ವಿಜಯಪುರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಮತ್ತೀತರ ಕಾರ್ಯತಂತ್ರಗಳ ಕುರಿತು ಬ್ಯೂಸಿಯಾಗಿದ್ದ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಈಗ ಮತದಾನ ಮುಕ್ತಾಯವಾಗಿರುವ ಹಿನ್ನೆಯಲ್ಲಿ ರಿಲ್ಯಾಕ್ಸ್ ಮೂಡಿನಲ್ಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರ ಗೆಲುವಿನ ಅಂತರ, ಅದಕ್ಕೆ ಪೂರವಾಗಿರುವ ಅಂಶಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಪ್ರತಿದಿನ ಬೆಳಿಗ್ಗೆಯಿಂದಲೇ ನಾನಾ ಗ್ರಾಮಗಳಿಗೆ ತೆರಳಿ ಮತದಾರರನ್ನು ಭೇಟಿ ಮಾಡಿದ ಸಚಿವರು ಪ್ರೋ. ರಾಜು ಆಲಗೂರ ಪರ ಮತಯಾಚಿಸಿದ್ದರು. ಅಲ್ಲದೇ, ನಾನಾ ಸಭೆಗಳಲ್ಲಿ ಪಾಲ್ಗೊಂಡು ಕಾಂಗ್ರೆಸ್ ಸರಕಾರ ಜನರಿಗೆ ನೀಡಿರುವ ಗ್ಯಾರಂಟಿ ಯೋಜನೆಗಳು, ಅದರಿಂದ ಪ್ರತಿಯೊಂದು ಕುಟುಂಬಕ್ಕಾದ ಲಾಭಗಳು ಮತ್ತು ಬಿಜೆಪಿಯ ಪೊಳ್ಳು ಭರವಸೆಗಳಿಂದ ಜನಸಾಮಾನ್ಯರಿಗೆ ಉಂಟಾಗಿರುವ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಟ್ಟಿದ್ದರು. ಅಲ್ಲದೇ, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ನೀಡಲಾಗುವ ಹೊಸ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಿದ್ದರು.
ವಿಡಿಯೋ ಸುದ್ದಿ ನೋಡಿ:
ಮತದಾನ ಮುಕ್ತಾಯ ಹಿನ್ನೆಯಲ್ಲಿ ಇಂದು ಬುಧವಾರ ನಗರದ ತಮ್ಮ ನಿವಾಸದಲ್ಲಿರುವ ಸಚಿವರು, ಭೇಟಿಗೆ ಆಗಮಿಸಿದ ಜಿಲ್ಲೆಯ ನಾನಾ ಭಾಗಗಳ ಮುಖಂಡರಿಂದ ಮತದಾನ ಪ್ರಮಾಣ ಮತ್ತು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಅಂತರದ ಕುರಿತು ಮಾಹಿತಿ ಪಡೆದರು. ನಿಮ್ಮ ಊರಿನಲ್ಲಿ ಎಷ್ಟು ಮತದಾನವಾಗಿದೆ? ಯುವಕರು, ಮಹಿಳೆಯರು ಹಾಗೂ ಹಿರಿಯರ ಉತ್ಸಾಹ ಹೇಗಿತ್ತು? ಬೆಳಿಗ್ಗೆ ಮತದಾನದ ಪ್ರಮಾಣ ಹೇಗೆ ನಡೆಯಿತು ಸೇರಿದಂತೆ ಯಾವ್ಯಾವ ಮತಗಟ್ಟೆ ಮತ್ತು ಊರುಗಳಲ್ಲಿ ನಮಗೆ ಹೆಚ್ಚಿನ ಲೀಡ್ ಸಿಗಬಹುದು