ವಿಜಯಪುರ: ವಿಜಯಪುರ ಲೋಕಸಭೆ ಕ್ಷೇತ್ರದ ಪ್ರತಿಯೊಂದು ಬೂತ್ ಗಳಲ್ಲಿ ಬಿಜೆಪಿ ಪರ ಉತ್ತಮ ವಾತಾವರಣ ಸೃಷ್ಟಿಯಾಗಿದ್ದು, ಬಿಜೆಪಿ ಪರ ಅಲೆ ಇದೆ ಎಂದು ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿ ಪ್ರಕಾಶ ಅಕ್ಕಲಕೋಟ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ವಿಜಯಪುರ ನಗರದ ಡೋಹರ ಗಲ್ಲಿ ಹಾಗೂ ಅಗಸರ ಗಲ್ಲಿಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರತಿ ಮನೆಮನೆಗೆ ತೆರಳಿ ಕರಪತ್ರ ಹಂಚಿ ಅವರು ಬಿಜೆಪಿ ಪರ ಮತಯಾಚಿಸಿದರು. ಜಿಲ್ಲೆಯ ಎಲ್ಲಾ ಬೂತ್ ಗಳಲ್ಲಿ ಬಿಜೆಪಿ ಕಾರ್ಯಕರ್ತರು ಅತ್ಯುತ್ಸಾಹದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ನಮ್ಮ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಕಳೆದ ಅವಧಿಗಿಂತ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸುವ ವಿಶ್ವಾಸವಿದೆ. ಕಳೆದ ಹತ್ತು ವರ್ಷಗಳ ಮೋದಿಯವರ ಆಡಳಿತದಲ್ಲಿ ಇಡಿ ವಿಶ್ವವೇ ತಿರುಗಿ ನೋಡುವಂತೆ ದೇಶದಲ್ಲಾಗಿರುವ ಬದಲಾವಣೆ, ಅಭಿವೃದ್ಧಿ ಗಮನಿಸಿರುವ ಜನ ಮೋದಿ ಆಡಳಿತ ಮೆಚ್ಚಿಕೊಂಡು ಈ ಬಾರಿಯೂ ಬಿಜೆಪಿ ಬೆಂಬಲಿಸಲಿದ್ದು, ಗುರಿಯಂತೆ ಬಿಜೆಪಿ 400 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇಮ್ಮಡಿಗೊಳಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಸದಸ್ಯ ರಾಹುಲ ಜಾಧವ, ಮುಖಂಡರಾದ ಸಂತೋಷ ಬಾಗಲಕೋಟ, ಚಂದ್ರಕಾಂತ ಪೋಳ, ಶಂಕರ ಶೇರಖಾನೆ, ಗುರುರಾಜ ಇಂಗಳೆ, ಸುನಿಲ ಪೋಳ, ಜೀವನ ಹಿಪ್ಪರಗಿ, ಶೇಖರ ಬಾಗಲಕೋಟ ಮುಂತಾದವರು ಉಪಸ್ಥಿತರಿದ್ದರು.
ಉಮೇಶ ವಂದಾಲ ನೇತೃತ್ವದಲ್ಲಿ ಮನೆಮನೆ ಪ್ರಚಾರ
ಈ ಮಧ್ಯೆ ಮಹಾನಗರಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಅಭ್ಯರ್ಥಿ ರಮೇಶ ಜಿಗಜಿಣಗಿ ಪರವಾಗಿ ವಿಜಯಪುರ ನಗರದ ವಾರ್ಡ್ ಸಂಖ್ಯೆ 3 ರ ಭಾವಸಾರ ನಗರದಲ್ಲಿ ಮನೆಮನೆಗೆ ತೆರಳಿ ಕರಪತ್ರ ಹಂಚುವ ಮೂಲಕ ಮತಯಾಚಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶ್ರೀಧರ ಪಾಣೆಗಾವಿ, ಈಶ್ವರ ಬಸವರಾಜ, ನಿಖಿಲ ಚಿನಿವಾಲ, ಶಾಮ ಸೂರ್ಯವಂಶಿ, ಶಶಿಕುಮಾರ ಸನಕಿ, ಹರ್ಷಿತ್, ಜಾಧವ, ಕಂಪ್ಲಿ ಮುಂತಾದವರು ಉಪಸ್ಥಿತರಿದ್ದರು.