ವಿಜಯಪುರ: ಸಂಸದ ಮತ್ತು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ ಗಾಂಧಿ ಅವರು ಏಪ್ರಿಲ್ 26 ರಂದು ವಿಜಯಪುರ ಪ್ರವಾಸ ಕೈಗೊಳ್ಳುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಪ್ರಚಾರ ನಡೆಸಲಿದ್ದಾರೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 26 ರಂದು ಬೆಳಿಗ್ಗೆ 11ಕ್ಕೆ ನಗರದ ಸೋಲಾಪುರ ರಸ್ತೆಯಲ್ಲಿರುವ ಬಿ.ಎಲ್.ಡಿ.ಇ ನ್ಯೂಸ್ ಕ್ಯಾಂಪಸ್ ನಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಎಸ್. ಸಿದ್ಧರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ಸರಕಾರ ಘೋಷಣೆ ಮಾಡಿರುವ ಎಲ್ಲ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೇ, ಈಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪಂಚ ನ್ಯಾಯ ಗ್ಯಾರಂಟಿ ಯೋಜನೆ ಜಾರಿ ಮಾಡುವುದಾಗಿ ಘೋಷಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಎಲೆಕ್ಟ್ರಾಲ್ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಕಳಚಿದೆ. ಐಡಿ, ಇಡಿ ಧಾಳಿಗೆ ಒಳಗಾದವರು ಎಲೆಕ್ಟ್ರಾಲ್ ಬಾಂಡ್ ಖರೀದಿಸಿದ್ದಾರೆ. ಮೋದಿಯವರ ಭ್ರಷ್ಟಾಚಾರದ ನಿಲುವು ಈ ಪ್ರಕರಣದ ಮೂಲಕ ಬಹಿರಂಗವಾಗಿದೆ. 10 ವರ್ಷದಲ್ಲಿ ಇವರ ಸುಳ್ಳುಗಳ ಅನಾವರಣವಾಗಿದೆ. ವಿಜಯಪುರ ಸಂಸದ ರಮೇಶ ಜಿಗಜಿಣಗಿ ಆರು ಬಾರಿ ಆಯ್ಕೆಯಾದರೂ ಏನೂ ಕೆಲಸ ಮಾಡಿಲ್ಲ. ವಿಜಯಪುದ ಜ್ವಲಂತ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಧ್ಬನಿ ಎತ್ತಿಲ್ಲ. ಜಿಲ್ಲೆ ಕೃಷಿ, ತೋಟಗಾರಿಕೆ, ದಲಿತರ ಸಮಸ್ಯೆಗಳ ಬಗ್ಗೆಯೂ ಕೇಂದ್ರದಲ್ಲಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಅವರು ಹೇಳಿದರು.
ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಅಲ್ಪಸಂಖ್ಯಾತರ ಪರವಾಗಿ ನೀಡಿದ್ದಾರೆ ಎನ್ನಲಾದ ಹೇಳಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತಿರಿಸಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಭ್ರಮನಿರಸರಾಗಿದ್ದಾರೆ. ಎಡಿಟ್ ಮಾಡಿದ ವಿಡಿಯೋ ಪ್ರಸ್ತಾಪಿಸಿ ಕೀಳುಮಟ್ಟದ ಪ್ರಚಾರ ಮಾಡುತ್ತಿದ್ದಾರೆ. ಈವರೆಗೆ ಯಾವ ಪ್ರಧಾನಿಯೂ ಈ ಮಟ್ಟಕ್ಕೆ ಇಳಿದಿರಲಿಲ್ಲ. ಇದು ಖಂಡನೀಯ. ಪ್ರಧಾನಿ ಕ್ಷಮೆ ಯಾಚಿಸಬೇಕು. ಚುನಾವಣೆ ಆಯೋಗ ಈ ನಿಟ್ಡಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ರಾಜ್ಯ ಬಿಜೆಪಿಯಲ್ಲಿ ಈಗ 20 ಗುಂಪುಗಳಿವೆ. ನೇಹಾ ಹಿರೇಮಠ ಕೊಲೆ ಪ್ರಕರಣ ಹೇಯ ಕೃತ್ಯ. ಆರೋಪಿಯನ್ನು ಗಲ್ಲಿಗೇರಿಸಬೇಕು. ಇಂಥ ಪ್ರಕರಣಗಳ ಬೇಗ ಇತ್ಯರ್ಥ ಮಾಡಬೇಕು ಮತ್ತು ವಿಕೃತ ಕಾಮಿಗಳಿಗೆ ಕಠಿಣ ಶಿಕ್ಷೆ ನೀಡಲು ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಲು ಕೇಂದ್ರ ಸರಕಾರ ರಾಜ್ಯ ಸರಕಾರಗಳೊಂದಿಗೆ ಸಮನ್ವಯತೆ ಸಾಧಿಸಿ ಕ್ರಮ ಕೈಗೊಳ್ಳಬೇಕು. ನೇಹಾ ಹಿರೇಮಠ ಕೊಲೆ ಪ್ರಕರಣದಿಂದ ಬಿಜೆಪಿ ರಾಜಕೀಯ ಲಾಭ ಪಡೆಯಲು ಆಗುವುದಿಲ್ಲ. ಮತದಾರರು ಜಾಗೃತರಾಗಿದ್ದಾರೆ. ದಿನಪತ್ರಿಕೆಗಳಲ್ಲಿ ಬಿಜೆಪಿ ನೀಡಿರುವ ಜಾಹಿರಾತು ಕೀಳು ಮಟ್ಟದಿಂದ ಕೂಡಿದೆ. ಮಾಧ್ಯಮಗಳು ಇವುಗಳನ್ನು ಪ್ರಕಟಿಸುವಾಗ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರು ಹೊಂದಿರುವ ಕನಸುಗಳ ಕುರಿತು 10 ಅಂಶಗಳ ಪ್ರಣಾಳಿಕೆಯನ್ನು ಸಚಿವ ಎಂ. ಬಿ. ಪಾಟೀಲ, ಜವಳಿ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಎಸ್. ಪಾಟೀಲ, ಶಾಸಕರಾದ ಯಶವಂತರಾಯಗೌಡ ವಿ. ಪಾಟೀಲ, ವಿಠ್ಠಲ ಧೋಂಡಿಬಾ ಕಟಕದೊಂಡ, ಅಶೋಕ ಮನಗೂಳಿ, ವಿಧಾನ ಪರಿಷತ ಶಾಸಕರಾದ ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ ಮತ್ತು ಜಿಲ್ಲಾ ಕಾಂಗ್ರೆಸ್ ಮುಖಂಡರು ಬಿಡುಗಡೆ ಮಾಡಿದರು.
ಇದೇ ವೇಳೆ ಬಂಡಾಯ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಾಮಪತ್ರ ವಾಪಸ್ ಪಡೆದ ಬಿಜೆಪಿ ಮುಖಂಡ ಡಾ. ಬಾಬು ರಾಜೇಂದ್ರ ನಾಯಕ ಸಚಿವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಅವರನ್ನು ಸಚಿವ ಎಂ. ಬಿ. ಪಾಟೀಲ ಕಾಂಗ್ರೆಸ್ ಶಾಲು ಹಾಕಿ, ಧ್ವಜ ನೀಡಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಎಐಸಿಸಿ ವೀಕ್ಷಕ ಸಯ್ಯದ ಬುರಾನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ. ಎಸ್. ಲೋಣಿ, ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಡಾ. ಮಕ್ಬೂಲ್ ಬಾಗವಾನ, ಕಾಂಗ್ರೆಸ್ ಮಹಿೞಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಮುಖಂಡರಾದ ಸಂಗಮೇಶ ಬಬಲೇಶ್ವರ, ಅಬ್ದುಲ್ ಹಮೀದ್ ಮುಶ್ರೀಪ್, ಅರ್ಜುನ ಹೀರು ರಾಠೋಡ ಮುಂತಾದವರು ಉಪಸ್ಥಿತರಿದ್ದರು.