ದೇವ್ರು ಎಲ್ಲಾ ಕೊಟ್ಟಾನ- ನಾ ಸಂತೃಪ್ತ ಅದೀನಿ- ಪ್ರತಿ ಹಳ್ಯಾಗ ಕನಿಷ್ಠ ಒಂದು ವೋಟ್ ಲೀಡ್ ಸಿಗ್ತದ- ರಮೇಶ ಜಿಗಜಿಣಗಿ

ವಿಜಯಪುರ: ನಾನೊಬ್ಬ ಸಂತೃಪ್ತ ರಾಜಕಾರಣಿ.  ನನಗಿದು 13ನೇ ಚುನಾವಣೆಯಾಗಿದ್ದು, ಈ ಬಾರಿಯೂ ಪ್ರತಿ ಹಳ್ಳಿಯಲ್ಲಿ ಕನಿಷ್ಠ ಒಂದು ಮತವನ್ನಾದರೂ ಹೆಚ್ಚಿಗೆ ಪಡೆದು ಗೆಲ್ಲುವುದು ಗ್ಯಾರಂಟಿ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.

ಮಂಗಳವಾರ ಮತದಾನ ಮುಗಿದ ನಂತರ ಬುಧವಾರ ರಿಲ್ಯಾಕ್ಸ್ ಆಗಿರುವ ದಲಿತ ಹಿರಿಯ ಸಂಸದ ರಮೇಶ ಜಿಗಜಿಣಗಿ ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳು ಮತ್ತು ಸೊಸೆಯಂದಿರೊಂದಿಗೆ ಸಂತಸದಿಂದ ಕಾಲ ಕಳೆದರು.  ಬೆಳೆಗ್ಗೆ ಕುಟುಂಬದ ಎಲ್ಲ ಸದಸ್ಯರೊಂದಿಗೆ ಟಿಫನ್ ಮಾಡಿದ ಅವರು, ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಮತದಾನ ಮುಗೀತು.  ನಾನು 12 ಚುನಾವಣೆ ಮುಗಿಸಿ 13ನೇ ಚುನಾವಣೆಗೆ ಕಾಲಿಟ್ಟಿದ್ದೇನೆ.  ಇಷ್ಟೋಂದು ಸರಿಯಾಗಿ ನಡೆದ ಚುನಾವಣೆ ಯಾವತ್ತೂ ನಾನು ನೋಡಲಿಲ್ಲ.  ಈ ಮುಂಚೆ ಚುನಾವಣೆ ದಿನ ನನಗೆ ಪ್ರತಿದಿನ ಒಂದಿಲ್ಲೋಂದು ಕಡೆ ಜಗಳ, ಹೊಡೆದಾಟದ ಸುದ್ದಿ ಬರುತ್ತಿದ್ದವು.  ಈ ಬಾರಿ ಒಂದೂ ಕರೆ ಬಂದಿಲ್ಲ.  ಒಂದೆರಡು ಕಡೆ ವಿದ್ಯುನ್ಮಾನ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆಯಾಗಿದೆ ಎಂದು ಮಾತ್ರ ಕರೆ ಬಂದಿತ್ತು ಎಂದು ಸಂತಸದಿಂದ ಹೇಳಿಕೊಂಡರು.

