ವಿಜಯಪುರ: ಕಾಂಗ್ರೆಸ್ ದಲಿತರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡಿದ್ದೆ. ರಾಜ್ಯ ಸರಕಾರ ಎಸ್.ಸಿ.ಪಿ., ಟಿ.ಎಸ್.ಪಿ ಯೋಜನೆಗಳ ರೂ. 25000 ಕೋ. ಹಣವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹೇಂದ್ರಕುಮಾರ ನಾಯಿಕ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಬಿ. ಆರ್. ಅಂಬೇಡ್ಕರ ಅವರಿಂದ ಹಿಡಿದು ಈವರೆಗೆ ದಲಿತರಿಗೆ ನಿರಂತರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರಕಾರ ಎಸ್.ಸಿ.ಪಿ., ಟಿ.ಎಸ್.ಪಿ ಹಣವನ್ನು ಬೇರೆ ಯೋಜನೆಗೆ ಬಳಸಿಕೊಂಡಿದೆ. ಈ ವಿಷಯದ ಕುರಿತು ಪ್ರಶ್ನಿಸಿದರೆ ಸಿದ್ದರಾಮಯ್ಯನವರು ಉಡಾಫೆ ಉತ್ತರ ನೀಡುತ್ತಾರೆ. ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಜೀವಾತಾವಧಿಯಲ್ಲಿ ಭಾರತ ರತ್ನ ಪುರಸ್ಕಾರ ನೀಡದೆ ಬಾಬಾಸಾಹೇಬರಿಗೆ ಅವಮಾನ ಮಾಡಿದೆ. ಪಂ. ಜವಹರಲಾಲ್ ನೆಹರೂ, ಇಂದಿರಾಗಾಂಧಿ ಮತ್ತು ರಾಜೀವ ಗಾಂಧಿ ಅವರ ಸಮಾಧಿಗಾಗಿ ಸುಮಾರು 112 ಎಕರೆಯನ್ನು ಸಾರ್ವಜನಿಕರ ಆಸ್ತಿಯನ್ನ ಬಳಿಸಿಕೊಂಡ ಕಾಂಗ್ರೆಸ್ ಪಕ್ಷ ಡಾ. ಬಾಬಾಸಾಹೇಬರು ನಿಧನವಾದಾಗ ಅವರ ಸಮಾಧಿ ನಿರ್ಮಿಸಲು ಒಂದಿಂಚೂ ಭೂಮಿ ನೀಡದೆ ದಲಿತ ಸಮಾಜವನ್ನು ಅವಮಾನಿಸಿದ್ದು ಯಾರೂ ಮರೆಯಬಾರದು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ ಸರಕಾರ ಎಸ್.ಸಿ.ಪಿ., ಟಿ.ಎಸ್.ಪಿ ಯೋಜನೆಯಡಿ ರೂ. 25000 ಕೋ. ಹಣವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡುವ ಮೂಲಕ ದೊಡ್ಡ ದ್ರೋಹ ಮಾಡಿದೆ. ವಾಸ್ತವಿಕವಾಗಿ ದಲಿತರ ಪರ ಧ್ವನಿ ಎತ್ತುವ ಹಾಗೂ ದಲಿತರ ಪರವಾಗಿ ಬಿಜೆಪಿ ಕೆಲಸ ಮಾಡಿದೆ. ಕಾಂಗ್ರೆಸ್ ಸೋಲುವ ಕಡೆ ದಲಿತರಿಗೆ ಟಿಕೆಟ್ ಕೊಟ್ಟು ನಾಟಕವಾಡುತ್ತಿದೆ. ಬಿಜೆಪಿ ಸರಕಾರ ಸದಾ ದಲಿತರ ಪರವಾಗಿ ಕೆಲಸ ಮಾಡುತ್ತಿದೆ. ಮೋದಿಯವರು ತಮಗೆ ಸಿಕ್ಕ 10 ವರ್ಷದ ಅಧಿಕಾರಾವಧಿಯಲ್ಲಿ ಬುಡಕಟ್ಟು ಜನಾಂಗದ ಮಹಿಳೆ ದೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡುವ ಮೂಲಕ ದಲಿತರ ಪರ ಪ್ರೀತಿ ತೋರಿಸಿದ್ದಾರೆ. ಅಲ್ಲದೇ, ಮೋದಿ ನೇತೃತ್ವದ ಸರಕಾರ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಐದು ಸ್ಥಳಗಳನ್ನ ಅಭಿವೃದ್ಧಿ ಪಡಿಸಲು ಪಂಚತೀರ್ಥ ಯೋಜನೆ ಆರಂಭ ಮಾಡುವ ಮೂಲಕ ಅಂಬೇಡ್ಕರ ಅವರ ಮೇಲಿನ ಗೌರವವನ್ನು ಹಚ್ಚಿಸಿದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದಲಿತತ ಏಳಿಗೆಗೆ ಸತತವಾಗಿ ಶ್ರಮಿಸುತ್ತಿದ್ದಾರೆ. ಎರಡು ಬಾರಿ ದಲಿತರು ರಾಷ್ಟ್ರಪತಿಗಳಾಗಿದ್ದಾರೆ. ಬಂಜಾರಾ ಸಮಾಜ ಏಳಿಗೆಗೆ ಪ್ರಧಾನಿ ಶ್ರಮಿಸಿದ್ದಾರೆ. ಲಂಬಾಣಿ ಸಮುದಾಯದ ಬಹುದಿನದ ಕನಸಾಗಿದ್ದ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದಾರೆ. ಅಲ್ಲದೇ, ಒಂದೇ ವೇದಿಕೆಯಲ್ಲಿ 60 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ದಾಖಲೆ ನಿರ್ಮಿಸಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ರೂ. 