ಎಂಬುದರ ಕುರಿತು ಮಾಹಿತಿ ಸಂಗ್ರಹಿಸಿದರು. ಅಲ್ಲದೇ, ಹಲವಾರು ಮುಖಂಡರು ಮೊಬೈಲ್ ಮೂಲಕವು ಸಚಿವರಿಗೆ ಮತದಾನ ಮತ್ತಿತರ ವಿಷಯಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಬೇಸಿಗೆಯಲ್ಲಿಯೇ ಚುನಾವಣೆ ಬಂದಿದ್ದರಿಂದ ಮತದಾರರಿಗೆ ಬಿಸಿಲಿನ ಬೇಗೆಯಿಂದ ತೊಂದರೆಯಾಗದಂತೆ ಪ್ರಚಾರ ಕಾರ್ಯಕ್ರಮ ನಿಗದಿ ಪಡಿಸಲಾಗಿತ್ತು. ಪ್ರತಿದಿನ ಬೆಳಿಗ್ಗೆ ಎರಡು ಮತ್ತು ಸಂಜೆ ಮೂರು ಕಡೆಗಳಲ್ಲಿ ಪ್ರಚಾರ ನಡೆಸಲಾಗಿತ್ತು. ಮತದಾನ ಚೆನ್ನಾಗಿ ನಡೆದಿದೆ. ನಮ್ಮ ಅಭ್ಯರ್ಥಿ ಪ್ರೋ. ರಾಜು ಆಲಗೂರ ಅವರು ನಿಶ್ಚಿತವಾಗಿಯೂ ಗೆಲುವು ಸಾಧಿಸಲಿದ್ದಾರೆ. ಕನಿಷ್ಠ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಎರಡನೇ ಹಂತದಲ್ಲಿ ಚುನಾವಣೆ ನಡೆದ ಒಟ್ಟು 14 ಕ್ಷೇತ್ರಗಳ ಪೈಕಿ ಕನಿಷ್ಠ 10 ರಿಂದ 11ಸ್ಥಾನಗಳಲ್ಲಿ ಮತ್ತು ರಾಜ್ಯದಲ್ಲಿ 19 ರಿಂದ 20 ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ ಎಂದು ತಿಳಿಸಿದರು.
ಕಳೆದ 10 ವರ್ಷಗಳಲ್ಲಿ ಮೋದಿ ಅವರು ನೀಡಿರುವ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಜನರಿಗೆ ಅಚ್ಚೇ ದಿನ್ ಬಂದಿಲ್ಲ. ಯುವಕರಿಗೆ ಉದ್ಯೋಗ ಸಿಕ್ಕಿಲ್ಲ. ಬೆಲೆ ಏರಿಕೆ ನಿಯಂತ್ರಿಸಿಲ್ಲ. ಎಲೆಕ್ಟ್ರಾಲ್ ಬಾಂಡ್ ಹಗರಣಗಳು ಜನರಿಗೆ ಕೇಂದ್ರ ಸರಕಾರದ ಬಗ್ಗೆ ಅಸಮಾಧಾನ ಉಂಟು ಮಾಡಿದ್ದವು. ಈ ಬಾರಿ ಮೋದಿ ಹವಾ ಕೂಡ ಇರಲಿಲ್ಲ. ಬಿಜೆಪಿ ಒಡೆದ ಮನೆಯಾಗಿತ್ತು. ಆದರೆ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ 10 ಜನರಲ್ಲಿ ಏಳು ಜನ ಮಹಿಳೆಯರು ನಾವು ಗ್ಯಾರಂಟಿ ಪರ ಮತ ಚಲಾಯಿಸುತ್ತೇವೆ ಎಂದು ಹೇಳಿದ್ದರು. ಅಲ್ಲದೇ, ಎಲ್ಲ ಕಡೆ ಸಂಘಟಿತ ಪ್ರಯತ್ನದ ಫಲವಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಗೆಲುವು ಸಾಧಿಸಲಿದ್ದಾರೆ ಎಂದು ಸಚಿವ ಎಂ. ಬಿ. ಪಾಟೀಲ ತಿಳಿಸಿದರು.