ವಿಜಯಪುರ: ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ ಗಾಂಧಿ ಅವರು ಏ. 26 ರಂದು ಶುಕ್ರವಾತ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಇಂದು ಗುರುವಾರ ಬಿ.ಎಲ್.ಡಿ.ಇ ನ್ಯೂ ಕ್ಯಾಂಪಸ್ ಗೆ ಭೇಟಿ ನೀಡಿದರು.
ಸಂಸದ ಮತ್ತು ಎಐಸಿಸಿ ರಾಷ್ಟ್ರೀಯ ಮುಖಂಡ ರಾಹುಲ ಗಾಂಧಿ ಅವರು ವಿಜಯಪುರ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಮತಯಾಚನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯಲಿರುವ ಸ್ಥಳದಲ್ಲಿ ಕೈಗೊಳ್ಳಲಾಗುತ್ತಿರುವ ಸಿದ್ಧತೆಗಳನ್ನು ಸಚಿವರು ಪರಿಶೀಲನೆ ನಡೆಸಿದರು. ಬಿ.ಎಲ್.ಡಿ.ಇ ನ್ಯೂ ಕ್ಯಾಂಪಸ್ ನಲ್ಲಿ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ವಿಶಾಲವಾದ ಪೆಂಡಾಲ್ ಹಾಕಲಾಗಿದೆ. ಈ ವೇದಿಕೆ ಹಾಗೂ ಸಾರ್ವಜನಿಕರು ಆಸೀನರಾಗುವ ಸ್ಥಳದ ವೀಕ್ಷಣೆ ನಡೆಸಿದ ಸಚಿವರು ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಲು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ರಾಹುಲ ಗಾಂಧಿ ಪ್ರಚಾರ ಸಭೆಗೆ ಆಗಮಿಸಲಿದ್ದಾರೆ. ಸಿಎಂ ಎಸ್. ಸಿದ್ಧರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪಸಿಂಗ್ ಸುರ್ಜೆವಾಲಾ ಪಾಲ್ಗೊಳ್ಳುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸುವುದು ಇನ್ನೂ ಖಚಿತವಾಗಿಲ್ಲ. ಅವರು ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಪ್ರಚಾರದಲ್ಲಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕರು ದೇಶದ ಬೇರೆ ಬೇರೆ ಕಡೆ ಪ್ರತ್ಯೇಕವಾಗಿ ಪ್ರಚಾರ ನಡೆಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಸಚಿವರು, ಶಾಸಕರು, ಮಾಜಿ ಶಾಸಕರು, ಕಾಂಗ್ರೆಸ್ಸಿನ ಎಲ್ಲ ಮುಖಂಡರು ಉಪಸ್ಥಿತರಿರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಎಲ್ಲ ಊರುಗಳಿಂದ 50 ಸಾವಿರಕ್ಕೂ ಹೆಚ್ಚು ಜನ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಲಿದ್ದಾರೆ. ಎಲ್ಲರಿಗೂ ಆಸನದ ವ್ಯವಸ್ಥೆ ಮಾಡಲಾಗಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ತಿಳಿಸಿದರು.
2018ರ ಚುನಾವಣೆ ಸಂದರ್ಭದಲ್ಲಿ ಒಂದೇ ದಿನ ಸೋನಿಯಾ ಗಾಂಧಿ ಮತ್ತು ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆದಿದ್ದವು. ಅಂದು ಪ್ರದಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದ ಎರಡು ಪಟ್ಟು ಜನ ಸೋನಿಯಾ ಗಾಂಧಿಯವರ ಕಾರ್ಯಕ್ರಮಕ್ಕೆ ಬಂದಿದ್ದು ಇಂದಿಗೂ ಜನರು ಹೋಲಿಕೆ ಮಾಡಿ ಚರ್ಚಿಸುತ್ತಿರುತ್ತಾರೆ. ಶುಕ್ರವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಹುಲ ಗಾಂಧಿ ಮತ್ತು ಸಿಎಂ ಎಸ್. ಸಿದ್ಧರಾಮಯ್ಯ ಕಾಂಗ್ರೆಸ್ ವಿಚಾರಗಳನ್ನು ಜನರೊಂದಿಗೆ ಹಂಚಿಕೊಳ್ಳಲಿದ್ದಾರೆ. ಜನರೂ ಕೂಡ ಈ ಕಾರ್ಯಕ್ರಮಕ್ಕೆ ಉತ್ಸುಕತೆಯಿಂದ ಕಾಯುತ್ತಿದ್ದಾರೆ. ಬಹಳ ಸಂಖ್ಯೆಯಲ್ಲಿ ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ. ಎಸ್. ಲೋಣಿ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರಿಫ್, ಡಾ. ಬಾಬುರಾಜೇಂದ್ರ ನಾಯಕ, ಫಯಾಜ್ ಕಲಾದಗಿ ಮುಂತಾದವರು ಉಪಸ್ಥಿತರಿದ್ದರು.