ವಿಜಯಪುರ: ನಗರದಲ್ಲಿರುವ ಗೋಳಗುಮ್ಮಟವನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲು ಶತ ಪ್ರಯತ್ನ ಮಾಡುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಹೇಳಿದರು.
ನಗರದಲ್ಲಿ ನಡೆದ ಆದಿ ಬಣಜಿಗ ಸಮುದಾಯದ ಮುಖಂಡರ ಸಭೆಯಲ್ಲಿ ಅವರು ಮತಯಾಚಿಸಿ ಮಾತನಾಡಿದರು.
ನೀರಾವರಿಗೆ ಇನ್ನೂ ಹೆಚ್ಚಿನ ಒತ್ತು ನೀಡಿ ಆಲಮಟ್ಟಿ ಎತ್ತರವನ್ನು ಹೆಚ್ಚಿಸಲು ಸಂಸತ್ತಿನಲ್ಲಿ ದನಿ ಎತ್ತಿ ಸಾಕಾರಗೊಳಿಸುವೆ. ನನಗೊಂದು ಅವಕಾಶ ನೀಡಿದರೆ ನಿಮ್ಮೆಲ್ಲರ ಹಿತ ಕಾಪಾಡಲು ಶ್ರಮಿಸುತ್ತೇನೆ. ವ್ಯಾಪಾರ ವಹಿವಾಟು ಹೆಚ್ಚಿಸಲು, ರೈತರಿಗೆ ಯೋಗ್ಯ ಬೆಲೆ, ಜೀವನ ಮಟ್ಟ ಸುಧಾರಣೆ, ರೈಲು-ವಿಮಾನಯಾನ ಮೇಲ್ದರ್ಜೆಯಂಥ ಅನೇಕ ಯೋಜನೆಗಳನ್ನು ಜಿಲ್ಲೆಗಾಗಿ ಹಾಕಿಕೊಂಡಿರುವೆ ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಮಾತನಾಡಿ, ಬಿಜೆಪಿ ಭ್ರಮೆಗಳಿಂದ ನಾವು ಹೊರಗೆ ಬರಬೇಕು. ಮೋದಿಯವರು ಹೇಳಿರುವ ಯಾವ ಭರವಸೆಯೂ ಈಡೇರಿಲ್ಲ. ಬಂಗಾರದ ರಸ್ತೆ, ಪ್ರತಿಯೊಬ್ಬರ ಅಕೌಂಟಿಕೆ ತಲಾ ರೂ. 15 ಲಕ್ಷ ಹಾಕುವುದು ಹಾಗೇ ಉಳಿದಿವೆ. ಮೋದಿಯವರ ಸುಳ್ಳು ಬಟಾಬಯಲಾಗಿದೆ. ಕಾಂಗ್ರೆಸ್ಸಿನಿಂದ ಅಭಿವೃದ್ಧಿ ಕಾರ್ಯಗಳಾಗಿವೆ. ಮುಂದೆ ಇಲ್ಲಿ ಪ್ರೊ. ರಾಜು ಆಲಗೂರ ಅವರು ಸಂಸದರಾದರೆ ಈ ಕ್ಷೇತ್ರದ ಸಂಪೂರ್ಣ ಬದಲಾವಣೆ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆದಿ ಬಣಜಿಗ ಸಮಾಜದ ಮುಖಂಡರಾದ ಶ್ರೀಶೈಲಗೌಡ ಪಾಟೀಲ, ವಿಠ್ಠಲ ಕೊಳೂರ, ಬಾಬುಗೌಡ ಪಾಟೀಲ ಚಡಚಣ, ಎಸ್. ಪಿ. ಬಿರಾದಾರ, ಡಾ. ಗಂಗಾಧರ ಸಂಬಣ್ಣಿ, ಹನುಮುಗೌಡ ಬಿರಾದಾರ, ಮಹಾನಗರ ಪಾಲಿಕೆ ಸದಸ್ಯರಾದ ಅಪ್ಪು ಪೂಜಾರಿ, ಅಶೋಕ ಚಾಂದೋಡಿ, ಶಿವರಾಜ ಭೈರಗೊಂಡ, ಸೋಮಲಿಂಗ ಕಟಾವಿ, ಮಾಧುರಾಯಗೌಡ ಬಿರಾದಾರ, ಡಾ. ಪ್ರಕಾಶ ಗುಡದಾಳ, ರಮೇಶ ಬರಗೊಂಡಿ, ರವಿಗೌಡ ಪಾಟೀಲ, ಅಮೃತ ಭೈರಗೊಂಡ, ಹಣಮಂತ ಉಮರಾಣಿ, ಲಿಂಗಪ್ಪ ಮಮದಾಪುರ, ಬಸವರಾಜ ಚೌಡಾಪೂರ ಸೇರಿದಂತೆ ಜಿಲ್ಲೆಯ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.