ವಿಜಯಪುರ: ಕೇವಲ ಟಿಎ, ಡಿಎ ಗೆ ಸೀಮಿತವಾಗಿರುವ ಸಂಸದ ರಮೇಶ ಜಿಗಜಿಣಗಿ ಬದಲು ಸಂಸತ್ತಿನಲ್ಲಿ ಬಸವ ನಾಡಿನ ಜನರ ಪರ ಧ್ವನಿ ಎತ್ತಲು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರನ್ನು ಗೆಲ್ಲಿಸಬೇಕಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಇಂದು ಬುಧವಾರ ತಿಕೋಟಾ ತಾಲೂಕಿನ ಮುಮ್ಮೆಟಿಗುಡ್ಡದ ಬಳಿ ಅರ್ಜುನ ರಾಠೊಡ ಅವರ ತೋಟದಲ್ಲಿ ನಡೆದ ಅರಕೇರಿ ಜಿ. ಪಂ. ವ್ಯಾಪ್ತಿಯ ಕಾಂಗ್ರೆಸ್ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಸಂಸತ್ತಿನಲ್ಲಿ ಎಂದೂ ಜನರ ಸಮಸ್ಯೆಗಳ ಪರ ಪ್ರಶ್ನೆ ಕೇಳದ ಮತ್ತು ಕೇವಲ ಟಿಎ, ಡಿಎ ಪಡೆಯಲು ಎಂಪಿ ಆಗಬೇಕಾ? ಅಥವಾ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ಮತ ಹಾಕಬೇಕು ಎಂಬುವ ಕುರಿತು ಯೋಚಿಸಬೇಕು ಪ್ರೊ. ರಾಜು ಆಲಗೂರ ಅವರು ಜಿಲ್ಲೆಯ ನೀರಾವರಿ, ರೈಲು, ತೋಟಗಾರಿಕೆ, ಪ್ರವಾಸೋದ್ಯಮ, ಪ್ರಾಚೀನ ಸ್ಮಾರಕಗಳನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವ ಕೆಲಸ ಮಾಡಲಿದ್ದಾರೆ. ಶರದ ಪವಾರ ಅವರ ಬಾರಾಮತಿ ಕ್ಷೇತ್ರದಂತೆ ವಿಜಯಪುರ ಮಾದರಿ ಜಿಲ್ಲೆಯಾಗಲು ಅವರಿಗೆ ಮತ ಹಾಕಿ. ಆಲಗೂರ ಅವರಿಗೆ ಹಾಕುವ ಮತ ನನಗೆ ಹಾಕಿದಂತೆ ಎಂದು ಸಚಿವರು ಹೇಳಿದರು.
ಸಂಸದ ರಮೇಶ ಜಿಗಜಿಣಗಿ ತಮಗೆ ಬಂಜಾರಾ ಮತಗಳು ಬೇಡ ಎಂದಿದ್ದಾರೆ. ಬೇಡ ಎಂದವರಿಗೆ ಯಾರಾದರೂ ಮತ ಹಾಕುತ್ತಾರಾ? ಎಂದು ಪ್ರಶ್ನಿಸಿದ ಅವರು, ಬೆಲೆ ಏರಿಕೆ, ಉದ್ಯೋಗ ನಷ್ಟ, ರೈತರ ಆದಾಯ ಕುಸಿತ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಡ್ರದ ಜನರಿಗೆ ನೀಡಿರುವ ಅಚ್ಛೆ ದಿನ್ ಆಗಿವೆ. ಎಲೆಕ್ಟ್ರಾಲ್ ಬಾಂಡ್ ಪ್ರಕರಣದಲ್ಲಿ ಮೋದಿಯವರ ಬಂಡವಾಳ ಬಯಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಅವರ ಸುಳ್ಳುಗಳ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಇದಷ್ಟೇ ಅಲ್ಲ, ಇನ್ನೂ ಯಾವ್ಯಾವ ಹಗರಣಗಳಿವೆಯೋ ಗೊತ್ತಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಿದಂತೆ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಯುವನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ, ಪಾಲುದಾರಿಕೆ ನ್ಯಾಯ ಯೋಜನೆಯಡಿ ಸರ್ವ ಜನಾಂಗದ ಕಲ್ಯಾಣ ಯೋಜನೆಗಳು ಜಾರಿಗೆ ಬರಲಿವೆ. ಈಗ ನಾವು ನುಡಿದಂತೆ ನಡೆಯುತ್ತಿದ್ದು, ಮುಂದೆಯೂ ನಡೆಯಲಿದ್ದೇವೆ ಎಂದು ಎಂ. ಬಿ. ಪಾಟೀಲ ಭರವಸೆ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮಾತನಾಡಿ, ಅಮೀತ್ ಶಾ ರಾಜ್ಯದಲ್ಲಿ ಹಾಲುಮತದ ಯಾವ ಅಭ್ಯರ್ಥಿಗೂ ಟಿಕೆಟ್ ನೀಡಿಲ್ಲ. ಸಂಸದ ಜಿಗಜಿಣಗಿ ಬಂಜಾರ ಸಮಾಜದ ಮತಗಳು ತಮಗೆ ಬೇಡ ಎಂದು ಹೇಳಿದ್ದಾರೆ. ಆದರೆ, ರಾಷ್ಟ್ರಕ್ಕಾಗಿ ನಡೆಯುತ್ತಿರುವ ಚುನಾವಣೆ ಇದಾಗಿದ್ದು, ಎಂ. ಬಿ. ಪಾಟೀಲ ಅವರು, ನೀರಾವರಿ, ಶಿಕ್ಷಣ, ಇಂಧನ, ಲೋಕೋಪಯೋಗಿ, ಕೃಷಿ, ತೋಟಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಮರೋಪಾದಿಯಲ್ಲಿ ಅಭಿವೃದ್ಧಿ ಕೆಲಸಗಳ ಮೂಲಕ ಬಬಲೇಶ್ವರ ಮತಕ್ಷೇತ್ರ ಮತ್ತು ವಿಜಯಪುರ ಜಿಲ್ಲೆ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಸರ್ವಜನರ ಮನೆ, ಮನ ತಲುಪಿದೆ ಎಂದು ಹೇಳಿದರು.
ಸಂಸದ ರಮೇಶ ಜಿಗಜಿಣಗಿ ಜಿಲ್ಲೆಯ ಯಾವ ಸಮಸ್ಯೆಗಳ ಬಗ್ಗೆಯೂ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ಕೇಂದ್ರ ಸರಕಾರದ ಗಮನ ಸೆಳೆದಿಲ್ಲ. ಕೊರೊನಾ ಸಂಕಷ್ಟ ಸಮಯದಲ್ಲೂ ಯಾರಿಗೂ ಸ್ಪಂದಿಸಿಲ್ಲ. ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳುತ್ತಿದ್ದಾರೆ. ನನ್ನ ಮುಖ ನೋಡದೇ ಪ್ರಧಾನಿ ಮೋದಿ ಮುಖ ನೋಡಿ ಮತ ಹಾಕಿ ಎನ್ನುವ ಮೂಲಕ ಸಂಸದರು ಮುಖಗೇಡಿ ಆಗಿದ್ದಾರೆ. ಕೇಂದ್ರ ರೈತರ ಹೋರಾಟ ಹತ್ತಿಕ್ಕುತ್ತಿದ್ದರೆ, ನಮ್ಮ ಸರಕಾರ ನುಡಿದಂತೆ ನಡೆಯುತ್ತಿದೆ. ಜಿಗಜಿಣಗಿ ಮಾತಿಗೆ ಮರುಳಾಗದೇ ನನಗೆ ಮತಹಾಕಿ ಅವಕಾಶ ಮಾಡಿಕೊಡಿ. 