Video News: ಪಂಚಮಸಾಲಿ ಸಮುದಾಯ ಯಡ್ಯೂರಪ್ಪ ಜೊತೆಗಿಲ್ಲ- ಲೋಕಾ ಚುನಾವಣೆ ಬಳಿಕ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗು ಏಳಲಿದೆ- ಯತ್ನಾಳ ಭವಿಷ್ಯ

ವಿಜಯಪುರ: ಪಂಚಮಸಾಲಿ ಸಮುದಾಯ ಯಡಿಯೂರಪ್ಪ ಜೊತೆಗಿಲ್ಲ.  ಲೋಕಸಭೆ ಚುನಾವಣೆ ಬಳಿಕ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗು ದೊಡ್ಡ ಪ್ರಮಾಣದಲ್ಲಿ ಏಳಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಿಂಗಾಲೇಶ್ವರ ಸ್ವಾಮೀಜಿ, ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದರು.

ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ.  ಎಲ್ಲಾ ಪಕ್ಷಗಳಲ್ಲಿಯೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲವಾಗಿದೆ.  ಮೂಲ ಕಾರ್ಯಕರ್ತರಿಗೆ ಪಕ್ಷದ ಕೆಲಸ ಮಾಡಿದವರಿಗೆ ಟಿಕೆಟ್ ಸಿಗದ ಹಿನ್ನೆಲೆ ಅಸಮಾಧಾನವಾಗಿದೆ.  ನಿಷ್ಕ್ರಿಯರಾಗಿದ್ದವರಿಗೆ ಟಿಕೆಟ್ ಸಿಕ್ಕಾಗ ಸಹಜವಾಗಿ ಅಸಮಾಧಾನ ಆಗುತ್ತದೆ.  ಇದರಿಂದಾಗಿ ಗೋ ಬ್ಯಾಕ್, ಆ ಬ್ಯಾಕ್, ಈ ಬ್ಯಾಕ್ ನಡೆಯುತ್ತಿವೆ ಎಂದು ಹೇಳಿದರು.

ಅನಂತಕುಮಾರಗೆ ಕೈತಪ್ಪಿದ ಟಿಕೆಟ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹಿಂದುತ್ವ ಗಟ್ಟಿಯಾಗಿ ಉಳಿಯಲು ಮತ್ತು ನರೇಂದ್ರ ಮೋದಿ ಮತ್ತೋಮ್ಮೆ ಪ್ರಧಾನಿಯಾಗಬೇಕಿದೆ.  ಟಿಕೆಟ್ ಹಂಚಿಕೆ ವಿಚಾರದಲ್ಲಿ ಹಲವು ಕಡೆ ಸಮಸ್ಯೆಯಾಗಿದೆ ಎಂದು ಅವರು ಕೆ. ಎಸ್. ಈಶ್ವರಪ್ಪ ಅವರ ಉದಾಹರಣೆ ನೀಡಿದರು.

ಈಶ್ವರಪ್ಪ ಅವರು ಹೇಳಿರುವುದರಲ್ಲಿ ಸತ್ಯಾಂಶವಿದೆ.  ಅವರ ಮಾತು ಸುಳ್ಳಲ್ಲ.  ಪ್ರಧಾನಿ ಮೋದಿ ಅವರು ಹೇಳಿದ ಒಂದೇ ಒಂದು ಮಾತಿಗೆ ಈಶ್ವರಪ್ಪ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿಲ್ಲ.  ಅದರಿಂದ ಹಿಂದುತ್ವವನ್ನು ಮಾತನಾಡುವ ನಾಯಕರ ಕಡೆಗಣನೆ ಮಾಡಲಾಗುತ್ತದೆ ಎಂಬ ಭಾವನೆ ಬರುತ್ತಿದೆ.  ಇದನ್ನು ಸರಿಪಡಿಸಬೇಕಾಗಿರುವುದು ಈ ಅಪ್ಪ-ಮಕ್ಕಳು ಎಂದು ಅವರು ವಾಗ್ದಾಳಿ ನಡೆಸಿದರು.

