ವಿಜಯಪುರ: ಲೋಕಸಭೆ ಚುನಾವಣೆಗೆ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ಮೇ 7ರಂದು ನಡೆಯಲಿರುವ ಮತದಾನಕ್ಕೆ ನಿಯೋಜಿತ ಸಿಬ್ಬಂದಿ ಚುನಾವಣೆಗೆ ಸಂಬಂಧಿತ ಸಲಕರಣೆಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದರು.
ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ವಿಜಯಪುರ ನಗರ ಮತ್ತು ನಾಗಠಾಣ ಮತಕ್ಷೇತ್ರಗಳಿಗೆ ಸಂಬಂಧಿತ ವಿದ್ಯುನ್ಮಾನ ಮತಯಂತ್ರಗಳನ್ನು ವಿತರಿಸಲಾಗುತ್ತಿದೆ. ಮುದ್ದೇಬಿಹಾಳ, ಬಸವನ ಬಾಗೇವಾಡಿ, ಬಬಲೇಶ್ವರ, ಇಂಡಿ, ಸಿಂದಗಿ ಮತ್ತು ದೇವರ ಹಿಪ್ಪರಗಿಯಲ್ಲಿ ಆಯಾ ಮತಕ್ಷೇತ್ರಗಳ ಮತದಾನಕ್ಕೆ ಸಂಬಂಧಿಸಿದ ವಿದ್ಯುನ್ಮಾನ ಮತಯಂತ್ರಗಳು, ಮತದಾರರ ಪಟ್ಟಿಗೆ, ಶಾಹಿ ಮತ್ತೀತರ ಸಲಕರಣೆಗಳನ್ನು ವಿತರಿಸಲಾಯಿತು.
ಬಳಿಕ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಜೊತೆ ಸರಕಾರಿ ಬಸ್ಸುಗಳಲ್ಲಿ ನಿಯೋಜಿತ ಮತಗಟ್ಟೆಗಳಿಗೆ ತೆರಳಿದರು.
ಜಿಲ್ಲೆಯಲ್ಲಿ ಸುಗಮ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಸಕಲ ಸಿದ್ಧತೆ ಕೈಗೊಂಡಿದೆ. ಮೇ 07ರಂದು ಬೆ. 7 ರಿಂದ ಸಂ. 6ರ ವರೆಗೆ ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು ಎಂಟು ವಿಧಾನಸಭೆ ಕ್ಷೇತ್ರಗಳಿವೆ. ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 19 ಲಕ್ಷ 46 ಸಾವಿರದ 90 ಮತದಾರರಿದ್ದು, ಜಿಲ್ಲಾದ್ಯಂತ ಒಟ್ಟು 2086 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ.
ಮತದಾರರ ವಿವರ
ವಿಜಯಪುರ ಜಿಲ್ಲೆಯಲ್ಲಿ 9 ಲಕ್ಷ 87 ಸಾವಿರದ 974 ಗಂಡು, 9 ಲಕ್ಷ 57 ಸಾವಿರಷ 906 ಹೆಣ್ಣು ಹಾಗೂ 210 ಇತರೆ ಮತದಾರರು ಸೇರಿದಂತೆ ಒಟ್ಟು 19 ಲಕ್ಷ 46 ಸಾವಿರಷ 090 ಮತದಾರರಿದ್ದಾರೆ. 85 ವರ್ಷಕ್ಕಿಂತ ಮೇಲ್ಪಟ್ಟ ಒಟ್ಟು 2357 ಮತದಾರರ ಪೈಕಿ 2170 ಮತದಾರರು ತಮ್ಮ ಮನೆಯಿಂದ ಮತ ಚಲಾಯಿಸಿದ್ದು, ಶೇ.92.06 ರಷ್ಟು ಮತದಾನವಾಗಿದೆ. ಅದರಂತೆ ಶೇ. 40ಕ್ಕಿಂತ ಹೆಚ್ಚಿನ ದಿವ್ಯಾಂಗವಿರುವ(ಪಿಡಬ್ಲೂಡಿ) ಒಟ್ಟು 886 ಮತದಾರರ ಪೈಕಿ 854 ಮತದಾರರು ಮತ ಚಲಾಯಿಸುವ ಮೂಲಕ ಶೇ.96.38 ರಷ್ಟು ಮತದಾನವಾಗಿದೆ.
