ವಿಜಯಪುರ: ಆಟವಾಡುತ್ತಿದ್ದ ಪುಟ್ಟ ಮಗುವೊಂದು ತೆರೆದ ಬೋರವೆಲ್ ಗೆ ಬಿದ್ದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿದೆ.
ಸುಮಾರು ಒಂದೂವರೆ ವರ್ಷದ ಗಂಡು ಮಗು ಸಾತ್ವಿಕ ಮುಜಗೊಂಡ ಸಂಜೆ 6 ಗಂಟೆಯ ಸುಮಾರಿಗೆ ಆಟವಾಡುತ್ತ ಹೋಗಿ ತೆರೆದ ಬೋರವೆಲ್ ಗೆ ಬಿದ್ದಿದೆ.
ಸ್ಥಳಕ್ಕೆ ದೌಡಾಯಿಸಿದ ಡಿಸಿ, ಎಸ್ಪಿ ಮತ್ತೀತರ ಅಧಿಕಾರಿಗಳು
ಘಟನೆಯ ಮಾಹಿತಿ ಪಡೆದ ಜಿಲ್ಲಾಧಿಕಾರಿ ಟಿ. ಭೂಬಾಲನ್, ಎಸ್ಪಿ ಋಷಿಕೇಶ ನೋನಾವಣೆ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ಈ ಘಟನೆಯ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ತಾಲೂಕು ಆಡಳಿತ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೇ, ಕೊಳವೆ ಭಾವಿಗೆ ಆಕ್ಸಿಜನ್ ಸರಬರಾಜು ಮಾಡುತ್ತಿದ್ದಾರೆ. ಈ ಮಧ್ಯೆ, ಕ್ಯಾಮೆರಾವೊಂದನ್ನು ತೆರೆದ ಕೊಳವೆ ಭಾವಿಯ ಒಳಗಡೆ ಬಿಟ್ಟು ಮಗುವಿನ ಚಲನವಲನದ ಬಗ್ಗೆ ನಿಗಾ ವಹಿಸಿದ್ದಾರೆ.
ವಿಡಿಯೋ ಸಿದ್ದಿ ಇಲ್ಲಿದೆ ನೋಡಿ:
ನಿನ್ನೆಯಷ್ಟೆ ಕೊರೆಯಲಾಗಿದ್ದ ಕೊಳವೆ ಭಾವಿ
ಮುಜಗೊಂಡ ಕುಟುಂಬ ನಾಲ್ಕು ಎಕರೆ ಜಮೀನು ಹೊಂದಿದ್ದು, ಮಳೆಯ ಕೊರತೆ ಹಿನ್ನೆಲೆಯಲ್ಲಿ ಲಿಂಬೆ ಬೆಳೆ ರಕ್ಷಣೆಗಾಗಿ ನಿನ್ನೆ ಅಂದರೆ ಮಂಗಳವಾರವಷ್ಟೇ ಸುಮಾರು 500 ಅಡಿಯಷ್ಟು ಕೊಳವೆ ಭಾವಿ ಕೊರೆಸಿತ್ತು. ಅದರಲ್ಲಿ ನೀರು ಬಂದಿರಲಿಲ್ಲ ಎನ್ನಲಾಗಿದೆ. ಬೆಳಿಗ್ಗೆ ಈ ಪ್ರದೇಶಕ್ಕೆ ತೆರಳಿದ್ದ ಬೋರವೆಲ್ ಗೆ ಸಂಬಂಧಿಸಿದ ಜನರು ಒಳಗಡೆ ಮೋಟರ್ ಬಿಟ್ಟು ನೀರಿನ ಬಗ್ಗೆ ಪರಿಶೀಲನೆ ನಡೆಸಿದ್ದರು ಎನ್ನಲಾಗಿದೆ.
ನಿರ್ಲಕ್ಷದಿಂದಾದ ಘಟನೆ
ತೆರೆದ ಕೊಳವೆ ಭಾವಿಯ ಬಗ್ಗೆ ಮುಜಗೊಂಡ ಕುಟುಂಬವಾಗಲಿ ಅಥವಾ ಕೊಳವೆ ಭಾವಿ ಕೊರೆದ ಕೊಳವೆಭಾವಿಗೆ ಮೇಲೆ ಕವರ್ ಹಾಕಿ ಮುಚ್ಚುವಾಗಲಿ ಅಥವಾ ಕಲ್ಲಿನಿಂದಾಗಲಿ ಮುಚ್ಚಿರಲಿಲ್ಲ ಎನ್ನಲಾಗಿದೆ. ಸಂಜೆ ಈ ಪ್ರದೇಶಕ್ಕೆ ಆಟವಾಡುತ್ತ ಬಂದ ಸತೀಶ ಮುಜಗೊಂಡ ಮತ್ತು ಪೂಜಾ ಮುಜಗೊಂಡ ದಂಪತಿಯ ಮಗು ಸಾತ್ವಿಕ ಮುಜಗೊಂಡ ತಲೆ ಕೆಳಗೆ ಮಾಡಿ ತೆರೆದ ಬೋರವಲ್ ನಲ್ಲಿ ಬಿದ್ದಿದೆ.
