ಎಲೆಕ್ಟ್ರಾಲ್ ಬಾಂಡ್ ಖರೀದಿದಾರರ ಹೆಸರು ಬಹಿರಂಗವಾದ ಬಳಿಕ ಬಿಜೆಪಿ ಮುಖವಾಡ ಕಳಚಿದೆ- ಸಚಿವ ಎಂ. ಬಿ. ಪಾಟೀಲ

ವಿಜಯಪುರ, ಮಾ. 31: ಎಲೆಕ್ಟ್ರಾಲ್ ಬಾಂಡ್ ವಿಚಾರ ಬಹಿರಂಗವಾದ ಬಳಿಕ ಮೋದಿ ಅವರ ಮುಖವಾಡ ಕಳಚಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ಇಂದು ರವಿವಾರ ಬಬಲೇಶ್ವರದಲ್ಲಿ ವಿ. ಎಸ್. ಪಾಟೀಲ ಅವರ ತೋಟದಲ್ಲಿ ನಡೆದ ಬಬಲೇಶ್ವರ ಪಟ್ಟಣ, ಸಾರವಾಡ ಮತ್ತು ಮಮದಾಪುರ ಜಿ. ಪಂ. ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಯುವಕರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರು ಶಾಸಕರಾಗಿ, ಜಿಲ್ಲಾಧ್ಯಕ್ಷರಾಗಿ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ.  ಈ ಸಲ‌ ಆಲಗೂರ ಅವರು ಲಕ್ಷಾಂತರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ.  ಬಬಲೇಶ್ವರ ಮತಕ್ಷೇತ್ರದಲ್ಲಿ ಆಲಗೂರ ಅವರಿಗೆ 50 ಸಾವಿರ ಮತಗಳ ಲೀಡ್ ಕೊಡಿಸಬೇಕು.  ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ವಾತಾವರಣ ಬದಲಾಗಿದ್ದು ಬಿಜೆಪಿ ಹವಾ ಕಾಣಿಸುತ್ತಿಲ್ಲ.  2019ರಲ್ಲಿ ವಿಜಯಪುರದಲ್ಲಿ ಜೆಡಿಎಸ್ ಗೆ ಟಿಕೆಟ್ ನೀಡಲಾಗಿತ್ತು.  ಅಲ್ಲದೇ, ಆ ಸಂದರ್ಭದಲ್ಲಿ ಪುಲ್ವಾಮಾ ದಾಳಿ ಮತ್ತು ಬಾಲಾಕೋಟ ಸರ್ಜಿಕಲ್ ಸ್ಟ್ರೈಕ್ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭಾವನಾತ್ಮಕ ವಿಚಾರಗಳು ಬಿಜೆಪಿಗೆ ಲಾಭ ತಂದಿದ್ದವು.  ಆದರೆ, ಸುಪ್ರೀಂ ಕೋರ್ಟ್ ಸೂಚನೆಯಂತೆ ಎಲೆಕ್ಟ್ರಾಲ್ ಬಾಂಡ್ ಖರೀದಿದಾರರ ಹೆಸರುಗಳು ಬಹಿರಂಗವಾದ ಬಳಿಕ ನಾ ಖಾವೂಂಗಾ, ನಾ ಖಾವೂಂಗಾ ಎಂದು ಹೇಳುವ ಮೋದಿ ಅವರ ಮುಖವಾಡ ಕಳಚಿದೆ ಎಂದು ಅವರು ಹೇಳಿದರು.

