ಬಾಹುಬಲಿಗೆ ನೈವೇದ್ಯ ಕಟಂಬಲಿ- ಬಸವ ನಾಡಿನಲ್ಲಿ ವಿಶಿಷ್ಠ ಜಾತ್ರೆಗೆ ಸಾಕ್ಷಿಯಾದ ರಂಭಾಪುರ ಜನತೆ

ವಿಜಯಪುರ:  ದೇಶದಲ್ಲಿಯೇ ಅತೀ ಹೆಚ್ಚು ಜಾತ್ರೆ ನಡೆಯುವ ಜಿಲ್ಲೆ ಬಸವನಾಡಿನ ವಿಜಯಪುರ.  ಈ ಲ್ಲೆಯಲ್ಲಿ ಪ್ರತಿದಿನ ಒಂದಿಲ್ಲೋಂದು ಊರಿನಲ್ಲಿ ಒಂದಿಲ್ಲೋಂದು ಜಾತ್ರೆಗಳು, ದೇವಸ್ಥಾನದ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ.  ಅದರಲ್ಲೂ ಒಂದೊಂದು ಊರಿನಲ್ಲಿ ಒಂದು ವಿಶೇಷ ಜಾತ್ರೆಗಳು ನಡೆಯುತ್ತವೆ.  ಕೆಲವು ಜಾತ್ರೆಗಳನ್ನು ಊರಿನ ಗ್ರಾಮಸ್ಥರೆಲ್ಲರೂ ಸೇರಿ ಆಚರಿಸಿದರೆ, ಮತ್ತೆ ಹಲವು ಜಾತ್ರೆಗಳನ್ನು ಒಂದೊಂದು ಕುಟುಂಬಗಳು ಕಾರ್ಯಕ್ರಮದ ರೂಪದಲ್ಲಿ ಆಚರಿಸುತ್ತವೆ.

ಇಂಥ ವಿಶೇಷ ಜಾತ್ರೆಯೊಂದು ಗುಮ್ಮಟ ನಗರಿ ವಿಜಯಪುರದ ಹೊರಭಾಗದಲ್ಲಿರುವ ರಂಭಾಪುರ ಗ್ರಾಮದಲ್ಲಿ ನಡೆಯಿತು.  ಮೆಂಡೆಗಾರ ಕುಟುಂಬ ಕಳೆದ ಹಲವಾರು ತಲೆಮಾರುಗಳಿಂದ ನಡೆಸಿಕೊಂಡು ಬಂದಿರುವ ಈ ಜಾತ್ರೆಗೆ ಕಟಂಬಲಿ ಜಾತ್ರೆ ಎಂದೇ ಹೆಸರು.

ಇದು ರಂಭಾಪುರ ಗ್ರಾಮದಲ್ಲಿರುವ ಜೈ ಹನುಮಾನ ಮಂದಿರ.  ಇದು ಈ ಭಾಗದಲ್ಲಿ ಖಡಕ್ ಮತ್ತು ಜಾಗೃತ ಹನುಮಂತನ ಗುಡಿ ಎಂದೇ ಹೆಸರುವಾಸಿಯಾಗಿದ್ದು, ಸಾವಿರಾರು ಭಕ್ತರನ್ನು ಇಲ್ಲಿಗೆ ಭೇಟಿ ನೀಡುತ್ತಾರೆ.  ಹೀಗೆ ತಲೆಯ ಮೇಲೆ ಗಡಿಗೆಯನ್ನು, ಕೈಯ್ಯಲ್ಲಿ ಬಟ್ಟೆಯಲ್ಲಿ ಸುತ್ತಿದ ಬುಟ್ಟಿಯಲ್ಲಿ ಬುತ್ತಿಯನ್ನು ಹಿಡಿದುಕೊಂಡು ಬರುತ್ತಿರುವವರು ಮೆಂಡೆಗಾರ ಕುಟುಂಬದ ಮಹಿಳೆಯರು.  ಇವರ ಜೊತೆಗೆ ಮಕ್ಕಳು ಸಾಥ್ ನೀಡುತ್ತಿದ್ದಾರೆ.  ಇಲ್ಲಿ ಹಲವಾರು ತಲೆಮಾರುಗಳ ಹಿಂದೆ ಪ್ರಾರಂಭವಾದ ಜಾತ್ರೆ ಈಗಲೂ ಪ್ರತಿ ವರ್ಷ ಮುಂದುವರೆದುಕೊಂಡು ಬಂದಿದೆ.

 

ವಿಜಯಪುರ ಹೊರವಲಯದ ರಂಭಾಪುರ ಬಾಹುಬಲಿ ದೇವರಿಗೆ ಕಟಂಬಲಿ ನೈವೇದ್ಯ ತರುತ್ತಿರುವ ಮೆಂಡೆಗಾರ ಕುಟುಂಬದ ಮಹಿಳೆಯರು.

