Video News: ಪ್ರೊ. ರಾಜು ಆಲಗೂರ ಗೆಲ್ಲಿಸಲು ಸಾಮೂಹಿಕ ನೇತೃತ್ವ ವಹಿಸುತ್ತೇವೆ- ಎಲ್ಲ ಹೊಣೆ ನಮ್ಮದು- ಎಂ. ಬಿ. ಪಾಟೀಲ

ವಿಜಯಪುರ: ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯ ಬಳಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಮುಂಬರುವ ಲೋಕಸಭಾ ಚುನಾವಣೆವಲಲ್ಲಿ ಈಗ ಕಾಂಗ್ರೆಸ್ ಅಭ್ಯರ್ಥಿ ರಾಜು ಅಲಗೂರ ಪರ ಪ್ರಚಾರ ಆರಂಭಿಸಿದ್ದೇವೆ.  ಜಿಲ್ಲೆಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ.  ಏ. 12 ರಂದು ನಮ್ಮ ಅಭ್ಯರ್ಥಿ ಪ್ರೊ. ರಾಜು ಅಲಗೂರು ನಾಮಪತ್ರ ಸಲ್ಲಿಸಲಿದ್ದಾರೆ.  ಚುನಾವಣೆಯಲ್ಲಿ ನಿಶ್ಚಿತವಾಗಿ ಕಾಂಗ್ರೆಸ್ ಅಭ್ಯರ್ಥಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಅವರು ಹೇಳಿದರು.

ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳು ರಾಜ್ಯದ ಶೇ. 80 ಕ್ಕಿಂತ ಹೆಚ್ಚು ಮತದಾರರನ್ನು ತಲುಪಿವೆ.  ರಾಜ್ಯದ ಏಳು ಕೋಟಿ ಜನರಲ್ಲಿ ನಾಲ್ಕೂವರೆ ಕೋಟಿ ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪಿದೆ.  ಪ್ರತಿಯೊಬ್ಬರೂ ಒಂದಿಲ್ಲೊಂದು ಯೋಜನೆಯ ಫಲಾನುಭವಿಯಾಗಿದ್ದಾರೆ.  ಚುನಾವಣೆ ಗೆಲುವಿನ ಶ್ರೇಯಸ್ಸು ನಮಗೆ ಬರುತ್ತದೆ.  ಚುನಾವಣೆಯಲ್ಲಿ ಹೆಚ್ಚು ಕಮ್ಮಿಯಾದರೂ ಕೂಡ ಅದು ನಮ್ಮದೇ ಜವಾಬ್ದಾರಿ ಎಂದು ಅವರು ಸ್ಪಷ್ಟಪಡಿಸಿದರು.

ಸಚಿವ ಎಂ. ಬಿ. ಪಾಟೀಲ ಬೈಟ್:

 

ಬಿಜೆಪಿಯವರ ಬಳಿ ಏನೂ ಇಲ್ಲ

ಬಿಜೆಪಿಯವರ ಬಳಿ ಏನೂ ಇಲ್ಲ.  ಬಿಜೆಪಿ ಅಭ್ಯರ್ಥಿ ಮತ್ತು ಹಾಲಿ ಸಂಸದ ರಮೇಶ ಜಿಗಜಿಣಗಿ ಯಾವುದೇ ಕೆಲಸ ಕಾಮಗಾರಿ ಮಾಡಿಲ್ಲ.  ಜಿಗಿಜಿಣಗಿ ಅವರು ಸಂಸತ್ತಿನಲ್ಲಿ ಜನರ ಪರವಾಗಿ ಒಂದೇ ಒಂದು ಪ್ರಶ್ನೆಯನ್ನು ಕೇಳಿಲ್ಲ.  2019 ರಲ್ಲಿ ಪುಲ್ವಾಮಾ ಮತ್ತು ಬಾಲಕೋಟನಂಥ ರಾಷ್ಟ್ರೀಯ ಭಾವನಾತ್ಮಕ ವಿಚಾರಗಳು ಆಡಳಿತಾರೂಢ ಬಿಜೆಪಿಯ ಗೆಲುವಿಗೆ ಕಾರಣವಾಗಿವೆ.  ಅಂದಿನ ಪರಿಸ್ಥಿತಿ ಈಗ ಇಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತದೆ.  ಬಿಜೆಪಿಯವರು ಭಾವನಾತ್ಮಕವಾಗಿ ಮಾತನಾಡುತ್ತಾರೆ.  ಎಲೆಕ್ಷನ್ ಬಾಂಡ್ ಲಿಸ್ಟ್  ನೋಡಿ ಮತ ಹಾಕಿ ಎಂದು ಸಚಿವರು ಪರೋಕ್ಷವಾಗಿ ಕೇಂದ್ರ ಸರಕಾರದ ವಿರುದ್ಧ ಗುಡುಗಿದರು.

