ವಿಜಯಪುರ: ಕೇಂದ್ರದಲ್ಲಿ ಇಂಡಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರೈತರು, ಮಹಿಳೆಯರು ಮತ್ತು ಯುವಕರಿಗೆ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳು ಕಟಾ ಕಟ್.. ಕಟಾ ಕಟ್.. ಕಟಾ ಕಟ್. ಎಂಬಂತೆ ಹಣ ಜಮೆಯಾಗಲಿದೆ ಎಂದು ಸಂಸದ ಮತ್ತು ಎಐಸಿಸಿ ರಾಷ್ಟ್ರೀಯ ಮುಖಂಡ ರಾಹುಲ ಗಾಂಧಿ ಹೇಳಿದ್ದಾರೆ.
ವಿಜಯಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ದೇಶದಲ್ಲಿರುವ ಬಡವರ ಪಟ್ಟಿ ತಯಾರಿಸಿ ಪ್ರತಿಯೊಂದು ಕುಟುಂಬದ ಓರ್ವ ಮಹಿಳೆಗೆ ಪ್ರತಿ ವರ್ಷ ರೂ. 1 ಲಕ್ಷ ಹಣ ನೀಡುತ್ತೇವೆ. ಕರ್ನಾಟಕ ಸರಕಾರ ಪ್ರತಿ ತಿಂಗಳು ತಲಾ ರೂ. 2000 ದಂತೆ ಹಣ ಸೇರಿದರೆ ಪ್ರತಿಯೊಬ್ಬ ಮಹಿಳೆಯರ ಪಾಲಿಗೆ ವರ್ಷಕ್ಕೆ ರೂ. 1.24 ಲಕ್ಷ ಹಣ ಸಿಗಲಿದೆ. ಪ್ರತಿ ತಿಂಗಳು ಕಟಾ ಕಟ್.. ಕಟಾ ಕಟ್.. ಕಟಾ ಕಟ್… ಎಂದು ಪ್ರತಿ ತಿಂಗಳು ರೂ. 10500 ಹಣ ಅವರ ಖಾತೆಗಳಿಗೆ ನೇರವಾಗಿ ಜಮೆಯಾಗಲಿದೆ. ಪ್ರತಿಯೊಂದು ಬಡ ಕುಟುಂಬಗಳು ಬಡತನ ರೇಖೆಗಿಂತ ಮೇಲೆ ಬರುವವರೆಗೂ ಈ ಹಣ ಜಮೆಯಾಗುತ್ತಲೇ ಇರುತ್ತದೆ ಎಂದು ಅವರು ತಿಳಿಸಿದರು.
ಮೋದಿ ಅವರು ಶ್ರೀಮಂತರ ಪರವಾಗಿದ್ದು ಬಡವರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನಿರುದ್ಯೋಗಿಗಳಿಗಾಗಿ ಏನೂ ಕೆಲಸ ಮಾಡಿಲ್ಲ. ಆದರೆ, ನಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮಾಡಿದ್ದಾರೆ. ಬಡ ಯುವಕರಿಗೆ ಅಪ್ರೆಂಟಶಿಪ್ ರೂಪದಲ್ಲಿ ಪ್ರತಿ ತಿಂಗಳು ರೂ. 8500 ಹಣ ನೀಡಲಾಗುವುದು. ಈ ಯೋಜನೆ ಜಾರಿಯಾದರೆ ಇದು ಜಗತ್ತಿನ ಮೊದಲ ಸರಕಾರಿ ನಿರ್ಧಾರವಾಗಲಿದೆ. ಅಲ್ಲದೇ, ಬಡ ಯುವಕರಿಗೆ ಉದ್ಯೋಗ ನೀಡಲು ಖಾಸಗಿ, ಸರಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಉದ್ದಿಮೆಗಳಲ್ಲಿ ಯುವಕರಿಗೆ ಉದ್ಯೋಗ ನೀಡುತ್ತದೆ. ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ ಪಡೆದವರಿಗೆ ಎಲ್ಲರಿಗೂ ಸರಕಾರ ನರೇಗಾ ಮಾದರಿಯಲ್ಲಿ ಒಂದು ವರ್ಷ ಉದ್ಯೋಗ ನೀಡುತ್ತೇವೆ ಅವರು ಭರವಸೆ ನೀಡಿದರು.
