ಸಂಸತ್ತಿನಲ್ಲಿ ಜಿಲ್ಲೆಯ ಪರ ಧ್ವನಿ ಎತ್ತಲು ಪ್ರೊ. ರಾಜು ಆಲಗೂರ ಗೆಲುವು ಅಗತ್ಯ- ಸಚಿವ ಎಂ. ಬಿ. ಪಾಟೀಲ

ವಿಜಯಪುರ: ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿ ಕೇಂದ್ರದ ಗಮನ ಸೆಳೆಯಲು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರನ್ನು ಬಹುಮತದಿಂದ ಗೆಲ್ಲಿಸುವುದು ಅಗತ್ಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ಇಂದು ರವಿವಾರ ನಗರದ ಐಶ್ವರ್ಯ ನಗರದಲ್ಲಿ ನಾಗಠಾಣ ವಿಧಾನಸಭೆ ಮತಕ್ಷೇತ್ರದ ಚುನಾವಣೆ ಪ್ರಚಾರ ಸಭೆಯನ್ನು ಉದ್ಘಾಟಿಸಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿ ಮಾತನಾಡಿದರು.

ದೇಶದಲ್ಲಿ ಬದಲಾವಣೆ ಮಾಡುವುದಾಗಿ 2014 ರಲ್ಲಿ ಮೋದಿ ದೊಡ್ಡ ಪ್ರಚಾರ ಮಾಡಿ ಅಧಿಕಾರಕ್ಕೆ ಬಂದರು. ಆದರೆ, ಕಳೆದ 10 ವರ್ಷಗಳಲ್ಲಿ ಅವರು ನೀಡಿರುವ ಯಾವ ಭರವಸೆಗಳೂ ಈಡೇರಿಲ್ಲ. ಅಚ್ಛೆ ದಿನ್, ಕಪ್ಪು ಹಣ ವಾಪಸ್, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಸೇರಿದಂತೆ ಯಾವುದೂ ಈಡೈರಿಲ್ಲ. ಬದಲಾಗಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಅಡುಗೆ ಅನಿಲ ಬೆಲೆ ಹೆಚ್ಚಳ, ರೈತರ ಆದಾಯ ಕುಂಠಿತ ಇವರು ಜನರಿಗೆ ನೀಡಿರುವ ಅಚ್ಛೇ ದಿನ್ ಗಳಾಗಿವೆ. ಕಾಂಗ್ರೆಸ್ ಹಸಿರು ಕ್ರಾಂತಿ ಮೂಲಕ ಜನರಿಗೆ ಆಹಾರ ನೀಡಿತು. ನೆಹರೂ, ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ ಗಾಂಧಿ, ಮನಮೋಹನಸಿಂಗ್ ಆರ್ಥಿಕಾಭಿವೃದ್ಧಿ, ಶೈಕ್ಷಣಿಕಾಭಿವೃದ್ಧಿ, ಕೃಷಿ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದರು. ಆದರೆ, ಬಿಜೆಪಿ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಿದೆ. ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ ರೈತರ ಸಾಲ ಮನ್ನಾ, ರೈಟ್ ಟು ಎಜುಕೇಶನ್ ಸೇರಿದಂತೆ ನಾನಾ ಬಡವರ ಪರ ಯೋಜನೆ ಜಾರಿಗೆ ತಂದಿತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವ ಮನ್ ಕಿ ಬಾತ್, ಅಚ್ಛೆ ದಿನ್, ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ನಾ ಖಾವೂಂಗಾ, ನಾ ಖಾನೆ ದೂಂಗಾ ನಂಥ ವಿಚಾರಗಳು ಕೇವಲ ಸ್ಲೋಗನ್ ಗೆ ಮಾತ್ರ ಸೀಮಿತವಾಗಿವೆ. ಚುನಾವಣೆ ಬಾಂಡ್ ಹಗರಣ ಇವರ ಮುಖವಾಡ ಕಳಚುವಂತೆ ಮಾಡಿದೆ. ಹೇಳುವುದು ಒಂದು. ಮಾಡುವುದು ಮತ್ತೋಂದು. ಇದನ್ನು ಹೇಳುವವರ ಆತ್ಮಸಾಕ್ಷಿ ಒಪ್ಪುತ್ತಾ ಎಂದು ಸಚಿವರು ಪ್ರಶ್ನಿಸಿದರು.