ಈ ಆಚರಣೆಗೂ ಒಂದು ಹಿನ್ನೆಲೆಯಿದ್ದು, ಈ ಜಾತ್ರೆಗೆ ಜಾನಪದ ಶೈಲಿಯ ಹೆಸರನ್ನೂ ಇಟ್ಟಿದ್ದಾರೆ.  ಪ್ರತಿ ವರ್ಷ ಹೋಳಿ ಹುಣ್ಣಿಮೆಗೂ ಮೊದಲು ಬರುವ ಶನಿವಾರ ಇಲ್ಲಿ ಮೆಂಡೆಗಾರ ಕುಟುಂಬಸ್ಥರು ಕಟಂಬಲಿ ಜಾತ್ರೆ ಮಾಡಿ ಹನುಮ ದೇವರ ಕೃಪೆಗೆ ಪ್ರಾರ್ಥಿಸುತ್ತಾರೆ.  ತಾವು ತಮ್ಮ ಜೊತೆಯಲ್ಲಿ ತಂದಿದ್ದ ತರಹೇವಾರು ಖಾದ್ಯ ಪದಾರ್ಥಗಳನ್ನು ದೇವರ ಮೂರ್ತಿಯ ಎದುರು ಇಟ್ಟು ಪೂಜೆ ಸಲ್ಲಿಸಿ ಕತಾರ್ಥರಾಗುತ್ತಾರೆ.

ಬೇಸಿಗೆ ಕಾಲ ಪ್ರಾರಂಭವಾಯಿತೆಂದರೆ ಸಾಕು ವಿಜಯಪುರದ ಜನ ಬಸವಳಿಯುತ್ತಾರೆ.  ಇಂಥ ಸಂದರ್ಭದಲ್ಲಿ ದ್ರವಾಹಾರ ಪದಾರ್ಥಗಳಿಗೆ ಹೆಚ್ಚಿನ ಒತ್ತು ಕೊಡುತ್ತಾರೆ.  ಈ ಭಾಗದಲ್ಲಿ ಜೋಳವೂ ಹೆಚ್ಚಾಗಿ ಬೆಳೆಯುವುದರಿಂದ ಹೊಟ್ಟೆಗೆ ತಂಪು, ಆರೋಗ್ಯಕ್ಕೆ ಪೂರಕವಾಗಿರುವ ಈ ಜೋಳದಿಂದ ತಯಾರಿಸಲಾಗುವ ದ್ರವಾಹಾರವೇ ಕಟಂಬಲಿಯಾಗಿದೆ.  ರಾತ್ರಿ ಜೋಳದ ನುಚ್ಚುನ್ನು ಮಜ್ಜಿಗೆಯೊಂದಿಗೆ ನೆನೆಯಲು ಇಟ್ಟು ಬೆಳಿಗ್ಗೆ ನೆನೆಸಿದ ನುಚ್ಚುನ್ನು ಮಜ್ಜಿಗೆಯೊಂದಿಗೆ ಮಿಶ್ರಣ ಮಾಡಿ ಬೇಯಿಸಿ ತಯಾರಿಸುವುದೇ ಕಟಂಬಲಿ.  ಅದರ ಜೊತೆಯಲ್ಲಿ ಜೋಳದ ರೊಟ್ಟಿ, ತರಹೇವಾರಿ ಖಾದ್ಯಗಳನ್ನು ತಯಾರಿಸಿ ಮಧ್ಯಾಹ್ನದ ವೇಳೆಗೆ ದೇವಸ್ಥಾನಕ್ಕೆ ತಂದು ನೈವೈದ್ಯ ಅರ್ಪಿಸುತ್ತಾರೆ.

