ವಿಜಯಪುರ: ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ನಗರದ ಮದ್ದಿನ ಖಣಿಯಲ್ಲಿರುವ ಸಮನ್ವಯ ಇಂಗ್ಲಿಷ್ ಮೀಡಿಯಂ ಪ್ರೈಮರಿ ಬಿ ಸ್ಕೂಲ್ ನಲ್ಲಿರುವ ಮತಗಟ್ಟೆ ಸಂಖ್ಯೆ 46ರಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ನಾನು ಮುಂಚೆಯಿಂದಲೂ ಅಕ್ಕಮಹಾದೇವಿ ರಸ್ತೆಯಲ್ಲಿರುವ ನಮ್ಮ ಹಳೆಯ ಮನೆಯ ಬಳಿ ಇರುವ ಮತಗಟ್ಟೆಯಲ್ಲಿಯೇ ಮತದಾನ ಮಾಡುತ್ತ ಬಂದಿದ್ದೇನೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸಂಸದ ರಮೇಶ ಜಿಗಜಿಣಗಿ ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂಬುದರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಅಭ್ಯರ್ಥಿಯಾಗಿದ್ದಾರೆ ಹಾಗೆ ಹೇಳುತ್ತಾರೆ. ಜೂನ್ 4ಕ್ಕೆ ಗೊತ್ತಾಗುತ್ತದೆ. ಕಳೆದ ಬಾರಿ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಕಣದಲ್ಲಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಕಣದಲ್ಲಿದ್ದರೆ ನೆಕ್ ಟು ನೆಕ್ ಬರ್ತಿತ್ತು. ಆದರೆ ಈಗ ಕಾಂಗ್ರೆಸ್ ಅಭ್ಯರ್ಥಿ ಇದ್ದಾರೆ. ಆರು ಜನ ಶಾಸಕರಿದ್ದಾರೆ. ಸುಸೂತ್ರವಾಗಿ ಚುನಾವಣೆ ಮಾಡಿದ್ದೇವೆ. ನಮ್ಮ ಗ್ಯಾರಂಟಿ ಸ್ಕೀಮ್ ಗಳನ್ನು ಜನರು ಒಪ್ಪಿಕೊಂಡಿದ್ದಾರೆ. ಮೋದಿ ಅವರ 10 ವರ್ಷಗಳ ಪೊಳ್ಳು ಭರವಸೆಗಳೂ ಗೊತ್ತಾಗಿದೆ ಎಂದು ಅವರು ತಿಳಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಆರು ಜನ ಕಾಂಗ್ರೆಸ್ ಶಾಸಕರಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ. ಅಬ್ ಕಿ ಬಾರ್ ಕಾಂಗ್ರೆಸ್ ಸರಕಾರ. ಅಬ್ ಕಿ ಬಾರ್ ರಾಜು ಆಲಗೂರ ಎಂದು ಎಂ. ಬಿ. ಪಾಟೀಲ ಹೇಳಿದರು.
ಪ್ರಜ್ವಲ ರೇವಣ್ಣ ಕಾನೂನನ್ನು ಗೌರವಿಸಬೇಕು
ಪ್ರಜ್ವಲ್ ರೇವಣ್ಣ ಕಾನೂನನ್ನು ಗೌರವಿಸಬೇಕು. ಕಾನೂನಿನ ಮುಂದೆ ಅವರು ಬಂದು ಶರಣಾಗಬೇಕು. ಎಲ್ಲವನ್ನೂ ಎದುರಿಸಬೇಕು. ಈ ಪ್ರಕರಣದಿಂದ ಕಾಂಗ್ರೆಸ್ಸಿಗೆ ಚುನಾವಣೆಯಲ್ಲಿ ಸ್ವಲ್ಪ ಮಟ್ಟಿಗೆ ಅನುಕೂಲವಾಗುತ್ತದೆ. ಮಹಿಳೆಯರಿಗೆ ಈ ಬಗ್ಗೆ ಮಾಹಿತಿ ಇದೆ. ಪ್ರಜ್ವಲ ರೇವಣ್ಣ ಪ್ರಕರಣ ಅತೀರೇಕವಾಗಿದೆ. ಇದು ಒಳ್ಳೆಯದಲ್ಲ. ಯಾರೂ ಸಹಿಸಲಾರದ ಹೇಯ ಕೃತ್ಯ ಇದಾಗಿದೆ. ಸಾವಿರಾರು ಜನರ ಜೊತೆ ಈ ರೀತಿ ವರ್ತನೆ ಸರಿಯಲ್ಲ. ಅವನು ಭಾಗಿಯಾಗಿದ್ದರೆ ಕಾನೂನು ಪ್ರಕಾರ ಅವನಿಗೆ ಕಠಿಣ ಶಿಕ್ಷೆಯಾಗಬೇಕು. ಈ ಸಿಡಿ, ಪಿಡಿಗಳಿಂದಾಗಿ ಜನ ರಾಜಕೀಯದ ಬಗ್ಗೆ ಬೇಸರ ಮಾಡಿಕೊಳ್ಳುತ್ತಾರೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಇಷ್ಟು ದಿನ ಬಿಟ್ಟು ಈಗ ಮತದಾನದ ದಿನ ಈ ಪ್ರಕರಣದ ಬಗ್ಗೆ ಟೀಕಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಮೋದಿಯವರ ಮರ್ಮ ನಮಗೆ ಹೇಗೆ ಗೊತ್ತಾಗುತತ್ದೆ. ಇಂಥ ಪ್ರಕರಣಗಳಲ್ಲಿ ಪ್ರಜ್ವಲ ರೇವಣ್ಣ ಇರಲಿ ಅಥವಾ ಬೇರೆ ಯಾರೇ ತಪ್ಪಿತಸ್ಥರಾಗಿದ್ದರೂ ತನಿಖೆಯಲ್ಲಿ ಸಾಬೀತಾದರೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಪ್ರಜ್ವಲ ರೇವಣ್ಣ ಶರಣಾಗದಿರಲು ರಾಜ್ಯ ಸರಕಾರ ನಿರ್ಲಕ್ಷ್ಯ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಆರೋಪದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆ ಕೇಂದ್ರ ನೋಟಿಸ್ ಕೊಡಬೇಕಿತ್ತು. ಲುಕಔಟ್, ರೆಡ್ ಕಾರ್ನರ್ ನೋಟಿಸ್ ಕೊಡಬೇಕಿತ್ತು. ವಿದೇಶಾಂಗ ಸಚಿವರು ರಾಜ್ಯ ಸರಕಾರದಲ್ಲಿ ಇರ್ತಾರಾ? ವಿಜಯ ಮಲ್ಯಗೆ ರಾಜ್ಯ ಸರಕಾರ ನೋಟಿಸ್ ಕೊಟ್ಟಿತ್ತಾ? ಪ್ರಕರಣ ಡೈವರ್ಟ್ ಮಾಡಲು ಆ ರೀತಿ ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿರು.
ಪೆನ್‌ಡ್ರೈವ್ ಪ್ರಕರಣಕ್ಕೆ ಡಿಸಿಎೞ ಡಿ. ಕೆ. ಶಿವಕುಮಾರ ಕಾರಣ ಎಂಬ ಆರೋಪದ ಕುರಿತು ಕೇಳಿದ ಪ್ರಶ್ನೆಗೆ, ಇದಕ್ಕೆ ಡಿ. ಕೆ. ಶಿವಕುಮಾರ ಸ್ಪಷ್ಟನೆ ಕೊಡುತ್ತಾರೆ ಎಂದು ಸಚಿವರು ಹೇಳಿದರು.