ದ್ರಾಕ್ಷಿನಾಡು ತಿಕೋಟಾದಲ್ಲಿ ಕಾಂಗ್ರೆಸ್ ಚುನಾವಣೆ ಕಹಳೆ- ಕಾಂಗ್ರೆಸ್ ನಾಯಕರಿಂದ ಸಾಮೂಹಿಕವಾಗಿ ಪ್ರಚಾರ

ವಿಜಯಪುರ: ಕಾಂಗ್ರೆಸ್ ಅಭ್ಯರ್ಥಿ ಪ್ರೊ ರಾಜು ಆಲಗೂರ ಪರ ಸಾಮೂಹಿಕ ಪ್ರಚಾರ ಮಾಡುತ್ತಿರುವ ಜಿಲ್ಲೆಯ ಸಚಿವರು, ಶಾಸಕರು ಮತ್ತು ಮುಖಂಡರು ಇಂದು ಮಂಗಳವಾರ ದ್ರಾಕ್ಷಿನಾಡು ತಿಕೋಟಾದಲ್ಲಿ ಭರ್ಜರಿ ಪ್ರಚಾರ ನಡೆಸಿದರು.

ಜತ್ ರಸ್ತೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ, ಜವಳಿ, ಸಕ್ಕರೆ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ, ಮತ್ತು ಶಾಸಕರು ಸಾಮೂಹಿಕವಾಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜನ ಎಸ್. ಲೋಣಿ, ಜಿಲ್ಲೆಯಲ್ಲಿ ಸಚಿವರು, ಶಾಸಕರು ಮತ್ತು ಮುಖಂಡರು ಒಗ್ಗಟ್ಟಾಗಿ ಸಾಮೂಹಿಕವಾಗಿ ಪ್ರಚಾರ ಕೈಗೊಂಡಿದ್ದೇವೆ. ದಿನೇ ದಿನೇ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರ ಪರ ಅಲೆ ಹೆಚ್ಚುತ್ತಿದ್ದು, ಮತದಾರರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೋಳ್ಳುವ ಮೂಲಕ ಕಾಂಗ್ರೆಸ್ಸಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಮತದಾರರಿಗೆ ಈಗ ಕೇಂದ್ರ ಸರಕಾರದ ಸುಳ್ಳು ಭರವಸೆಗಳ ಅರಿವಾಗಿದ್ದು, ಅವರೆಲ್ಲರೂ ಈಗ ಜಾಗೃತರಾಗಿದ್ದಾರೆ. ಅಷ್ಟೇ ಅಲ್ಲ, ಪ್ರೊ. ರಾಜು ಆಲಗೂರ ಅವರಿಗೆ ಮತ ಹಾಕುವ ಮೂಲಕ ಭರ್ಜರಿ ಗೆಲುವಿಗೆ ಕೈಜೊಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಿಕೋಟಾದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಸಚಿವ ಶಿವಾನಂದ ಎಸ್. ಪಾಟೀಲ ಅವರು ಪ್ರೊ. ರಾಜು ಆಲಗೂರ ಪರ ಮತಯಾಚಿಸಿದರು.

