ಯಾರಿಗಾದರೂ ತೊಂದರೆ ಕೊಟ್ಟಿದ್ದನ್ನು ಸಾಬೀತು ಮಾಡಿದರೆ ಚುನಾವಣೆ ಕಣದಿಂದ ನಿವೃತ್ತಿ- ಸಂಸದರಿಗೆ ಪ್ರೊ. ರಾಜು ಆಲಗೂರ ಸವಾಲು

ವಿಜಯಪುರ: ಪ್ರೊ. ರಾಜು ಆಲಗೂರ ವಿಜೇತರಾದರೆ ಲಿಂಗಾಯಿತ ಸಮುದಾಯಕ್ಕೆ ತೊಂದರೆಯಾಗಲಿದೆ ಎಂದು ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನೀಡಿರುವ ಹೇಳಿಕೆಗೆ  ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೇಳಿಕೆ ಮೂಲಕ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಕೀಳು ಮಟ್ಟದ ರಾಜಕಾರಣ ಆರಂಭಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಈವರೆಗೂ ಯಾರಿಗೂ ಏಕವಚನದಲ್ಲಿ ಮಾತನಾಡಿಲ್ಲ.ನಾನು ಲಿಂಗಾಯಿತ ಸಮುದಾಯದ ಜೊತೆಗೆ ಅನುಚಿತವಾಗಿ ನಡೆದುಕೊಂಡಿದ್ದನ್ನು ಬಿಜೆಪಿ ಅಭ್ಯರ್ಥಿ ರುಜುವಾತು ಪಡಿಸಿದರೆ, ಚುನಾವಣೆ ಕಣದಿಂದಲೇ ಹಿಂದೆ ಸರಿಯುತ್ತೇನೆ.  ಸಾಬೀತು ಪಡಿ,ದಿದ್ದರೆ ರಮೇಶ ಜಿಗಜಿಣಗಿ ಚುನಾವಣೆ ಕಣದಿಂದ ಹಿಂದೆ ಸರಿಯಬೇಕು ಎಂದು ಅವರು ಸವಾಲು ಹಾಕಿದರು.

