ನರ್ಸ್ ವೃತ್ತಿಯ ಪಾವಿತ್ರ್ಯವನ್ನು ಹೆಚ್ಚಿಸಿ: ಬಸವರಾಜ ಕೌಲಗಿ ಕರೆ

ವಿಜಯಪುರ: ನರ್ಸ್ ವೃತ್ತಿ ಅತ್ಯಂತ ಪವಿತ್ರವಾಗಿದ್ದು ಪ್ರಾಮಾಣಿಕವಾಗಿ ಕೆಲಸಮಾಡಿ ಆ ವೃತ್ತಿಯ ಘನತೆ ಗೌರವವನ್ನು ಹೆಚ್ಚಿಸಬೇಕು ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ನಗರದ ಮಾತೋಶ್ರೀ ಗೌರಮ್ಮ ಅಪ್ಪಾಸಾಹೇಬ ಬಬಲೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಕ್ಸಲೆಂಟ್ ಕಾಲೇಜ್ ಆಫ್ ನರ್ಸಿಂಗ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ದೀಪದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನರ್ಸ್ ಗಳು ರೋಗಿಗಳ ಮುಖದಲ್ಲಿ ನಗು ಮೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈ ಮೂಲಕ ಕಾಲೇಜಿನ ಎಕ್ಸಲೆಂಟ್ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದರು.

ವಿಜಯಪುರ ನಗರದ ಎಕ್ಸಲೆಂಟ್ ನರ್ಸಿಂಗ್ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ದೀಪದಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಕುಮಾರ ದೇಸಾಯಿ ಮಾತನಾಡಿ, ಈ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿರುವುದು ಶ್ಲಾಘನೀಯ.  ನರ್ಸಿಂಗ್ ಕೋರ್ಸ್ ಮುಗಿದ ನಂತರ ಪ್ರಾಮಾಣಿಕ ದಾದಿಯರಾಗಿ ಜನರ ಆರೋಗ್ಯವನ್ನು ರಕ್ಷಿಸಿ ಎಂದು ಹೇಳಿದರು.

ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಏನ್. ಎಂ. ಬಿರಾದಾರ ಮಾತನಾಡಿ, ನರ್ಸಿಂಗ್ ಶಿಕ್ಷಣ ಮತ್ತು ನರ್ಸಿಂಗ್ ವೃತ್ತಿಯ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ನೈಟಿಂಗೇಲ್ ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದು, ವಿದ್ಯಾರ್ಥಿಗಳು ಯಾವ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುವಿರೋ ಆ ವೃತ್ತಿಯನ್ನು ಪ್ರೀತಿಯಿಂದ ಸೇವೆ ಮಾಡಿದರೆ ಜೀವನದಲ್ಲಿ ಅದಕ್ಕಿಂತ ಸಾರ್ಥಕವಾದ ಕೆಲಸ ಮತ್ತೊಂದಿರಲಾರದು ಎಂದು ಹೇಳಿದರು.

ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ನೀವು ನಿಮ್ಮ ವೃತ್ತಿಯಲ್ಲಿ ನೈಪುಣ್ಯತೆಯನ್ನು ಗಳಿಸಿಕೊಂಡು, ರೋಗಿಗಳ ಸೇವೆಯೇ ಭಗವಂತನ ಸೇವೆ ಎಂದು ಪ್ರಾಮಾಣಿಕವಾಗಿ ದುಡಿದರೆ, ರೋಗಿಗಳ ಹೃದಯದಲ್ಲಿ ದೇವರ ಸ್ಥಾನವನ್ನು ಪಡೆಯುತ್ತೀರಿ.  ನಮ್ಮ ಭಾರತ ದೇಶದ ಸಂಸ್ಕೃತಿ ನಿಂತಿರುವುದೇ ಪ್ರೀತಿ ಮತ್ತು ತ್ಯಾಗ ಎನ್ನುವ ಮೌಲ್ಯಗಳ ಮೇಲೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಪ್ರದೀಪ ಲಿಂಗದಳ್ಳಿ ಪ್ರಾಚಾರ್ಯೆ ಶ್ವೇತಾ ಬಿರಾದಾರ. ಪ್ರೊ. ಕಲ್ಯಾಣಿ, ಅಖಿಲಾ ಬಿರಾದಾರ, ಅಂಜುಂ ಹತ್ತರಕಿಹಾಳ, ಆಕಾಶ ಮಳನೂರ, ರಾಜು ತಿಡಗುಂದಿ, ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಾಚಾರ್ಯೆ ಶ್ವೇತಾ ಬಿರಾದಾರ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಬಸವರಾಜ ಬಾಗೇವಾಡಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Leave a Reply

ಹೊಸ ಪೋಸ್ಟ್‌