ಜವಳಿ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಎಪಿಎಂಸಿ ಸಚಿವ ಶಿವಾನಂದ ಎಸ್. ಪಾಟೀಲ ಮಾತನಾಡಿ, ಪ್ರೊ. ರಾಜು ಆಲಗೂರ ತಿಕೋಟಾ ತಾಲೂಕಿನವರಾಗಿದ್ದು, ಅವರು ಸಂಸದರಾಗಿ ಆಯ್ಕೆಯಾಗುವ ಅವಕಾಶವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು. ವಿಜಯಪುರ ಮತ್ತು ಬಾಗಲಕೋಟೆಯ ಹಾಲಿ ಸಂಸದರು ಏನೂ ಅಭಿವೃದ್ಧಿ ಮಾಡಿಲ್ಲ. ಇದನ್ನು ಪ್ರಶ್ನಿಸಲು ಸಂಬಂಧಿಸಿದ ಸಂಸದರೂ ಕೈಗೆ ಸಿಗುವುದಿಲ್ಲ. ರಾಜ್ಯ ಕೃಷಿ ಸಚಿವರು, ಸಿಎಂ ದೆಹಲಿಗೆ ಹೋಗಿ ಕೈಮುಗಿದು ಬರ ಪರಿಹಾರ ಕೇಳಿದರೂ ಪ್ರಧಾನಿ ಹಣ ಬಿಡುಗಡೆ ಮಾಡಿಲ್ಲ. ಅವರು ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದ್ದು, ಮುಂದೆ ನಮ್ಮನ್ನು, ನಿಮ್ಮನ್ನು ಮಾರಾಟ ಮಾಡಬಹುದು. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಖಚಿತವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ 18 ರಿಂದ 20 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ತಾವೂ ಕೂಡ ಪ್ರೊ. ರಾಜು ಆಲಗೂರ ಅವರಿಗೆ ಹೆಚ್ಚಿನ ಮತ ಹಾಕಿ ಕ್ಷೇತ್ರದ ಮಗನನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ ಮಾತನಾಡಿ, ನೀರಾವರಿಯಿಂದಾಗಿ ಬರದ ನಾಡಿನಲ್ಲಿ ಈಗ ದೊಡ್ಡ ಬದಲಾವಣೆಯಾಗಿದ್ದು, ಬರದ ಈ ಸಂದರ್ಭದಲ್ಲಿ ಮಹಿಳೆಯರು ಖಾಲಿ ಕೊಡಗಳೊಂದಿಗೆ ಟ್ಯಾಂಕರ್ ಮುಂದೆ ಹೋಗಿ ನಿಲ್ಲುವುದು ತಪ್ಪಿದೆ. ಮುಂಬರುವ ದಿನಗಳಲ್ಲಿ ತುಬಚಿ- ಬಬಲೇಶ್ವರ ಏತ ನೀರಾವರಿ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಹಳ್ಳಗಳಿಗೆ ನೀರು ಬಿಡುವ ಮೂಲಕ ಪ್ರತಿಯೊಬ್ಬ ಬಾಕಿ ಉಳಿದಿರುವ ರೈತರ ಜಮೀನಿಗೆ ನೀರು ಒದಗಿಸಲಾಗುವುದು. ಅಚ್ಛೆ ದಿನ್ ಎಂಬ ಮೋದಿ ಘೋಷಣೆ ವಿಫಲವಾಗಿದ್ದು, ರೂಪಾಯಿ ಮೌಲ್ಯ ಕುಸಿದಿದೆ. ತೈಲ ಬೆಲೆ, ಅಡುಗೆ ಅನಿಲ ದರ ಹೆಚ್ಚಾಗಿದೆ. ಉದ್ಯೋಗ ನಷ್ಟ, ನೊಟ್ ಬ್ಯಾನ್ ನಿಂದ ಜನಸಾಮಾನ್ಯರು ಸಂತ್ರಸ್ತರಾಗಿದ್ದಾರೆ. ಹೀಗಾಗಿ ಬಿಜೆಪಿ ಈಗ ಮತ್ತೆ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದೆ. ಐಟಿ, ಇಡಿ, ಸಿಬಿಐ ದಾಳಿ ನಡೆಸಿ ದಾಳಿಗೆ ಒಳಗಾದವರಿಂದ ಎಕೆಕ್ಟ್ರಾಲ್ ಬಾಂಡ್ ಹೆಸರಿನಲ್ಲಿ ಖರೀದಿಸಲು ಒತ್ತಡ ಹಾಕಿದ್ದಾರೆ. ಈ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಬಹಿರಂಗವಾದರೆ ಸಂಬಂಧಿಸಿದ ಎಲ್ಲರೂ ಎಲ್ಲರೂ ಜೈಲಿನಲ್ಲಿರಬೇಕಾಗುತ್ತದೆ ಎಂದು ಹೇಳಿದರು.

