ವಿಜಯಪುರ: ಬಿರುಗಾಳಿ ಸಹಿತ ಮಳೆಗೆ ಬಾಳೆ ತೋಟ ನಾಶವಾದ ಘಟನೆ ವಿಜಯಪುರ ತಾಲೂಕಿನ ಬೊಮ್ಮನಳ್ಳಿಯಲ್ಲಿ ಶನಿವಾರ ಸಂಜೆ ನಡೆದಿದೆ.
ಮುರುಗೆಪ್ಪ ಚೌಗುಲಾ ಎಂಬುವರಿಗೆ ಸೇರಿದ ತೋಟದಲ್ಲಿ ಈ ಘಟನೆ ನಡೆದಿದ್ದು, ಶನಿವಾರ ಸಂಜೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ಇಡೀ ಬಾಳೆ ತೋಟ ಹಾಳಾಗಿದೆ. ಮುರುಗೆಪ್ಪ ಚೌಗುಲಾ ಸುಮಾರು ಒಂದು ಕಾಲು ಎಕರೆ ಪ್ರದೇಶದಲ್ಲಿ ಬಾಳೆ ಗಿಡಗಳನ್ನು ಬೆಳೆದಿದ್ದರು. ಫಸಲು ಕೂಡ ಉತ್ತಮವಾಗಿತ್ತು. ಇನ್ನು ಕೆಲವೇ ದಿನಗಳಲ್ಲಿ ಕಟಾವು ಮಾಡಬೇಕಿತ್ತು.
ಆದರೆ, ಶನಿವಾರ ಸಂಜೆ ಬೀಸಿದ ಬಿರುಗಾಳಿಗೆ ರೈತನ ತೋಟದಲ್ಲಿ ಬೆಳೆಯಲಾಗಿದ್ದ ಒಂದು ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು ಧರೆಗುರುಳಿವೆ. ಇದರಿಂದಾಗಿ ರೈತನಿಗೆ ಸುಮಾರು ರೂ. 2 ಲಕ್ಷಕ್ಕೂ ಹೆಚ್ಚು ಹಾನಿ ಉಂಟಾಗಿದೆ. ಇಳುವರಿ ಕಟಾವು ಹಂತಕ್ಕೆ ಬಂದಿದ್ದ ಬಾಳೆ ಗಿಡಗಳು ನಾಶವಾಗಿದ್ದರಿಂದ ರೈತ ಕಂಗಾಲಾಗಿದ್ದಾನೆ.
ಗಾಯದ ಮೇಲೆ ಬರೆ ಎಳೆದಂತೆ ರೈತನ ತೋಟದಲ್ಲಿದ್ದ ವಿದ್ಯುತ್ ಕಂಬಗಳೂ ಕೂಡ ಮುರಿದು ಬಿದ್ದಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಕಂಗಾಲಾಗಿರುವ ರೈತ ಸೂಕ್ತ ಪರಿಹಾರಕ್ಕಾಗಿ ಅಂಗಲಾಚುತ್ತಿದ್ದಾನೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.