ವಿಜಯಪುರ: ಚುನಾವಣೆ ಮತದಾನ ಮಂಗಳವಾರ ಮುಗಿದ ನಂತರ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಈಗ ರಿಲ್ಯಾಕ್ಸ್ ಮೂಡ್ ನಲ್ಲಿದ್ದು, ಬುಧವಾರ ರಿಲ್ಯಾಕ್ಸ್ ಆಗಿ ಎಲೆಕ್ಷನ್ ಮಾಹಿತಿ ಪಡೆದಿದ್ದಾರೆ.
ಟಿಕೆಟ್ ಘೋಷಣೆ ನಂತರ ಜಿಲ್ಲಾದ್ಯಂತ ಎಲ್ಲ ಕಡೆ ಓಡಾಡಿದ್ದ ಪ್ರೊ.ರಾಜು ಆಲಗೂರ ಅವರು ಮಂಗಳವಾರ ಮತದಾನ ಮುಗಿಯುತ್ತಿದ್ದಂತೆ ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರೆ. ಬುಧವಾರ ಬೆಳಿಗ್ಗೆ ಕುಟುಂಬ ಸದಸ್ಯರ ಜೊತೆ ಕಾಲ ಕಳೆದರು. ಮತದಾನದ ಮಾಹಿತಿಗಾಗಿ ಬೆಳಿಗ್ಗೆ ಪತ್ರಿಕೆಗಳನ್ನು ಓದಿದ ಅವರು, ಬೆಳಿಗ್ಗೆ ತಮ್ಮ ನಿವಾಸಕ್ಕೆ ಆಗಮಿಸಿದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಮತದಾನದ ಪ್ರಮಾಣ, ತಮಗೆ ಪೂರಕವಾಗಿರುವ ಅಂಶಗಳು, ಎಲ್ಲೆಲ್ಲಿ ತಮಗೆ ಹೆಚ್ಚು ಅನುಕೂಲವಾಗಿದೆ ಮುಂತಾದ ಮಾಹಿತಿ ಸಂಗ್ರಹಿಸಿದರು.
ವಿಡಿಯೋ ಸುದ್ದಿ ನೋಡಿ:
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಗೆಲುವು ನನ್ನದಾಗಲಿದೆ. ಜಿಲ್ಲೆಯ ಎಲ್ಲ ಕಡೆಯಿಂದಲೂ ಕಾಂಗ್ರೆಸ್ ಪರ ಉತ್ತಮ ವರದಿಗಳು ಬರುತ್ತಿವೆ. ನಗರ ಪ್ರದೇಶಗಳಲ್ಲಿ ಬಿಜೆಪಿಗೆ ಹೆಚ್ಚಿನ ಮತದಾನವಾಗುವುದು ವಾಡಿಕೆಯಾಗಿದ್ದರೂ ಈ ಸಲ ಅದು ಸುಳ್ಳಾಗಲಿದೆ. ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಎಲ್ಲ ಲಕ್ಷಣಗಳಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಂತರ ಬಿ.ಎಲ್.ಡಿ.ಇ ಆವರಣದಲ್ಲಿರುವ ಕಚೇರಿಗೆ ತೆರಳಿ ಅಲ್ಲಿ ಚುನಾವಣೆಯಲ್ಲಿ ತಮ್ಮೋಂದಿಗೆ ಕೈಜೋಡಿಸಿದ ಮುಖಂಡರೊಂದಿಗೆ ಮತದಾನದ ಕುರಿತು ಚರ್ಚೆ ನಡೆಸಿದರು. ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ. ಮಹಾಂತೇಶ ಬಿರಾದಾರ, ಮುಖಂಡರಾದ ಸಂಗಮೇಶ ಬಬಲೇಶ್ವರ, ಉಪಮೇಯರ್ ದಿನೇಶ ಹಳ್ಳಿ, ಚಂದ್ರಶೇಖರ ಶೆಟ್ಟಿ, ಡಾ. ಗಂಗಾಧರ ಸಂಬಣ್ಣಿ ಹಾಗೂ ಪ್ರಫುಲ್ ಮಂಗಾನವರ ಸೇರಿದಂತೆ ಇತರರ ಜೊತೆಗೆ ಮಾತುಕತೆ ನಡೆಸಿದರು.
ಸಚಿವ ಎಂ. ಬಿ. ಪಾಟೀಲ ನಿವಾಸಕ್ಕೆ ಭೇಟಿ
ನಂತರ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು, ಅವರ ಜೊತೆ ಮಾತುಕತೆ ನಡೆಸಿ ಚುನಾವಣೆ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡರು. ನಂತರ ಅವರೊಂದಿಗೆ ಭೋಜನ ಮಾಡಿದರು. ಅಲ್ಲದೇ, ಸಚಿವರೂ ಕೂಡ ಚುನಾವಣೆಯಲ್ಲಿ ಪ್ರೊ. ರಾಜು ಆಲಗೂರ ಗೆಲ್ಲುತ್ತಾರೆ ಎಂದು ಹೇಳಿದ್ದು, ಅವರಲ್ಲಿ ಸಂತಸ ಹೆಚ್ಚಿಸಿತು.
ದೇವಸ್ಥಾನಗಳಿಗೆ ಭೇಟಿ
ಸಂಜೆ ಪ್ರೊ. ರಾಜು ಆಲಗೂರ ಅವರು ನಾನಾ ದೇವಸ್ಥಾನಗಳಿಗೆ ಭೇಟಿ ನಮನ ಸಲ್ಲಿಸಿದರು.