ವಿಜಯಪುರ ಜಿಲ್ಲೆ ಮತ್ತು ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಲು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರನ್ನು ಎಲ್ಲರೂ ಭಾರಿ ಮತಗಳ ಅಂತರದಿಂದ ಗೆಲ್ಲಿಸಬೇಕು. ನಮ್ಮ ಅಭ್ಯರ್ಥಿ ಜಿಲ್ಲೆಯ ಅಭಿವೃದ್ಧಿ ಕುರಿತು 10 ಅಂಶಗಳ ಪ್ರಣಾಳಿಕೆ ಈಡೇರಿಸುವ ಗುರಿ ಹೊಂದಿದ್ದು, ಇದರಿಂದ ಜಿಲ್ಲೆಯಲ್ಲಿ ಸರ್ವಾಂಗೀಣ ಅಭಿವೃದ್ಧಿಯಾಗಲಿದೆ. ಪ್ರೊ. ರಾಜು ಆಲಗೂರ ಅವರಿಗೆ ಮತ ಹಾಕಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ರಾಜ್ಯ ಮತ್ತು ರಾಷ್ಡ್ರೀಯ ಕಾಂಗ್ರೆಸ್ ನಾಯಕರ ಕೈ ಬಲಪಡಿಸಿ ಎಂದು ಅವರು ಮನವಿ ಮಾಡಿದರು.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ ಗಾಂಧಿ ಅವರು ಏ. 26ರಂದು ವಿಜಯಪುರ ನಗರಕ್ಕೆ ಆಗಮಿಸುತ್ತಿದ್ದು, ತಾವೆಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ಸಚಿವ ಎಂ. ಬಿ. ಪಾಟೀಲ ಮನವಿ ಮಾಡಿದರು.

ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ನಾವಲ್ಲರೂ ಒಗ್ಗಟ್ಟಾಗಿದ್ದೇವೆ. ದೇಶಾದ್ಯಂತ ಮೋದಿ ವಿರೋಧಿ ಅಲೆಯಿದೆ. ಸಚಿವ ಎಂ. ಬಿ. ಪಾಟೀಲರು ಈ ಭಾಗದಲ್ಲಿ ನೀರು ಬಾರದ ಭಾಗಕ್ಕೆ ನೀರಾವರಿ ಮಾಡುವ ಮೂಲಕ ಜನರಿಗೆ ಸಂತೃಪ್ತಿ ತಂದಿದ್ದಾರೆ. ಹೀಗಾಗಿ ದ್ರಾಕ್ಷಿ ನಾಡಿನ ಪ್ರಜ್ಞಾವಂತ ಮತದಾರರು ನಿಮ್ಮ ಸ್ವಾಭಿಮಾನದ ಪ್ರತೀಕವಾಗಿರುವ ಮತ್ತು ಪ್ರಬುದ್ಧ ಅಭ್ಯರ್ಥಿಯಾಗಿರುವ ಪ್ರೊ. ರಾಜು ಆಲಗೂರ ಅವರಿಗೆ ಮತ ಹಾಕಿ ಗೆಲ್ಲಿಸಿ ನಮ್ಮೆಲ್ಲರ ಕೈ ಬಲಪಡಿಸಬೇಕು. ಹಾಲಿ ಸಂಸದ ರಮೇಶ ಜಿಗಜಿಣಗಿ ನನ್ನ ಮತಕ್ಷೇತ್ರದವರೇ ಆಗಿದ್ದರೂ ಒಂದೂ ನೆನಪಿನಲ್ಲಿಡುವ ಕೆಲಸ ಮಾಡಿಲ್ಲ. ಹೀಗಾಗಿ ಪ್ರೊ. ರಾಜು ಆಲಗೂರ ಅವರಿಗೆ ಮತಹಾಕಿ ಅವಕಾಶ ಮಾಡಿಕೊಡಬೇಕು. ರಾಜ್ಯದಲ್ಲಿ ಕನಿಷ್ಠ 22 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹೇಳಿದರು.