ಅಪ್ಪ ಮಕ್ಕಳು ನಮ್ಮ ನಾಯಕರಲ್ಲ- ಯತ್ನಾಳ ಬೈಟ್:

ಈಶ್ವರಪ್ಪಕೆ ಶಿವಮೊಗ್ಗ ಬಿಟ್ಟು ಕೊಡಬೇಕಿತ್ತು

ಈ ಅಪ್ಪ ಮಕ್ಕಳಿಗೆ ಪಕ್ಷದ ಬಗ್ಗೆ ಅಷ್ಟು ಕಳಕಳಿ ಇದ್ದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಈಶ್ವರಪ್ಪನವರಿಗೆ ಕೊಡಬೇಕಿತ್ತು.  ಬಿ. ವೈ. ರಾಘವೇಂದ್ರ ಎಂಪಿ, ವಿಜಯೇಂದ್ರ ಎಂಎಲ್ಎ ಯಡಿಯೂರಪ್ಪ ಪಾರ್ಲಿಮೆಂಟ್ ಬೋರ್ಡ್ ಮೆಂಬರ್.  ಮತ್ತೊಬ್ಬರಿಗೆ ತ್ಯಾಗ ಮಾಡುವ ಕಥೆ ಹೇಳುವ ನೀವು ತ್ಯಾಗ ಮಾಡಿ ಎಂದು ಅವರು ಸವಾಲು ಹಾಕಿದ ಶಾಸಕರು, ನಮ್ಮಲ್ಲಿ ಕುರುಬ ಸಮಾಜಕ್ಕೆ ಪ್ರಾತಿನಿಧ್ಯ ಕೊಟ್ಟಿಲ್ಲ.  ಈಶ್ವರಪ್ಪ ಅವರು ಕೇಳಿದ್ದರಲ್ಲಿ ತಪ್ಪಿಲ್ಲ.  ನಾಮಪತ್ರ ವಾಪಸತಿ ಕೊನೆಯ ದಿನ ಮುಗಿದ ಬಳಿಕ ಅಖಾಡ ತಯಾರಾಗುತ್ತದೆ ಎಂದು ಹೇಳಿದರು.

ಲೋಕಸಭೆ ಚುನಾವಣೆ ಬಳಿಕ ಬಿಜೆಪಿಯಲ್ಲಿ ಬದಲಾವಣೆ ದೊಡ್ಡ ಕೂಗು ಏಳಲಿದೆ

ಈ ಅಪ್ಪ ಮಕ್ಕಳು ಸಮಸ್ಯೆಯನ್ನು ಬಗೆಹರಿಸುವ ವಾತಾವರಣ ಕಂಡು ಬರುತ್ತಿಲ್ಲ ಎಂದು ಹೇಳುವ ಮೂಲಕ ಶಾಸಕರು ಬಿ. ಎಸ್. ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದಾಗವ ಬಿಜೆಪಿ ಅಲೆ ಸಂಪೂರ್ಣವಾಗಿತ್ತು.  28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ವಾತಾವರಣ ರಾಜ್ಯದಲ್ಲಿ ಸೃಷ್ಟಿಯಾಗಿತ್ತು.  ಈ ಅಪ್ಪ ಮಕ್ಕಳ ಗೊಂದಲದಿಂದ ಕಾರ್ಯಕರ್ತರು ಸ್ವಲ್ಪ ವಿಚಲಿತರಾಗಿದ್ದಾರೆ.  ನಮ್ಮ ಕಾರ್ಯಕರ್ತರು ಮತ್ತು ಮತದಾರರು ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಲು ಮುಂದಾಗಿದ್ದಾರೆ.  ಈ ಚುನಾಣೆಯಲ್ಲಿ ಯಾವುದೇ ಅಪಾಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಲೋಕಸಭೆ ಚುನಾವಣೆಯ ಬಳಿಕ ಬಹಳ ದೊಡ್ಡ ಬದಲಾವಣೆಯಾಗುತ್ತದೆ.  ಬದಲಾವಣೆಯಾಗಬೇಕೆಂಬ ದೊಡ್ಡ ಕೂಗು ಕರ್ನಾಟಕದ ಬಿಜೆಪಿಯಲ್ಲಿ ಏಳುತ್ತದೆ ಎಂದು ಇಂದು ಭವಿಷ್ಯ ನುಡಿಯುತ್ತೇನೆ.  ಅವರು ನಾಯಕರ ಹಾಗೂ ಕಾರ್ಯಕರ್ತರ ಜೊತೆಗೆ ನಡೆಕೊಂಡ ರೀತಿ ಸರಿಯಿಲ್ಲ.  ಇಷ್ಟಾದರೂ ಹೈಕಮಾಂಡ್ ಯಡಿಯೂರಪ್ಪ ಹಾಗೂ ಅವರ ಮಗನನ್ನು ಬಿಟ್ಟರೆ ಕರ್ನಾಟಕದಲ್ಲಿ ಬಿಜೆಪಿ ಮುಳ್ಲುಗಿ ಹೋಗುತ್ತದೆ ಹೈಕಮಾಂಡ್ ಅಂದುಕೊಂಡು ಮೌನವಾಗಿರಬಹುದು.  ಆದರೆ ಹಾಗೆ ಏನೂ ಇಲ್ಲ ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆ ಬಳಿಕ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗು ಏಳಲಿದೆ- ಯತ್ನಾಳ ಬೈಟ್:

ಪಂಚಮಸಾಲಿ ಸಮುದಾಯ ಯಡಿಯೂರಪ್ಪ ಜೊತೆಗಿಲ್ಲ

ಮೊದಲಿನಿಂದಲೂ ಯಡಿಯೂರಪ್ಪರ ಜೊತೆಗೆ ಯಾವ ಸಮುದಾಯಗಳು ಇಲ್ಲ.  ಪ್ರಮುಖವಾಗಿ ನಮ್ಮ ಪಂಚಮಸಾಲಿ ಸಮುದಾಯ ಅವರ ಜೊತೆಗಿಲ್ಲ.  ನಾವಂತೂ ಅವರ ನಾಯಕತ್ವ ಒಪ್ಪಿಕೊಳ್ಳಲು ಸಾಧ್ಯವಿಲ್ಲ.  ನಮ್ಮ ಸಮಾಜಕ್ಕೆ ಅವರು ಮೋಸ ಮಾಡಿದ್ದಾರೆ.  ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಯಡಿಯೂರಪ್ಪ ಬಹಳ ಅಡ್ಡ ಹಾಕಿದರು.  2ಎ ಮೀಸಲಾತಿ ವಿಷಯದಲ್ಲಿ ಬಿಜೆಪಿ ಸರಕಾರದ ಕ್ಯಾಬಿನೆಟಿನಲ್ಲಿ ಯಾರಾರು ವಿರೋಧ ಮಾಡಿದರು ಎಂಬುದನ್ನು ಲೋಕಸಭೆ ಚುನಾವಣೆಯ ಬಳಿಕ ಬಹಿರಂಗಪಡಿಸುತ್ತೇವೆ.  ಇವರ ಕೈಯಲ್ಲಿ ಭವಿಷ್ಯದಲ್ಲಿ ಸುರಕ್ಷತೆ ಇಲ್ಲ ಎಂದು ಅವರು ಹೇಳಿದರು.

ಬ್ಲ್ಕಾಕಮೇಲ್ ಮಾಡಿ ಕಾರಜೋಳಗೆ ಟಿಕೆಟ್ ಕೊಡಿಸಿದ್ದಾರೆ

ಅವರೇ ಜಗಳ ಹಚ್ಚುತ್ತಿದ್ದಾರೆ.  ಟಿಕೆಟ್ ಹಂಚಿಕೆಯ ವಿಚಾರದ ಅವರಿಂದಲೇ ಭಿನ್ನಮತ ಉಂಟಾಗುತ್ತಿದೆ.  ತುಮಕೂರಿನಲ್ಲಿ ಮಾಧುಸ್ವಾಮಿ ಯಾರು? ಅವರು ಯಡಿಯೂರಪ್ಪ ಶಿಷ್ಯ.  ಚಿತ್ರದುರ್ಗಲ್ಲಿ ಚಂದ್ರಣ್ಣ ಬಿ. ಎಸ್.  ವೈ ಕೆಜೆಪಿ ಮಾಡಿದಾಗ ಶಾಸಕತ್ವಕ್ಕೆ ರಾಜೀನಾಮೆ ನೀಡಿ ಹೋಗಿದ್ದರು.  ಈಗ ಅವರನ್ನು ಕರೆದು ಮಾತನಾಡಿಸದೇ ಟಿಕೆಟ್ ಡಿಕ್ಲೇರ್ ಮಾಡಿದ್ದಾರೆ.  ಚಿತ್ರದುರ್ಗದ ಟಿಕೆಟ್ ಕಾರಜೋಳಗೆ ಕೊಡದಿದ್ದರೆ ನಾನು ಕ್ಯಾಂಪೇನ್ ಮಾಡಲ್ಲ ಎಂದು ಯಡಿಯೂರಪ್ಪ ಬ್ಲಾಕ್ ಮೇಲ್ ಮಾಡಿ ಟಿಕೆಟ್ ಕೊಡಿಸಿದ್ದಾರೆ ಎಂದು ಚಿತ್ರದುರ್ಗದ ಚಂದ್ರಣ್ಣ ಹೇಳಿದ್ದಾರೆ ಎಂದು ಅವರು ಆರೋಪಿಸಿದರು.

