ದೇಶದ ರಕ್ಷಣೆ, ಉಳಿವಿಗಾಗಿ ಬಿಜೆಪಿಗೆ ಮತ ಹಾಕಬೇಕು- ಶಾಸಕ ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ನಮ್ಮ ರಕ್ಷಣೆಗಾಗಿ, ದೇಶ ಉಳಿವಿಗಾಗಿ ಬಿಜೆಪಿಗೆ ಮತ ಹಾಕುವ ಕಾಲ ಬಂದಿದೆ.  ನಮ್ಮವರು, ನಮ್ಮ ಮನೆಗಳು ಉಳಿಯಬೇಕೆಂದರೆ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. 

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ಸಂಸ್ಥಾಪನೆ ದಿನಾಚರಣೆ ಹಾಗೂ ನಗರ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಆಗಿರುವ ಅಭಿವೃದ್ಧಿಯಿಂದ ಯಾರನ್ನು ಕೇಳಿದರೂ ಮೋದಿಗೆ ಮತ ಎನ್ನುತ್ತಾರೆ.  ಯಾವ ಗ್ಯಾರಂಟಿಯೂ ಬೇಡ.  ನಮಗೆ ಮೋದಿಯವರೇ ಗ್ಯಾರಂಟಿ ಎನ್ನುತ್ತಿದ್ದಾರೆ.  ದೇಶ ಮತ್ತು ಸನಾತನ ಧರ್ಮ ಉಳಿಯಬೇಕಾದರೆ ದೇಶಕ್ಕೆ ಮೋದಿಯವರು ಅನಿವಾರ್ಯ.  ಎಲ್ಲರೂ ಕಂಕಣ ಬದ್ಧರಾಗಿ ಮೋದಿ ಸರಕಾರದ ಸಾಧನೆಗಳನ್ನು ಮನೆ ಮನೆಗೆ ಮುಟ್ಟಿಸಬೇಕು ಎಂದು ಅವರು ಸಲಹೆ ನೀಡಿದರು.

ಅಲ್ಪಸಂಖ್ಯಾತರ ಅಭಿವೃದ್ಧಿಯೇ ಕಾಂಗ್ರೆಸ್ ಮೂಲಮಂತ್ರವಾಗಿದೆ.  ಅವರ ಪ್ರಣಾಳಿಕೆಯಲ್ಲಿ ಕಾಶ್ಮೀರದ 370ನೇ ಕಲಂ ರದ್ದು, ಅಲ್ಪಸಂಖ್ಯಾತರ ರಕ್ಷಣೆಗಾಗಿ ಮತ್ತೊಂದು ಹೊಸ ಕಾನೂನು ಜಾರಿ, ಅಗ್ನಿಪಥ ರದ್ದು ಹೀಗೆ ಪ್ರತಿಯೊಂದು ದೇಶ ಹಾಳುಗೆಡುವ ಉದ್ದೇಶಗಳನ್ನು ಹೊಂದಿವೆ.  ಇವರಿಗೆ ದೇಶದ ಸುರಕ್ಷತೆ, ಹಿಂದೂ ಧರ್ಮ, ದಲಿತರ ರಕ್ಷಣೆ ಬೇಕಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೆ ತಡ ಬೆಳಗಾವಿ ಮತ್ತಿತರೆಡೆ ಪಾಕ್ ಧ್ವಜ ಹಾರಿಸಿದರು.  ವಿಧಾನಸೌಧ ಆವರಣದಲ್ಲಿಯೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಕಿದರು.  ಅದನ್ನು ಕಾಂಗ್ರೆಸ್ಸಿನವರು ಸುಳ್ಳು ಎಂದು ವಾದ ಮಾಡಿದರೆ ಹೊರತು ಖಂಡಿಸಲಿಲ್ಲ.  ನಮ್ಮ ದೇವಸ್ಥಾನಗಳ ಹಣವನ್ನು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮತ್ತು ಅವರ ಆಸ್ತಿ ರಕ್ಷಣೆಗೆ ನೀಡುತ್ತಾರೆ.  ಹಿಂದೂಗಳು, ದಲಿತರು, ಹಿಂದುಳಿದ ವರ್ಗದವರು ಏನು ಮಾಡಬೇಕು ಎಂದು ಅವರು ಪ್ರಶ್ನಿಸಿದರು.

ವಿಜಯಪುರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಕಳೆದ 10 ವರ್ಷಗಳಲ್ಲಿ ಮೋದಿಯವರು ಏನು ಮಾಡಿದ್ದಾರ ಎನ್ನುತ್ತಾರೆ.  ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸುವ ಜೊತೆಗೆ ಸುರಕ್ಷತೆ ನೀಡಿದಲ್ಲದೆ, ಆಯುಷ್ಮಾನ ಭಾರತ ಮೂಲಕ ಪ್ರತಿ ಕುಟುಂಬಕ್ಕೆ ರೂ. 5 ಲಕ್ಷ ವರೆಗೆ ಉಚಿತ ಚಿಕಿತ್ಸೆ, ಕೃಷಿ ಸಮ್ಮಾನ್ ಮೂಲಕ ನೇರವಾಗಿ ರೈತರ ಖಾತೆಗೆ ಹಣ, ಸ್ವ ಉದ್ಯೋಗಕ್ಕಾಗಿ ಸಬ್ಸಿಡಿ ಸಹಿತ ಸಾಲ ಸೌಲಭ್ಯ ಹೀಗೆ ನೂರಾರು ಜನೊರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.  ಲಕ್ಷಾಂತರ ಕಿ.ಮೀ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದಾರೆ ಎಂದು ಅವರು ಹೇಳಿದರು.

ದೇಶದಲ್ಲಿದ್ದ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದ ಇಂದಿರಾ ಗಾಂಧಿ ಸೋಲಿಸಲು ಜನತಾ ಪಕ್ಷ ಸ್ಥಾಪಿಸಲಾಯಿತು.  ಆಗ ಇಂದಿರಾ ಗಾಂಧಿ ಸೋಲಿಸಿ, ಜನತಾ ಪಕ್ಷ ಅಧಿಕಾರಕ್ಕೆ ತರಲಾಯಿತು.  ನಂತರ ಕೆಲವರು ಆರ್.ಎಸ್.ಎಸ್ ಸದಸ್ಯರನ್ನು ಒಪ್ಪುವುದಿಲ್ಲ ಎಂದು ಹೇಳಿದಾಗ, ಜನತಾ ಪಕ್ಷದಿಂದ ಹೊರ ಬಂದು, ವಾಜಪೇಯಿ, ಅಡ್ವಾನಿ ಸೇರಿ ಹಲವು ನಾಯಕರು ಬಿಜೆಪಿ ಸ್ಥಾಪನೆ ಮಾಡಿದರು.  ಹಂತ ಹಂತವಾಗಿ ಪಕ್ಷ ಗಟ್ಟಿಯಾಗುತ್ತ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.  ಇಂದು ಯಾವುದೇ ಪಕ್ಷದ ಬೆಂಬಲವಿಲ್ಲದೆ, ಸ್ವಂತತ್ರವಾಗಿ ಮೋದಿಜಿ ಅವರ ನೇತೃತ್ವದಲ್ಲಿ ಅತ್ಯುತ್ತಮ ಆಡಳಿತ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ನಾವು ಯಾವ ಸಮುದಾಯದ ವಿರುದ್ಧವೂ ಇಲ್ಲ. ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ಬಂಜಾರ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಕೊಡುವ ಜವಾಬ್ದಾರಿ ನಾನು ಹೊರುತ್ತೇನೆ ಎಂದು ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್.ಪಾಟೀಲ ಕೂಚಬಾಳ ಮಾತನಾಡಿ, ಕಾಂಗ್ರೆಸ್ಸಿನವರು ಎಂದೂ ದೇಶದ ಹಿತ, ಕಲ್ಯಾಣದ ಬಗ್ಗೆ ಯೋಚನೆಯೇ ಮಾಡಲಿಲ್ಲ.  ಬರೀ ಕುಟುಂಬದ ಸ್ವಾರ್ಥ ಬಯಸಿದರು.  ಈಗ ಪ್ರಾಮಾಣಿಕತೆ ಮತ್ತು ಅಭಿವೃದ್ಧಿ ಕಾಳಜಿ ಹೊಂದಿರುವ ಪ್ರಧಾನಿ ಮೋದಿಯವರ ಪ್ರಭಾವ ಸಹಿಸಲಾಗದೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

 

ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ಮತಕ್ಷೇತ್ರ ಪ್ರಭಾರಿ ವಿವೇಕಾನಂದ ಡಬ್ಬಿ, ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ ಮಾತನಾಡಿದರು.  ಮುಖಂಡ ದಯಾಸಾಗರ ಪಾಟೀಲ, ಮತಕ್ಷೇತ್ರ ಸಂಚಾಲಕ ಬಸವರಾಜ ಬೈಚಬಾಳ, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಸ್ವಪ್ನಾ ಕಣಮುಚನಾಳ, ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಲಕ್ಷ್ಮಿ ಕನ್ನೋಳ್ಳಿ ಮುಂತಾದವರು ಉಪಸ್ಥಿತರಿದ್ದರು.

ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಪಾಪುಸಿಂಗ್ ರಜಪೂತ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