ಮತಗಟ್ಟೆಗಳ ವಿವರ
ವಿಜಯಪುರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾದ್ಯಂತ ಒಟ್ಟು 2086 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ ಪ್ರತಿ ವಿಧಾನಸಭಾವಾರು 5 ಸಖಿ ಮತಗಟ್ಟೆ, ತಲಾ 8 ದಿವ್ಯಾಂಗ ಮತಗಟ್ಟೆ, ಯುವ ಮತಗಟ್ಟೆ, ಧ್ಯೇಯ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾದ್ಯಂತ 171 ಸೂಕ್ಷ್ಮ ಮತ್ತು 41 ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಮೈಕ್ರೋ ಆಬ್ಜರ್ವರ್ ನೇಮಿಸಿದ್ದು, ವೆಬ್‍ಕಾಸ್ಟಿಂಗ್ ಮೂಲಕ ನಿಗಾ ಇಡಲಾಗುತ್ತಿದೆ. ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಕನಿಷ್ಠ ಸೌಲಭ್ಯಗಳಾದ ರ್ಯಾಂಪ್, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಪೀಠೋಪಕರಣ, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ, ವಿಶ್ರಾಂತಿ ಕೊಠಡಿ, ಆಸನ ವ್ಯವಸ್ಥೆ, ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ವಿದ್ಯುನ್ಮಾನ ಮತಯಂತ್ರಗಳ ವಿವರ
ಚುನಾವಣೆಗಾಗಿ 2617 ಬಿ.ಯು, 2616 ಸಿ.ಯು, 2773 ವಿವಿಪ್ಯಾಟ್‍ಗಳನ್ನು ಬಳಕೆ ಮಾಡಲಾಗುತ್ತಿದೆ. ಚುನಾವಣೆ ನಂತರ ಮತ ಯಂತ್ರಗಳನ್ನು ಭದ್ರತೆಯಲ್ಲಿ ಇರಿಸಲು ವಿಧಾನಸಭೆವಾರು ಮತ್ರಯಂತ್ರಗಳನ್ನು ಇರಿಸಲು ವಿಜಯಪುರ ಸೈನಿಕ ಶಾಲೆಯಲ್ಲಿ ಭದ್ರತಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಮುದ್ದೇಬಿಹಾಳ ಮತ್ತು ದೇವರ ಹಿಪ್ಪರಗಿ ವಿಧಾನಸಭೆ ಮತಕ್ಷೇತ್ರದ ಮತಯಂತ್ರಗಳನ್ನು ಸೈನಿಕ ಶಾಲೆಯ ಒಡೆಯರ ಸದನದಲ್ಲಿ, ಬಸವನ ಬಾಗೇವಾಡಿ ಮತ್ತು ಬಬಲೇಶ್ವರ ಮತಕ್ಷೇತ್ರದ ಮತಯಂತ್ರಗಳನ್ನು ಆದಿಲ್‍ಶಾಹಿ ಸದನದಲ್ಲಿ, ವಿಜಯಪುರ ನಗರ ಮತ್ತು ನಾಗಠಾಣ ಮತಕ್ಷೇತ್ರದ ಮತಯಂತ್ರಗಳನ್ನು ಹೊಯ್ಸಳ ಸದನದಲ್ಲಿ, ಇಂಡಿ ಮತ್ತು ಸಿಂದಗಿ ಮತಕ್ಷೇತ್ರದ ಮತಯಂತ್ರಗಳನ್ನು ವಿಜಯಪುರ ನಗರ ಸದನದಲ್ಲಿ ಇಡಲು ವ್ಯವಸ್ಥೆ ಮಾಡಲಾಗಿದೆ.
ಚುನಾವಣಾ ಸಿಬ್ಬಂದಿಗಳ ವಿವರ
ಚುನಾವಣೆ ಕರ್ತವ್ಯಕ್ಕೆ 2527 ಪಿಆರ್‍ಓ, 2527 ಎಪಿಆರ್‍ಓ, 5054 ಪಿಓ, 184 ಮೈಕ್ರೋ ಆಬ್ಜರ್ವರ್‍ಗಳನ್ನು ನಿಯೋಜಿಸಲಾಗಿದೆ. ಈ ಸಿಬ್ಬಂದಿಗಳಿಗೆ ಪ್ರತಿ ಮತಗಟ್ಟೆಗಳಿಗೆ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರನ್ನು ಅವಶ್ಯಕ ಔಷಧೋಪಚಾರದೊಂದಿಗೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಚುನಾವಣೆಗೆ ನಿಯೋಜಿಸಿರುವ ಸಿಬ್ಬಂದಿಗಳಿಗೆ ಆಯಾ ಮತಗಟ್ಟೆಗಳಲ್ಲಿ ಹಾಗೂ ಆಯಾ ಮಸ್ಟರಿಂಗ್ ಡಿ ಮಸ್ಟರಿಂಗ್ ಕೇಂದ್ರಗಳಲ್ಲಿ ಉಟೋಪಚಾರ ವ್ಯವಸ್ಥೆ ಮಾಡಲಾಗಿದೆ. ನಿಯೋಜಿತ ಸಿಬ್ಬಂದಿಗೆ 241 ಬಸ್ಸು, 124 ಕ್ರೂಸರ್ ಸೇರಿದಂತೆ ಒಟ್ಟು 365 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ನಿಯೋಜಿತ ಮತಗಟ್ಟೆ ಸಿಬ್ಬಂದಿಗಳ ಮಕ್ಕಳ ಪಾಲನೆ, ಪೋಷಣೆಗಾಗಿ 06.05.2024 ಮತ್ತು 07.05.2024 ರಂದು ಮಕ್ಕಳನ್ನು ನೋಡಿಕೊಳ್ಳಲು ಮಸ್ಟರಿಂಗ್ ಕೇಂದ್ರಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೇಲ್ವಿಚಾರಣೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಮತದಾರ ಸೌಲಭ್ಯ ಕೇಂದ್ರ,ಅಂಚೆ ಮತದಾನ ವಿವರ