ವಿಜಯಪುರ ನಗರದ ಐಶ್ವರ್ಯ ನಗರದಲ್ಲಿ ಸಚಿವ ಎಂ. ಬಿ. ಪಾಟೀಲ ಅವರು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಪ್ರಚಾರ ಕಾರ್ಯಕ್ರಮ ಉದ್ಗಾಟಿಸಿದರು.

ಸಂರದ ರಮೇಶ ಜಿಗಜಿಣಗಿ ಅವರು ಆರು ಬಾರಿ ಆಯ್ಕೆಯಾಗಿದ್ದಾರೆ. ಕೇಂದ್ರದ ವ್ಯಾಪ್ತಿಗೆ ಬರುವ ಜಿಲ್ಲೆಯ ಯಾವ ಜ್ವಲಂತ ಸಮಸ್ಯೆಗಳನ್ನೂ ಬಗೆಹರಿಸಿಲ್ಲ. ಸಂಸತ್ತಿನಲ್ಲಿ ಅವುಗಳ ಬಗ್ಗೆ ಒಂದೂ ಪ್ರಶ್ನೆ ಕೇಳಿಲ್ಲ. ಹೀಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಆಯ್ಕೆ ಅಗತ್ಯವಾಗಿದೆ. ಆಲಗೂರ ಅವರು ಸಂಸದರಾಗಿ ಆಯ್ಯೆಯಾದ ಮೇಲೆ ಆಲಮಟ್ಟಿ ಜಲಾಷಯದ ಎತ್ತರ ಹೆಚ್ಚಳ ಕುರಿತು ಗೆಜೆಟ್ ನೊಟಿಫಿಕೇಶನ್ ಮಾಡಿಸಲು, ವಂದೇ ಭಾರತ ರೈಲು ಸೇವೆ ಪ್ರಾರಂಭಿಸಲು, ತೋಟಗಾರಿಕೆ, ಪ್ರವಾದೋದ್ಯಮ, ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತಿ ಕೆಲಸ ಮಾಡಲಿದ್ದಾರೆ. ಅವರನ್ನು ಮತ ಹಾಕಿದರೆ ನನಗೆ ಮತ ಹಾಕಿದಂತೆ ಎಂದು ಎಂ. ಬಿ. ಪಾಟೀಲ ಹೇಳಿದರು.

ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಆದರೆ, ಭೀಕರ ಬರದ ನಡುವೆಯೂ ವಿಜಯಪುರ ನಗರದಲ್ಲಿ ನಮ್ಮಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿಲ್ಲ. ಇದಕ್ಕೆ ಸಚಿವ ಎಂ. ಬಿ. ಪಾಟೀಲ ಅವರು ಕೈಗೊಂಡಿರುವ ನೀರಾವರಿ ಯೋಜನೆಗಳೇ ಕಾರಣವಾಗಿವೆ. ಈ ಭಾಗದಲ್ಲಿ ಇನ್ನೂ ಬಾಕಿ ಇರುವ ನೀರು, ವಿದ್ಯುತ್, ರಸ್ತೆ ದುರಸ್ಥಿ ಚುನಾವಣೆ ನಂತರ ಕೈಗೆತ್ತಿಕೊಳ್ಳಲಾಗುವುದು. ಪ್ರೊ. ರಾಜು ಆಲಗೂರ ಅವರನ್ನು ಗೆಲ್ಲಿಸಿ ಎಂ. ಬಿ. ಪಾಟೀಲರ ಕೈ ಬಲಪಡಿಸೋಣ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮಾತನಾಡಿ, ರಮೇಶ ಜಿಗಜಿಣಗಿ ಕಳೆದ 30 ವರ್ಷಗಳಲ್ಲಿ ಲೋಕಸಭೆಯಲ್ಲಿ ಯಾವುದೇ ಸಮಸ್ಯೆಗಳನ್ನು ಪ್ರಸ್ತಾಪಿಸಿಲ್ಲ. ಸರಕಾರಗಳ ಗಮನ ಸೆಳೆದಿಲ್ಲ. ಈ ಬಾರಿ ಬದಲಾವಣೆ ಮಾಡಿ, ನನಗೆ ಅವಕಾಶ ಮಾಡಿಕೊಡಿ. ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ಕೆಲಸ ಮಾಡುತ್ತೇನೆ. ಐತಿಹಾಸಿಕ ವಿಜಯಪುರವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು, ಆಲಮಟ್ಟಿ ಜಲಾಷಯದ ಎತ್ತರ ಹೆಚ್ಚಳ ಮಾಡಲು, ಕೆಲಸ ಮಾಡುತ್ತೇನೆ ಎಂದು ಹೇಳಿದರು.