5000 ಕೋ. ಅನುದಾನ ನೀಡಿತ್ತು. ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಯಾವುದೆ ಹಣ ನೀಡಿಲ್ಲ. ಬದಲಿಗೆ ಎಸ್.ಸಿ.ಪಿ., ಟಿ.ಎಸ್.ಪಿ ಹಣವನ್ನು ದುರ್ಬಳಕೆ ಮಾಡಿದೆ. ಕಾಂಗ್ರೆಸ್ ಸರಕಾರ ಸುಳ್ಳು ಸಮಾವೇಶಗಳನ್ನು ಮಾಡಿ ದಲಿತರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಯಡಿಯೂರಪ್ಪ ಅವರ ಅವಧಿಗೂ ಮುನ್ನ ಅಂಬೇಡ್ಕರ್ ನಿಗಮ ಮಾತ್ರ ಇತ್ತು, ಆದರೆ, ಬಿ.ಎಸ್.ವೈ ಸಿಎಂ ಆಗಿದ್ದಾಗ ಬಂಜಾರಾ, ಬೋವಿ ಹಾಗೂ ವಾಲ್ಮಿಕಿ ನಿಗಮಗಳು ಸ್ಥಾಪನೆಯಾಗಿವೆ. ಕಾಂಗ್ರೆಸ್ ಸರಕಾರ ಯಾವುದೇ ಒಂದು ಯೋಜನೆಯಲ್ಲೂ ದಲಿತರಿಗೆ ಒಂದು ಹಿಡಿ ಜಮೀನು ಖರೀದಿಗೆ ಅವಕಾಶ ನೀಡಿಲ್ಲ. ಶಾಸಕರಿಗೆ ಕೊಳವೆ ಭಾವಿ ಕೊರೆಸಲು ಕೇವಲ ಮೂರು ಬೋರವೆಲ್ ಗಳಿಗೆ ಆಗುವಷ್ಟು ಅನುದಾನ ನೀಡಿದ್ದಾರೆ. ಬಿಜೆಪಿಯ ಅನೇಕ ಶಾಸಕರು ನಿಮ್ಮ ಬೋರವೆಲ್ ಹಣ ಬೇಡ. ಇದರಿಂದ ಅನೇಕ ಕೊಳವೆ ಭಾವಿ ಅಗತ್ಯವಿರುವ ರೈತರು ಸಿಟ್ಟಿಗೆ ಬರಲು ಕಾರಣವಾಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಅವರು ತಿಳಿಸಿದರು. .
ಬಿಜೆಪಿ ಅವಧಿಯಲ್ಲಿಯೇ ಬಂಜಾರ ಅಭಿವೃದ್ಧಿ ನಿಗಮ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ,ಭೋವಿ ಅಭಿವೃದ್ಧಿ ನಿಗಮ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ದಲಿದ ಸಮುದಾಯದ ಎಲ್ಲ ಜಾತಿಗಳನ್ನ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂಚುಣಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಅವರು ಹೇಳಿದರು.
ಪಕ್ಷ ನನಗೆ ಅನ್ಯಾಯ ಮಾಡಿಲ್ಲ, ಪಕ್ಷದ ನಿರ್ಧಾರಕ್ಕೆ ಬದ್ಧನಿದ್ದೇನೆ
ವಿಜಯಪುರ ಲೋಕಸಭೆ ಕ್ಷೇತ್ರದಿಂದ ನಾನೂ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೇ, ಪಕ್ಷ ಈಗಾಗಲೇ ಸಂಸದ ರಮೇಶ ಜಿಗಜಿಣಗಿ ಅವರಿಗೆ ಟಿಕೆಟ್ ನೀಡಿ್ದೆ. ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಪಕ್ಷ ನನಗೆ ಅನ್ಯಾಯ ಮಾಡಿಲ್ಲ. ಮುಂದೆ ನನಗೆ ಅವಕಾಶ ನೀಡಲಿದೆ. ಪಕ್ಷ ನನಗೆ ಏನು ಜವಾಬ್ದಾರಿ ನೀಡುತ್ತದೆಯೋ ಅದನ್ನು ನಾನು ಮಾಡುತ್ತೇನೆ ಎಂದು ಮಹೇಂದ್ರಕುಮಾರ ನಾಯಿಕ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಉಪಸ್ಥಿತರಿದ್ದರು.