ದಾವಣಗೆರೆ, ಬೆಳಗಾವಿ ಭಿನ್ನಮತ ವಿಚಾರ

ದಾವಣಗೆರೆಯಲ್ಲಿ ರೇಣುಕಾಚಾರ್ಯ ಇದೇ ಯಡಿಯೂರಪ್ಪ ಶಿಷ್ಯ.  ರೇಣುಕಾಚಾರ್ಯ ಯಡಿಯೂರಪ್ಪ ಅವರದೇ ಕೂಸು.  ಬೆಳಗಾವಿಯಲ್ಲಿಯೂ ಇದೆ ಕಥೆ.  ನನಗೂ ಬೇರೆ ಜಿಲ್ಲೆಯಲ್ಲಿ ಹೋಗಿ ಲೋಕಸಭೆಗೆ ನಿಲ್ಲುವಂತೆ ಸೂಚಿಸಿದ್ದರು.  ನಾವು ಬೇರೆ ಜಿಲ್ಲೆಗೆ ಹೋಗಿ ಅಲ್ಲಿಯ ಕಾರ್ಯಕರ್ತರಿಗೆ ತೊಂದರೆ ಕೊಡಬಾರದು.  ಬೆಳಗಾವಿಯಲ್ಲಿ ಶೆಟ್ಟರ್ ಬಲಿಕೊಡುತ್ತಾರಾ? ಶೆಟ್ಟರ್ ಬಲಿ ಕೊಡುತ್ತಾರೋ ಹೆಬ್ಬಾಳ್ಕರ್ ಜೊತೆ ಒಳ ಒಪ್ಪಂದವಿದೆಯೋ ಗೊತ್ತಿಲ್ಲ.  ಅದು ಹೊರಗೆ ಬರುತ್ತದೆ.  ಹೆಬ್ಬಾಳಕರ ಅವರಿಗೆ ಅನುಕೂಲ ಆಗುವಂತೆ ಕುತಂತ್ರವಿರಬಹುದು.  ಇದನ್ನೆಲ್ಲ ಮಾಡುತ್ತಿರುವವರು ಅದೇ ಅಪ್ಪ ಮಕ್ಕಳು.  ಕೇಂದ್ರದ ನಾಯಕರು ಇವರದ್ದೇ ಮಾತು ಕೇಳುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ವಾಗ್ದಾಳಿ

ಧಾರವಾಡದ ಲೋಕಸಭೆ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀ ವಿರೋಧಿಸಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದಿಂಗಾಲೇಶ್ವ ಸ್ವಾಮೀಜಿ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ದಿಂಗಾಲೇಶ್ವರ ಸ್ವಾಮೀಜಿ ಯಡಿಯೂರಪ್ಪ ಚೇಲಾ.  ದಿಂಗಾಲೇಶ್ವರ ಸ್ವಾಮೀಜಿಯನ್ನ ದಂಗಾಲೇಶ್ವರ ಎಂದು ಸಂಭೋಧಿಸಿದ ಅವರು, ಜೊತೆಗೆ ಹರಿಹರ ಸ್ವಾಮೀನೂ ಎದ್ದಾನ.  ಅವನ‌ ಶಿಷ್ಯನಿಗೆ ಬೆಳಗಾವಿಯ ಟಿಕೆಟ್ ಕೊಟ್ಟಿಲ್ಲ.  ಇವರೆಲ್ಲ ಯಡಿಯೂರಪ್ಪ ಇಳಿಸುವಾಗ ಇದೆ ದಿಂಗಾಲೇಶ್ವರ ಸ್ವಾಮೀಜಿ ಇತರೆ ಸ್ವಾಮೀಜಿ ಕರೆದುಕೊಂಡು ಹೋಗಿ ಬಿಜೆಪಿ ನಾಯಕರನ್ನು ಅಂಜಿಸಿದರು.  ಇಂಥ ಸ್ವಾಮಿಗಳ ಬೆನ್ನು ಹತ್ತಬೇಡಿ ಎಂದು ಇತರೆ ಸ್ವಾಮೀಜಿಗಳಿಗೆ ಅವರು ಮನವಿ ಮಾಡಿದರು.