 

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಂಬನಿ ನಿಯಮಿತ ಅಧ್ಯಕ್ಷ ಹಾಗೂ ಮುದ್ದೇಬಿಹಾಳ ಶಾಸಕ ಸಿ. ಎಸ್. ನಾಡಗೌಡ ಮಾತನಾಡಿ, ರಾಜಕೀಯ ವ್ಯವಸ್ಥೆಯಲ್ಲಿ ನಿಮ್ಮ ಹಿತ ಬಯಸುವ ಸರಕಾರವನ್ನು ಆಯ್ಕೆ ಮಾಡಿದರೆ ನಿಮ್ಮ ಪರವಾಗಿ ಕೆಲಸ ಮಾಡುತ್ತಾರೆ. ಪ್ರೊ. ರಾಜು ಆಲಗೂರ ಪ್ರಾಧ್ಯಾಪಕರಾಗಿ, ಶಾಸಕರಾಗಿ ಸೇವೆ ಮಾಡಿದ್ದು, ನಿಮ್ಮ ಪರವಾಗಿ ದುಡಿಯಲು ಚುನಾವಣೆಯಲ್ಲಿ ಗೆದ್ದು ನಿಮ್ಮ ಪರವಾಗಿ ಕೆಲಸ ಮಾಡಲಿದ್ದಾರೆ. ಎಂ. ಬಿ. ಪಾಟೀಲ ಅವರು ತಮಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಮಾಡಿರುವುದರಿಂದ ತಾವೆಲ್ಲರೂ ಅವರನ್ನು ನೀರಾವರಿ ಹರಿಕಾರ ಎಂದು ಗುಣಗಾನ ಮಾಡುತ್ತೀರಿ. ಪ್ರೊ. ರಾಜು ಆಲಗೂರ ಕೂಡ ಇದೇ ರೀತಿ ಜನಸೇವೆ ಮಾಡಲಿದ್ದು, ಎಲ್ಲರೂ ಸರಕಾರದ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸಿ ಶೇ. 80 ರಷ್ಟು ಮತದಾನ ದಾಖಲಾಗುವಂತೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮಾತನಾಡಿ, ಕಳೆದ 10 ವರ್ಷಗಳಿಂದ ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸಮರ್ಪಕವಾದ ಅನುದಾನ ನೀಡಿಲ್ಲ. ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿ ಹೋರಾಡಿ ನಂತರ ದೇಶದ ಅಮೂಲಾಗ್ರ ಬದಲಾವಣೆಗೆ ಶ್ರಮಿಸಿದೆ. ಸಂಸತ್ತಿನಲ್ಲಿ ನಿಮ್ಮೆಲ್ಲರ ಸಮಸ್ಯೆಗಳಿಗೆ ಧ್ವನಿಯಾಗಿ ಸ್ಪಂದಿಸಲು ಈ ಬಾರಿ ಅವಕಾಶ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಐಸಿಸಿ ವೀಕ್ಷಕ ಸಯ್ಯದ ಬುರಾನ, ವಿಧಾನ ಪರಿಷತ ಶಾಸಕ ಪ್ರಕಾಶ ರಾಠೋಡ ಮಾತನಾಡಿ, ದೇಶದಲ್ಲಿ ಸಂವಿಧಾನ ಅಫಾಯದಲ್ಲಿದ್ದು, ಅದನ್ನು ರಕ್ಷಿಸಿ ಅರಾಜಕತೆಯನ್ನು ತಪ್ಪಿಸಲು ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕಿದೆ. ಭಾವನಾತ್ಮಕ ವಿಚಾರಗಳಿಗೆ ಗಮನ ನೀಡದೇ ಅಭಿವೃದ್ಧಿ ಪರವಾಗಿರುವ ಕಾಂಗ್ರೆಸ್ ಗೆಲ್ಲಿಸಲು ಪ್ರೊ. ರಾಜು ಆಲಗೂರ ಅವರಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಜಿಲ್ಲಾ ಪಂಚಾಯಿತಿ ಬಿಜೆಪಿ ಮಾಜಿ ಸದಸ್ಯೆ ಶೋಭಾ ಹಲ್ಯಾಳ ಮತ್ತ ತಿಕೋಟಾ ತಾಲೂಕು ಬಿಜೆಪಿ ಕಾರ್ಯದರ್ಶಿ ಹಮೀದ ಬಾಗವಾನ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ನಾಗಠಾಣ ಶಾಸಕ ವಿಠ್ಠಲ ಧೋ. ಕಟಕದೊಂಡ, ಸಿಂದಗಿ ಶಾಸಕ ಅಶೋಕ ಮನಗೂಳಿ, ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ, ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮಾಜಿ ಶಾಸಕ ಶರಣಪ್ಪ ಸುಣಗಾರ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಕಾಂಗ್ರೆಸ್ ಅಬ್ದುಲ ಹಮೀದ್ ಮುಶ್ರಿಫ್, ಮುಖಂಡರಾದ ಸಿದ್ದಣ್ಣ ಸಕ್ರಿ, ಅರ್ಜುನ ರಾಠೋಡ, ಜಕ್ಕಪ್ಪ ಯಡವೆ, ಮಧುಕರ ಜಾಧವ, ಭಾಗೀರಥಿ ತೇಲಿ, ಯಾಕೂಬ ಜತ್ತಿ, ಪ್ರಭಾವತಿ ನಾಟಿಕಾರ, ಆರ್. ಜಿ. ಯರನಾಳ, ವಿ. ಎಸ್. ಪಾಟೀಲ, ಬಸವರಾಜ ಪಾಟೀಲ, ಟಪಾಲ್ ಎಂಜಿನಿಯರ್, ಶಂಕರ ಚವ್ಹಾಣ, ಸುಜಾತಾ ಕಳ್ಳಿಮನಿ, ಶ್ರೀಶೈಲಗೌಡ ಪಾಟೀಲ ನಿಡೋಣಿ, ಗೀತಾಂಜಲಿ ಪಾಟೀಲ, ಡಾ. ಮೈಶಾಳ, ಕಾಂತಾ ನಾಯಕ, ಎಂ. ಎಸ್. ಲೋಣಿ, ಸೋಮನಾಥ ಕಳ್ಳಿಮನಿ, ವಿ. ಎಸ್. ಪಾಟೀಲ, ಈರಗೊಂಡ ಬಿರಾದಾರ, ಜಾಕೀರ ಬಾಗವಾನ, ಡಿ. ಎಲ್. ಚವ್ಹಾಣ, ಪ್ರಶಾಂತ ಝಂಡೆ ಮುಂತಾದವರು ಉಪಸ್ಥಿತರಿದ್ದರು.