ಎಲ್ಲ ಸಮಾಜದವರು ನನಗೆ ಮತ ಹಾಕಿದ್ದಾರೆ ಪ್ರತಿ ಹಳ್ಳಿಯಲ್ಲೂ ಕನಿಷ್ಠ ಒಂದು ಮತ ಪ್ಲಸ್ ಆಗುತ್ತದೆ

ನಿಜವಾಗಿಯೂ ಈ ಸಲ ಸಮಾಧಾನದಿಂದ ಚುನಾವಣೆ ನಡೆದಿದೆ.  ಎಲ್ಲ ಸಮಾಜದ ಒಗ್ಗಟ್ಟಿನಿಂದ ನರೇಂದ್ರ ಮೋದಿಗೆ ನಾವು ವೋಟು ಹಾಕುತ್ತೇವೆ ಎಂದು ಹೇಳಿ ಬಿಜೆಪಿಗೆ ಜಿಲ್ಲೆಯ ತುಂಬಾ ಮತ ಹಾಕಿದ್ದಾರೆ.  ಯಾವ ಹಳ್ಳಿಯಲ್ಲಿ ನಮಗೆ ಮೈನಸ್ ಆಗುವುದಿಲ್ಲ.  ಪ್ರತಿಯೊಂದು ಹಳ್ಳಿಯಲ್ಲಿ ಕನಿಷ್ಠ ಒಂದು ವೋಟ್ ಆದರೂ ಹೆಚ್ಚಾಗಿರುತ್ತದೆ.  ಭಯಂತರ ರೆಸ್ಪಾನ್ಸ್ ಸಿಕ್ಕಿದ್ದು ಚೆನ್ನಾಗಿದೆ ಎಂದು ಅವರು ಹೇಳಿದರು.

ವಿಡಿಯೋ ಸುದ್ದಿ ನೋಡಿ: 

 

ಮತದಾರರು, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ ಸಂಸದ

ಮೊಟ್ಟ ಮೊದಲು ನನ್ನ ಕ್ಷೇತ್ರದ ಜನರಿಗೆ ಅಭಿನಂದನೆ ಹೇಳಲು ಬಯಸುತ್ತೇನೆ.  ಎರಡನೇಯದಾಗಿ ನನ್ನ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಹೇಳಲು ಬಯಸುತ್ತೇನೆ.  ಎಷ್ಟೋಂದು ಬಿಸಿಲಿದ್ದರೂ ನನ್ನನ್ನು ಗೆಲ್ಲಿಸಲು ನಮ್ಮ ಕಾರ್ಯಕರ್ತರು ಪರಿಶ್ರಮ ಪಟ್ಟಿದ್ದಾರೆ.  ಅದರ ರಿಜಲ್ಟ್ 4ನೇ ತಾರಿಖಿಗೆ ಬರುತ್ತದೆ.  ಆ ಮಾತು ಬೇರೆ.  ಅವರಿಗೂ ನನ್ನ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಚುನಾವಣೆ ಮತದಾನದ ಬಳಿಕ ಮೊಮ್ಮಕ್ಕಳೊಂದಿಗೆ ರಿಲ್ಯಾಕ್ಸ್ ಮೂಡ್ ನಲ್ಲಿರುವ ಸಂಸದ ರಮೇಶ ಜಿಗಜಿಣಗಿ.

ನನ್ನಷ್ಟು ಸಂತೃಪ್ತ ರಾಜಕಾರಣಿ ಬೇರೋಬ್ಬರಿಲ್ಲ ಮಲಗಿದ ತಕ್ಷಣ ನಿದ್ದೆ ಬರುತ್ತದೆ

ರಾಜಕಾರಣ ಎಂದರೆ ಹೀಗೇ.  ಬಹಳ ಜನರಿಗೆ ಈ ಭಾಗ್ಯ ಸಿಗುವುದಿಲ್ಲ.  ಮಕ್ಕಳು, ಮೊಮ್ಮಕ್ಕಳು, ಸಂಸಾರ ಇದು ಬಹಳ ರಾಜಕಾರಣಿಗಳಿಗೆ ಸಿಗುವುದಿಲ್ಲ.  ದೇವರು ನನಗೆ ಕೊಟ್ಟಿದ್ದಾನೆ.  ನನ್ನಷ್ಟು ತೃಪ್ತಿಯಾಗಿರುವ ಮನುಷ್ಯ ರಾಜಕಾರಣದಲ್ಲಿ ಬಹಳ ಕಡಿಮೆ.  ನಮ್ಮ ಬಹಳಷ್ಟು ರಾಜಕಾರಣಿಗಳಿಗೆ ನಿದ್ದೆ ಬರುವುದಿಲ್ಲ.  ಆದರೆ, ನಾನು ಊಟ ಮಾಡಿ ಮಲಗಿದ ತಕ್ಷಣ ನನಗೆ ನಿದ್ದೆ ಬರುತ್ತದೆ.  ಅಂದರೆ ನಾನು ಯಾವುದನ್ನೂ ತಲೆಯೊಳಗೆ ಇಟ್ಟುಕೊಳ್ಳುವುದಲ್ಲ.  ಜೀವನದಲ್ಲಿ ಅಧಿಕಾರ, ಹಣ ಬಿಟ್ಟು ಬಹಳ ದೂರವಿದ್ದೇನೆ.  ಆದರೆ, ದೇವರ ನನ್ನನ್ನು ಕೈ ಬಿಟ್ಟಿಲ್ಲ.  ನಾನು ಅಪೇಕ್ಷೆ ಪಡದಿದ್ದರೂ ಕೂಡ ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ ಸಂಸದರು ಹೇಳಿದರು.