ದಿಂಗಾಲೇಶ್ವರ ಸ್ವಾಮೀಜಿಯ ಹೇಳಿಕೆಗೆ ನಮಗೆ ಸಂಬಂಧವಿಲ್ಲ ಎಂದು ಧಾರವಾಡದ ಮುರುಘಾ ಮಠದ ಶ್ರೀಗಳು ಹೇಳಿದ್ದಾರೆ.  ದೇಶದಲ್ಲಿ ಹಿಂದುತ್ವ ಉಳಿಯಬೇಕು ಭಾರತ ಜಗತ್ತಿನ ಗುರುವಾಗಬೇಕು.  ಈ ವಿಚಾರಗಳ ಚುನಾವಣೆ ಇದಾಗಿದೆ.  ಯಾರು ಏನೇ ಅಂದರೂ ಪ್ರಹ್ಲಾದ್ ಜೋಶಿ ಗೆಲ್ಲುತ್ತಾರೆ.  ಅಪ್ಪ ಮಕ್ಕಳೇ ಇಂಥದನ್ನೆಲ್ಲ ಮಾಡುತ್ತಾರೆ ಎಂದು ಅವರು ಶಾಸಕರು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ

ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಗೊಂದಲ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ಯಾರೂ ಪಕ್ಷೇತರಾಗಿ ನಿಲ್ಲುತ್ತೇನೆ ಎಂದು ಹೇಳುತ್ತಿರುವವರು ನಿಲ್ಲಲಿ.  ನಮ್ಮ ಅಭ್ಯರ್ಥಿ ಪಿ. ಸಿ. ಗದ್ದಿಗೌಡರ ಮೂರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ಸಿನಲ್ಲಿ ಮಂತ್ರಿಗಳ ಮಗಾ, ಮಗಳು, ತಮ್ಮ ಹಾಗೂ ಅಳಿಯ ಹೀಗೆ ಕುಟುಂಬ ರಾಜಕಾರಣಿಗಳಿಗೆ ಟಿಕೆಟ್ ನೀಡಕಾಗಿದೆ.  ಇಷ್ಟು ದಿನ ಕಾಂಗ್ರೆಸ್ಸಿನವರು ರಾಜ್ಯದಲ್ಲಿ ಎಷ್ಟು ಲೂಟಿ ಮಾಡಿ ಹಣ ಮಾಡಿದ್ದಾರೆ? ಆ ಹಣವನ್ನ ಜನರು ತೆಗೆದುಕೊಂಡು ಬಿಜೆಪಿಗೆ ಮತ ಹಾಕಲಿ ಎಂದು ಅವರು ಹೇಳಿದರು.

ಸಂಸದ ರಮೇಶ ಜಿಗಜಿಣಗಿ ಬಂಜಾರಾ ಸಮಾಜದ ವಿರುದ್ಧ ಮಾತನಾಡಿರಲಿಕ್ಕಿಲ್ಲ:

