ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರಿಂದ ದೇಶ ಸುರಕ್ಷಿತವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಆಗುತ್ತಿದೆ. ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ತಮ್ಮ ಸೇವೆ ಮಾಡಲು ಬೆಂಬಲಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಮನವಿ ಮಾಡಿದರು.
ವಿಜಯಪುರ ನಗರ ಮತಕ್ಷೇತ್ರ ವ್ಯಾಪ್ತಿಯ ವಾರ್ಡ 26ರ ವ್ಯಾಪ್ತಿಯ ದಿವಟಗೇರಿ ಗಲ್ಲಿಯಲ್ಲಿ ಬಿಜೆಪಿ ನಗರ ಮಂಡಲ ವತಿಯಿಂದ ವಿಜಯಪುರ ಲೋಕಸಭೆ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪ್ರಚಾರದ ಅಂಗವಾಗಿ ಆಯೋಜಿಸಲಾಗಿದ್ದ ಬಾವುರಾವ ದೇಶಪಾಂಡೆ ಮಹಾಶಕ್ತಿ ಕೇಂದ್ರದ ಸಭೆಯಲ್ಲಿ ಅವರು ಮಾತನಾಡಿದರು.
ನಿರೀಕ್ಷೆ ಮೀರಿ ಅನುದಾನ ತರುವ ಮೂಲಕ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಕಾಂಗ್ರೆಸ್ ಪಕ್ಷದವರು ಸೋಲುವ ಹತಾಸೆಯಿಂದ ಇಲ್ಲ ಸಲ್ಲದ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಹೇಳಿದರು.
ಯುವ ಮುಖಂಡ ಮತ್ತು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರಿಂದ ಇಂದು ಭಾರತ ಜಗತ್ತಿನಲ್ಲಿ ಶ್ರೇಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ನಮ್ಮ ಸುಕ್ಷತೆಗಾಗಿ ಮತ್ತೊಮ್ಮೆ ಮೋದಿಯವರ ಕೈ ಬಲ ಪಡಿಸುವ ಕೆಲಸ ಆಗಬೇಕಿದೆ. ಕಳೆದ ವಿಧಾನಸಭೆ ಚುನಾವಣೆಯಂತೆ 11 ಗಂಟೆಯೊಳಗಾಗಿ ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಿದರೆ, ಹೆಚ್ಚಿನ ಲೀಡ್ ಕೊಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಸದಸ್ಯ ಕಿರಣ ಪಾಟೀಲ ಮಾತನಾಡಿ, ದೇಶಕ್ಕೆ ಮೋದಿಯವರ ಆಡಳಿತ ಅವಶ್ಯವಿದೆ. ಸುರಕ್ಷತೆ ಜೊತೆಗೆ ಅಭಿವೃದ್ಧಿಗಾಗಿ ರಮೇಶ ಜಿಗಜಿಣಗಿ ಅವರನ್ನು ಗೆಲ್ಲಿಸುವ ಮೂಲಕ ಪ್ರಧಾನಿ ಆಯ್ಕೆಗೆ ಕೈ ಎತ್ತಿಸೋಣ ಎಂದು ಹೇಳಿದರು.
ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೈಚಬಾಳ, ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ಮುಖಂಡರಾದ ಕಾಸುಗೌಡ ಬಿರಾದಾರ, ವಿವೇಕಾನಂದ ಡಬ್ಬಿ, ಪ್ರಕಾಶ ಅಕ್ಕಲಕೋಟ, ಲಕ್ಷ್ಮಿ ಕನ್ನೋಳ್ಳಿ, ಮಹಾನಗರ ಪಾಲಿಕೆ ಸದಸ್ಯ ರಾಹುಲ ಜಾಧವ, ಪಾಪುಸಿಂಗ್ ರಜಪೂತ ಮುಂತಾದವರು ಉಪಸ್ಥಿತರಿದ್ದರು.