ನಿವೃತ್ತ ನೌಕರರ ಸಂಘದ ಮುಖಂಡ ಎಸ್. ಪಿ. ಬಿರಾದಾರ ಕಡ್ಲೆವಾಡ ಮಾತನಾಡಿ, ಈ ಬಾರಿ ಜಿಲ್ಲೆಯಲ್ಲಿ ಬದಲಾವಣೆ ತರಬೇಕಾಗಿದ್ದು, ಪ್ರೊ. ರಾಜು ಆಲಗೂರ ಅವರಿಗೆ ಸಂಪೂರ್ಣ ಬೆಂಬಲ ನೀಡಿ ಆಯ್ಕೆ ಮಾಡಿ ಸಚಿವರ ಕೈ ಬಲಪಡಿಸೋಣ. ಕಾಂಗ್ರೆಸ್ ಸಂಸದರಿಂದ ಮಾತ್ರ ಜಿಲ್ಲೆಯಲ್ಲಿ ಅಭಿವೃದ್ಧಿ ಸಾಧ್ಯ. ಕಾಂಗ್ರೆಸ್ ಅಭ್ಯರ್ಥಿ ಯುವಕರಾಗಿದ್ದಾರೆ. ವಯಸ್ಸಾದವರಿಗೆ ಕೆಲಸ ಮಾಡಲು ಆಗುವುದಿಲ್ಲ. ಯುವಕರ ಕೈಗೆ ಅಧಿಕಾರ ನೀಡಿದರೆ ಅಭಿವೃದ್ಧಿಗೆ ವೇಗ ಸಿಗುತ್ತದೆ. ಸಚಿವ ಎಂ. ಬಿ. ಪಾಟೀಲ ಅವರು ಶ್ರಮಜೀವಿಗಳಾಗಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡಿದರೆ ಅಭಿವದ್ಧಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ ಮಾತನಾಡಿದ, ಸಚಿವ ಎಂ. ಬಿ. ಪಾಟೀಲರು ಬಸದ ನಾಡಾಗಿದ್ದ ವಿಜಯಪುರ ಜಿಲ್ಲೆಯನ್ನು ಬಂಗಾರದ ನಾಡನ್ನಾಗಿ ಮಾಡಿದ್ದಾರೆ. ಈ ಬಾರಿ ಸುಶಿಕ್ಷಿತ ಪ್ರೊ. ರಾಜು ಆಲಗೂರ ಅವರನ್ನು ಗೆಲ್ಲಿಸುವ ಮೂಲಕ ಹೊಸ ಅಭಿವೃದ್ಧಿಗೆ ಕೈಜೋಡಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಮುಖಂಡೆ ಸ್ನೇಹಲತಾ ಶೆಟ್ಟಿ, ಉದ್ಯಮಿ ರವೀಂದ್ರ ಬಿಜ್ಜರಗಿ ಮಾತನಾಡಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಬಿ. ಎಸ್. ಬಿರಾದಾರ, ನಾಗಠಾಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಹಜಹಾನ್ ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