ವಿಜಯಪುರ: ರಕ್ತಬಸಿದು ಪಕ್ಷ ಕಟ್ಟಿದ್ದೇನೆ. ಆದರೆ, ನನ್ನ ಡಿಸಿಎಂ ಸ್ಥಾನ ಕಿತ್ತುಕೊಂಡರು ಎಂದು ಬೆಳಗಾವಿ ಜಿಲ್ಲೆಯ ಅಥಣಿ ಶಾಸಕ ಲಕ್ಷ್ಮಣ ಸವದಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದಲ್ಲಿ ಲಕ್ಷ್ಣಣ ಸವದಿಗೆ ಯಾವುದೇ ಸ್ಥಾನಮಾನ ನೀಡಿಲ್ಲ ಎಂಬ ಆರೋಪದ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಅಂಥದ್ದೇನೂ ಇಲ್ಲ. ನಾನು ಬಿಜೆಪಿ ಸೇರಿದಾಗ ಅಥಣಿ ಮತ್ತು ಕಾಗವಾಡ ಸುತ್ತಮುತ್ತ ಗ್ರಾಮ ಪಂಚಾಯಿತಿಯಿಂದ ಹಿಡಿದು ಎಲ್ಲಿಯೂ ಬಿಜೆಪಿಯ ಜನಪ್ರತಿನಿಧಿ ಇರಲಿಲ್ಲ. ನಾನು ರಕ್ತಬಸಿದು ಪಕ್ಷ ಕಟ್ಟಿದ್ದೇನೆ. ಸರಕಾರ ಅಧಿಕಾರಕ್ಕೆ ಬಂದಾಗ ನಂತರ ನನ್ನನ್ನು ಡಿಸಿಎಂ ಮಾಡಿ ಮತ್ತೆ ಆ ಸ್ಥಾನವನ್ನು ಕಿತ್ತುಕೊಂಡರು. ನನ್ನ ಗೌರವದ ಬಗ್ಗೆ ಬಿಜೆಪಿಯವರು ಚಿಂತೆ ಮಾಡಬೇಕಿಲ್ಲ. ಲಕ್ಷ್ಮಣ ಸವದಿಯನ್ನು ಯಾಕೆ ಬಿಟ್ಟುಕೊಟ್ಟೇವು ಎಂದು ಬಿಜೆಪಿ ಮುಖಂಡರಿಗೆ ಗೊತ್ತಾಗಿದೆ. ಲೋಕಸಭಾ ಚುನಾವಣೆ ಬಳಿಕ ಇನ್ನೂ ಗೊತ್ತಾಗಲಿದೆ ಎಂದು ಅವರು ಹೇಳಿದರು.
ವಿಜಯಪುರ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಮತಯಾಚನೆ ಮಾಡಲಿದ್ದೇನೆ. ಈ ಬಾರಿ ಸೂರ್ಯಚಂದ್ರರು ಎಷ್ಟು ಸತ್ಯವೊ ಅಷ್ಟೆ ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಐದು ಗ್ಯಾರಂಟಿ ಭರವಸೆಗಳನ್ನು ಸಿದ್ದರಾಮಯ್ಯ ಮತ್ತು ಡಿಕೆಶಿ ಜನರಿಗೆ ತಲುಪಿಸೋ ಕೆಲಸ ಮಾಡಿದ್ದಾರೆ. ಜನರು ಭರವಸೆಯಿಂದ ಮತ ಹಾಕಿ ಅಧಿಕಾರ ನೀಡಿದ್ದಾರೆ. ಸರಕಾರ ಅಧಿಕಾರಕ್ಕೆ ಬಂದ ಬಳಿಕ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಬಡವರಿಗೆ, ಮಧ್ಯಮ ವರ್ಗದ ಜನರಿಗೆ ಗ್ಯಾರಂಟಿ ಯೋಜನೆಗಳು ಅನಕೂಲವಾಗಿವೆ. ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ ಯೋಜನೆ ಅನ್ನಭಾಗ್ಯ ಯವಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ಅನ್ನಭಾಗ್ಯ ಯೋಜನೆಗೆ ಕೆಟ್ಟ ಹೆಸರು ತರಲು ಕೇಂದ್ರ ಅಕ್ಕಿ ನೀಡಲಿಲ್ಲ. ಅದರ ಬದಲಾಗಿ ನಾವು ಹಣ ನೀಡಿದ್ದೇವೆ. ಶಕ್ತಿಯೋಜನೆಯಿಂದ ಮಹಿಳೆಯರಿಗೆ ಅನಕೂಲವಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ 20 ಕ್ಕೂ ಅಧಿಕ ಸ್ಥಾನ ಪಡೆಯುತ್ತೇವೆ ಎಂದು ಅವರು ಹೇಳಿದರು.
ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಕೆಲಸ ಮಾಡಿಲ್ಲ. ಗ್ರಾಮೀಣ ಭಾಗದ ಕೆಲಸ ಮಾಡಿಲ್ಲ. 10 ವರ್ಷದಲ್ಲಿ ಮೋದಿ ಯಾವುದೇ ಭರವಸೆ ಈಡೇರಿಸಿಲ್ಲ. ಗುಜರಾತ ಮಾಡೆಲ್ ದೇಶದಲ್ಲಿ ತರುತ್ತೇವೆ ಎಂದಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ನದಿ ಜೋಡಣೆ ಮಾಡುವುದಾಗಿ ಮೋದಿ ಹೇಳಿದ್ದರು. ಆದರೆ ನದಿ ಜೋಡಣೆ ಮಾಡಿಲ್ಲ. ನಮೋ ಬ್ರಿಗೇಡ್ ಕಟ್ಟಿಕೊಂಡು ಚಕ್ರವರ್ತಿ ಸೂಲಿಬೆಲೆ ಭಾಷಣ ಮಾಡುತ್ತಿದ್ದರು. ದೇಶದ ರಾಜಕಾರಣಿಗಳು ಶ್ರೀಮಂತರು ವಿದೇಶದಲ್ಲಿ ಹಣ ಇಟ್ಟಿದ್ದಾರೆ. ದೇಶದ ಎಲ್ಲ ಸಾಲ ತುಂಬಿ ದೇಶದ ರಸ್ತೆಗಳಿಗೆ ಚಿನ್ನದ ತಗಡು ಹಾಕಬಹುದು ಎನ್ನುತ್ತಿದ್ದರು. ಅದೆಲ್ಲಾ ಎಲ್ಲಿ? ಎಂದು ಲಕ್ಷ್ಣಣ ಸವದಿ ಪ್ರಶ್ನಿಸಿದರು.
