ವಿಜಯಪುರ: ಬಿಜೆಪಿ ಸ್ಟಾರ್ ಪ್ರಚಾರಕ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ದೀಪ ಆರುವಾಗ ಬಹಳ ಉರಿಯುವಂತೆ ವರ್ತಿಸುತ್ತಿದ್ದಾರೆ. ಮಂಗನಿಗೆ ಮದ್ಯ ಕುಡಿಸಿದಂತೆ ಮಾತನಾಡುತ್ತಾರೆ. ಗಂಡಸ್ತನ ಇದ್ದರೆ ಲೋಕಸಭೆ ಚುನಾವಣೆಯ ನಂತರವೇ ವಿಜಯಪುರದಿಂದ ಸ್ಪರ್ಧೆ ಮಾಡೋಣ ಎಂದು ಸಚಿವ ಶಿವಾನಂದ ಎಸ್. ಪಾಟೀಲ ಸವಾಲು ಹಾಕಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಶಾಸಕ ಯತ್ನಾಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ವಿಜಯಪುರದಲ್ಲಿ ಒಬ್ಬ ಸ್ಟಾರ್ ಪ್ರಚಾರಕರಿದ್ದಾರೆ. ದೀಪ ಆರುವಾಗ ಬಹಳ ಉರಿಯುತಲ್ಲ ಹಂಗ ನಡೆದಿದೆ. ಮಂಗ್ಯಾ ದಾರೂ ಕುಡಿಸಿದರ ಹೆಂಗ ಬೈತದಲಾ ಅದು ಹಂಗೆ ಬೈತದ. ಆ ದಾರೂ ಕುಡಿದವರೂ ಇಷ್ಟು ಬಯ್ಯೋದಿಲ್ಲ. ಆ ಶ್ಯಾಪೇಟಿ ಗಟರ್ ಗಿಂತಲೂ ಹೆಚ್ಚಿಗೆ ಬೈತಾರ. ಗಂಡಸಿದ್ರ ನೀನೂ ಪಕ್ಷೇತರ ನಿಲ್ಲು ನಾನೂ ಪಕ್ಷೇತರ ನಿಲ್ತೀನಿ. ಈಗ ನಿಲ್ಲೋಣ ಬಾ ಮುಂದಕ್ಕೆ ಹೋಗೋದು ಬೇಡ. ನಾನು ಉಳಿಯುತ್ತಿನೋ ನೀ ಉಳಿಯುತ್ತಿಯೋ ಇಲ್ವೋ? ಇದು ಮುಗಿದ ಮ್ಯಾಲ ನಂದೂ ನಿಂದೂ ಒಂದು ಆಗಿ ಬಿಡಲಿ ಎಂದು ಅವರು ಸವಾಲು ಹಾಕಿದರು.
ಇಂಥವರಿದಂದ ಈ ಜಿಲ್ಲೆಯ ಮರ್ಯಾದೆ ತೆಗೆಯುತ್ತಿದ್ದಾರೆ. ಇವರ ಬಾಯಿಗೆ ಇತಿಮಿತಿ ಇಲ್ಲ. ಸುರ್ಜೇವಾಲಾ ಹೇಮಾ ಮಾಲಿನಿ ಬಗ್ಗೆ ಮಾತನಾಡಿದರೆ ಚುನಾವಣೆ ಆಯೋಗದವರು ಎರಡು ದಿನ ಪ್ರಚಾರಕ್ಕೆ ನಿಷೇಧ ಹಾಕಿದ್ದರು. ಆದರೆ, ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಸಕ್ಕರೆ ಕಾರ್ಖಾನೆಗಳಿಂದ ಹಣ ಪಡೆದಿದ್ದಾರೆ ಎಂದು ಯತ್ನಾಳ ತಮ್ಮ ವಿರುದ್ಧ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ರಾಜ್ಯದಲ್ಲಿ 74 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಿವೆ.
ಒಂದೇ ಕಾರ್ಖಾನೆಯವರು ಒಂದು ಪೈಸೆ ತಿಂದಿದ್ದೇನೆ ಎಂದು ಸಾಬೀತು ಮಾಡಿದರೆ ನಾನು ಇವತ್ತೇ ನಾನು ರಾಜಕೀಯ ಹೊಂದುತ್ತೇನೆ. ನೀನು ಗಂಡಸಾಗಿದ್ದರೆ ಸಾಬೀತು ಮಾಡು. ಮಾಡದಿದ್ದರೆ ನೀನು ರಾಜಕೀಯದಿಂದ ನಿವೃತ್ತಿಯಾಗು. ಇಂಥವರಿಗೆ ಈ ಜಿಲ್ಲೆ ಎಂದೂ ಅವಕಾಶ ನೀಡಿಲ್ಲ. ಜಿಲ್ಲೆಯ ಯಾವ ಸಂಸದರು ಅಥವಾ ಶಾಸಕರು ಎಂದೂ ಇವರ ರೀತಿ ಮಾತನಾಡಿಲ್ಲ. ಇಂಥವರು ಈ ರೀತಿ ಮಾತನಾಡಿ ಈ ಜಿಲ್ಲೆಯ ಮರ್ಯಾದೆ ತೆಗೆಯುತ್ತಿದ್ದಾರೆ ಎಂದು ಶಿವಾನಂದ ಎಸ್. ಪಾಟೀಲ ವಾಗ್ದಾಳಿ ನಡೆಸಿದರು.