ಜಿಲ್ಲೆಯಲ್ಲಿ ಅಗತ್ಯ ಸೇವೆಗಳ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ವಿಜಯಪುರ ಲೋಕಸಭೆ ಕ್ಷೇತ್ರದ ಮತದಾರರಿರುವ ಬೇರೆ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಸ್ಥಾಪಿಸಲಾದ ಮತದಾರರ ಸೌಲಭ್ಯ ಕೇಂದ್ರಗಳಲ್ಲಿ ಮತ್ತು ಅಂಚೆ ಮತದಾನ ಕೇಂದ್ರಗಳ (ಎಫ್‍ಸಿ ಮತ್ತು ಪಿವಿಸಿ) ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೌಲಭ್ಯ ಕೇಂದ್ರಗಳಲ್ಲಿ ಅಗತ್ಯ ಸೇವೆಗಳ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 1969 ಮತದಾರರ ಪೈಕಿ 654 ಹಾಗೂ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿ ಈ ಜಿಲ್ಲೆಯ ಮತದಾರರು ಹಾಗೂ ಈ ಜಿಲ್ಲೆಯ ಮತದಾರರು ಬೇರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರ ಮತದಾರರು ಒಟ್ಟು 1382ರ ಪೈಕಿ 743 ಮತದಾರರು ಮತ ಚಲಾಯಿಸಿದ್ದಾರೆ.
ಮಾದರಿ ನೀತಿ ಸಂಹಿತೆ, ಕಾನೂನು ಸುವ್ಯವಸ್ಥೆ
ಜಿಲ್ಲೆಯಲ್ಲಿ ಶಾಂತಿಯುತ ಮತ್ತು ಪಾರದರ್ಶಕ ಮತದಾನಕ್ಕಾಗಿ ಎಲ್ಲ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಇಬ್ಬರು ಹೆಚ್ಚುವರಿ ಎಸ್ಪಿ, 8 ಜನ ಡಿವೈಎಸ್ಪಿ, 26 ಸಿಪಿಐ, 95 ಪಿಎಸ್‍ಐ, 121 ಎಎಸ್‍ಐ, 704 ಎಚ್.ಸಿ., 1187 ಪಿಸಿ, 945 ಎಚ್‍ಜಿ, 11 ಎಫ್‍ಜಿ, 3099 ಜನರು ಸೇರಿದಂತೆ 55 ಸಿಎಪಿಎಫ್ ಹಾಗೂ 5 ಐ.ಆರ್.ಬಿ- ಕೆ.ಎಸ್.ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ನಿಷೇಧಾಜ್ಞೆ ಜಾರಿ
ಶೂನ್ಯ ಅವಧಿ ಅಂದರೆ ಮತದಾನದ ಕೊನೆಯ 48 ಗಂಟೆಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. 5ಕ್ಕಿಂತ ಹೆಚ್ಚಿನ ಜನರು ತಿರುಗಾಡುವುದನ್ನು ನಿಷೇಧಿಸಿದೆ. ಅಲ್ಲದೇ, ಮದ್ಯಪಾನ ಮಾರಾಟ ಹಾಗೂ ಧ್ವನಿವರ್ಧಕ ಬಳಸುವುದನ್ನು ನಿಷೇಧಿಸಲಾಗಿದೆ. ಕ್ಷೇತ್ರದ ಮತದಾರರಲ್ಲದ ರಾಜಕೀಯ ವ್ಯಕ್ತಿಗಳು ಕ್ಷೇತ್ರವನ್ನು ತೊರೆಯುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಪ್ರಜಾಸತ್ತಾತ್ಮಕ ವಿಧಾನದ ಮೂಲಕ ಸುಭದ್ರವಾದ ಸರಕಾರವನ್ನು ರಚಿಸುವ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಮತವು ಅಮೂಲ್ಯವಾಗಿರುವುದರಿಂದ ಜಿಲ್ಲೆಯ ಎಲ್ಲ ಅರ್ಹ ಮತದಾರರು ಮತದಾನದ ಹಬ್ಬದಲ್ಲಿ ಭಾಗವಹಿಸಿ ತಪ್ಪದೇ ಮತ ಚಲಾಯಿಸುಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.