ವಿಜಯಪುರ: ಬಿಜೆಪಿಗೂ ಜೈನ ಸಮುದಾಯಕ್ಕೂ ಜನಸಂಘ ಕಾಲದಿಂದ ಅವಿನಾಭಾವ ಸಂಬಂಧವಿದ್ದು, ಇಂದಿಗೂ ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತಾ ನಮಗೆ ಬೆನ್ನೆಲುಬಾಗಿ ನಿಂತಿದೆ ಎಂದು ಬಿಜೆಪಿ ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಹೇಳಿದ್ದಾರೆ.
ನಗರದ ಬಿಜೆಪಿ ಚುನಾವಣೆ ಕಾರ್ಯಾಲಯದಲ್ಲಿ ನಡೆದ ಭಗವಾನ್ ಮಹಾವೀರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿಯೇ ಅತೀ ಹೆಚ್ಚು ಶ್ರೀಮಂತಿಕೆ ಸಮಾಜವಾಗಿದ್ದರೂ ಜೈನರು ತಮ್ಮ ಶೇ. 70 ರಷ್ಟು ಆದಾಯವನ್ನು ಸಮಾಜಕ್ಕೆ ಅರ್ಪಿಸುವ ಹೃದಯಶ್ರೀಮಂತಿಕೆ ಹೊಂದಿದ್ದಾರೆ. ದೇಶದಲ್ಲಿಯೇ ಅತೀ ಹೆಚ್ಚು ಗೋಶಾಲೆ ಹೊಂದಿರುವ ಜೈನ್ ಸಮಾಜದೊಂದಿಗೆ ನಾವೆಲ್ಲಾ ಸಹೋದರತೆಯಿಂದ ಬದುಕುತ್ತ ಆ ಸಮುದಾಯಕ್ಕೂ ಬಿಜೆಪಿ ರಾಜಕೀಯ ಪ್ರಾತಿನಿಧ್ಯ ನೀಡಲಿದೆ ಎಂದು ಹೇಳಿದರು.
ಬಿಜೆಪಿ ಅಲ್ಪಸಂಖ್ಯಾತ ಮೊರ್ಚಾದ ಜಿಲ್ಲಾಧ್ಯಕ್ಷ ಶೀತಲಕುಮಾರ ಓಗಿ ಪ್ರಸ್ತಾವಿಕವಾಗಿ ಮಾತನಾಡಿ, ಬಸವಣ್ಣನರು ಸಮಾಜದಲ್ಲಿ ಸಮಾನತೆ ಸಾರಲು ಕಲ್ಯಾಣ ಕರ್ನಾಟಕ ನಿರ್ಮಿಸಿದಂತೆ, ಭಗವಾನ್ ಮಹಾವೀರರು ಬಿಹಾರವನ್ನು ಕಲ್ಯಾಣ ಬಿಹಾರ ಮಾಡಿದರು. ಅವರು ರಾಜರ ಮಗನಾದರೂ ಎಲ್ಲವನ್ನು ತ್ಯಜಿಸಿ ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಎಲ್ಲರೂ ಯಾವುದೇ ಬೇಧಭಾವಗಳಿಲ್ಲದೇ ಬದುಕು ಸಾಗಿಸಬೇಕೆಂಬುದು ಮಹಾವೀರರ ಸಂದೇಶ. ದೇಶದವನ್ನು ಶಾಂತಿಯ ವನವನ್ನಾಗಿ ಮಾಡಿದ ಮಹಾನ್ ಪುರುಷರು. ಬಿಜೆಪಿ ಕಚೇರಿಯಲ್ಲಿ ಮಹಾವೀರ ಜಯಂತಿ ಆಚರಣೆ ಮಾಡಿರುವುದು ಇಡಿ ಜೈನ್ ಸಮಾಜಕ್ಕೆ ಹರ್ಷವನ್ನುಂಟು ಮಾಡಿದೆ. ಸಂಸದರ ಚುನಾವಣೆಯ ಗೆದ್ದು ಸೋಲಿಲ್ಲದ ಸರದಾರರಾಗಿ ಉಳಿಯಲಿ, ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಅವರಿಂದಾಗಲು ಭಗವಾನ್ ಮಹಾವೀರರು ಆಶಿರ್ವದಿಸಲು ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಸರ್ವರಿಗೂ ಮಹಾವೀರ ಜಯಂತಿ ಶುಭಾಶಯ ಕೋರಿದರು.
ಅಲ್ಪಸಂಖ್ಯಾತರ ಮೊರ್ಚಾದ ನಗರ ಮಂಡಲ ಅಧ್ಯಕ್ಷ ಸಂತೋಷ ಕವಟೆಕರ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕಾಸೂಗೌಡ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ಸಾಬೂ ಮಾಶ್ಯಾಳ, ಮಳುಗೌಡ ಪಾಟೀಲ, ಮಹಿಳಾ ಮೊರ್ಚಾ ಜಿಲ್ಲಾಧ್ಯಕ್ಷೆ ಸ್ವಪ್ನಾ ಕಣಮುಚನಾಳ, ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ ಮುಂತಾದವರು ಉಪಸ್ಥಿತರಿದ್ದರು.