ಮೂರ್ನಾಲ್ಕು ದಿಗಳಿಗೊಮ್ಮೆಯಾದರೂ ವಿಜಯಪುರ ನಗರಕ್ಕೆ ಕುಡಿಯಲು ನೀರು ಪೂರೈಸಲು ಕ್ರಮ ಕೈಗೊಳ್ಳಿ- ಅಧಿಕಾರಿಗಳಿಗೆ ಡಿಸಿ ಟಿ. ಭೂಬಾಲನ್ ಸೂಚನೆ

ವಿಜಯಪುರ: ವಿಜಯಪುರ ನಗರಕ್ಕೆ ಕನಿಷ್ಠ ಮೂರ್ನಾಲ್ಕು ದಿನಗಳಿಗೊಮ್ಮೆಯಾದರೂ ಕುಡಿಯಲು ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕುಡಿಯುವ ನೀರಿನ ನಿರ್ವಹಣೆ ಕುರಿತು ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಧ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಆದ್ಯಾಗೂ ಅಧಿಕಾರಿಗಳು ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಜಿಲ್ಲೆಯಲ್ಲಿ ಲಭ್ಯವಿರುವ ನೀರಿನ ಸದ್ಭಳಕೆಯೊಂದಿಗೆ ಸಮರ್ಪಕವಾಗಿ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ನಗರದಲ್ಲಿರುವ 33 ತೆರೆದ ಬಾವಿಗಳಲ್ಲಿ 7 ತೆರೆದ ಬಾವಿಗಳ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಮೋಟರ್ ಅಳವಡಿಸಲು ಸಾಧ್ಯವಾಗಿಲ್ಲ. ರಿ-ಡ್ರೀಲ್ಲಿಂಗ್ ಮಾಡುವ ಮೂಲಕ ಸುಸ್ಥಿತಿಯಲ್ಲಿಡಲು ಪ್ರಯತ್ನಿಸಬೇಕು. ಅದ್ಯಾಗೂ ನೀರಿನ ಇಳುವರಿ ಬರದೇ ಇದ್ದ ಸಂದರ್ಭದಲ್ಲಿ ತೆರೆದೆ ಕೊಳವೆ ಬಾವಿಗಳನ್ನು ಮುಚ್ಚಲು ಕ್ರಮ ವಹಿಸಬೇಕು. ಕೌಜಲಗಿ ತಾಂಡಾ ಹೊರತುಪಡಿಸಿ ಉಳಿದೆಡೆ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿದ್ದು, ಭೂತನಾಳ ತಾಂಡಾದಲ್ಲಿನ ಪೈಪಲೈನ್ ಕಾಮಗಾರಿಗೆ ವಿಪತ್ತು ನಿಧಿಯಡಿ 2ಲಕ್ಷ ರೂ.ವರೆಗಿನ ದುರಸ್ತಿ ಕಾಮಗಾರಿ ಅನುದಾನ ಒದಗಿಸಲು ಅವಕಾಶವಿರುವುದರಿಂದ ಭೂತನಾಳ ತಾಂಡಾದಲ್ಲಿ ಪೈಪಲೈನ್ ಕಾಮಗಾರಿ ಆರಂಭಿಸುವಂತೆ ಡಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರು ಸಹ ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಿ, ಅನಗತ್ಯವಾಗಿ ನೀರನ್ನು ಎಲ್ಲೆಂದರಲ್ಲಿ ಹರಿಬಿಡದೇ ಅಗತ್ಯವಿರುವ ನೀರನ್ನು ಬಳಕೆ ಮಾಡಿಕೊಳ್ಳುವಂತೆ ಮನವರಿಕೆ ಮಾಡಬೇಕು. ಲಭ್ಯವಿರುವ ನೀರಿನ ಸದ್ಭಳಕೆ ಮಾಡಿಕೊಂಡು ಸಮರ್ಪಕವಾಗಿ ನಿರ್ವಹಣೆ ಮಾಡಿ ಎಲ್ಲ ವಾರ್ಡಗಳಿಗೆ ಕನಿಷ್ಠ 3 ರಿಂದ 4 ದಿನಗಳಿಗೊಮ್ಮೆ ನೀರು ಪೂರೈಸಲು ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುಡಿಯುವ ನೀರಿನ ಯಾವುದೇ ಸಮಸ್ಯೆಯಾಗದಂತೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ನೀರಿನ ಸಮಸ್ಯೆ ಉದ್ಭವಿಸುವ ಕಡೆಯಲ್ಲಿ ತುರ್ತಾಗಿ ಅಗತ್ಯ ಕ್ರಮ ಕೈಗೊಂಡು ನೀರು ಒದಗಿಸಬೇಕು ಎಂದು ಅವರು ಹೇಳಿದರು.

