ಭೀಮಾ ನದಿಗೆ ನೀರು ಹರಿಸಲು ಆಗ್ರಹ- ಶಾಸಕ ಯಶವಂತರಾಯಗೌಡ ಪಾಟೀಲ ನೇತೃತ್ವದಲ್ಲಿ ಡಿಸಿಎಂ ಭೇಟಿ- 1.50 ಟಿಎಂಸಿ ನೀರು ಬಿಡಲು ಸಚಿವರ ಸೂಚನೆ

ಬೆಂಗಳೂರು: ವಿಜಯಪುರ ಜಿಲ್ಲೆಯ ಚಡಚಣ, ಇಂಡಿ ಮತ್ತು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕುಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಾಗಿದ್ದು, ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ ನೇತತ್ವದಲ್ಲಿ ಅಫಝಲಪುರ ಶಾಸಕ ಎಂ. ವೈ. ಪಾಟೀಲ ಮತ್ತೀತರರು ಜಲಸಂಪನ್ಮೂಲ ಸಚಿವ ಮತ್ತು ಡಿಸಿಎಂ ಡಿ. ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ಈ ಬಾರಿ ಭೀಕರ ಬರದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ನದಿ, ಕೆರೆ-ಕಟ್ಟೆಗಳು, ಹಳ್ಳ-ಕೊಳ್ಳಗಳು ಸೇರಿದಂತೆ ಜಲಮೂಲಗಳು ಬತ್ತಿವೆ.  ಇದರಿಂದ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಹಾಹಾಕಾರ ಉಂಟಾಗಿದೆ.  ವಿಜಯಪುರ ಜಿಲ್ಲೆಯ ಇಂಡಿ, ಚಡಚಣ ಮತ್ತು ಅಫಜಲಬುರ ತಾಲೂಕಿನ ಭೀಮಾ ನದಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಕುಡಿಯುವ ನೀರಿನ ಸಲುವಾಗಿ ಹಾಗೂ ಜನ ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಪೂರೈಸಲು ಇಂಡಿ ಬ್ರ್ಯಾಂಚ್ ಕಾಲುವೆ ಮೂಲಕ 93 ಕಿ. ಮಿ., 118, 133, 143, 160 ಮತ್ತು 167ನೇ ಕಿ. ಮೀ. ಮೂಲಕ ಪ್ರತಿದಿನ ಭೀಮಾ ನದಿಗೆ 150 ಕ್ಯೂಸೆಕ್ ನೀರನ್ನು ಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅಲ್ಲದೇ, ಮಹಾರಾಷ್ಟ್ರದ ಉಜನಿ ಜಲಾಷಯದಿಂದ ಪ್ರತಿವರ್ಷ ಭೀಮಾ ನದಿಗೆ ನೀರು ಹರಿಸಬೇಕಿದ್ದರೂ ಈ ಬಾರಿ ನೀರು ಬಿಡುಗಡೆ ಮಾಡಿಲ್ಲ.  ಇದರಿಂದ ಇಂಡಿ, ಚಡಚಣ ಪಟ್ಟಣಗಳು ಹಾಗೂ ಅಫಜಲಪುರ ತಾಲೂಕಿನ ಗ್ರಾಮೀಣ ಭಾಗಗಳಿದೆ ಭೀಮಾ ನದಿಯ ಮೂಲಕ ಕುಡಿಯಲು ನೀರು ಸರಬರಾಜು ಮಾಡಬೇಕಿದೆ.  ಜೊತೆಗೆ ಸಿಂದಗಿ, ಇಂಡಿ, ದೇವರ ಹಿಪ್ಪರಗಿ ಹಾಗೂ ಆಲಮೇಲ ಪಟ್ಟಣಗಳಿಗೆ ಮತ್ತು ಐದು ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಸುಮಾರು ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳಿಗೂ ನೀರು ಪೂರೈಸುವ ಅಗತ್ಯವಿದೆ.  ಈ ಹಿನ್ನೆಲೆಯಲ್ಲಿ ಭೀಮಾ ನದಿಗೆ ನಾರಾಯಣಪುರ ಜಲಾಷಯದಿಂದ 1.50 ಟಿಎಂಸಿ ನೀರು ಬಿಡುಗಡೆ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಶಾಸಕ ಯಶವಂತರಾಯಗೌಡ ವಿ. ಪಾಟೀಲ ಆಗ್ರಹಿಸಿದರು.

1.50 ಟಿಎಂಸಿ ನೀರು ಬಿಡುಗಡೆಗೆ ಸಚಿವ ಡಿ. ಕೆ. ಶಿವಕುಮಾರ ಸೂಚನೆ

ಈ ಬೇಡಿಕೆಗೆ ಸ್ಪಂದಿಸಿದ ಸಚಿವರು ಇಂಡಿ ಬ್ರ್ಯಾಂಚ್ ಕಾಲುವೆ ಮೂಲಕ 1.50 ಟಿಎಂಸಿ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಭೋಸರಾಜು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