ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತದಾನ- ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ- ಎಸ್ ಐಟಿ ಸಂಪೂರ್ಣ ಡಿಕೆಶಿ ಏಜೆಂಟ್ ಆಗಿದೆ- ಪ್ರಜ್ವಲ ರೇವಣ್ಣ ಕೇಸ್ ಸಿಬಿಐಗೆ ವಹಿಸಲು ಆಗ್ರಹ

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ನಗರದಲ್ಲಿ ಮತದಾನ ಮಾಡಿದ್ದಾರೆ.

ನಗರದ ಎಸ್. ಎಸ್. ಹೈಸ್ಕೂಲಿನಲ್ಲಿರುವ ಮತಗಟ್ಟೆ ಸಂಖ್ಯೆ 70ರಲ್ಲಿ ಶಾಸಕರು ತಮ್ಮ ಹಕ್ಕು ಚಲಾಯಿಸಿದರು.  ಪತ್ನಿ ಶೈಲಜಾ ಮತ್ತು ಪುತ್ರ ರಾಮನಗೌಡ ಜೊತೆ ಮತಗಟ್ಟೆಗೆ ಆಗಮಿಸಿ ಅವರು ಮತದಾನ ಮಾಡಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಸ್ ಐ ಟಿ ಸಂಪೂರ್ಣವಾಗಿ ಡಿಸಿಎಂ ಡಿ. ಕೆ. ಶಿವಕುಮಾರ ಏಜೆಂಟರಂತೆ ಕೆಲಸ ಮಾಡುತ್ತಿದ್ದು, ಪ್ರಜ್ವಲ ರೇವಣ್ಣ ಕೇಸನ್ನು ಸಿಬಿಐ ಗೆ ವಹಿಸಬೇಕು ಎಂದು ಆಗ್ರಹಿಸಿದರು.

ಪ್ರಜ್ವಲ ರೇವಣ್ಣ ಪೆನ್ ಡ್ರೈವ್ ಪ್ರಕರಣದ ಹಿಂದೆ ಕಾಂಗ್ರೆಸ್ ನ ಮಹಾ ನಾಯಕ ಇದ್ದಾನೆ ಎಂದು ಹಾಸನದಲ್ಲಿ ದೇವರಾಜಗೌಡ ಸ್ಪಷ್ಟವಾಗಿ ಹೇಳಿದ್ದಾರೆ.  ಇದನ್ನು ಮಾಡಿದವರು ಯಾರು ಅಂತ ಅವರು ಹೇಳಿದ್ದಾರೆ.  ಅಲ್ಲದೇ, ಆಡಿಯೊವನ್ನು ಬಿಡುಗಡೆ ಮಾಡಿದ್ದಾರೆ.  ಇಲ್ಲಿ ಎಸ್ ಐ ಟಿ ಸಂಪೂರ್ಣವಾಗಿ ಡಿ. ಕೆ. ಶಿವಕುಮಾರ ಏಜೆಂಟರಂತೆ ಕೆಲಸ ಮಾಡುತ್ತಿದೆ.  ಅದಕ್ಕಾಗಿ ಇದಕ್ಕೆ ನ್ಯಾಯ ಸಿಗಲ್ಲ.  ಇದನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.

ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪತ್ನಿ ಜೊತೆ ತೆರಳಿ ಮತದಾನ ಮಾಡಿದರು.

ಎಸ್ ಐ ಟಿ ಯಲ್ಲಿ ಇರುವ ಅಧಿಕಾರಿಗಳೆಲ್ಲ ರಾಜ್ಯದವರು.  ಡಿ. ಕೆ. ಶಿವಕುಮಾರ ಕಂಟ್ರೋಲ್ ನಲ್ಲಿ ಇರುವವರು.  ಎಸ್ ಐ ಟಿ ಯಿಂದ ನಮಗೆ ನ್ಯಾಯ ಸಿಗಲ್ಲ.  ಹೀಗಾಗಿ ಸಿಬಿಐ ತನಿಖೆಗೆ ಈ ಪ್ರಕರಣವನ್ನು ವಹಿಸಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯದಲ್ಲಿ ಎರಡು ಸಿಡಿ ಫ್ಯಾಕ್ಟರಿ ಇವೆ ಎಂದು ಮೊದಲೆ ಹೇಳಿದ್ದೆ.  ಇದೊಂದು ಓಪನ್ ಆಗಿದೆ.  ಇನ್ನೊಂದು ಓಪನ್ ಆಗುತ್ತದೆ ಎಂದು ಹೇಳಿದ ಅವರು, ಈ ವಿಚಾರ ಮತದಾನದ ಮೇಲೆ ಪರಿಣಾಮ ಬೀರುತ್ತಾ ಎಂಬುದರ ಕುರಿತು ಪ್ರತಿಕ್ರಿಯೆ ನೀಡಿ, ಇದು ನಮ್ಮ ಮೇಲೆ ಯಾವುದೆ ಪರಿಣಾಮ ಬೀರಲ್ಲ.  ಎರಡನೇ ಹಂತದ ಚುನಾವಣೆಯಲ್ಲಿ ಬಿಜೆಪಿಯಿಂದ 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಇಲ್ಲಿ ಜೆ ಡಿ ಎಸ್ ವರು ಯಾರು ಇಲ್ಲ.  2019 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಇದ್ದಾಗ ಈ ಪ್ರಕರಣ ನಡೆದಿದೆ.  ಹೀಗಾಗಿ ಇದಕ್ಕೆ ಕಾಂಗ್ರೆಸ್ ನೇರ ಹೊಣೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆ ಬಳಿಕ ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ವಿಚಾರ

ಲೋಕಸಭೆ ಚುನಾವಣೆ ಬಳಿಕ ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದರ ಅವರು, ರಾಜ್ಯ ಬಿಜೆಪಿಯಲ್ಲಿ ಅಷ್ಟೇ ಅಲ್ಲ, ಇಡೀ ದೇಶದಲ್ಲಿ ಬದಲಾವಣೆಯಾಗುತ್ತದೆ.  ಮೋದಿ ಪ್ರಧಾನಿಯಾದ ಬಳಿಕ ಹಲವಾರು ಕಾಯಿದೆಗಳನ್ನು ಜಾರಿ ಮಾಡಲಾಗುತ್ತದೆ.  ವಕ್ಪ್ ಆಸ್ತಿ ವಶಪಡಿಸಿಕೊಂಡು ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಬಡವರಿಗೆ ಮನೆ ಕಟ್ಟಲು ಉಪಯೋಗಿಸುತ್ತೇವೆ.  ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದು ಖಚಿತ.  ಅಬ್ ಕಿ ಬಾರ್ ಚಾರ್ ಸೋ ಬಾರ್ ಎನ್ನುವಂತೆ ಈ ಬಾರಿ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸುತ್ತೇವೆ.  ದೇಶ, ರಾಜ್ಯ, ಮನೆ ಸುರಕ್ಷಿತವಾಗಿ ಇರಬೇಕೆಂದರೆ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Leave a Reply

ಹೊಸ ಪೋಸ್ಟ್‌