ಮನರೇಗಾ ಕಾರ್ಮಿಕರಿಗೆ ಮತದಾನ ಜಾಗೃತಿ ಮೂಡಿಸಿದ ಜಿ.ಪಂ. ಸಿಇಓ ರಿಷಿ ಆನಂದ

ವಿಜಯಪುರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ದಿನ ಕಡ್ಡಾಯವಾಗಿ ಮತಗಟ್ಟೆಗಳಿಗೆ ಬಂದು ಎಲ್ಲರೂ ಮತದಾನ ಮಾಡಿ, ಮತದಾನವನ್ನು ನಿಮಗಾಗಿ, ನಿಮ್ಮ ಭವಿಷ್ಯಕ್ಕಾಗಿ, ನಮ್ಮ ಸಮಾಜಕ್ಕಾಗಿ ಮತ್ತು ನಮ್ಮ ದೇಶಕ್ಕಾಗಿ ಮತದಾನ ಮಾಡಿ ಚುನಾವಣೆ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಿಶಿ ಆನಂದ ಹೇಳಿದರು.

ವಿಜಯಪುರ ತಾಲೂಕಿನ ನಾಗಠಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನರೇಗಾ ಕಾರ್ಮಿಕರಿಗೆ ಮತದಾನ ಜಾಗೃತಿ ಮೂಡಿಸಿದರು.

ವಿಜಯಪುರ ತಾಲೂಕಿನ ನಾಗಠಾಣ ಗ್ರಾ. ಪಂ. ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಜಿ. ಪಂ. ಸಿಇಓ ಭೇಟಿ ನೀಡಿ ಕಾರ್ಮಿಕರಿಗೆ ಮತದಾನ ಜಾಗೃತಿ ಮೂಡಿಸಿದರು.

ಪ್ರಸ್ತುತ ಜಿಲ್ಲೆಯಲ್ಲಿ ಬರಗಾಲ ಇರುವುದರಿಂದ ನರೇಗಾ ಯೋಜನೆಯಡಿ ಈ ವರ್ಷದ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳುಗಳಲ್ಲಿ ಕೂಲಿ ಆಧಾರಿತ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಎಲ್ಲರೂ ಇನ್ನೂ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಕೆಲಸಕ್ಕೆ ಬರಬೇಕು. ನರೇಗಾ ಯೋಜನೆಯಡಿ ಪುರುಷರಿಗೆ ಮತ್ತು ಮಹಿಳೆಯರಿಗೆ ಸಮಾನವಾದ ಕೂಲಿ ಒದಗಿಸಲಾಗುತ್ತಿದೆ ಪ್ರತಿದಿನ ಒಬ್ಬರಿಗೆ 349 ರೂಪಾಯಿಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಜನರಿಗೆ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸಲು ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಲ್ಲಾ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿರುತ್ತದೆ. ಆದ್ದರಿಂದ ತಾವೆಲ್ಲರೂ ಇನ್ನೂ ಹೆಚ್ಚು ಹೆಚ್ಚು ಉದ್ಯೋಗ ಮಾಡಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು ಮತ್ತು ಅಭಿವೃದ್ಧಿ ಹೊಂದಬೇಕು. ಕಾಮಗಾರಿ ಸ್ಥಳದಲ್ಲಿ ತಮ್ಮೆಲ್ಲರಿಗೂ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗುತ್ತದೆ ಹಾಗೂ ಮೂಲಭೂತ ಸೌಕರ್ಯಗಳಾದ ನೆರಳಿನ ವ್ಯವಸ್ಥೆ, ಕುಡಿಯುವ ನೀರು ಮತ್ತು ಉಚಿತ ಆರೋಗ್ಯ ತಪಾಸಣೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರಸ್ತುತ ದಿನಗಳಲ್ಲಿ ಬಿಸಿಲಿನ ತಾಪಮಾನ ಅತೀ ಹೆಚ್ಚು ಇರುವುದರಿಂದ ತಮ್ಮೆಲ್ಲರಿಗೂ ಆರೋಗ್ಯದಲ್ಲಿ ಏರುಪೇರು ಉಂಟಾಗದಂತೆ ಎಚ್ಚರವಹಿಸಿ, ಕಾಮಗಾರಿ ಸ್ಥಳದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

 

ಪ್ರತಿಯೊಬ್ಬರೂ ಕಡ್ಡಾಯವಾಗಿ ನಿಮ್ಮ ನಿಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಿ ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ ಹೆಚ್ಚಿನ ಚಿಕಿತ್ಸೆಯ ಅವಶ್ಯವಿದ್ದಲ್ಲಿ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಲಾಗುವುದು ಆದ್ದರಿಂದ ನೀವೆಲ್ಲರೂ ಇದರ ಸದುಪಯೋಗವನ್ನು ಪಡೆದು ಆರೋಗ್ಯವಂತರಾಗಿರಬೇಕು ಎಂದು ಅವರು ಹೇಳಿದರು.

ಮನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರ ಮೂರು ವರ್ಷದ ಒಳಗಿನ ಮಕ್ಕಳನ್ನು ಆರೈಕೆ ಮಾಡಲು ಜಿಲ್ಲೆಯಲ್ಲಿ 163 ಕೂಸಿನ ಮನೆಗಳನ್ನು ಪ್ರಾರಂಭ ಮಾಡಲಾಗಿದೆ. ಅದೇ ರೀತಿ ನಾಗಠಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಸಹ ಕೂಸಿನ ಮನೆಯನ್ನು ಪ್ರಾರಂಭಿಸಲಾಗಿದೆ. ಎಲ್ಲರೂ ನಿಮ್ಮ ಮೂರು ವರ್ಷದ ಒಳಗಿನ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಬರಬಹುದು. ಸದರಿ ಕೂಸಿನ ಮನೆಯಲ್ಲಿ ನಿಮ್ಮ ಮಕ್ಕಳನ್ನು ನೋಡಿಕೊಳ್ಳಲು ಮತ್ತು ಆರೈಕೆ ಮಾಡಲು ಪ್ರತ್ಯೇಕವಾಗಿ ಮಕ್ಕಳ ಆರೈಕೆದಾರರನ್ನು ಆಯ್ಕೆ ಮಾಡಲಾಗಿದೆ. ಅಲ್ಲಿ ಮಕ್ಕಳ ಆರೈಕೆದಾರರು ಮಕ್ಕಳಿಗೆ ಆಟ-ಪಾಠ, ಪಾಲನೆ-ಪೋಷಣೆ, ವೈಯಕ್ತಿಕ ಸ್ವಚ್ಛತೆ ಕಡೆಗೆ ವಿಶೇಷಗಮನ ನೀಡುತ್ತಾರೆ. ನೀವು ನಿರ್ಭೀತಿಯಿಂದ ನಿಮ್ಮ ಮಕ್ಕಳನ್ನು ಕೂಸಿನ ಮನೆಗಳಲ್ಲಿ ಬಿಟ್ಟು ನೆಮ್ಮದಿಯಿಂದ ಕೆಲಸ ಮಾಡಬಹುದು ಎಂದು ರಿಶಿ ಆನಂದ ತಿಳಿಸಿದರು.

ನಂತರ ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿ ಸಾಕ್ಷಿ ಹಿರೇಮಠ ರವರು ಮತದಾನ ಜಾಗೃತಿ ಗೀತೆಯನ್ನು ಹಾಡಿದರು. ಜಿ. ಪಂ. ಎನ್.ಆರ್.ಎಲ್.ಎಮ್ ವ್ಯವಸ್ಥಾಪಕ ಅಮೋಘಸಿದ್ದ ಗೌಳಿಯವರು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು.  ಈ ಸಂದರ್ಭದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ 282 ಮಹಿಳೆಯರು, 133 ಪುರುಷರು, ಒಟ್ಟು 415 ಕೂಲಿ ಕಾರ್ಮಿಕರು ಸ್ಥಳದಲ್ಲಿದ್ದರು. ಇದೇ ವೇಳೆ ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿಗಳಾದ ಬಿ. ಎಸ್. ಮೂಗನೂರಮಠ, ಜಿಲ್ಲಾ ಸ್ವೀಪ್ ಸಮಿತಿಯ ನೊಡೆಲ್ ಅಧಿಕಾರಿಗಳಾದ ಸಿ. ಆರ್. ಮುಂಡರಗಿ, ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ. ಹೊಂಗಯ್ಯ, ತಾ.ಪಂ. ಸಹಾಯಕ ನಿರ್ದೇಶಕರು(ಗ್ರಾ.ಉ) ಕಾಸಿಮಸಾಬ ಮಸಳಿ, ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿ ಸಹನಾ ಕುಡಿಗನೂರ, ನಾಗಠಾಣ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಿ. ಆರ್. ರಾಠೋಡ, ತಾಂತ್ರಿಕ ಸಂಯೋಜಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