ಸಂಸದ ರಮೇಶ ಜಿಗಜಿಣಗಿ ಪರ ಬ್ಯಾಟಿಂಗ್

ವಿಜಯಪುರ ಸಂಸದ ರಮೇಶ ಜಿಗಜಿಣಗಿ ಬಂಜಾರಾ ಸಮಾಜದ ಕುರಿತು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜಿಗಿಜಣಿಗಿ ಏನು ಹೇಳಿದ್ದಾರೆ ಎಂಬ ವಿಡಿಯೋ ನಾನು ಪೂರ್ತಿ ನೋಡಿಲ್ಲ.  ಒಂದು ಸಮುದಾಯವನ್ನು ಯಾವೊಬ್ಬ ರಾಜಕಾರಣಿ ಟಾರ್ಗೆಟ್ ಮಾಡುವುದಿಲ್ಲ.  ನಾನು ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿದ್ದೇನೆ.  ನನಗೆ ಆ ದೈರ್ಯವಿದೆ.  ಅವರ ವೋಟ್ ನನಗೆ ಬೇಡ ಎಂದು ನಾನು ಹೇಳಿದ್ದೇನೆ.  ಆದರೆ ನಾವು ಬಂಜಾರಾ ಮತ್ತು ಇತರ ಸಮಾಜಗಳನ್ನು ಟಾರ್ಗೆಟ್ ಮಾಡಬಾರದು.  ಅವೆಲ್ಲ ಸಮುದಾಯದವರು ಬಿಜೆಪಿಯ ಸಾಂಪ್ರದಾಯಿಕ ಮತದಾರರು.  ಬಿಜೆಪಿಯ ಪರ ಗಟ್ಟಿಯಾಗಿ ನಿಂತವರೇ ಬಂಜಾರಾ, ಭೋವಿ, ಭಜಂತ್ರಿ, ಆದಿಜಾಂಬವ ಹಾಗೂ ಇತರೆ ಸಮಾಜದವರು.  ಬಂಜಾರಾ ಸಮುದಾಯದ ಕುರಿತು ಸಂಸದ ರಮೇಶ್ ಜಿಗಜಿಣಗಿ ಅವಮಾನಕಾರಿಯಾಗಿ ಮಾತನಾಡಿಲ್ಲ.  ಟಿಕೆಟ್ ಸಿಗದಾಗ ಅಸಮಾಧಾನಿತರು ಏನಾದರೂ ಸೃಷ್ಟಿ ಮಾಡುತ್ತಾರೆ.  ಇದಕ್ಕೆ ಯಾರೂ ಕಿವಿಗೊಡಬಾರದು.  ಸಮಾಜದ ರಕ್ಷಣೆ ನಮ್ಮ ಕರ್ತವ್ಯ.  ಬಂಜಾರಾ ಸಮಾಜಕ್ಕೆ ಯಾವುದೇ ಅನ್ಯಾಯವಾಗಲು ನಾವು ಬಿಡುವುದಿಲ್ಲ ಎಂದು ಅವರು ತಿಳಿಸಿದರು.

ನಾನು ಈ ಮುಂಚೆ ಹೇಳಿದ್ದೇನೆ.  ಪಾರ್ಟಿ ಯಾರನ್ನು ಕ್ಯಾಂಡಿಡೇಟ್ ಎಂದು ನಿರ್ಣಯ ಮಾಡುತ್ತದೆ ಅವರ ಚುನಾವಣೆ ಮಾಡುತ್ತೇನೆ ಎಂದು ಹೇಳಿದ್ದೇನೆ.  ನಮ್ಮದು ಯಾವುದೇ ಬೇಡಿಕೆಯ ಬಂಡಾಯ ಇಲ್ಲ.  ವಿಜಯಪುರ ಲೋಕಸಭಾ ಕ್ಷೇತ್ರದ ವಿಚಾರದಲ್ಲಿ ಯಾವುದೇ ಬಂಡಾಯ ಭಿನ್ನಮತ ಇಲ್ಲ.  ಎಲ್ಲರೂ ಸೇರಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ.  ನಮ್ಮ ದೇಶ ಹಿಂದುತ್ವ ಈ ದೃಷ್ಟಿಯಿಂದ ನಾವು ಚುನಾವಣೆ ಮಾಡುತ್ತೇವೆ.  ಯಾವುದೇ ಭಿನ್ನಮತ ಅಭಿಪ್ರಾಯ ಇಲ್ಲ.  ರಾಜ್ಯದ 28 ಕ್ಷೇತ್ರಗಳಲ್ಲಿಯೂ ನಾವು ಗೆಲ್ಲುತ್ತೇವೆ ಎಂದು ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

Leave a Reply

ಹೊಸ ಪೋಸ್ಟ್‌