ಯಾರಿಗೂ ಕೈವೊಡ್ಡಿಲ್ಲ

ನಾನು ಯಾರಿಗೂ ಕೈವೊಡ್ಲಿಲ್ಲ.  ಈ ಚುನಾವಣೆಯಲ್ಲಿ ಯಾರಿಂದಲೂ ನಾನು ಒಂದು ರೂಪಾಯಿ ತೆಗೆದುಕೊಂಡಿಲ್ಲ.  ಪಕ್ಷದ ವತಿಯಿಂದ ಬಂದಿರುವ ಮತ್ತು ನನ್ನ ಬಳಿಯಿದ್ದ ಹಣದಲ್ಲಿಯೇ ನಿರ್ವಹಣೆ ಮಾಡಿದ್ದೇನೆ ಎಂದು ಅವರು ಹೇಳಿದರು.

ಗ್ಯಾರಂಟಿ ಯೋಜನೆ ಕೈ ಹಿಡಿಯಲ್ಲ ಮೋದಿ ಗ್ಯಾರಂಟಿಗೆ ಜಯ ಗ್ಯಾರಂಟಿ

ಗ್ಯಾರಂಟಿ ಯೋಜನೆಗಳು ಕೈ ಹಿಡಿಯುತ್ತವೇ ಎಂದು ಕಾಂಗ್ರೆಸ್ ವಿಶ್ವಾಸದಲ್ಲಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಅವರ ಆಸೆ.  ಆದರೆ, ಗ್ಯಾರಂಟಿ ಯೋಜನೆಗಳು ಇಲ್ಲಿ ಕೈ ಹಿಡಿಯುವುದಿಲ್ಲ.  ಗ್ಯಾರಂಟಿ ಯೋಜನೆಗಳ ಆಸೆಯಿಂದ ಜನ ಕಳೆದ ಬಾರಿ ಮತ ಹಾಕಿದರು.  ಆದರೆ, ಅವರು ಎಲ್ಲವನ್ನೂ ಅರ್ಧಕ್ಕೆ ಬಿಟ್ಟಿರುವುದು ಪರಿಣಾಮ ಬೀರಿದೆ.  ಅಷ್ಟೇ ಅಲ್ಲ, ರೂ. 2000 ಕೊಟ್ಟು ವೋಟು ಪಡೆದು ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ.  ನಾವು ಈ ಸಲ ಮೋದಿಯವರಿಗೆ ವೋಟು ಹಾಕುತ್ತೇವೆ ಎಂದು ಮಹಿಳೆಯರು ಹೇಳುತ್ತಿದ್ದಾರೆ.  ಕಾಂಗ್ರೆಸ್ ಗ್ಯಾರಂಟಿಗಿಂತ ಮೋದಿ ಗ್ಯಾರಂಟಿಯೇ ನಮಗೆ ಗ್ಯಾರಂಟಿ ಎಂದು ಜನ ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದರು.

Leave a Reply

ಹೊಸ ಪೋಸ್ಟ್‌