ವಿಜಯಪುರ: ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ವಿಜಯಪುರ ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಅವರು, ಚುನಾವಣಾಧಿಕಾರಿಯೂ ಆಗಿರುವ ಟಿ. ಭೂಬಾಲನ್ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸೂಚಕರಾದ ಹೊಮನಲ್ಲ ಸಾರವಾಡ, ಬೀರಪ್ಪ ಜುಮನಾಳ, ಅಮೋಘಸಿದ್ಧ ಬಿಜ್ಜರಗಿ, ಸುರೇಶಗೌಡ ಪಾಟೀಲ ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರೊ. ರಾಜು ಆಲಗೂರ, ರಾಜ್ಯ ಸರಕಾರದ ಕೆಲಸಗಳು ನಮ್ಮ ಕೈಹಿಡಿಯಲಿವೆ. ಜನ ನಮ್ಮ ಮೇಲೆ ವಿಶ್ವಾಸವಿಟ್ಟಿದ್ದಾರೆ. ನನ್ನ ಗೆಲುವು ಖಚಿತ ಎಂದು ಹೇಳಿದರು.
ವಿಡಿಯೋ ಸುದ್ದಿ ನೋಡಿ:
ಸಂಸದ ರಮೇಶ ಜಿಗಜಿಣಗಿ ವಿರುದ್ಧ ವಾಗ್ದಾಳಿ
ಇದೇ ವೇಳೆ, ಸಂಸದ ರಮೇಶ ಜಿಗಜಿಣಗಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನನಗೆ ಪೂರ್ತಿ ಜಿಲ್ಲೆ ಗೊತ್ತಿಲ್ಲ ಎನ್ನುವ ಸಂಸದ ರಮೇಶ ಜಿಗಜಿಣಗಿ ಅವರಿಗೆ ಏನು ಹೇಳಬೇಕು? ನಾನು ಕಾಂಗ್ರೆಸ್ ಜಿಲ್ಲಾಧ್ಯಕ್ಷನಾಗಿ ಇಡೀ ಜಿಲ್ಲೆಗೆ ಪರಿಚಿತನಾಗಿದ್ದೇನೆ. ಎರಡು ಸಲ ಶಾಸಕನಾಗಿ ಕೆಲಸ ಮಾಡಿದ್ದೇನೆ. ನನಗೆ ರಾಜಕೀಯದ ಇತಿಹಾಸವಿದೆ. ಪಕ್ಷಕ್ಕಾಗಿ ದುಡಿದಿದ್ದೇನೆ. ಆದರೆ, ಚಿರಪರಿಚಿತರಾಗಿರುವ ಜಿಗಜಿಣಗಿಯವರ ಮುಖವನ್ನೇ ಜನರು ಮರೆತಿದ್ದಾರೆ. ಏಕೆಂದರೆ ಇವರು ಯಾರಿಗೆ ಮುಖ ತೋರಿಸಿದ್ದಾರೆ ಹೇಳಿ ಎಂದು ವ್ಯಂಗ್ಯವಾಡಿದರು.
ಯಾರು ಏನೇ ಮಾತನಾಡಿದರೂ ಮತದಾರರಿಗೆ ಕಾಂಗ್ರೆಸ್ ಪಕ್ಷ ಜನಾನುರಾಗಿ ಎಂಬುದು ಗೊತ್ತಾಗಿದೆ. ಅಭಿವೃದ್ಧಿ ಮಂತ್ರವಾಗಿಸಿಕೊಂಡು ಮತದಾರರ ಮುಂದೆ ನಾನು ಈಗ ನಿಂತಿದ್ದೇನೆ. ಗೆಲುವು ಆಗೇ ಆಗುತ್ತದೆ. ಜನರ ಪ್ರತಿಕ್ರಿಯೆ, ಉತ್ಸಾಹದಿಂದ ಈ ಮಾತು ಹೇಳುತ್ತಿರುವೆ. ಗೆದ್ದರೆ ಅವರ ಋಣ ತೀರಿಸುತ್ತೇನೆ ಎಂದು ಹೇಳಿದರು.
ಏಪ್ರಿಲ್ 15ಕ್ಕೆ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ
ಇದೇ ವೇಳೆ, ಏಪ್ರಿಲ್ 15 ರಂದು ಮತ್ತೋಮ್ಮೆ ನಾಮಪತ್ರ ಸಲ್ಲಿಸುವುದಾಗಿ ಪ್ರೊ. ರಾಜು ಆಲಗೂರ ತಿಳಿಸಿದರು.
ಏಪ್ರಿಲ್ 15 ರಂದು ಸೋಮವಾರ ಕಾಂಗ್ರೆಸ್ ಮುಖಂಡರು, ಸಾವಿರಾರು ಸಂಖ್ಯೆಯ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಆಗಮಿಸಿ ಮತ್ತೊಮ್ಮೆ ನಾಮಪತ್ರ ಸಲ್ಲಿಸುತ್ತೇನೆ. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸೇರಿದಂತೆ ನಾನಾ ಮುಖಂಡರು ಹಾಗೂ ಜಿಲ್ಲೆಯ ಎಲ್ಲ ಭಾಗಗಳಿಂದ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.