ಹೊನಗನಹಳ್ಳಿಯ 5 ಎಂಎಲ್‍ಡಿ ನೀರು ಸರಬರಾಜು ಸಮಸ್ಯೆ ಕುರಿತು ನಾಳೆಯೇ ಸಂಬಂಧಿಸಿದ ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿರ್ ಇರುವ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲು ಕ್ರಮ ವಹಿಸುವಂತೆ ಸೂಚಿಸಿದ ಅವರು, ವಿವಿಧೆಡೆ ಎಕ್ಸಟೆನ್‍ಶನ್ ಪ್ರದೇಶ ಹೆಚ್ಚಾಗಿ ನಿರ್ಮಾಣವಾಗುತ್ತಿರುವುದರಿಂದ ನೀರಿನ ಅವಶ್ಯಕತೆ ಹೆಚ್ಚಾಗಲಿದ್ದು, ನೀರಿನ ಅಭಾವವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ವಿಜಯಪುರ ನಗರದಲ್ಲಿರುವ ವಿವಿಧ ಬೊರವೆಲ್‍ಗಳು, ಕೈಪಂಪುಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಒಟ್ಟು 502 ಬೊರವೆಲ್‍ಗಳ ಪೈಕಿ 476 ಬೊರವೆಲ್‍ಗಳು ಚಾಲ್ತಿಯಲ್ಲಿದ್ದು, 26 ಬೊರವೆಲ್‍ಗಳು ಚಾಲ್ತಿಯಲ್ಲಿರುವುದಿಲ್ಲ. ಬಂದ ಇರುವ ಬೊರವೆಲ್‍ಗಳನ್ನು ಸುಸ್ಥಿತಿಗೆ ತರಲು ಪ್ರಯತ್ನಿಸಬೇಕು. ಬಂದ ಇರುವ ಈ 26 ಬೊರವೆಲ್‍ಗಳು ವಿವಿಧ ಎಕ್ಸಟೆನ್‍ಶೆನ್ ಪ್ರದೇಶಗಳಲ್ಲಿರುವುದರಿಂದ ದುರಸ್ತಿಗೆ ಕ್ರಮ ವಹಿಸಿದ್ದಲ್ಲಿ ವಿವಿಧ ವಾರ್ಡಗಳಿಗೆ ಹೆಚ್ಚುವರಿ ನೀರು ಒದಗಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಯಾವುದೇ ಅನಾಹುತಕ್ಕೆ ಅವಕಾಶ ನೀಡದೆ ಸುಸ್ಥಿತಿಯಲ್ಲಿರದ ಬೊರವೆಲ್‍ಗಳನ್ನು ಮುಚ್ಚಲು ಕ್ರಮ ವಹಿಸಬೇಕು ಎಂದು ಅವರು ಹೇಳಿದರು.

ಸಮಸ್ಯೆ ಇರುವ ಸ್ಥಳಗಳಿಗೆ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಮಸ್ಯೆ ಪರಿಹಾರಕ್ಕಾಗಿ ಕೈಗೊಂಡಿರುವ ಕಾಮಗಾರಿಗಳ ಕುರಿತು ಜನವರಿಗೆ ತಿಳಿ ಹೇಳಿ, ಮನವರಿಕೆ ಮಾಡಬೇಕು ಇದರಿಂದ ಜನರಲ್ಲಿಯೂ ಸಹ ಅಧಿಕಾರಿಗಳ ಮೇಲೆ ವಿಶ್ವಾಸ ಮೂಡುವುದು. ಅಧಿಕಾರಿಗಳು ಕುಡಿಯುವ ನೀರಿನ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಮೂಲಕ ಪರಿಹಾರ ಕಲ್ಪಿಸಲು ಪ್ರಯತ್ನಿಸಬೇಕು ಎಂದು ಅವರು ಸೂಚನೆ ನೀಡಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅರ್ಶದ ಶರೀಫ್, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಪ್ರೀತಮ ನಸ್ಲಾಪುರ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