ಓಡೋಡಿ ಬಂದು ಧನ್ಯವಾದ ಅರ್ಪಿಸಿ ಮತ ಹಾಕುವೆ ಎಂದ ವೃದ್ಧೆ

ಸಚಿವ ಎಂ. ಬಿ. ಪಾಟೀಲ ಭಾಷಣ ಮಾಡುತ್ತಿದ್ದಾಗ ದಾಶ್ಯಾಳ ಗ್ರಾಮದ ಗಂಗವ್ವ ಗುರಸಿದ್ದಪ್ಪ ಬಿರಾದಾರ(73) ವೇದಿಕೆ ಬಳಿ ದೌಡಾಯಿಸಿ ಸಿಎಂ ಸಿದ್ಧರಾಮಯ್ಯ ಮತ್ತು ಸಚಿವ ಎಂ. ಬಿ. ಪಾಟೀಲ ಅವರಿಂದಾಗಿ ನನಗೆ ಪ್ರತಿ ತಿಂಗಳು ರೂ. 2000 ಬರುತ್ತಿದೆ. ಕರೆಂಟ್ ಫ್ರಿ ಸಿಗುತ್ತಿದೆ. ಬಸ್ಸಿನಲ್ಲಿ ಆರಾಮಾಗಿ ತಿರುಗಾಡುತ್ತಿದ್ದೇನೆ. ನನ್ನ ಜೀವನಕ್ಕೆ ಉಪಕಾರ ಮಾಡಿರುವ ಕಾಂಗ್ರೆಸ್ಸಿಗೆ ನಾನು ವೋಟು ಹಾಕುತ್ತೇನೆ. ಬೇರೆಯವರಿಗೂ ಕೈಗೆ ಮತ ಹಾಕುವಂತೆ ಹೇಳುತ್ತೇನೆ ಎಂದು ಹೇಳಿದ್ದು, ಸರಕಾರದ ಪಂಚ ಗ್ಯಾರಂಟಿ ಯೋಜನೆಯಗಳ ಸಂಪೂರ್ಣ ಯಶಸ್ಸಿಗೆ ಸಾಕ್ಷಿಯಾಗಿತ್ತು.

Leave a Reply

ಹೊಸ ಪೋಸ್ಟ್‌