ಗರ್ಭವತಿ ಮಹಿಳೆಯ ಮರ್ಯಾದಾ ಹತ್ಯೆ- ಇಬ್ಬರಿಗೆ ಗಲ್ಲು ಶಿಕ್ಷೆ, 5 ಜನರಿಗೆ ಜೀವಾವಧಿ

ವಿಜಯಪುರ: ಮರ್ಯಾದಾ ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆ ಮತ್ತು ಉಳಿದ ಐದು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಜಯಪುರ ಸ್ಪೇಶಲ್ ಕೋರ್ಟ್ ಆದೇಶ ಹೊರಡಿಸಿದೆ.

30.06.2017 ರಂದು ಒಂಬತ್ತು ತಿಂಗಳು ಗರ್ಭಿಣಿ ಯುವತಿಯನ್ನು ಅವಳ ಸಂಬಂಧಿಕರೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದರು  ಈ ಪ್ರಕರಣದ ಮೊದಲ ಆರೋಪಿ ಇಬ್ರಾಹಿಂಸಾಬ ಮಹ್ಮದಸಾಬ ಅತ್ತಾರ ಮತ್ತು ಅಕ್ಬರ್ ಮಹ್ಮದಸಾಬ ಅತ್ತಾರ ಅವರಿಗೆ ಗಲ್ಲು ಶಿಕ್ಷೆ ಮತ್ತು ರೂ. ತಲಾ ರೂ. 49250 ದಂಡ ವಿಧಿಸಲಾಗಿದೆ.  ಅಲ್ಲದೇ, ಈ ಪ್ರಕರಣದಲ್ಲಿ ಶಾಮೀಲಾಗಿರುವ ರಮಜಾನಬಿ ಮಹ್ಮದಸಾಬ ಅತ್ತಾರ, ದಾವಲಬಿ ಉರ್ಫ್ ಸಲ್ಮಾ ಬಂದೇನವಾಜ ಜಮಾದಾರ, ಅಜಮಾ ಜಿಲಾನಿ ದಖನಿ, ಜಿಲಾನಿ ಅಬ್ದುಲಖಾದರ ದಖನಿ ಮತ್ತು ದಾವಲಬಿ ಸುಭಾನ ದನ್ನೂರ ಅವರಿಗೆ ಜೀವಾವಧಿ ಶಿಕ್ಷೆ ಮತ್ತು ರೂ. 15000 ದಂಡ ವಿಧಿಸಿದೆ ಎಂದು ಸರಕಾರಿ ಅಭಿಯೋಜಕ ಎಸ್. ಎಸ್. ಲೋಕೂರ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗುಂಡಕನಾಳ ಗ್ರಾಮದ ಬಾನು ಅತ್ತಾರ ಉರ್ಫ್ ಬಾನುಬೇಗಂ ಅದೇ ಗ್ರಾಮದ ಪರಿಶಿಷ್ಠ ಪಂಗಡಕ್ಕೆ ಸೇರಿದ ಸಾಯಬಣ್ಣ ಉರ್ಫ್ ಮದಕಪ್ಪ ಕೊಣ್ಣೂರ ಎಂಬಾತನನ್ನು ಪ್ರೀತಿಸಿ 2017ರಲ್ಲಿ ಮದುವೆಯಾಗಿದ್ದಳು.  ಈ ಮಧ್ಯೆ ಯುವತಿಯ ಮನೆಯವರು ಆಕೆಯ ಪತಿಯ ವಿರುದ್ಧ ದೂರು ಕೂಡ ಕೊಡಿಸಿದ್ದರು.  ಆದರೆ, ನಂತರ ಆ ಯುವತಿ ತಾನು ಸ್ವಯಂ ಪ್ರೇರಿತವಾಗಿ ಪತಿಯ ಜೊತೆ ಹೋಗಿದ್ದು, ಇದರಲ್ಲಿ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿಲ್ಲ ಎಂದು ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದ್ದಳು.  ನಂತರ ದಂಪತಿ ಬೇರೆ ಊರಿನಲ್ಲಿ ವಾಸವಾಗಿದ್ದರು.  ಯುವತಿ ಗರ್ಭಿಣಿಯಾದ ಹಿನ್ನೆಲೆಯಲ್ಲಿ ಹೆರಿಗೆಗಾಗಿ ಗಂಡನ ಮನೆಗೆ ಬಂದಿದ್ದಳು.

ಈ ವಿಷಯ ತಿಳಿದ ಯುವತಿಯ ಸಂಬಂಧಿಕರು ಮನೆಯ ಮರ್ಯಾದೆ ಹೋಗಿದೆ ಎಂದು ಸಿಟ್ಟಾಗಿದ್ದರು.  ಅಲ್ಲದೇ, 03.06.2017ರಲ್ಲಿ ರಂದು ಯುವತಿಯ ತಾಯಿ ರಮಜಾನಬಿ ಮಹ್ಮದಸಾಬ ಅತ್ತಾರ ಮತ್ತು ಸಹೋದರರಾದ ಇಬ್ರಾಹಿಂಸಾಬ ಮಹ್ಮದಸಾಬ ಅತ್ತಾರ, ಅಕ್ಬರ್ ಮಹ್ಮದಸಾಬ್ ಅತ್ತಾರ, ಸಂಬಂಧಿಕರಾದ ದಾವಲಬಿ ಉರ್ಫ್ ಸಲ್ಮಾ ಬಂದೇನವಾಜ ಜಮಾದಾರ, ಅಜಮಾ ಜಿಲಾನಿ ದಖನಿ, ಜಿಲಾನಿ ಅಬ್ದುಲಖಾದರ ದಖನಿ, ದಾವಲಬಿ ಸುಭಾನ ದನ್ನೂರ ಅವರು ಯುವತಿ ಮತ್ತು ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿದ್ದರು.  ಈ ಸಂದರ್ಭದಲ್ಲಿ ಯುವತಿಯ ಪತಿಯನ್ನು ರಕ್ಷಿಸಲಾಗಿತ್ತು.  ಆದರೆ, ಯುವತಿ ಮೂರ್ಛೆ ಹೋಗಿ ಬಿದ್ದಿದ್ದಳು.  ಆಗ ಆಕೆಯನ್ನು ಕೊಲೆ ಮಾಡಿ ಬೆಂಕಿ ಹಚ್ಚಿ ಸುಟ್ಟಿದ್ದರು.

ಈ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಯುವತಿಯ ಪತಿ ಸಾಯಬಣ್ಣ ಉರ್ಫ್ ಮುದಕಪ್ಪ ಶರಣಪ್ಪ ಕೊಣ್ಣೂರ ದೂರು ನೀಡಿದ್ದರು.  ನಂತರ ಅಂದಿನ ಡಿವೈಎಸ್ಪಿ ಪಿ. ಕೆ. ಪಾಟೀಲ ಅವರು ತನಿಖೆ ನಡೆಸಿ ಆರೋಪ ಪಟ್ಟಿ ದಾಖಲಿಸಿದ್ದರು.  ಈ ಕುರಿತು ನ್ಯಾಯಾಲಯದಲ್ಲಿ 32 ಜನ ಸಾಕ್ಷಿ ನುಡಿದಿದ್ದರು.

ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ವಿಜಯಪುರ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(ಎಸ್.ಸಿ/ಎಸ್.ಟಿ ಅಪರಾಧಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ) ನ್ಯಾಯಾಧೀಶ ಸತೀಶ ಎಲ್. ಪಿ. ಇಬ್ಬರು ಆರೋಪಿಗಳಿಗೆ ಮರಣ ದಂಡನೆ ಹಾಗೂ ಐದು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