ಐಟಿ, ಇಡಿ, ಸಿಬಿಐ ಧಾಳಿಗೆ ಒಳಗಾದವರು ಎಲೆಕ್ಟ್ರಾಲ್ ಬಾಂಡ್ ಖರೀದಿಸಿ ಹಣ ನೀಡಿದ್ದಾರೆ.  ಸುಪ್ರೀಂ ಕೋರ್ಟ್ ಆದೇಶ ನೀಡದಿದ್ದರೆ ಈ ವಿಚಾರ ಹೊರಗೆ ಬರುತ್ತಿರಲಿಲ್ಲ.  ಕೆಲವು ಕಂಪನಿಗಳ ಮೂಲ ಆಸ್ತಿಗಿಂತಲೂ ಬಾಂಡ್ ಖರೀದಿಸಲು ನೀಡಿರುವ ಹಣ ಹೆಚ್ಚಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ನಾವು ಪಂಚ ಗ್ಯಾರಂಟಿ ಮೂಲಕ ಭರವಸೆ ಈಡೇರಿಸಿದ್ದೇವೆ.  ಜಿಲ್ಲೆಯಲ್ಲಿ 4.50 ಲಕ್ಷ ಜನರಿಗೆ ಯೋಜನೆಗಳ ಲಾಭ ದೊರಕಿದೆ.  ಇವರೆಲ್ಲರೂ ಎರಡು ಮತ ಹಾಕಿಸಿದರೆ ಆಲಗೂರ ಅತೀ ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿದ್ದಾರೆ.  ಶ್ರೀ ಸಿದ್ಧೇಶ್ವರ ಸ್ವಾಮೀಜಿ ಕನಸು ನನಸು ಮಾಡಿದ್ದೇವೆ.  ಬಾಕಿ ಇರುವ 15000 ಎಕರೆ ಬಾಕಿ ಭೂಮಿಗೆ ಆರು ತಿಂಗಳಲ್ಲಿ ನೀರಾವರಿ ಮಾಡಲಾಗುವುದು.  ಇದಕ್ಕಾಗಿ ಈಗಾಗಲೇ ರೂ. 319 ಕೋ. ಯೋಜನೆ ರೂಪಿಸಲಾಗಿದೆ.  ಚಡಚಣ ಹೋಬಳಿಯ 16 ಕೆರೆಗಳ ತುಂಬಿಸಲು ರೂ.45 ಕೋ. ಬಿಡುಗಡೆ ಮಾಡಲಾಗಿದೆ.  ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣವಾಗಲಿದೆ.  ಜನರ ಬದುಕು ಕಟ್ಟಿ ಕೊಡುವುದು ನಮ್ಮ ಧ್ಯೇಯವಾಗಿದೆ.  ಜನರ ಭಾವನೆ ಕೆರಳಿಸುವುದು ಅವರ ಧ್ಯೇಯವಾಗಿದೆ.  ಮಕ್ಕಳು, ಮೊಮ್ಮಕ್ಕಳ ಭವಿಷ್ಯ ರೂಪಿಸುವ ಕೆಲ ಮಾಡಿದ್ದೇವೆ ಎಂದು ಅವರು ಹೇಳಿದರು.

ಮುಂಬರುವ ದಿನಗಳಲ್ಲಿ ಮತಕ್ಷೇತ್ರದ ಎಲ್ಲ ಸರಕಾರಿ ಶಾಲೆಗಳಲ್ಲಿ ಸ್ಮಾರ್ಟಕ್ಲಾಸ್ ಪ್ರಾರಂಭಿಸಲು ಹೆಚ್ಚಿನ ಅನುದಾನ ನೀಡಲಾಗುವುದು.  ಕಾನ್ವೆಂಟ್ ಶಾಲೆಗಳ ಮಾದರಿಯಲ್ಲಿ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮಾತನಾಡಿ, ಎಂ. ಬಿ. ಪಾಟೀಲರು 1999ರಲ್ಲಿ ನನ್ನನ್ನು ರಾಜಕೀಯಕ್ಕೆ ಕರೆತಂದು ಮೊದಲ ಬಾರಿಗೆ ಶಾಸಕನಾಗಿ ಮಾಡಿದರು.  ಈ ಬಾರಿಯೂ ನಾನು ಟಿಕೆಟ್ ಗಾಗಿ ಎಲ್ಲೂ ಹೋಗಿಲ್ಲ.  ಎಲ್ಲ ನಾಯಕರ ಒಮ್ಮತದ ಅಭ್ಯರ್ಥಿಯಾಗಿ ನನಗೆ ಟಿಕೆಟ್ ನೀಡಲಾಗಿದೆ.  ಕಾಂಗ್ರೆಸ್ಸಿಗೆ ಮತ ಕೇಳುವ ಹಕ್ಕಿದೆ. ಬಿಜೆಪಿಗೆ ಹಕ್ಕಿಲ್ಲ.  ನೀಡಿದ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸಿದೆ.  ಬಿಜೆಪಿ 10 ವರ್ಷಗಳಲ್ಲಿ ನೀಡಿದ ಭರವಸೆ ಈಡೇರಿಸಿಲ್ಲ.  ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ.  2013 ರಿಂದ 2018ರ ಅವಧಿಯಲ್ಲಿ ಎಂ. ಬಿ. ಪಾಟೀಲ ಅವರು ಜಿಲ್ಲೆಯಲ್ಲಿ ಮಾಡಿರುವ ನೀರಾವರಿ ಯೋಜನೆಗಳು ಮತ್ತು ಈಗ ರಾಜ್ಯ ಸರಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳು ನನ್ನ ಗೆಲುವಿಕೆ ಕಾರಣವಾಗಲಿವೆ.  ಸಂಸದ ಜಿಗಜಿಣಗಿ ಅವರನ್ನು ಬದಲಾವಣೆ ಮಾಡುವ ಪರ್ವಕಾಲ ಬಂದಿದೆ.  25 ವರ್ಷಗಳಿಂದ ಸಂಸದರಾಗಿ ಜಿಗಜಿಣಗಿ ಚಿಕ್ಕೋಡಿ, ವಿಜಯಪುರದಲ್ಲಿ ಯಾವ ಕೆಲಸವನ್ನೂ ಮಾಡಿಲ್ಲ.  ಈ ಬಾರಿ ಬದಲಾವಣೆಗೆ ಅವಕಾಶ ಮಾಡಿಕೊಡಿ.  ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ವಿಜಯಪುರ ಜಿಲ್ಲೆಯ ಬಬಲೇಶ್ವರದ ವಿ. ಎಸ್. ಪಾಟೀಲ ಅವರ ತೋಟದಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಸಚಿವ ಎಂ. ಬಿ. ಪಾಟೀಲ ಮಾತನಾಡಿದರು.

ಕಾಂಗ್ರೆಸ್ ಮುಖಂಡರಾದ ವಿ. ಎಸ್. ಪಾಟೀಲ, ಡಾ. ಕೆ. ಎಚ್. ಮುಂಬಾರೆಡ್ಡಿ, ಬಾಪುಗೌಡ ಪಾಟೀಲ ಶೇಗುಣಸಿ, ಚನ್ನಪ್ಪ ಕೊಪ್ಪದ, ಮುತ್ತಪ್ಪ ಶಿವಣ್ಣವರ ವಿದ್ಯಾರಾಣಿ ತುಂಗಳ ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ಮೇಲ್ನೋಟಕ್ಕೂ ವಸ್ತು ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ.  ದೇಶದಲ್ಲಿ ಮಹಿಳಾ ಮತದಾರರು ಬದಲಾವಣೆ ಬಯಸುತ್ತಿದ್ದಾರೆ.  ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮಹಿಳೆಯರ ಪಾತ್ರ ಪ್ರಮುಖವಾಗಿದೆ.  ದೇಶದಲ್ಲಿ ಪೊಳ್ಳು ಭರವಸೆ ಸರಕಾರವಿದೆ.  ಜಾತಿಗಳ ಮಧ್ಯೆ ದ್ವೇಷ ಬಿತ್ತುತ್ತ ಅಧಿಕಾರ ನಡೆಸುತ್ತಿದೆ.  ಕಾಂಗ್ರೆಸ್ ಸರಕಾರ ಜನಪರ ಯೋಜನೆ ಜಾರಿ ಮಾಡಲಾಗಿದೆ.  ಎಲ್ಲರೂ ಬೂತ್ ಮಟ್ಟದಲ್ಲಿ ಸಂಘಟನೆ ಮಾಡಿ ಪ್ರೊ. ರಾಜು ಆಲಗೂರ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಡಿ. ಎಲ್. ಚವ್ಹಾಣ, ಧರ್ಮರಾಜ ಬಿಳೂರ, ಬಾಬುಗೌಡ ಪಾಟೀಲ ಯಕ್ಕುಂಡಿ, ಸುಜಾತಾ ಕಳ್ಳಿಮನಿ, ಬಿ. ಜಿ. ಬಿರಾದಾರ, ಆರ್. ಜಿ. ಯರನಾಳ, ಭೀಮಶಿ ಬಾಗಾದಿ, ಗೀತಾಂಜಲಿ ಪಾಟೀಲ, ಸುಜಾತಾ ಜಂಗಮಶೆಟ್ಟಿ, ದಾನಮ್ಮ ಜಿರಲಿ, ಆನಂದ ಬೂದಿಹಾಳ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