ಬಸನಗೌಡರು ಬಹಳ ವೇದಿಕೆಯ ಮೇಲೆ ಬೈಯ್ಯುತ್ತಾರೆ. ಇವರು ಊಟ ಮಾಡಿದಲ್ಲಿಯೇ ಹೊಸಲು ಮಾಡಿ ಹೋಗುತ್ತಾರೆ. ಇವರಿಗೆ ರಾಜಕೀಯ ಮರುಜನ್ಮ ನೀಡಿವರು ಯಾರು ಎಂಬುದನ್ನು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ವಿಜಯಪುರ ಬದಲು ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಅಲ್ಲಿ ಫಲಿತಾಂಶ ಏನಾಯ್ತು? ನಾನು ಗಂಡಸ ಅದೀನಿ ಅವನು ಗಂಡಸಿದ್ದರೆ ನಾಳೆನೇ ನಾನು ವಿಜಯಪುರದಲ್ಲಿ ನಿಲ್ಲುತ್ತೇನೆ. ಅವನೂ ನಿಲ್ಲಲಿ ನಾನು ಅವನಿಗಿಂತ ಒಂದು ಓಟ್ ಕಡಿಮೆ ತಗೊಂಡ್ರೆ ನಾನು ರಾಜಕೀಯ ಬಿಡ್ತೀನಿ. ಅವನು ಕಡಿಮೆ ತಗೊಂಡ್ರೆ ಅವನೂ ಬಿಡಲಿ. ಈಗ ಬಾಗಲಕೋಟೆಯಲ್ಲಿಯೂ ಗೆದ್ದು ತೋರಿಸ್ತೀನಿ ಎಂದು ಅವರು ಸವಾಲು ಹಾಕಿದರು.
ಇಂಥ ಎಲ್ಲ ಗೊಡ್ಡ ಮಾತಿಗೆ ನಾನು ಬಗ್ಗುವಂಥ ಮಗ ಅಲ್ಲ. ಇಂಥ ಬಹಳ ಜನರನ್ನು ನಾನು ನೋಡಿದ್ದೇನೆ. ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಎರಡು ಗೊಡ್ಡು ಎಮ್ಮೆಗಳು ಇವೆ. ಹೈನು ಕಟ್ಟಬೇಕಾದರೆ ಹಿಂಡೂದು ತೊಗೊತಿರೋ ಇಲ್ವೋ? ವಿಜಯಪುರದೂ ಗೊಡ್ಡ ಆಗೈತೋ ಇಲ್ವೋ? ಬಾಗಲಕೋಟೆದಂತೂ ಗೊಡ್ಡ ಆಗಿ ಹಳಿ ಮಾತು ಆಗೈತಿ. ಹೀಗಾಗಿ ವಿಜಯಪುರ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರನ್ನು ಆಯ್ಕೆ ಮಾಡಿದರೆ, ನಾನು ಹಾಲು ಹಿಂಡಿ ತೋರಿಸುತ್ತೇನೆ ಎಂದು ಅವರು ಆಲಗೂರ ಪರ ಮತ ಹಾಕುವಂತೆ ಮನವಿ ಮಾಡಿದರು.
ಭೂಮಿಗೆ ಇದ್ದ ಬುದ್ದಿ ಮನುಷ್ಯನಿಗೆ ಇಲ್ಲ. ಒಂದೇ ಬೆಳೆ ಮೂರು ಸಲ ಬೆಳೆಯುತ್ತದೆ. ಆದರೆ, ಈ ಕಸ ಆರು ಬಾರಿ ಬೆಳೆದಿದೆ. ಗಣಪತಿ ಕೂಡ ಮನೆಯಲ್ಲಿ ಬಹಳ ಎಂದರೆ 15 ದಿನ ಕೂಡುತ್ತಾನೆ. ಈತ ಮೂರು ಬಾರಿ ಕೂತಿದ್ದಾನೆ. ನಾವು ರಮೇಶ ಜಿಗಜಿಣಗಿ ವಿರೋಧಿಯಲ್ಲ. ಆದರೆ, ಮೋದಿಯವರು ಪ್ರತಿಪಕ್ಷ ಇರಬಾರದು. ಹಿಟ್ಲರ್ ಆಗಿರಬೇಕು ಎಂದು ಬಯಸಿದ್ದಾರೆ. ರಮೇಶ ಜಿಗಜಿಣಗಿ ಆರು ಬಾರಿ ಸಂಸದರಾದರೂ ಏನೂ ಕೆಲಸ ಮಾಡಿಲ್ಲ ಎಂದು ಅವರು ವಿಜಯಪುರ ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ವಿರುದ್ಧವೂ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಸಚಿವ ಎಂ. ಬಿ. ಪಾಟೀಲ, ಎಐಸಿಸಿ ವೀಕ್ಷಕ ಸೈಯ್ಯದ ಬುರಾನುದ್ದೀನ್, ಶಾಸಕರಾದ ಸಿ. ಎಸ್. ನಾಡಗೌಡ, ಯಶವಂತರಾಯಗೌಡ ವಿ. ಪಾಟೀಲ, ವಿಠ್ಠಲ ಧೋಂಡಿಬಾ ಕಟಕದೊಂಡ, ವಿಧಾನ ಪರಿಷತ ಶಾಸಕರಾದ ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ ಮುಖಂಡರಾದ ಕಾಂತಾ ನಾಯಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ. ಎಸ್. ಲೋಣಿ, ಮುಖಂಡರಾದ ಕಾಂತಾ ನಾಯಕ, ಈರಣ್ಣ ಎಸ್. ಪಟ್ಟಣಶೆಟ್ಟಿ, ಶಂಕರಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.