ಮಗು ಸಾತ್ವಿಕ ಜಿಲ್ಲಾಸ್ಪತ್ರೆಯಿಂದ ಡಿಶ್ಚಾರ್ಜ್- ಮಗುವನ್ನು ಭೇಟಿ ಮಾಡಿದ ಸಂಸದ ರಮೇಶ ಜಿಗಜಿಣಗಿ- ಲಚ್ಯಾಣದಲ್ಲಿ ಮಗುವಿಗೆ ಹೃದಯಸ್ಪರ್ಷಿ ಸ್ವಾಗತ

ವಿಜಯಪುರ: ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಯಲ್ಲಿ ಸಿಲುಕಿ ಸಾವನ್ನು ಗೆದ್ದು ಬಂದು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮಗು ಸಾತ್ವಿಕ ಮುಜಗೊಂಡ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾನೆ.

ಕಳೆದ ಮೂರು ದಿನಗಳಿಂದ ಎಲ್ಲ ಪರೀಕ್ಷೆಗಳನ್ನು ನಡೆಸಿದ ಮಕ್ಕಳ ವೈದ್ಯರು ಮಗುು ಸಂಪೂರ್ಣ ಆರೋಗ್ಯವಾಗಿದ್ದು, ಯಾವುದೇ ಸಮಸ್ಯೆ ಕಾಣಿಸದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದರು.  ತಮ್ಮ ಪುತ್ರನೊಂದಿಗೆ ನಗು ನಗುತ್ತಲೆ ತಾಯಿ ಪೂಜಾ ಮತ್ತು ಸಂದೆ ಸತೀಶ ಆ್ಯಂಬ್ಯೂಲನ್ಸ್ ಮತ್ತು ಪೊಲೀಸರ ಭದ್ರತೆಯಲ್ಲಿ ತಮ್ಮ ಸ್ವಗ್ರಾಮ ಲಚ್ಯಾಣಕ್ಕೆ ತೆರಳಿದರು.

ಇದಕ್ಕೂ ಮೊದಲು ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜ ಹುಬ್ಬಳ್ಳಿ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ ತಾಯಿ ಮತ್ತು ಮಗುವಿನ ಕೈಯಿಂದ ಕೇಕ್ ಕತ್ತರಿಸಿ ಸಂಭ್ರಮಿಸಿ ಬೀಳ್ಕೊಟ್ಟರು.  ಮಗು ಎತ್ತಿಕೊಂಡು ತಾಯಿ ಪೂಜಾ ಮತ್ತು ತಂದೆ ಸತೀಶ ಖುಷಿಯಿಂದ ಆಸ್ಪತ್ರೆಯಿಂದ ಹೊರಗೆ ಬಂದರು.  ಈ ಸಂದರ್ಭದಲ್ಲಿ ಮಾತನಾಡಿದ ತಾಯಿ ಪೂಜಾ ಎಲ್ಲ ವೈದ್ಯರು, ರಕ್ಷಣಾ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯರು ಆಸ್ಪತ್ರೆಯಲ್ಲಿ ನಡೆಸಲಾದ ಬ್ಯಾಕ್ ಬೋನ್ ಸ್ಕ್ರೀನಿಂಗ್ ವರದಿಯು ನಾರ್ಮಲ್ ಬಂದಿದೆ.  ಬ್ಯಾಕ್ ಬೋನ್ ಗೆ ಯಾವುದೇ ರೀತಿ ತೊಂದರೆಯಾಗಿಲ್ಲ.  ಹೀಗಾಗಿ ಡಿಶ್ಚಾರ್ಜ್ ಮಾಡಿ ಕಳುಹಿಸಿಕೊಡುತ್ತಿದ್ದೇವೆ ಎಂದು ತಿಳಿಸಿದರು.

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಮಗು ಸಾತ್ವಿಕ ಮುಜಗೊಡಂ ಭೇಟಿ ಮಾಡಿದ ಸಂಸದ ರಮೇಶ ಜಿಗಜಿಣಗಿ, ಮಾಜಿ ಶಾಸಕ ಅರುಣ ಶಹಾಪುರ.