ಈ ಕಟಂಬಲಿ ಆಚರಣೆಗೂ ಒಂದು ಸಕಾರಣವಿದ್ದು, ಕುಟುಂಬದ ಹಿರಿಯರು ಪ್ರಾರಂಭಿಸಿರುವ ಈ ಸಂಪ್ರದಾಯವನ್ನು ಈಗಲೂ ಮೆಂಡೆಗಾರ ಕುಟುಂಬಸ್ಥರು ಮುಂದುವರೆಸಿಕೊಂಡು ಬಂದಿದ್ದಾರೆ.  ಈ ಹಿಂದೆ ಅವಿಭಕ್ತ ಕುಟುಂಬವಾಗಿದ್ದ ಮೆಂಡೆಗಾರ ಫ್ಯಾಮಿಲಿಯರುವ, ಪ್ರತಿ ವರ್ಷ ಹಿಂಗಾರಿನಲ್ಲಿ ಬೆಳೆಯುವ ದವಸ- ದಾನ್ಯಗಳನ್ನು ಮಾರಾಟ ಮಾಡುವುದಕ್ಕೂ ಮುಂಚೆ ಆ ಆಹಾರ ಧಾನ್ಯಗಳಿಂದ ತರಹೇವಾರಿ ಅಡುಗೆಯನ್ನು ಮಾಡಿ ದೇವರಿಗೆ ತಂದು ನೈವೇದ್ಯ ಅರ್ಪಿಸುತ್ತಿದ್ದರು.  ಅಲ್ಲದೇ, ಗ್ರಾಮದ ಜನರನ್ನು ಆಹ್ವಾನಿಸಿ ಅವರಿಗೆ ಭೋಜನ ಹಾಕಿ ಸಂತಸ ಪಡುತ್ತಿದ್ದರು. ಈಗಲೂ ಈ ಸಂಪ್ರದಾಯ ಮುಂದುವರೆದಿದೆ.

ಪ್ರತಿವರ್ಷ ಈ ಸಂದರ್ಭದಲ್ಲಿ ಮನೆಯನ್ನು ಸ್ವಚ್ಛ ಮಾಡುತ್ತೇವೆ.  ಈ ಆಚರಣೆ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರೆಲ್ಲರೂ ಸೇರಿಕೊಂಡು ಹೊಸದಾಗಿ ಮಣ್ಣಿನ ಗಡಿಗೆ ಅಂದರೆ ಮಡಕೆಯನ್ನು ಖರೀದಿಸಿ ತರುತ್ತೇವೆ.  ಬೇಸಿಗೆಯಲ್ಲಿ ರಾಶಿ ಮಾಡಿದ ನಂತರ ಸಿಗುವ ಹೊಸ ಜೋಳದಿಂದ ಅಂಬಲಿ, ರೊಟ್ಟಿ ಮತ್ತು ಅಗಸಿ ಹಿಂಡಿ ತಯಾರಿಸುತ್ತೇವೆ.  ನಸುಕಿನ ಜಾವ ಬೇಗ ಎದ್ದು ಮಡಿಯಿಂದ ನೈವೇದ್ಯ ಮತ್ತು ಅಡುಗೆ ತಯಾರಿಸುತ್ತೇವೆ.  ಎಲ್ಲ ಬಗೆಯ ಕಾಳುಗಳಿಂದ ಪಲ್ಲೆ ಮಾಡುತ್ತೇವೆ.  ಮೊಸರು ಸೇರಿಸಿ ಅಂಬಲಿ ಮಾಡುತ್ತೇವೆ.  ನಂತರ ದೇವಸ್ಥಾನಕ್ಕೆ ಬಂದು ನೈವೇದ್ಯ ಅರ್ಪಿಸುತ್ತೇವೆ ಎನ್ನುತ್ತಾರೆ ರೂಪಾಲಿ ಮೆಂಡೆಗಾರ.

ಈ ಕುಟುಂಬದ ಮತ್ತೋರ್ವ ಗೃಹಿಣಿ ಜ್ಯೋತಿ ಮೆಂಡೆಗಾರ ಹೇಳುವಂತೆ, ಮಡಿಯಿಂದ ಅಡುಗೆ ತಯಾರಿಸಿ ದೇವಸ್ಥಾನಕ್ಕೆ ತರುತ್ತೇವೆ.  ಹೊರಗಿನಿಂದ ಯಾವುದೇ ಖಾದ್ಯವನ್ನು ಖರೀದಿಸಿ ತರುವುದಿಲ್ಲ.  ದೇವರಿಗೆ ನೈವೇದ್ಯ ಅರ್ಪಿಸಿದ ಬಳಿಕ ರಂಭಾಪುರ ಗ್ರಾಮದ ಜನರಿಗೆ ಪ್ರಸಾದ ರೂಪದಲ್ಲಿ ಉಣಬಡಿಸುತ್ತೇವೆ.  ಕಟಂಬಲಿ ಜೊತೆಗೆ ಜೋಳದ ರೊಟ್ಟಿ ಚಪಾತಿ, ಅಗಸಿ ಹಿಂಡಿ, ಶೇಂಗಾ ಹಿಂಡಿ, ಕಾಯಿಪಲ್ಲೆ ಸೇರಿಸಿ ಹಿಂಡಿ ಪಲ್ಲೆ, ಗೋದಿಯಿಂದ ನುಚ್ಚು ಮಾಡಿ ಸಜ್ಜಕ ಮಾಡಿಕೊಂಡು ಬರುತ್ತೇವೆ.  ಇದರಲ್ಲಿ ಕಟಂಬಲಿ ಆರೋಗ್ಯಕ್ಕೆ ಉತ್ತಮವಾದ ಆಹಾರ ಪದಾರ್ಥವಾಗಿದ್ದು, ಇದರ ಸೇವನೆಯಿಂದ ನಾನಾ ಕಾಯಿಲೆಗಳನ್ನೂ ಗುಣಪಡಿಸಬಹುದಾಗಿದೆ ಎಂಬ ಬಲವಾದ ನಂಬಿಕೆಯಿದೆ.