ಡಾಲರ್ ದರ ರೂಪಾಯಿ ಮೌಲ್ಯ ಏರಿಕೆ ಮಾಡುವುದಾಗಿ ಹೇಳಿದ್ದರು. ಅದರೆ ಡಾಲರ್ ಎದುರು ರೂಪಾಯಿ ಮೌಲ್ಯ ಏನಾಗಿದೆ? ಮೋದಿ ಭರವಸೆ ಈಡೇರಿಸಿಲ್ಲ. ಭಾವನಾತ್ಮಕ ಮಾತುಗಳಿಂದ ಮೋದಿ ಮತ ಪಡೆದಿದ್ದಾರೆ. ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಭರವಸೆ ಇದೆ. ಉತ್ತರ ಕರ್ನಾಟಕ ಭಾಗದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ನಮ್ಮ ಅಭ್ಯರ್ಥಿ ರಾಜೂ ಆಲಗೂರ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಲಿದ್ದಾರೆ ಎಂದು ಅವರು ಹೇಳಿದರು.
ರಾಜ್ಯದಿಂದ ಆಯ್ಕೆಯಾಗಿದ್ದ ಬಿಜೆಪಿಯ 25 ಜನ ಸಂಸದರು ರಾಜ್ಯದ ಪರ ದ್ವನಿ ಎತ್ತಲಿಲ್ಲ. ಕಳಸಾ ಬಂಡೂರಿ ಮಹಾದಾಯಿ ಯೋಜನೆ ಬಗ್ಗೆ ನಿರ್ಲಕ್ಷ್ಯ ಮಾಡಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮಹಾದಾಯಿ ಕಳಸಾ ಬಂಡೂರಿ ಯೋಜನೆ ಜಾರಿ ಮಾಡಿಲ್ಲ. ಇದರಿಂದ ರಾಜ್ಯದ ಕಲ್ಯಾಣ ಕರ್ನಾಟಕ ಕಿತ್ತೂರು ಕರ್ನಾಟಕ ಭಾಗ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸ್ಥಾನ ಪಡೆಯುತ್ತದೆ ಎಂದು ಅವರು ತಿಳಿಸಿದರು.
ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕಾಂಗ್ರೆಸ್ ನೀಡಲಿದೆ ಎಂದು ಮೋದಿ ಅವರ ಆರೋಪ ವಿಚಾರ ಕುರಿತು ಕೇಳಲಾದ ಪ್ರಶ್ನಗೆ ಉತ್ತರಿಸಿದ ಅವರು, ಬಿಜೆಪಿಯಲ್ಲಿ ನಾನು 25 ವರ್ಷಗಳಿಂದ ಇದ್ದೆ. ಅಲ್ಲಿನ ಆಳ ಅಗಲ ಬಲ್ಲೆ. ಮೋದಿ ಭಾಷಣವನ್ನು ಸೂಕ್ಷ್ಮವಾಗಿ ಕೇಳಿದ್ದೇನೆ. ಮೋದಿ ಭಾವನಾತ್ಮಕವಾಗಿ ಭಾಷಣ ಮಾಡಿ ಆರೋಪ ಮಾಡಿದ್ದಾರೆ ಎಂದು ಹೇಳಿದರು.
ಬರಗಾಲ ಪರಿಹಾರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೊಟ್ಟಿದ್ದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾವು ಭಿಕ್ಷೆ ಕೇಳುತ್ತಿಲ್ಲ. ನಮ್ಮ ಹಣ ನಾವು ಕೇಳುತ್ತಿದ್ದೇವೆ. ತೆರಿಗೆ ಕಟ್ಟಿದ ಹಣ ಕೇಳಿದ್ದೇವೆ. ಬರಗಾಲ ಪರಿಹಾರ ಹಣ ಸುಪ್ರೀಂ ಕೋರ್ಟ್ ಮೊರೆ ಹೋಗಿ ಪಡೆಯುವಂತಾಯಿತು ಎಂದು ಹೇಳಿದರು.
ರಾಜ್ಯದಲ್ಲಿ ಶಾಸಕರಿಗೆ ಅಭಿವೃದ್ದಿಗೆ ಹಣದ ಸಮಸ್ಯೆ ಇಲ್ಲ. ಹಿಂದಿನ ಸರಕಾರ ಮಾಡಿದ ತಪ್ಪಿನಿಂದ ಸಮಸ್ಯೆಯಾಗಿದೆ. ನಮ್ಮ ಸರಕಾರದಲ್ಲಿ ಹಣಕಾಸಿನ ಸಮಸ್ಯೆ ಇಲ್ಲ ಎಂದು ಲಕ್ಷ್ಣಣ ಸವದಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ. ಎಸ್. ಲೋಣಿ, ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ಮುಂತಾದವರು ಉಪಸ್ಥಿತರಿದ್ದರು.