ವಿಜಯಪುರ : ದೇಶದ ರಕ್ಷಣೆ ಹಾಗೂ ಅಭಿವೃದ್ಧಿಯ ಜೊತೆಗೆ ದೇಶದಲ್ಲಿ ಮಹಿಳೆಯರ ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಬಿಜೆಪಿ ಪಕ್ಷ ಅಧಿಕಾರವಕಾಶ ಸಿಕ್ಕಾಗಲೆಲ್ಲಾ ಪ್ರಥಮ ಆದ್ಯತೆ ನೀಡಿ ಹಲವಾರು ಮಹಿಳಾಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಮಹಿಳಾ ಸಶಕ್ತಿಕರಣಗೊಳಿಸಲು ಶ್ರಮಿಸುತ್ತಿದೆ ಎಂದು ಬಿಜೆಪಿ ಮಹಿಳಾ ಮೊರ್ಚಾ ಜಿಲ್ಲಾಧ್ಯಕ್ಷೆ ಸಪ್ನಾ ಕಣಮುಚನಾಳ ಹೇಳಿದ್ದಾರೆ.
ನಗರದ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಮಹಿಳಾ ಮೊರ್ಚಾದ ಜಿಲ್ಲಾ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರವು ಮಹಿಳಾ ಸಬಲೀಕರಣಕ್ಕೆ ಕಳೆದ 10 ವರ್ಷಗಳಲ್ಲಿ ಗರಿಷ್ಠ ಆದ್ಯತೆ ನೀಡಿದೆ. ಶೇ 33ರಷ್ಟು ಮಹಿಳಾ ಮೀಸಲಾತಿ, ತ್ರಿವಳಿ ತಲಾಖ್ ರದ್ದು, ಮಹಿಳಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಸೇರಿ ಮಹಿಳಾ ರಕ್ಷಣೆಗೆ ಅನೇಕ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಉಜ್ವಲ ಯೋಜನೆಯಡಿ 35.57 ಲಕ್ಷ ಗ್ಯಾಸ್ ಸಂಪರ್ಕ, ಜಲ ಜೀವನ್‍ನಡಿ ಕರ್ನಾಟಕದಲ್ಲಿ 70.12 ಲಕ್ಷ ಮನೆಗಳಿಗೆ ನಳ ನೀರಿನ ಸಂಪರ್ಕ, ಕರ್ನಾಟಕದಲ್ಲಿ 48 ಲಕ್ಷಕ್ಕಿಂತ ಹೆಚ್ಚು ಶೌಚಾಲಯಗಳ ನಿರ್ಮಾಣ ಹೀಗೆ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.
ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಕಳೆದ 10 ವರ್ಷಗಳಲ್ಲಿ 51.6 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ. ಇದರಲ್ಲಿ 28 ಕೋಟಿ ಮಹಿಳಾ ಖಾತೆಗಳಿವೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಶೇ 70ರಷ್ಟು ಮನೆಗಳನ್ನು ಮಹಿಳೆಯರಿಗೇ ಕೊಡಲಾಗುತ್ತಿದೆ. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಮಹಿಳೆಯರ ಪಾತ್ರ ದೊಡ್ಡದಿದೆ. ಎಲ್ಲರೂ ಬಿಜೆಪಿಯ ಸಾಧನೆಗಳನ್ನು ಪ್ರತಿ ಮನೆಮನೆಗೆ ತಲುಪಿಸಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಗೆಲುವಿಗೆ ಶ್ರಮಿಸೋಣ ಎಂದು ಅವರು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಮಾತನಾಡಿ, ದೇಶದ ಎಲ್ಲಾ ರಂಗಗಳಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯರಿಗೆ ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳಲ್ಲಿ ಆದ್ಯತೆ ಸಿಗುತ್ತಿಲ್ಲ. ಇಂದಿರಾ ಗಾಂಧಿ ಪ್ರಧಾನಿ ಇದ್ದಾಗಲೂ ಮಹಿಳೆಯರಿಗೆ ಆದ್ಯತೆ ಕೊಡಲಿಲ್ಲ, ಆದರೆ ಬಿಜೆಪಿಯಲ್ಲಿ ಸುಷ್ಮಾ ಸ್ವರಾಜ್ ಅವರನ್ನು ವಿದೇಶಾಂಗ ಸಚಿವೆಯನ್ನಾಗಿ ಮಾಡಿತು. ಅವರು ಆ ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಇಂದು ನಿರ್ಮಲಾ ಸೀತಾರಾಮನ್ ಅವರನ್ನು ವಿತ್ತ ಸಚಿವೆಯನ್ನಾಗಿ ಮಾಡಿತು. ಅವರು ಕೋವಿಡ್ ನಂತಹ ಸಂಕಷ್ಟ ಸ್ಥಿತಿಯಲ್ಲಿ ಸಮರ್ಪಕ ಆರ್ಥಿಕ ನಿರ್ವಹಣೆ ಮಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರು ರಾಜಕೀಯವಾಗಿ ಮೇಲೆ ಬರಲು ಶೇ.33 % ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಮಹಿಳೆಯರು ಎಲ್ಲಾ ರಂಗಗಳಲ್ಲೂ ಮುಂದೆ ಬರಬೇಕೆಂಬ ವಿಚಾರ ಬಿಜೆಪಿ ಪಕ್ಷದ್ದಾಗಿದೆ ಎಂದು ಹೇಳಿದರು.