 

 

 

 

ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 17ರಲ್ಲಿ ಬರುವ ರಂಭಾಪುರದ ಜೈ ಹನುಮಾನ ದೇವರಿಗೆ ಕಟಂಬಲಿ ಅರ್ಪಣೆ ಸಂಪ್ರದಾಯ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ.  ಈ ಸಲ ಭೀಕರ ಬರವಿದ್ದರೂ ಈಗ ಬೆಳೆಯಲಾಗಿರುವ ಅಲ್ಪಸ್ವಲ್ಪ ದವಸ ಧಾನ್ಯ, ಜೋಳ, ಕಡಲೆ, ಗೋದಿ ಇನ್ನಿತರ ಧಾನ್ಯಗಳನ್ನು ಬಳಸಿ ಸಜ್ಜಕ ರೊಟ್ಟಿ, ಚಪಾತಿ, ಅಂಬಲಿ, ಹೆಸರು ಕಾಳು ಪಲ್ಲೆ, ಮೂಕಣಿಕಾಳು ಪಲ್ಲೆ, ಸಜ್ಜಕ, ಹುಳಬಾನ, ತೋಟದಲ್ಲಿ ಬೆಳೆಯಲಾದ ತರಕಾರಿಗಳಾದ ತಪ್ಪಲು ಉಳ್ಳಾಗಡ್ಡಿ,ಮೆಂತೆಪಲ್ಲೆಯನ್ನು ತಂದು ಇಲ್ಲಿ ನೈವೇದ್ಯ ಅರ್ಪಿಸಿ ಗ್ರಾಮಸ್ಥರೊಂದಿಗೆ ಸಹಭೋಜನ ಮಾಡುತ್ತೇವೆ.  ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕಟಂಬಲಿ ತಂಪು ಖಾದ್ಯವಾಗಿರುವುದರಿಂದ ಪ್ರಸಾದ ರೂಪದಲ್ಲಿ ನೀಡುತ್ತೇವೆ.  ಈ ನೈವೆದ್ಯವನ್ನು ರಂಭಾಪುರದ ಎಲ್ಲ ಜಾತಿ, ಧರ್ಮದ ಜನರಿಗೆ ಪ್ರಸಾದ ರೂಪದಲ್ಲಿ ಹಂಚುತ್ತೇವೆ.  ಎಷ್ಟೇ ಜನ ಬಂದರೂ ಕಟಂಬಲಿ ಕೊರತೆಯಾಗುವುದಿಲ್ಲ.  ಇದು ಹನುಮಾನ ದೇವರ ಪವಾಡ ಎನ್ನಬಹುದು ಎನ್ನುತ್ತಾರೆ ಈ ಕುಟುಂಬದ ಯುವಕ ಭೀಮು ಮೆಂಡೆಗಾರ.

 

ಈ ಕಟಂಬಲಿ ನೈವೇದ್ಯ ಅರ್ಪಣೆ ಮುಗಿದ ನಂತರ ಈ ಮೆಂಡೆಗಾರ ಕುಟುಂಬಸ್ಥರು ತಮ್ಮ ಹೊಲ ಮತ್ತು ತೋಟಗಳಲ್ಲಿ ಬೆಳೆದಿರುವ ದವಸ ಧಾನ್ಯಗಳನ್ನು ಮಾರುಕಟ್ಟೆಗಳಿಗೆ ತೆರಳಿ ಮಾರಾಟ ಮಾಡುತ್ತಾರೆ.  ಆದರೆ, ಈ ಮಾರಾಟಕ್ಕೂ ಮುನ್ನು ಇವರು ಆಚರಿಸುತ್ತ ಬಂದಿರುವ ಕಟಂಬಲಿ ನೈವೇದ್ಯ ಮತ್ತು ಗ್ರಾಮಸ್ಥರಿಗೆ ಪ್ರಸಾದ ವಿತರಣೆ ನಮ್ಮ ಪುರಾತನ ತರಹೇವಾರಿ ಸಂಪ್ರದಾಯಗಳಿಗೆ ಸಾಕ್ಷಿಯಾಗಿದೆ.

Leave a Reply

ಹೊಸ ಪೋಸ್ಟ್‌