ಸುಮಾರು 15 ರಿಂದ 20 ಅಡಿ ಆಳದಲ್ಲಿ ಸಿಲುಕಿರುವ ಮಗು
ಈ ಕೊಳವೆ ಭಾವಿಗೆ ಕೇಸಿಂಗ್ ಹಾಕಲಾಗಿದ್ದು, ಈ ಕೇಸಿಂಗ್ ನಲ್ಲಿ ನೆಲದಲ್ಲಿ ಸುಮಾರು 15 ರಿಂದ 20 ಅಡಿ ಆಳದಲ್ಲಿ ಮಗು ಸಿಲುಕಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಆಕ್ರಂದನ, ಪ್ರಾರ್ಥನೆ
ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮಗು ದೇವರ ದಯೆಯಿಂದ ಸುರಕ್ಷಿತವಾಗಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಮತ್ತೋಂದೆಡೆ ಬಾಲಕ ಸಾತ್ವಿಕ್ ಸುರಕ್ಷಿತವಾಗಿ ಬರಲಿ ಎಂದು ಲಚ್ಯಾಣ ಗ್ರಾಮದ ಸಿದ್ದಲಿಂಗ ಮಹಾರಾಜರ ಸನ್ನಿಧಿಯಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಮಾಡಲಾಗುತ್ತಿದೆ. ಲಚ್ಯಾಣ ಗ್ರಾಮದ ಸಿದ್ದಲಿಂಗ ಮಠದಲ್ಲಿ ಸ್ಥಳೀಯ ಯುವಕರು ಪ್ರಾರ್ಥನೆ ಮಾಡಿದ್ದಾರೆ. ಬಾಲಕನ ರಕ್ಷಣಾ ಕಾರ್ಯ ಸುಗಮವಾಗಿ ಸಾಗಿ ಬಾಲಕ ಸುರಕ್ಷಿತವಾಗಿ ಬರಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. ಅಲ್ಲದೇ, ಮಗು ಬದುಕಿ ಬರಲಿ ಎಂದು ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕ್ಷಿಪ್ರ ಕಾರ್ಯಾಚರಣೆಗೆ ಸಚಿವ ಎಂ. ಬಿ. ಪಾಟೀಲ ಸೂಚನೆ
ಈ ಘಟನೆಯ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಜಿಲ್ಲಾಧಿಕಾರಿ ಟಿ. ಭೂಬಾಲನ್ ಮತ್ತು ಎಸ್ಪಿ ಋಷಿಕೇಶ ಸೋನಾವಣೆ ಅವರಿಗೆ ದೂರವಾಣಿ ಮೂಲಕ ಕ್ಷಿಪ್ರ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತದೊಂದಿಗೆ ಸತತವಾಗಿ ಸಂಪರ್ಕದಲ್ಲಿರುವ ಸಚಿವರು, ಮಗುವನ್ನು ರಕ್ಷಿಸಲು ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಇದು 3ನೇ ಘಟನೆ
ವಿಜಯಪುರ ಜಿಲ್ಲೆಯಲ್ಲಿ ತೆರೆದ ಕೊಳವೆ ಭಾವಿಗೆ ಮಗು ಬಿದ್ದಿರುವ ಘಟನೆಗಳಲ್ಲಿ ಈ ಘಟನೆ ಮೂರನೇಯದಾಗಿದೆ. ಈ ಮೊದಲು 2008ರಲ್ಲಿ ಇಂಡಿ ತಾಲೂಕಿನ ದೇವರ ಗೆಣ್ಣೂರ ಗ್ರಾಮದ ಹೊಲವೊಂದರಲ್ಲಿ ಬಾಲಕಿ ಯೇಗವ್ವ ಉರ್ಫ ಕಾಂಚನಾ, 2015ರಲ್ಲಿ ವಿಜಯಪುರ ತಾಲೂಕಿನ ದ್ಯಾಬೇರಿ ಬಳಿ ಅಕ್ಷತಾ ಪಾಟೀಲ ಎಂಬ ಬಾಲಕಿ ತೆರೆದ ಕೊಳವೆ ಭಾವಿಗೆ ಬಿದ್ದಿದ್ದಳು.