30 ವರ್ಷಗಳಲ್ಲಿ ಸಂಸತ್ತಿನಲ್ಲಿ ಒಂದೂ ಪ್ರಶ್ನೆ ಕೇಳದೇ ಇತಿಹಾಸ ಸೃಷ್ಠಿಸಿರುವವರ ಬದಲು ನಿಮ್ಮ ಪರವಾಗಿ ಕೇಂದ್ರದಲ್ಲಿ ಕೆಲಸ ಮಾಡಲು ನನಗೆ ಅವಕಾಶ ನೀಡಿ ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ರಾಠೋಡ, ಸಚಿವ ಎಂ. ಬಿ. ಪಾಟೀಲ ನಮ್ಮ ಭಾಗದಲ್ಲಿ ಸಾಕಷ್ಟು ನೀರಾವರಿ ಮಾಡಿದ್ದಾರೆ. ಬರದ ಸಮಯದಲ್ಲಿಯೂ ನೀರಿನ ಬವಣೆ ಉಂಟಾಗದಂತೆ ಯೋಜನೆ ರೂಪಿಸಿದ್ದಾರೆ. 50 ವರ್ಷದ ಕೆಲಸವನ್ನು ಕೇವಲ ಐದು ವರ್ಷದಲ್ಲಿ ಕೆಲಸ ಮಾಡಿ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದಾರೆ. ಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯ ಎಲ್ಲ ತಾಂಡಾಗಳ ಜನತೆ ಕಾಂಗ್ರೆಸ್ ಪರ ಇರಲಿದ್ದಾರೆ. ಪ್ರೊ. ರಾಜು ಆಲಗೂರ ಬೆಂಬಲಿಸಿ ಎಂ. ಬಿ. ಪಾಟೀಲ ಕೈ ಬಲಪಡಿಸೋಣ ಎಂದು ಹೇಳಿದರು.
ಕಾಂಗ್ರೆಸ್ ಹಿರಿಯ ಮುಖಂಡ ಡಿ. ಎಲ್. ಚವ್ಹಾಣ ಮಾತನಾಡಿ, ಪ್ರತಿಪಕ್ಷದಲ್ಲಿದ್ದರೂ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿರುವವರ ಮನವೊಲಿಸಿ ಕಾಂಗ್ರೆಸ್ಸಿಗೆ ಮತ ಹಾಕಿಸಿ ಎಂದು ಹೇಳಿದರು.
ಮುಖಂಡರಾದ ಗೋವಿಂದ ಶಿಂಧೆ ಮಾತನಾಡಿ, ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿ ಗೀತಾಂಜಲಿ ಪಾಟೀಲ ಮಾತನಾಡಿ, ಎಪಿಎಂಸಿ ಮಾಜಿ ನಿರ್ದೇಶಕ ಸಿದ್ದಣ್ಣ ಸಕ್ರಿ, ರಾಜುಗೌಡ ಪೊಲೀಸ್ ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಅಣ್ಣಪ್ಪ ಬಾಣವಾರ, ಸುಭಾಷ ರಾಠೋಡ, ಓಗೆಪ್ಪ ಗೋಪಣೆ, ಶಿವಪ್ಪ ಚಲವಾದಿ, ಪೂಜಾರಿ, ಪೀರ ಪಟೇಲ, ಶಂಕರ ಮಹಾರಾಜರು, ಧನಸಿಂಗ್ ಚವ್ಹಾಣ, ರಾಜಶೇಖರ ಶಂಕರ ಪವಾರ, ಚನ್ನಪ್ಪ ದಳವಾಯಿ, ಅಶೋಕ ದಳವಾಯಿ, ಪೋಪಟ ಮಹಾರಾಜರು ಮುಂತಾದವರು ಉಪಸ್ಥಿತರಿದ್ದರು.