ಲೋಕಸಭೆ ಚುನಾವಣೆ ಬಗ್ಗೆ ಜನ ಜಾಗೃತರಾಗಿದ್ದಾರೆ- ಸುನೀಲಗೌಡ ಪಾಟೀಲ

ವಿಜಯಪುರ: ಲೋಕಸಭೆ ಚುನಾವಣೆ ಬಗ್ಗೆ ಜನ ಜಾಗೃತರಾಗಿದ್ದು, ಇದು ಒಳ್ಳೆಯ ಬೆಳವಣಿಗೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.

ನಗರದ ಸಿಕ್ಯಾಬ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಚುನಾವಣೆ ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾ. ಪಂ., ವಿಧಾನಸಭೆಯಂತೆ ಲೋಕಸಭೆ ಕ್ಷೇತ್ರವೂ ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.

ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಸಂಸದರ ಪಾತ್ರವೂ ಮುಖ್ಯವಾಗಿದೆ.  ಜಿಲ್ಲೆಯಲ್ಲಿ ನೀರಾವರಿ ಯೋಜನೆಯಿಂದ ಬಹಳ ಅಭಿವೃದ್ಧಿಯಾಗಿದೆ.  ರಾಜ್ಯ ಸರಕಾರ, ಸಚಿವ ಎಂ. ಬಿ. ಪಾಟೀಲ ಅವರ ಕಳಕಳಿಯಿಂದ ಇದು ಸಾಧ್ಯವಾಗಿದೆ.  ಹಾಗೆಯೇ ಸದ್ಯದ ಚುನಾವಣೆಯಲ್ಲಿ ಉತ್ತಮ ಸಂಸದ ಆಯ್ಕೆಯಾದರೆ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸಲು ಅವರು ದನಿಯಾಗುತ್ತಾರೆ.  ರಾಷ್ಟ್ರೀಯ ಯೋಜನೆಯಾಗಿ ಯುಕೆಪಿಯನ್ನು ಘೋಷಿಸಿದರೆ ಈಗಿನಕ್ಕಿಂತ ಹತ್ತು ಪಟ್ಟು ನೀರಾವರಿ ಆಗಲಿದೆ.  ಈ ಕೆಲಸವನ್ನು ಮೂರು ಸಲ ಸಂಸದರಾಗಿದ್ದ ರಮೇಶ ಜಿಗಜಿಣಗಿ ಅವರು ಕೇಂದ್ರದಲ್ಲಿ ಮಾಡಲಿಲ್ಲ.  ಪ್ರೊ. ರಾಜು ಆಲಗೂರ ಅವರನ್ನು ಆರಿಸಿದರೆ ಅವರು ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಲಿದ್ದಾರೆ ಎಂದು ಹೇಳಿದರು.

ವಿಜಯಪುರ ನಗರದ ಸಿಕ್ಯಾಬ್ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮಾತನಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮಾತನಾಡಿ, ಪ್ರಾಧ್ಯಾಪಕನಾಗಿ ನಾನು ಹಲವು ವರ್ಷಗಳ ಕಾಲ ದುಡಿದ್ದೇನೆ.  ಶಿಕ್ಷಣ ಕ್ಷೇತ್ರದ ಅನುಭವ ನನಗಿದೆ.  ಕ್ಷೇತ್ರದ ಅಭಿವೃದ್ಧಿ ಜೊತೆಗೆ ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ಹೇಳಿದರು.

ಸಿಕ್ಯಾಬ್ ಸಂಸ್ಥೆಯ ನಿರ್ದೇಶಕ ಸಲಾವುದ್ದೀನ್ ಪ್ರಾಸ್ತಾವಿಕ ಮಾತನಾಡಿ, ಬಸವಣ್ಣನವರ ನಾಡಿನ ನಾವು ಸಮಾನತೆ ಕಲಿತವರು.  ಈ ನೆಲ ಸೌಹಾರ್ದತೆಯಿಂದ ಕೂಡಿದೆ.  ನ್ಯಾಯವಿದ್ದಲ್ಲಿ ಶಾಂತಿ ಇದೆ.  ಬಸವ ತತ್ವಗಳನ್ನು ಎತ್ತಿ ಹಿಡಿಯಬೇಕು.  ನಾವೆಲ್ಲ ಲೋಕಸಭೆ ಚುನಾವಣೆಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮಾಜಿ ಶಾಸಕ ಎಂ. ಪಿ. ಕುಮಾರಸ್ವಾಮಿ ಮಾತನಾಡಿ, ಪ್ರೊ. ರಾಜು ಆಲಗೂರ ಪುಣ್ಯ ಕೋಟಿ ಇದ್ದಂತೆ.  ಕಾಂಗ್ರೆಸ್ ಅಂದರೆ ಚಿಂತನೆ, ಹೋರಾಟ. ದೇಶಕ್ಕೆ ಏನೂ ಕೊಡದ ಜನರು ದೇಶ ಪ್ರೇಮ ಕಲಿಸಿಕೊಡುತ್ತಿದ್ದಾರೆ. ಕಾಂಗ್ರೆಸ್‌ ಬಗ್ಗೆ ತಪ್ಪು ಅಭಿಪ್ರಾಯ ಬಿತ್ತಲಾಗಿದೆ. ಆದರೆ ದೇಶ ಕಟ್ಟಿದ್ದು ಕಾಂಗ್ರೆಸ್. ರಾಜು ಆಲಗೂರ್ ಪುಣ್ಯಕೋಟಿ ಇದ್ದಂಗೆ. ಅವರು ನಿಮ್ಮ ಕೈಗೆ ಸರಳವಾಗಿ ಸಿಗುತ್ತಾರೆ. ಇವರು ಗೆಲ್ಲಬೇಕು, ಯಾವಾಗಲೂ ನಗು ನಗುತ್ತ ನಿಮ್ಮ ಕೆಲಸಗಳನ್ನು ಮಾಡಿಕೊಡಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎ. ಎಸ್. ಪಾಟೀಲ, ರಾಜಶೇಖರ ಯಡಹಳ್ಳಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