ವಿಜಯಪುರ: ಹುಬ್ಬಳ್ಳಿಯಲ್ಲಿ ಯುವತಿ ನೇಹಾ ನಿರಂಜನ ಹಿರೇಮಠ ಕೊಲೆ ಖಂಡಿಸಿ ಮತ್ತು ಆರೋಪಿಗೆ ಗಲ್ಲು ಶಿಕ್ಷೆ ನೀಡಿ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ನಗರದಲ್ಲಿ ಜಂಗಮ ಸಮಾದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಂಗಮ ಸಮಾಜ ಮುಖಂಡ ಸಂಜೀವ ಹಿರೇಮಠ ಮತ್ತು ಪ್ರಧಾನ ಕಾರ್ಯದರ್ಶಿ ಎಸ್. ಕೆ. ಸಾವಳಗಿಮಠ, ಹುಬ್ಬಳ್ಳಿ ನಗರದ ಬಿವಿಬಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ನಿರಂಜನ ಹಿರೇಮಠ ಅವರನ್ನು ಹಾಡು ಹಗಲೇ ಕಾಲೇಜಿನ ಆವರಣದಲ್ಲಿ ಚಾಕುವಿನಿಂದ ಹಿರಿದು ಕ್ರೂರವಾಗಿ ಕೊಲೆ ಮಾಡಲಾಗಿದೆ. ಆರೋಪಿ ಫಯಾಜನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಆತನ ಜೊತೆ ಇತರೆ ನಾಲ್ಕು ಜನ ಸಹಪಾಠಿಗಳು ಇದ್ದಾರೆ ಎಂದು ತಿಳಿದು ಬಂದಿದೆ. ಆದ್ದರಿಂದ ಆ ಇತರೆ ನಾಲ್ಕು ಜನ ಆರೋಪಿಗಳನ್ನೂ ಕೂಡಲೇ ಬಂಧಿಸಬೇಕು. ಎಲ್ಲ ಆರೋಪಿಗಳಿಗೆ ಜಾಮೀನು ಸಿಗದಂತೆ ಪೊಲೀಸರು ನ್ಯಾಯ ಸಮ್ಮತ ವರದಿ ನೀಡಬೇಕು ಎಂದು ಆಗ್ರಹಿಸಿದರು.
ಅಲ್ಲದೇ, ಪ್ರಾಸಿಕ್ಯೂಶನ್ ಕ್ರಮ ಕೈಗೊಳ್ಳಬೇಕು. ತನಿಖೆ ನಡೆಸುತ್ತಿರುವ ಪೊಲೀಸರು ಶೀಘ್ರ ತನಿಖೆ ಮುಗಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಸಂಬಂಧಪಟ್ಟ ನ್ಯಾಯಾಲಯವು ಒಂದು ತಿಂಗಳ ಒಳಗೆ ವಿಚಾರಣೆ ಮುಗಿಸಿ ಸದ್ಯದ ಕಾನೂನಿನಲ್ಲಿ ಅವಕಾಶವಿರುವಂತೆ ಗರಿಷ್ಠಮಟ್ಟದ ಶಿಕ್ಷೆಯನ್ನು ವಿಧಿಸಬೇಕು. ನೇಹಾ ಹಿರೇಮಠ ಅವರ ಕೊಲೆಯಂಥ ಕೃತ್ಯಗಳು ಮುಂದೆ ಮರುಕಳಿಸದಂತೆ ಇಂಥ ಹೀನ ಮತ್ತು ಘೋರ ಅಪರಾಧಗಳಿಗೆ ಪೋಕ್ಷೋ ಕಾಯಿದೆಯಂತೆ ವಿರಳ ಪ್ರಕರಣಗಳಲ್ಲಿ ಮರಣ ದಂಡನೆ ವಿಧಿಸುವಂತೆ ಅವಕಾಶ ನೀಡುವ ಕುರಿತು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಈ ಕೂಡಲೇ ಕಾನೂನು ರೂಪಿಸಿ ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಪ್ರಸಾದ ವಸ್ತ್ರದ, ಹಿಂದೂ ಮಹಾಸಭಾದ ಪೂರ್ಣಿಮಾ ಬದ್ನೂರ, ಭುವನೇಶ್ವರಿ ಕೋರವಾರ, ಮಾಯಾ ಚೌಧರಿ ಮಾತನಾಡಿ, ಈ ಕೊಲೆಯಲ್ಲಿ ರಾಜಕಾರಣ ಮಾಡದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಿ ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಸಯ್ಯ ಚಿನ್ನಕಾಳಿಮಠ, ಡಾ. ಬಸವರಾಜ ನಂದಿಕೋಲಮಠ, ವಿಶ್ವನಾಥ ಹಿರೇಮಠ ಕಾಖಂಡಕಿ, ರಾಚಯ್ಯ ಮಠಪತಿ, ಗುರಸಿದ್ದಯ್ಯ ಹಿರೇಮಠ, ಗುರಯ್ಯ ಯಾದವಾಡಮಠ, ಜೆಡಿಎಸ್ ಮುಖಂಡ ರಾಜು ಹಿಪ್ಪರಗಿ, ವಿಶ್ವನಾಥ ಹಿರೇಮಠ, ಮಲ್ಲಯ್ಯ ಹಿರೇಮಠ, ಪುಷ್ಪಾ ಗಚ್ಚಿನಮಠ, ಸುರೇಖಾ ಹಿರೇಮಠ, ಶೈಲಜಾ ನಂದಿಕೋಲಮಠ, ಸುನೀತಾ ಹಿರೇಮಠ, ವೀಣಾ ಹಿರೇಮಠ, ಚೈತ್ರಾ ಮಹಾಂತಮಠ, ಪೂಜಾ ಹಿರೇಮಠ, ಮೀನಾಕ್ಷಿ ಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.