ಮಗುವನ್ನು ಭೇಟಿ ಮಾಡಿದ ಸಂಸದ ರಮೇಶ ಜಿಗಜಿಣಗಿ

ಈ ಮಧ್ಯೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಮಗು ಸಾತ್ವಿಕ ಮತ್ತು ಆತನ ತಂದೆ ಸತೀಶ ಹಾಗೂ ತಾಯಿ ಪೂಜಾಳನ್ನು ಭೇಟಿ ಮಾಡಿದರು.  ಮಗು ಸಿದ್ದಲಿಂಗನ ಕೃಪೆ ಮತ್ತು ರಕ್ಷಣಾ ಸಿಬ್ಬಂದಿಯ ಸತತ ಪ್ರಯತ್ನದಿಂದಾಗಿ ಮತ್ತೆ ಬದುಕಿ ಬಂದಿರುವುದು ಸಂತಸ ತಂದಿದೆ.  ಮಗುವಿಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ ಮಾಜಿ ಶಾಸಕ ಅರುಣ ಶಹಾಪುರ, ನಾನಾ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಲಚ್ಯಾಣದಲ್ಲಿ ಹೃದಯಸ್ಪರ್ಷಿ ಸ್ವಾಗತ

ವಿಜಯಪುರ ಜಿಲ್ಲಾಸ್ಪತ್ರೆಯಿಂದ ಸಂಜೆ ಡಿಶ್ಚಾರ್ಜ್ ಆಗಿ ಆ್ಯಂಬ್ಯೂಲನ್ಸ್ ಮೂಲಕ ರಾತ್ತಿ ತವರೂರು ಲಚ್ಯಾಣಕ್ಕೆ ಆಗಮಿಸಿದ ಸಾತ್ವಿಕ ಮತ್ತು ಆತನ ಪೋಷಕರನ್ನು ಗ್ರಾಮಸ್ಥರು ಹೃದಯಸ್ಪರ್ಷಿ ಸ್ವಾಗತ ಕೋರಿದರು.  ಪಟಾಕಿ ಸಿಡಿಸಿ ಶ್ರೀ ಸಿದ್ಧಲಿಂಗೇಶ್ವರ ಮಹಾರಾಜ ಕೀ ಜೈ ಎಂದು ಜೈಕಾರ ಹಾಕಿ ಸಂಭ್ರಮಿಸಿದರು.

ಅಲ್ಲದೇ, ಮಠದ ಮಹಾದ್ವಾರ ಬಾಗಿಲಿನಲ್ಲಿ ಮಗುವಿಗೆ ಆರತಿ ಬೆಳಗಿ, ಸಿಡಿಗಾಯಿ ಒಡೆದು ಸ್ವಾಗತಿಸಿದರು.  ನಂತರ ಮಠದ ಒಳಗೆ ಪ್ರವೇಶಿಸಿ ಶ್ರೀ ಸಿದ್ದಲಿಂಗನ ದರ್ಶನ ಮಾಡಿಸಲಾಯಿತು.  ಮಗು ಸಿದ್ದಲಿಂಗನ ದರ್ಶನ ಮಾಡುತ್ತಿದಂತೆ ನೆರೆದ ಭಕ್ತರ ಸಂಭ್ರಮ ಮುಗಲು ಮುಟ್ಟಿತು.  ಈ ಸಂದರ್ಭದಲ್ಲಿ ಬಾಲಕನ ಸಮ್ಮುಖದಲ್ಲಿ ಸಿದ್ದಲಿಂಗನಿಗೆ ಭಕ್ತರು ಪೂಜೆ ಸಲ್ಲಿಸಿ ಮಗುವಿಗೆ ಮಠದಲ್ಲಿನ ಸಾಧು- ಸಂತರು ವಿಭೂತಿ, ಪ್ರಸಾದ ಹಚ್ಚಿ ಬಾಯಿಗೆ ತೀರ್ಥ ಹಾಕುವ ಮೂಲಕ ಮಗು ನೂರು ವರ್ಷ ಬಾಳಲಿ ಎಂದು ಹಾರೈಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ.

ಬಳಿಕ ನಡೆದ ಸಭೆಯಲ್ಲಿ ಆರೋಗ್ಯ ಇಲಾಖೆಯ 108 ವಾಹನ ಸಿಬ್ಬಂದಿಯನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು.

Leave a Reply

ಹೊಸ ಪೋಸ್ಟ್‌