ಮಾಡಿದರೂ ಪಕ್ಷದ ಹೈಕಮಾಂಡ್ ನೀನು ಒಳ್ಳೆಯ ದಲಿತ ಮುಖಂಡನಾಗಿದ್ದೀಯಾ. ನೀನೇ ಸ್ಪರ್ಧೆ ಮಾಡು ಎಂದು ಮತ್ತೆ ಟಿಕೆಟ್ ನೀಡಿದೆ ಎಂದು ಅವರು ತಿಳಿಸಿದರು.
ಹೈಕಮಾಂಡ್ ಕರೆದು ಟಿಕೆಟ್ ನೀಡಿದೆ
ಇದು ತಮ್ಮ ಕೊನೆಯ ಚುನಾವಣೆ ಎಂದು ಇಂಡಿ ಪ್ರಚಾರ ಸಭೆಯಲ್ಲಿ ಹೇಳಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅ;ರು, ನಾನು ಸಭೆಗಳಲ್ಲಿ ಈಗಾಗಲೇ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದೇನೆ. 90 ವರ್ಷವಾದರೂ ನನಗೆ ಟಿಕೆಟ್ ಬೇಕು ಅನ್ನೋಕಾಗುತ್ತಾ? ಈ ಸಲವೂ ಟಿಕೆಟ್ ಬೇಡ ಎಂದು ನಿರ್ಧಾರ ಮಾಡಿದ್ದೆ. ನನ್ನ ಮಕ್ಕಳೂ ಕೂಡ ಚುನಾವಣೆಗೆ ಸ್ಪರ್ಧಿಸಬೇಡಿ ಎಂದು ಹೇಳಿದ್ದರು. ಆದರೆ, ಹೈಕಮಾಂಡ್ ನನಗೆ ಟಿಕೆಟ್ ನೀಡಿದೆ. ನಾನು ಚುನಾವಣೆ ಮಾಡುತ್ತಿದ್ದೇನೆ. ಮುಂದೆ ನನಗೆ 90 ವಯಸ್ಸಾದರೂ ನೀನೇ ನಿಲ್ಲು ಎಂದು ಹೈಕಮಾಂಡ್ ಹೇಳಿದರೆ ಬೇಡ ಎನ್ನಲು ಆಗುತ್ತಾ ಎಂದು ಅವರು ಇದೇ ಸಂದರ್ಭದಲ್ಲಿ ಮುಂದಿನ ಚುನಾವಣೆಯಲ್ಲಿಯೂ ಸ್ಪರ್ಧಿಸುವ ಇಂಗಿತ ವ್ಕಕ್ತಪಡಿಸಿದರು.
ವಿಜಯಪುರ ಸಂಸದ ರಮೇಶ ಜಿಗಜಿಣಗಿ ವಿಡಿಯೋ ಬೈಟ್:
ಈಶ್ವರಪ್ಪ ಬಂಡಾಯ ವಿಚಾರ
ತಮ್ಮ ಪುತ್ರನಿಗೆ ಹಾವೇರಿಯಿಂದ ಸ್ಪರ್ಧಿಸಲು ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಕೆ. ಎಸ್. ಈಶ್ವರಪ್ಪ ಬಂಡಾಯ ಸಾರಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಂಸದ ರಮೇಶ ಜಿಗಜಿಣಗಿ, ಈಶ್ವರಪ್ಪ ಸಂಘಪರಿವಾರದಿಂದ ಬಂದವರು. ಅವರು ಬಾಲ್ಯದಿಂದಲೇ ಸಂಘ ಪರಿವಾರದ ಸಂಸ್ಕೃತಿಯಲ್ಲಿ ಬೆಳೆದಿದ್ದಾರೆ. ನಾನು ಸಂಘ ಪರಿವಾರದಿಂದ ಬಂದವನಲ್ಲ. ರಾಮಕೃಷ್ಣ ಹೆಗಡೆ, ಜೆ. ಎಚ್. ಪಟೇಲ ಅವರ ಗರಡಿಯಲ್ಲಿ ಬೆಳೆದವನು. ನಾನು ಜನತಾ ಪರಿವಾರದಿಂದ ಬಂದಿದ್ದೇನೆ. ನಾನು ಸಂಘ ಪರಿವಾರದ ಬಗ್ಗೆ ಮತ್ತು ಕೆ. ಎಸ್. ಈಶ್ವರಪ್ಪ ಕುರಿತು ಮಾತನಾಡುವಷ್ಟು ದೊಡ್ಡವನಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಪಪಡಿಸಿದರು.
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ವಿರುದ್ಧ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಮಾಡಿರುವ ಟೀಕೆಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಮಾಜಿ ಸಚಿವರೂ ಹಾಗೂ ಹಾಲಿ ಸಂಸದರೂ ಆಗಿರುವ ರಮೇಶ ಜಿಗಜಿಣಗಿ, ನಮಗೆ ಆಗದವರ ಬಗ್ಗೆ ಟೀಕೆ ಮಾಡುವುದು ಸಹಜ ಎಂದು ಮಾರ್ಮಿಕವಾಗಿ ಹೇಳಿದರು.
ಒಂದು ಮತದ ಅಂತರದಿಂದಾದರೂ ಗೆಲ್ಲುವೆ
ಚುನಾವಣೆಯಲ್ಲಿ ಗೆಲುವಿನ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕನಿಷ್ಠ ಒಂದು ಮತದ ಅಂತರದಿಂದಾದರೂ ಗೆಲ್ಲುತ್ತೇನೆ. ಕಳೆದ ಬಾರಿ 2 ಲಕ್ಷ 60 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೆ. ಈ ಬಾರಿ 2 ಲಕ್ಷ 70 ಸಾವಿರ ಮತಗಳ ಅಂತರದಿಂದಲೂ ಗೆಲ್ಲಬಹುದು. ಒಟ್ಟಾರೆ, ನಾನು ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ ಮಾಜಿ ಶಾಸಕ ಅರುಣ ಶಹಾಪುರ, ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.