ನ ಖಾವುಂಗಾ ನ ಖಾನೆದೂಂಗಾ ಎಂದು ಹೇಳುವವರು ಕೇಜ್ರಿವಾಲ್ ಅವರನ್ನು ಅಬಕಾರಿ ನೀತಿ ವಿಚಾರದಲ್ಲಿ ಬಂಧಿಸಿದ್ದಾರೆ.  ಆದರೆ ಅದೇ ಅಬಕಾರಿಯ ಗುತ್ತಿಗೆದಾರನಿಂದಲೂ ಬಿಜೆಪಿಯವರು ದೇಣಿಗೆ ಹಣ ಪಡೆದಿದ್ದಾರೆ.  ರೀಡ್ ಆದ ಬಳಿಕ ಕಾಂಟಾಕ್ಟ್ ಆದ ಬಳಿಕವೂ ಹಣ ತೆಗೆದುಕೊಂಡಿದ್ದೀರೆ.  ಈ ಕುರಿತು ತನಿಖೆಯಾದರೆ ದೊಡ್ಡ ಪ್ರಮಾಣದ ಸತ್ಯ ಹೊರಬರುತ್ತದೆ ಎಂದು ಅವರು ತಿಳಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ರೌಡಿ ಇಂಥವರನ್ನು ಮೋದಿ ಪಕ್ಕಕ್ಕೆ ಕುಳ್ಳಿಸಿಕೊಳ್ಳುತ್ತಾರೆಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯತಿಂದ್ರ ಸಿದ್ರಾಮಯ್ಯ ಅವರ ಹೇಳಿಕೆಯನ್ನು ನಾನು ಕೇಳಿಲ್ಲ.  ಅದನ್ನು ತಿಳಿದುಕೊಂಡು ಮಾತನಾಡುವೆ  ಎಂದು ಉತ್ತರಿಸಿದರು.

ಮಂಡ್ಯ, ಹಾಸನದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ

ಮಂಡ್ಯ ಲೋಕಸಭೆ ಕ್ಷೇತ್ರದಿಂದ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಸ್ಪರ್ದೆ‌ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಮುಂದೆ ಇದೆ.  ಎದುರಾಳಿಗಳಿಗೆ ಯಾರು ಅಭ್ಯರ್ಥಿಯಾಗಬೇಕು ಎಂಬುದರ ಕುರಿತು ಮೊನ್ನೆವರೆಗೂ ಸ್ಪಷ್ಟತೆ ಇರಲಿಲ್ಲ.  ಈಗ ಕುಮಾರಸ್ವಾಮಿ ಅವರು ಬಂದಿದ್ದಾರೆ.  ಅದಕ್ಕಿಂತ ಮುಂಚೆ ಬೇರೆ ಬೇರೆ ಹೆಸರುಗಳು ಕೇಳಿ ಬಂದಿದ್ದವು.  ಇನ್ನು ಸುಮಲತಾ ಅವರ ಪರಿಸ್ಥಿತಿ ಏನು ಎಂಬುದು ಗೊತ್ತಾಗುತ್ತಿಲ್ಲ.  ಮಂಡ್ಯದಲ್ಲಿ ನಿನ್ನೆ ಬಿಜೆಪಿ ಮತ್ತು ಜೆಡಿಎಸ್ ನ ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ.  ಮಂಡ್ಯದ ಜೊತೆ ಹಾಸನದಲ್ಲಿಯೂ ನಾವೇ ಗೆಲ್ಲುತ್ತೇವೆ ಎಂದು ಅವರು ತಿಳಿಸಿದರು.

ಸುಮಲತಾ ಕಾಂಗ್ರೆಸ್ ಸೇರ್ಪಡೆ ವಿಚಾರ

ಮಂಡ್ಯ ಸಂಸದೆ ಸುಮಲತಾ ಕಾಂಗ್ರೆಸ್ ಸೇರ್ಪಡೆ ಕುರಿತು ಕೇಳಲಾದ ಪ್ರಶ್ನೆಗೆ ಎಂ. ಬಿ. ಪಾಟೀಲ ಗೊತ್ತಿಲ್ಲ ಎಂದು ತಿಳಿಸಿದರು.

Leave a Reply

ಹೊಸ ಪೋಸ್ಟ್‌