ವಿಜಯಪುರ: ಜಿಲ್ಲೆಯ ಕಾಂಗ್ರೆಸ್ ಸಚಿವರು, ಶಾಸಕರು ಮತ್ತು ಮುಖಂಡರು ಒಗ್ಗಟ್ಟು ಪ್ರದರ್ಶನ ಮಾಡಿದ್ದು, ಬಸವಣ್ಣನ ತವರು ಬಸವನ ಬಾಗೇವಾಡಿಯಿಂದ ಕೈ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಬಸವನ ಬಾಗೇವಾಡಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಎಂ. ಬಿ. ಪಾಟೀಲ, ಶಿವಾನಂದ ಎಸ್. ಪಾಟೀಲ, ಶಾಸಕರಾದ ಸಿ. ಎಸ್. ನಾಡಗೌಡ, ಯಶವಂತರಾಯಗೌಡ ವಿ. ಪಾಟೀಲ, ವಿಠ್ಠಲ ಧೋಂಡಿಬಾ ಕಟಕದೊಂಡ, ಅಶೋಕ ಮನಗೂಳಿ, ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮಾಜಿ ಶಾಸಕ ಶರಣಪ್ಪ ಸುಣಗಾರ, ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರಿಫ್, ಎಐಸಿಸಿ ವೀಕ್ಷಕ ಸೈಯ್ಯದ ನೂರುದ್ದೀನ್ ಸೇರಿದಂತೆ ನಾನಾ ಮುಖಂಡರು ಒಂದೇ ವೇದಿಕೆ ಹಂಚಿಕೊಳ್ಳುವ ಮೂಲಕ ಸಾಮೂಹಿಕವಾಗಿ ಪ್ರಚಾರಕ್ಕೆ ಚಾಲನೆ ನೀಡಿದರು.
ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮಾತನಾಡಿ, ನಾವು ಜಿಲ್ಲೆಯ ಸಚಿವರು, ಶಾಸಕರು, ಕಾಂಗ್ರೆಸ್ ಅಭ್ಯರ್ಥಿಗಳು ಸಾಮೂಹಿಕವಾಗಿ ಬಸವನ ಬಾಗೇವಾಡಿಯಿಂದ ಪ್ರಚಾರ ಕಾರ್ಯಕ್ರಮ ಆಯೋಜಿಸಿದ್ದೇವೆ. ಏ. 26ರಂದು ಪಕ್ಷದ ರಾಷ್ಟ್ರೀಯ ನಾಯಕ ರಾಹುಲ ಗಾಂಧಿ ಬೆಳಿಗ್ಗೆ 10 ಗಂಟೆಗೆ ವಿಜಯಪುರದಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ಸಿಎಂ ಎಸ್. ಸಿದ್ಧರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ದೇಶದ ಸ್ವಾವಲಂಬನೆ ಮತ್ತು ಆರ್ಥಿಕ ಸ್ಥಿರತೆ, ಉದ್ಯೋಗಗಳಿಗಾಗಿ ಕಾಂಗ್ರೆಸ್ ಅವಧಿಯಲ್ಲಿ ಪ್ರಾರಂಭಿಸಲಾದ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಅಚ್ಚೆದಿನ್ ಬರಲಿಲ್ಲ. ಈ ಅವಧಿಯಲ್ಲಿ ರೂಪಾಯಿ ಮೌಲ್ಯ ಕುಸಿದಿದೆ. ತೈಲ, ಅಡುಗೆ ಅನಿಲ, ಆಹಾರ ಧಾನ್ಯಗಳ ಬೆಲೆ ಹೆಚ್ಚಳವಾಗಿದೆ. ಉದ್ಯೋಗಳು ನಷ್ಡವಾಗಿವೆ. ಕಪ್ಪು ಹಣ ವಾಪಸ್ ತರಲಿಲ್ಲ. ನೋಟ್ ಬ್ಯಾನ್ ಜಾರಿಗೆ ತಂದು ಕಪ್ಪು ಹಣ ಬಿಳಿ ಮಾಡಲಾಯಿತು. ಎಲೆಕ್ಟ್ರಾಲ್ ಬಾಂಡ್ ಹಗರಣದಿಂದ ಮೋದಿ ಮುಖವಾಡ ಕಳಚಿದೆ. ಇಡೀ ವಿಶ್ವದ ದೊಡ್ಡ ಹಗರಣ ಇದಾಗಿದೆ. ಇದು ತನಿಖೆಯಾದರೆ ಬಿಜೆಪಿಯವರು ಬಹುದೊಡ್ಡ ತನಿಖೆಯನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಪಂಚ ಗ್ಯಾರಂಟಿ ಯೋಜನೆಗಳು ಜನರು ಸ್ಚಾವಲಂಬನೆ ಸಾಧಿಸಲು ನೆರವಾಗುತ್ತಿವೆ. ಆದರೆ, ವಿಜಯಪುರ ಸಂಸದರು ಆರು ಬಾರಿ ಎಂಪಿ ಆದರೂ ವಿಜಯಪುರ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಪ್ರವಾಸೋದ್ಯಮ, ತೋಟಗಾರಿಕೆ, ರೇಲ್ವೆ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ಹೀಗಾಗಿ ವಿಜಯಪುರದ ಧ್ವನಿಯಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಲು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರನ್ನು ಆಯ್ಕೆ ಮಾಡಬೇಕು. ಈ ಮೂಲಕ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ, ರಾಹುಲ ಗಾಂಧಿ, ಸಿದ್ಧರಾಮಯ್ಯ, ಡಿ. ಕೆ. ಶಿವಕುಮಾರ ಸೇರಿದಂತೆ ನಮ್ಮೆಲ್ಲರ ಕೈ ಬಲಪಡಿಸಬೇಕು ಎೞದು ಸಚಿವರು ಮನವಿ ಮಾಡಿದರು.
ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಮಾತನಾಡಿ, ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಪ್ರಧಾನಿ ನರೇಂದ್ರ ಮೋದಿ ಒನ್ ಮ್ಯಾನ್ ಶೋ ರೀತಿ ವರ್ತಿಸುತ್ತಿದ್ದಾರೆ. ಅಭಿವೃದ್ಧಿಯ ಬದಲು ಭಾವನಾತ್ಮಕ ವಿಚಾರಗಳ ಮೇಲೆ ಮತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಪ್ರಧಾನಿಗಳಾದ ಜವಾಹರಲಾಲ ನೆಹರು, ಇಂದಿರಾ ಗಾಂಧಿ, ರಾಜೀವ ಗಾಂಧಿ, ಮನಮೋಹನಸಿಂಗ್ ಅವಧಿಯಲ್ಲಿ ದೇಶ ಸದೃಢಗೊಳಿಸುವ ಕೆಲಸ ನಡೆದಿವೆ. ಕಾಂಗ್ರೆಸ್ ತ್ಯಾಗ, ಸಿದ್ಧಾಂತ ಹೊಂದಿದೆ. ಸೋನಿಯಾ ಗಾಂಧಿ, ರಾಹುಲ ಗಾಂಧಿ, ಪ್ರಿಯಾಂಕಾ ಗಾಂಧಿಯವರ ವಿಚಾರ ಧಾರೆಗಳು ಜನಮಸ ಸೆಳೆಯುತ್ತಿವೆ. ಕಾಂಗ್ರೆಸ್ ಗತವೈಭವಕ್ಕಾಗಿ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರಿಗೆ ಮತ ಹಾಕಬೇಕು. ಸಂಸದ ರಮೇಶ ಜಿಗಜಿಣಗಿ ತಾಲೂಕು ಮತ್ತು ಜಿಲ್ಲೆ ಹಾಗೂ ಸಚಿವರಾಗಿದ್ದಾಗ ರಾಜ್ಯದಲ್ಲಿ ಬಯಲು ಶೌಚಮುಕ್ತ ಮಾಡುವ ಕೆಲಸವಾಗಲಿಲ್ಲ. ಆಡಳಿತ ವಿರೋಧಿ ಅಲೆಯಿದೆ. ನಮ್ಮ ಜಿಲ್ಲೆಯಲ್ಲೂ ಮೋದಿ ವಿರೋಧ ವಾತಾವರಣ ಸೃಷ್ಠಿಯಾಗಿದೆ. ರಾಜಕಾರಣ ಶುದ್ಧೀಕರಣಕ್ಕಾಗಿ ಕಾಂಗ್ರೆಸ್ಸಿಗೆ ಮತ ಹಾಕಿ. ಪ್ರೊ. ರಾಜು ಆಲಗೂರ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಂಪನಿ ನಿಯಮಿತ ಅಧ್ಯಕ್ಷ ಮತ್ತು ಮುದ್ದೇಬಿಹಾಳ ಶಾಸಕ ಸಿ. ಎಸ್. ನಾಡಗೌಡ ಮಾತನಾಡಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಅಧ್ಯಕ್ಷ ಸಿ. ಎಸ್. ನಾಡಗೌಡ ಮಾತನಾಡಿ, ದೇಶ ಮತ್ತು ರಾಜ್ಯಗಳ ನಡುವಿನ ಸಂಬಂಧ ಚೆನ್ನಾಗಿರಬೇಕು. ಸೌಹಾರ್ಧ ಸಂಬಂಧವಿರಬೇಕು. ಅಭಿವೃದ್ಧಿ ವಿಷಯಗಳು ಚರ್ಚೆಯಾಗಬೇಕೇ ಹೊರತು ಭಾವನಾತ್ಮಕ ವಿಚಾರಗಳಲ್ಲ. ನಮ್ಮ ದೇಶದಲ್ಲಿ ಸರ್ವಾಧಿಕಾರ ಧೋರಣೆಯ ಸರಕಾರ ನಡೆಯಲು ಬಿಡಬಾರದು. ಕಾಂಗ್ರೆಸ್ಸಿಗೆ ಅಧಿಕಾರಕ್ಕೆ ತರಬೇಕು. ಕೇಂದ್ರ ಸರಕಾರ ಕರ್ನಾಟಕದಲ್ಲಿ ನೀರಾವರಿ ಯೋಜನೆ ಜಾರಿಯಾಗಬಾರದು ಎಂಬ ದುರುದ್ದೇಶದಿಂದ ಆಲಮಟ್ಟಿ ಜಲಾಷಯದ ಎತ್ತರ ಹೆಚ್ಚಳಕ್ಕೆ ಗೆಜೆಟ್ ನೊಟಿಫೀಕೇಶನ್ ಮಾಡುತ್ತಿಲ್ಲ. ರಾಜ್ಯ ಸಂಸದರು ಪ್ರಧಾನಿ ಎದುರು ಧ್ವನಿ ಎತ್ತಿ ಮಾತನಾಡುವುದಿಲ್ಲ. ಈ ಹಿನ್ನೆಲೆಯಲ್ಲಿ ಬಾರಿ ಪ್ರೊ. ರಾಜು ಆಲಗೂರ ಅವರನ್ನು ಗೆಲ್ಲಿಸಿ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸಂಸತ್ತಿನಲ್ಲಿ ಧ್ವನಿ ಎತ್ತಲು ಅವಕಾಶ ನೀಡಿ. ಸರ್ವಧರ್ಮ ಸಹಿಷ್ಣುತೆ, ಸರ್ವರಿಗೆ ಸಮಬಾಳು ಸಮಪಾಲು ಧ್ಯೇಯ ಹೊಂದಿರುವ ಕಾಂಗ್ರೆಸ್ಸಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದ್ದೇವೆ. ಜನರಿಗೆ ಅವುಗಳ ಮೇಲೆ ವಿಶ್ವಾಸವಿದೆ ಎಂದು ಹೇಳಿದರು.
ನಾಗಠಾಣ ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅಭಿವೃದ್ಧಿಯಾಗಿದೆ. ಈ ಹಿಂದೆ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳನ್ನು ಮುಗಿಸುವ ಭರವಸೆಯನ್ನು ಎಂ. ಬಿ. ಪಾಟೀಲರು ಈಡೇರಿಸಿದ್ದಾರೆ. ಶಿವಾನಂದ ಪಾಟೀಲರೂ ಕೂಡ ಉತ್ತಮ ಕೆಲಸ ದಿವಾಳಿಯಾಗಬೇಲಿದ್ದ ಡಿಸಿಸಿ ಬ್ಯಾಂಕ್ ಅಭಿವೃದ್ಧಿ ಪಡಿಸಿ ದೇಶದಲ್ಲಿಯೇ ಉತ್ತಮ ಬ್ಯಾಂಕ್ ಎಂದು ಕೀರ್ತಿ ತಂದಿದ್ದಾರೆ. ಯಶವಂತರಾಯಗೌಡ ವಿ. ಪಾಟೀಲ ಮರಗೂರ ಸಕ್ಕರೆ ಕಾರ್ಖಾನೆಯನ್ನು ಪುನರುಜ್ಜೀವನ ಮಾಡಿ ಪ್ರಯಿ ಟನ್ ಕಬ್ಬಿಗೆ ಅತೀ ಹೆಚ್ಚು ದರ ನೀಡಿದ್ದಾರೆ. ಕಾಂಗ್ರೆಸ್ ಅಧಿಕಾತಕ್ಕೆ ಬಂದಾಗ ಜಿಲ್ಲೆಗೆ ಸಚಿವ ಸ್ಥಾನಗಳು ದೊರೆತಿವೆ. ಬೇರೆ ಸರಕಾರಗಳು ಅಧಿಕಾರಿಕ್ಕೆ ಬಂದಾಗ ವಿಜಯಪುರ ಜಿಲ್ಲೆಗೆ ಅಚಿವರ ಬರವಿತ್ತು ಎಂದು ಹೇಳಿದರು.
ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಮಾತನಾಡಿ, ಪ್ರೊ. ರಾಜು ಆಲಗೂರ ವಿದ್ಯಾವಂತರು. ಎರಡು ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಆದರೆ, ಕಳೆದ 15 ವರ್ಷಗಳಿಂದ ಸಂಸದರಾಗಿದ್ದರೂ ರಮೇಶ ಜಿಗಜಿಣಗಿ ಯಾವ ಅಭಿವೃದ್ಧಿ ಕೆಲಸ ಮಾಡಿಲ್ಲ. ಸಂಸತ್ತಿನಲ್ಲಿ ಒಮ್ಮೆಯೂ ಮಾತನಾಡಿಲ್ಲ. ವಂದೇ ಭಾರತ ರೈಲು ಪ್ರಾರಂಭಿಸಲು ಸಂಸದರು, ಸಚಿವರು, ಪ್ರಧಾನಿಗೆ ಪತ್ರ ಬರೆದರೂ ಈವರೆಗೆ ಯಾವುದೇ ಉತ್ತರ ಬರೆದಿಲ್ಲ. ಎಕೆಕ್ಟ್ರಾಲ್ ಬಾಂಡ್ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದೆ. ಬಿಜೆಪಿಯವರು ಸುಳ್ಳನ್ನು ನೂರು ಬಾರಿ ಹೇಳಿ ನಿಜ ಎಂದು ಬಿಂಬಿಸುತ್ತಾರೆ. ಈ ಬಾರಿ ಸುಶಿಕ್ಷಿತ, ವಿದ್ಯಾವಂತರಾದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರಿಗೆ ಮತಹಾಕಿ ಗೆಲ್ಲಿಸೋಣ ಎಂದು ಕರೆ ನೀಡಿದರು.
ಚುನಾವಣೆ ಆಯೋಗ ಕೇಂದ್ರ ಸರಕಾರದ ಕೈಗೊಂಬೆಯಾಗಿದೆ. ಪ್ರಧಾನಿ ನೀತಿ ಸಂಹಿತೆ ಉಲ್ಲಂಘಿಸಿದರೂ ನೊಟೀಸ್ ನೀಡುತ್ತಿಲ್ಲ. ಪ್ರೊ. ರಾಜು ಆಲಗೂರ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು. ನಾವು ಪರಿಶಿಷ್ಠ ಜಾತಿಯ ಎಲ್ಲರೂ ಒಂದಾಗಬೇಕು. ಆಲಗೂರ ಅವರು ನಮ್ಮ ಬಂಜಾರಾ ಸಮುದಾಯದ ಹಿತ ಕಾಪಾಡಲಿದ್ಸಾರೆ ಎಂದು ಅ;ರು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ಎಸ್. ಪಾಟೀಲ, ವಿಧಾನ ಪರಿಷತ ಶಾಸಕ ಪ್ರಕಾಶ ರಾಠೋಡ, ಎಐಸಿಸಿ ವೀಕ್ಷಕ ಸೈಯ್ಯದ ಬುರಾನುದ್ದೀನ್ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ. ಎಸ್. ಲೋಣಿ, ಮುಖಂಡರಾದ ಕಾಂತಾ ನಾಯಕ, ಅಬ್ದುಲ್ ಹಮೀದ್ ಮುಶ್ರಿಫ್, ಈರಣ್ಣ ಸಿ. ಪಟ್ಟಣಶೆಟ್ಟಿ, ಸುರೇಶ ಹಾರಿವಾಳ, ರಫೀಕ್ ಪಕಾಲಿ, ಕಲ್ಲು ದೇಸಾಯಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.