ನಾನು ಸುದೀರ್ಘ ಅವಧಿವರೆಗೆ ಲಿಂಗಾಯಿತ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೇನೆ.  ಲಿಂಗಾಯತ ಸಮುದಾಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇನೆ.  ಎಲ್ಲ ಸಮುದಾಯಗಳೊಂದಿಗೂ ಅನೋನ್ಯವಾಗಿದ್ದೇನೆ.  ಅವರ ಬಗ್ಗೆ ದೊಡ್ಡ ಗೌರವವಿದೆ.  ನಾನು ದಿ. ಬಿ. ಎಂ. ಪಾಟೀಲ ಅವರ ಗರಡಿಯಲ್ಲಿ ಬೆಳೆದಿರುವ ವ್ಯಕ್ತಿ.  ನಾನು ಆಯ್ಕೆಯಾದರೆ ಲಿಂಗಾಯತರಿಗೆ ತೊಂದರೆಯಾಗುತ್ತದೆ ಎಂದು ಅವರು ನೀಡಿರುವ ಹೇಳಿಕೆ ಬಾಲಿಷತನದಿಂದ ಕೂಡಿದೆ.  ಕನಸು ಮನಸಲ್ಲಿನಲ್ಲಿಯೂ ನಾನು ಯಾರಿಗೂ ಅನ್ಯಾಯ ಮಾಡಿಲ್ಲ.  ಆದರೆ, ಸಂಸದರು ಬಹಳ ಜನರಿಗೆ ಅನ್ಯಾಯ ಮಾಡಿದ್ದಾರೆ.  ಲಿಂಗಾಯತ ಮತ ಸೆಳೆಯಲು ಈ ರೀತಿ ಹೇಳಿಕೆ ನೀಡಿದ್ದಾರೆ.  ಆದರೆ ಲಿಂಗಾಯತ ಸಮುದಾಯ ನನಗೆ ಪ್ರೋತ್ಸಾಹ ನೀಡುತ್ತಿದೆ.  ನಮ್ಮ ಚಲವಾದಿ ಸಮುದಾಯದ ಒಂದೇ ಒಂದು ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ.  ಆದರೂ ರಮೇಶ ಜಿಗಜಿಣಗಿ ಇಂಥದ್ದೊಂದು ಆರೋಪ ಮಾಡಿದ್ದು ನೋಡಿದರೆ ಅವರಿಗೆ ಸೋಲಿನ ಭೀತಿ ಕಾಡುತ್ತಿದೆ.  ಲಿಂಗಾಯತ ಸಮುದಾಯವನ್ನು ಹಣಿದಿರುವುದೇ ರಮೇಶ ಜಿಗಜಿಣಗಿ ಎಂದು ಆರೋಪಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಅಧಿಕಾರ ವಂಚಿತರನ್ನಾಗಿ ಮಾಡಿದ್ದು ರಮೇಶ ಜಿಗಜಿಣಗಿ.  ಅಪ್ಪುಗೌಡ ಪಾಟೀಲ ಮನಗೂಳಿ, ದಯಾಸಾಗರ ಪಾಟೀಲ, ರವಿಕಾಂತ ಪಾಟೀಲ ಹೀಗೆ ಅನೇಕ ಲಿಂಗಾಯತ ನಾಯಕರನ್ನು ಸಂಸದರು ಹಣಿದಿದ್ದಾರೆ.  ದಲಿತ ಸಮುದಾಯದವರಾದರೂ ಅವರು ದಲಿತ ಸಮುದಾಯಕ್ಕೂ ಏನೂ ಕೆಲಸ ಮಾಡಿಲ್ಲ.  ಲಿಂಗಾಯತ ನಾಯಕ
ಎಂ.  ಬಿ. ಪಾಟೀಲ ಅವರ ಮನೆ ಮೇಲೆ ಕಲ್ಲು ಎಸೆದವರು ಯಾರು? ರಮೇಶ‌ ಜಿಗಜಿಣಗಿ ಹೊಂದಾಣಿಕೆ ರಾಜಕಾರಣಿ.   ಲಿಂಗಾಯಿತ ನಾಯಕರೆಲ್ಲರೂ ನನ್ನನ್ನು ತಮ್ಮ ಮನೆಯ ಸದಸ್ಯನಂತೆ ಕಾಣುತ್ತಿದ್ದಾರೆ ಎಂದು ಅವರು ಹೇಳಿದರು.

 

ಕಾಂಗ್ರೆಸ್ ಮುಖಂಡ ಡಾ. ಬಾಬುರಾಜೇಂದ್ರ ನಾಯಕ ಮಾತನಾಡಿ, ಹೋರಾಟ ಎನ್ನುವ ಪದ ಗೊತ್ತಿರದ ಮತ್ತು ಜಗಳ ಹಚ್ಚುವ ರಾಜಕಾರಣಿ ರಮೇಶ ಜಿಗಜಿಣಗಿ ಅವರಿಗೆ ಕೇವಲ ಸಮಾಜದ ಸಾಮರಸ್ಯ ಹಾಳು ಮಾಡುವುದು ಮಾತ್ರ ಗೊತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಸಂಸದ ರಮೇಶ ಜಿಗಜಿಣಗಿ ತಾವು‌ ಮಾಡಿರುವ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಮತ ಕೇಳುವ ಬದಲು, ಕೇವಲ ದ್ವೇಷ ರಾಜಕಾರಣ ಮಾಡುತ್ತ ಇಂದು ಹರಡಿರುವ ದ್ವೇಷ ರಾಜಕಾರಣಕ್ಕೆ ಅವರೇ ಕಾರಣರಾಗಿದ್ದಾರೆ.  ಸಮುದಾಯಗಳ‌ ಮಧ್ಯೆ ಜಗಳ ಹಚ್ಚುವ ಕೆಲಸ‌ ಮಾಡುವುದೇ ಅವರ ಕಾಯಕ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಮುಖಂಡರಾದ  ಎಂ.ಆರ್. ಪಾಟೀಲ ಬಳ್ಳೊಳ್ಳಿ, ವಸಂತ ಹೊನಮೋಡೆ, ಅಶೋಕಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಹೊನಮಲ್ಲ ಸಾರವಾಡ, ಅಶೋಕ ಬಿರಾದಾರ, ಸ್ನೇಹಲತಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