ಬಿಜೆಪಿ ತ್ರಿವಳಿ ತಲಾಖ್ ಎಂಬ ಅನಿಷ್ಠ ಪದ್ದತಿ ತೆಗೆದುಹಾಕಿ ಮಹಿಳೆಯರಿಗೆ ಗೌರವ ಕೊಡುವ ಕೆಲಸ ಮಾಡಿದೆ. ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರವೂ ಓಲೈಕೆ, ತುಷ್ಟಿಕರಣ ನೀತಿಯಿಂದ 65 ವರ್ಷ ದೇಶದ ಎಲ್ಲಾ ಪ್ರಗತಿಯ ಹಾದಿಯನ್ನು ಹಿನ್ನಡೆ ಮಾಡಿದೆ. ಇಂದು ಸಹ ಜಾತಿಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ನೇಹಾ ಹತ್ಯೆ ಪ್ರಕರಣದಿಂದ ಹಿಡಿದು ಕುಕ್ಕರ್ ಬ್ಲಾಸ್ಟ್ ಮಾಡಿದವರ ಪರವಾಗಿ ಕಾಂಗ್ರೆಸ್ ನಿಲ್ಲುತ್ತಿದ್ದು, ಪಾಕ್ ಪರ ಘೋಷಣೆಗಳಾಗುತ್ತಿದ್ದರೂ ಮಾತನಾಡುತ್ತಿಲ್ಲ. ಮಹಿಳಾಶಕ್ತಿ ಎನ್ನುವಂತಹದು ಕುಟುಂಬ ಪದ್ದತಿ ಉಳಿಸಿದೆ. ಹಾಗೇ ಚುನಾವಣೆ ಸಂದರ್ಭದಲ್ಲಿ ರಾಷ್ಟ್ರವನ್ನು ಉಳಿಸುವ ಜವಾಬ್ದಾರಿ ಕೂಡ ತಾಯಂದಿರ ಮೇಲಿದೆ. ಹಾಗಾಗಿ ಮಹಿಳೆಯರು ಮತ್ತೊಮ್ಮೆ ಮೋದಿ ಸರ್ಕಾರಕ್ಕೆ ಬೆಂಬಲವಾಗಿ ನಿಂತು ರಾಷ್ಟ್ರದ ಸುರಕ್ಷತೆ, ಅರ್ಥಿಕ ಪ್ರಗತಿ ಹಾಗೂ ಭಾರತವನ್ನು ವಿಶ್ವಗುರುವನ್ನಾಗಿಸಲು ಸಂಕಲ್ಪ ತೊಡಬೇಕು ಎಂದು ಅವರು ಕರೆ ನೀಡಿದರು.
ಬಿಜೆಪಿ ಬೆಳಗಾವಿ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಮಾತನಾಡಿ, ಪಕ್ಷದ ಜವಾಬ್ದಾರಿ ವಹಿಸಿಕೊಂಡ ಎಲ್ಲಾ ಮಹಿಳಾ ಪದಾಧಿಕಾರಿಗಳು ತಮ್ಮ ಮನೆ ಸುತ್ತಮುತ್ತಲಿನ ಕನಿಷ್ಟ 50 ಮಹಿಳೆಯರಿಗೆ ಬಿಜೆಪಿಯ ಜನಪರ, ಮಹಿಳಾಪರ ಯೋಜನೆಗಳ ಪರಿಚಯ ಮಾಡಿಕೊಟ್ಟು ದೇಶದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಯ ಗೆಲುವು ಅವಶ್ಯಕ ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಉಜ್ವಲ ಯೋಜನೆಯಡಿ 35.57 ಲಕ್ಷ ಗ್ಯಾಸ್ ಸಂಪರ್ಕವನ್ನು ಕೊಟ್ಟಿದ್ದೇವೆ. ಜಲ ಜೀವನ್‍ನಡಿ ಕರ್ನಾಟಕದಲ್ಲಿ 70.12 ಲಕ್ಷ ಮನೆಗಳಿಗೆ ನಳ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಇಡೀ ದೇಶದಲ್ಲಿ 11.74 ಕೋಟಿ ಮತ್ತು ಕರ್ನಾಟಕದಲ್ಲಿ 48 ಲಕ್ಷಕ್ಕಿಂತ ಹೆಚ್ಚು ಶೌಚಾಲಯಗಳ ನಿರ್ಮಾಣವಾಗಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಕಳೆದ 10 ವರ್ಷಗಳಲ್ಲಿ 51.6 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ. ಇದರಲ್ಲಿ 28 ಕೋಟಿ ಮಹಿಳಾ ಖಾತೆಗಳಿವೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಶೇ 70ರಷ್ಟು ಮನೆಗಳನ್ನು ಮಹಿಳೆಯರಿಗೇ ಕೊಡಲಾಗುತ್ತಿದೆ. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ತಾಯಂದಿರ ಪಾತ್ರ ದೊಡ್ಡದಿದೆ. ಎಲ್ಲರೂ ಬಿಜೆಪಿಯ ಸಾಧನೆಗಳನ್ನು ಪ್ರತಿ ಮನೆಮನೆಗೆ ತಲುಪಿಸಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ್, ಈರಣ್ಣ ರಾವೂರ, ಸಾಬೂ ಮಾಶ್ಯಾಳ ಹಾಗೂ ಹಲವರು ಉಪಸ್ಥಿತರಿದ್ದರು.