ವಿಜಯಪುರ: ಒಂದು ದೇಶದ ಶಕ್ತಿಶಾಲಿ ಸಂಪನ್ಮೂಲ ಎಂದರೆ ಅದು ಯವಶಕ್ತಿ. ದೇಶಕ್ಕೆ ಯುವಕರ ಕೊಡುಗೆ ಅತ್ಯಂತ ಮಹತ್ವದಾಗಿದೆ. ದೇಶದ ಭವಿಷ್ಯ ನಿರ್ಮಾಣ ಕಾರ್ಯಕ್ಕೆ ಎಲ್ಲಾ ಯುವಕರು ಲೋಕಸಭಾ ಚುನಾವಣೆಯಲ್ಲಿ ಪಾರದರ್ಶಕ ಹಾಗೂ ಮುಕ್ತವಾಗಿ ಮತದಾನ ಮಾಡುವ ಮೂಲಕ ಸದೃಡ ದೇಶ ನಿರ್ಮಾಣಕ್ಕೆ ಕಾರಣಿಭೂತರಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಿಶಿ ಆನಂದ ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಡಾ. ಬಿ. ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ಇಲಾಖೆಯ ಯುವ ಕ್ರೀಡಾಪಟುಗಳೊಂದಿಗೆ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಟವನ್ನು ಗೆಲ್ಲಬೇಕಾದರೆ ಸತತ ಪರಿಶ್ರಮ ಪಡುತ್ತೇವೆಯೋ ಅದೇ ರೀತಿ ಸ್ವಚ್ಛ ಮತ್ತು ನ್ಯಾಯಸಮ್ಮತ ಆಡಳಿತ ನೀಡಲು ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಯುವಶಕ್ತಿ ಮುಂದಾಗಬೇಕು. ಅಲ್ಲದೇ, ತಮ್ಮ ಕುಟುಂಬ, ನೆರೆಹೊರೆಯವರಿಗೆ ಮತದಾನದ ಮಹತ್ವ ತಿಳಿಸಿ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.
ಮತದಾನ ಮಾಡುವ ಮೂಲಕ ಅವರದೇ ಆದ ಕೊಡುಗೆ ನೀಡಬೇಕು. ಮೊದಲ ಬಾರಿಗೆ ಮತದಾನ ಮಾಡುತ್ತಿರುವ ನೀವು ಯಾವುದೇ ಭಯವಿಲ್ಲದೆ, ನಿರ್ಭೀತಿಯಿಂದ ಮತದಾನ ಮಾಡಿ. ನೀವಷ್ಟೇ ಅಲ್ಲದೇ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ನಿಮ್ಮ ಸ್ನೇಹಿತರಿಗೂ ಕೂಡ ಚುನಾವಣೆ ದಿನದಂದು ಮತದಾನ ಮಾಡಲು ಪ್ರೇರೇಪಿಸಬೇಕು ಮತ್ತು ಎಲ್ಲ ಮತದಾರರಿಗೆ ನೀವು ಮಾದರಿಯಾಗಬೇಕು ಎಂದು ಅವರು ಕಿವಿಮಾತು ಹೇಳಿದರು.
ನಂತರ ಸಿಇಓ ರಿಷಿ ಆನಂದ ಅವರು ಎಲ್ಲ ಕ್ರೀಡಾಪಟುಗಳೊಂದಿಗೆ ಕ್ರೀಡಾಂಗಣದಲ್ಲಿ 800 ಮೀ. ರನ್ನಿಂಗ್ ಮಾಡುವ ಮೂಲಕ ಗಮನ ಸೆಳೆದರು. ಅಲ್ಲದೇ, ಕ್ರೀಡಾಪಟುಗಳ ಆತ್ಮಸ್ಥೈರ್ಯ ಹೆಚ್ಚಿಸಿದರು. ಈ ಸಂದರ್ಭದಲ್ಲಿ ಎಲ್ಲ ಕ್ರೀಡಾಪಟುಗಳು ಉತ್ಸಾಹ ಮತ್ತು ಆಸಕ್ತಿಯಿಂದ ಸಿಇಓ ಅವರೊಂದಿಗೆ ಬೆರೆತು ರನ್ನಿಂಗ್ ನಲ್ಲಿ ಭಾಗವಹಿಸಿದರು. ಇದೇ ರೀತಿ ಎಲ್ಲರೂ ಅತ್ಯಂತ ಉತ್ಸಾಹದಿಂದ ಹಾಗೂ ಸಂತಸದಿದ ಮತದಾನದ ದಿನದಂದು ತಪ್ಪದೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
ಬಳಿಕ ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಸಿ. ಆರ್. ಮುಂಡರಗಿ ಮಾತನಾಡಿ, ಪ್ರಪಂಚದಲ್ಲಿಯೇ ಅತ್ಯಂತ ಸದೃಢ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ ಭಾರತ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ ದೇಶವಾಗಿದೆ ಎಂದು ಪ್ರಪಂಚವೇ ನಮ್ಮತ್ತ ಕೈತೋರಿಸಿ ಹೇಳುತ್ತಿದೆ. ಅದಕ್ಕಾಗಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡುವುದು ಮತ್ತು ಅಭಿವೃದ್ಧಿ ಪಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ್ತು ಖಚಿತವಾಗಿ ಮತದಾನ ಮಾಡುವ ಮೂಲಕ ನಮ್ಮ ಜವಾಬ್ದಾರಿಯನ್ನು ನಿರ್ವಹಿಸೋಣ ಎಂದು ಅವರು ಹೇಳಿದರು.
ಈ ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿ ರಾಜೇಶ ಪವಾರ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಸಾಕ್ಷಿ ಹಿರೇಮಠ ಮತದಾನದ ಜಾಗೃತಿ ಕುರಿತ ಗೀತೆಗಳನ್ನು ಹಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ. ಎಸ್. ಮೂಗನೂರಮಠ, ವಿಜಯಪುರ ತಾ. ಪಂ. ಕಾರ್ಯ ನಿರ್ವಾಹಣಾಧಿಕಾರಿ ಕೆ. ಹೊಂಗಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಜಿ. ಲೋಣಿ, ಜಿಲ್ಲಾ ಎನ್.ಎಸ್.ಎಸ್ ಘಟಕದ ನೊಡೆಲ್ ಅಧಿಕಾರಿ ಪ್ರಕಾಶ ರಾಠೋಡ, ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿ ಸಹನಾ ಕುಡಿಗನೂರ, ಜಿಲ್ಲೆಯ ಅಥ್ಲೆಟಿಕ್ ಕ್ರೀಡಾಕೂಟಗಳ ಕೋಚ್ ಗಳು, ಜಿ. ಪಂ. ಅಧಿಕಾರಿ ಮತು ಸಿಬ್ಬಂದಿಯವರು, ಕ್ರೀಡಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.