ನಾವು ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುತ್ತೇವೆ. ಆಶಾ ಮತ್ತು ಆಂಗನವಾಡಿ ಕಾರ್ಯಕರ್ತೆಯರಿಗೆ ನರೇಗಾ ಮಾದರಿಯಲ್ಲಿ ಸಂಬಳವನ್ನು ಎರಡು ಪಟ್ಟು ಹೆಚ್ಚಿಸುತ್ತೇವೆ. ಅಗ್ನಿಪಥ ಯೋಜನೆ ರದ್ದು ಮಾಡಿ ಸೇನೆ ಮತ್ತು ಸೈನಿಕರ ಮನೋಸ್ಥೈರ್ಯವನ್ನು ಹೆಚ್ಚಿಸುತ್ತೇವೆ. ಮೋದಿಯವರು ಅವೈಜ್ಞಾನಿಕವಾಗಿ ಜಾರಿಗೆ ತಂದಿರುವ ಜಿ ಎಸ್ ಟಿ ವ್ಯವಸ್ಥೆಯನ್ನು ರದ್ದು ಮಾಡುತ್ತವೆ. ಕರ್ನಾಟಕದ ಜನ ರೂ 100 ಹಣ ಪಾವತಿಸಿದರೆ, ಅದರಲ್ಲಿ ಕೇವಲ ರೂ. 13 ಮಾತ್ರ ವಾಪಸ್ ಬರುತ್ತಿದೆ. ತೆರಿಗೆ ವಿಚಾರದಲ್ಲಿ ರಾಜ್ಯದ ಜನರಿಗೆ ಮೋದಿ ಅನ್ಯಾಯ ಮಾಡುತ್ತಿದ್ದು, ಇದನ್ನು ನಾವು ಸರಿ ಮಾಡುತ್ತೇವೆ ಎಂದು ಅವರು ಹೇಳಿದರು.
ಮೊದಲ ಸುತ್ತಿನ ಮತದಾನ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಗಾಬರಿಯಾಗಿ್ದದಾರೆ. ಇನ್ನು ಕೆಲವೇ ದಿನಗಳಲ್ಲಿ ವೇದಿಕೆಯ ಮೇಲೆ ಕಣ್ಣೀರು ಹಾಕಲಿದ್ದಾರೆ. ಪಾಕಿಸ್ತಾನ ಮತ್ತು ಚೀನಾ ಬಗ್ಗೆ ಮಾತನಾಡುತ್ತಾರೆ. ಇಲ್ಲದ ವಿಚಾರಗಳನ್ನು ಮಾತನಾಡುತ್ತಾರೆ. ದೇಶದಲ್ಲಿ ಬಡತನ ನಿರುದ್ಯೋಗ, ಬೆಲೆ ಏರಿಕೆ ಸವಾಲುಗಳಿವೆ. ಇವೆಲ್ಲವುದಕ್ಕೆ ಕಾಂಗ್ರೆಸ್ ಪಕ್ಷ ಪರಿಹಾರ ನೀಡಲಿದೆ. ಮೋದಿ ಕಳೆದ 10 ವರ್ಷಗಳಲ್ಲಿ ಕೇವಲ ಬಡವರ ಹಣ ಕಿತ್ತುಕೊಂಡು ಕೆಲವರನ್ನು ಮಾತ್ರ ಶ್ರೀಮಂತ ಮಾಡಿದ್ದಾರೆ. ಬಡವರು ಮತ್ತು ಅಹಿಂದ ವರ್ಗ, ಆದಿವಾಸಿಗಳಿಗೆ ಏನೂ ಮಾಡಿಲ್ಲ. ಮೋದಿ ಅವರು ಶ್ರೀಮಂತರಿಗೆ ನೀಡಿರುವ ಹಣವನ್ನು ನಾವು ಬಡವರಿಗೆ ನೀಡುತ್ತೇವೆ ಎಂದು ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಸಂವಿಧಾನ ರದ್ದುಪಡಿಸುವ ಪ್ರಯತ್ನ ಮಾಡುತ್ತಿದ್ದರೆ, ಅವರ ಸಂಸದರು ಗೆದ್ದರೆ ಸಂವಿಧಾನ ಬದಲಾಯಿಸುತ್ತೇವೆ ಎಂದು ಬಹಿರಂಗವಾಗಿಯೇ ಮಾತನಾಡುತ್ತಾರೆ ಆದರೆ ಇಂಡಿ ಮೈತ್ರಿಕೂಟ ಕಾಂಗ್ರೆಸ್ ನೇತೃತ್ವದಲ್ಲಿ ಸಂವಿಧಾನ ಮತ್ತು ಬಸವಣ್ಣನವರ ವಿಚಾರಧಾರೆಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಈಗ ನಡೆಯುತ್ತಿರುವ ಚುನಾವಣೆ ಈ ಹಿಂದಿನಂತೆ ಸಾಮಾನ್ಯ ಚುನಾವಣೆಯಲ್ಲ. ಭಾರತರ ಪ್ರಜಾಪ್ರಭುತ್ವದ ಉಳಿವಿನ ಚುನಾವಣೆಯಾಗಿದೆ. ಆದಿವಾಸಿಗಳ ಬಳಿ ಆಧಿಕಾರ, ಧ್ವನಿ ಇದೆ ಎಂದರೆ ಅದಕ್ಕೆ ನಮ್ಮ ಸಂವಿಧಾನ ಕಾರಣ. ಮೋದಿ ಅವರು 10 ವರ್ಷಗಳಲ್ಲಿ ಕೇವಲ 20 ರಿಂದ 25 ಜನರನ್ನು ಕೋಟ್ಯಧಿಪತಿಯನ್ನಾಗಿ ಮಾಡಿದ್ದಾರೆ. ಇಡೀ ದೇಶದ ಶೇ. 70ರಷ್ಟು ಜನರ ಆಸ್ತಿ ಆ 25 ಜನ ಕೋಟ್ಯಧಿಪತಿಗಳ ಬಳಿ ಇದೆ. ದೇಶದ ವಿಮಾನ ನಿಲ್ದಾಣಗಳು, ಬಂದರುಗಳು, ಮೂಲಸೌಕರ್ಯ, ರಕ್ಷಣಾ ಕ್ಷೇತ್ರ, ಸೋಲಾರ, ಪವನ ವಿದ್ಯುತ್ ಶಕ್ತಿ ಎಲ್ಲವನ್ನು ನೀಡಿದ್ದಾರೆ. ಆದರೆ ಬಡವರಿಗೆ ಏನೂ ಸಿಕ್ಕಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಕಾರ್ಯಕರ್ತರು ಹೆಬ್ಬುಲಿ ಇದ್ದಂತೆ. ಎಲ್ಲರೂ ಬಡವರ, ದೀನದಲಿತರ, ದುರ್ಬಲ ಸೇವೆ ಮಾಡುತ್ತಿದ್ದೀರಿ. ಪಕ್ಷದ ವಿಚಾರಗಳನ್ನು ಜನರಿಗೆ ಮುಟ್ಟಿಸಬೇಕು ಎಂದು ಹೇಳಿದರು.
ಇದಕ್ಕೂ ಮೊದಲು ರಾಹುಲ ಗಾಂಧಿ ಅವರಿಗೆ ಸಚಿವ ಎಂ. ಬಿ. ಪಾಟೀಲ ದ್ರಾಕ್ಷಿ ಹಾರ ಹಾಕಿ
ಈ ಸಂದರ್ಭದಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲಾ, ಸಚಿವರಾದ ಎಂ. ಬಿ. ಪಾಟೀಲ, ಶಿವಾನಂದ ಪಾಟೀಲ, ಶಾಸಕರಾದ ಸಿ. ಎಸ್. ನಾಡಗೌಡ, ವಿಠ್ಠಲ ಕಟಕದೊಂಡ, ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ, ಎಐಸಿಸಿ ವೀಕ್ಷಕ ಸಯ್ಯದ, ಮಾಜಿ ಶಾಸಕ ಶರಣಪ್ಪ ಸುಣಗಾರ, ಮುಖಂಡರಾದ ಎಂ. ಎಸ್. ಲೋಣಿ, ದಿನೇಶ ಹಳ್ಳಿ, ಅಬ್ದುಲ್ ಹಮೀದ್ ಮುಶ್ರಿಫ್, ವಿದ್ಯಾರಾಣಿ ತುಂಗಳ, ಡಾ. ಮಹಾಂತೇಶ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.