ವಿಜಯಪುರ: ರಾಜ್ಯದಲ್ಲಿ ಮಾರ್ಚ್– ಏಪ್ರಿಲ್ ನಲ್ಲಿ ನಡೆದ ಎಸ್. ಎಸ್. ಎಲ್. ಸಿ ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲೆಯು ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ತೋರಿದ್ದು, ಇದಕ್ಕಾಗಿ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ವೃಂದ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅಭಿನಂದನೆ ತಿಳಿಸಿದ್ದಾರೆ.
ಈ ಬಾರಿಯ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ವಿಜಯಪುರ ಶೈಕ್ಷಣಿಕ ಜಿಲ್ಲೆಯು ರಾಜ್ಯದಲ್ಲಿ 11 ನೇ ಸ್ಥಾನ (ಕಳೆದ ಬಾರಿಯೂ 11 ನೇ ಸ್ಥಾನ) ಪಡೆದಿದ್ದು, ಶೇ. 79.31 ಫಲಿತಾಂಶ ಹೊಂದಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 40368 ವಿದ್ಯಾರ್ಥಿಗಳಲ್ಲಿ 15615 ಬಾಲಕರು, 16401 ಬಾಲಕಿಯರು ಸೇರಿ ಒಟ್ಟು 32016 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿಯ ಫಲಿತಾಂಶ ವೃದ್ಧಿಗಾಗಿ ಶಿಕ್ಷಣ ಇಲಾಖೆ ವತಿಯಿಂದ ಹಲವು ಶೈಕ್ಷಣಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಲ್ಲಾ ಶಾಲೆಗಳ ಮುಖ್ಯ ಗುರುಗಳು ಮತ್ತು ಶಿಕ್ಷಕರೊಂದಿಗೆ ನಿರಂತರ ಸಭೆಗಳನ್ನು ನಡೆಸಿ ಸೂಕ್ತ ಮಾರ್ಗದರ್ಶನ ನೀಡಿದ್ದರು. ಡಿಸೆಂಬರ್ ವೇಳೆಗೆ ಎಲ್ಲಾ ವಿಷಯವಾರು ಭೋದನೆಯನ್ನು ಮುಕ್ತಾಯಗೊಳಿಸಿ, ಮಾರ್ಚ್ ವರೆಗೆ ಪುರ್ನಮನನ ಕಾರ್ಯಕ್ರಮ ನಡೆಸಲಾಗಿತ್ತು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿ ನೀಡಿ ಸಜ್ಜುಗೊಳಿಸಿ, ಶಾಲಾ ಮತ್ತು ತಾಲೂಕು ಹಂದಲ್ಲಿ ನುರಿತಿ ಶಿಕ್ಷಕರು ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ಕೋಚಿಂಗ್ ವ್ಯವಸ್ಥೆ ಮಾಡಲಾಗಿತ್ತು. ಗುಣಮಟ್ಟದ ಫಲಿತಾಂಶಕ್ಕಾಗಿ ಶಾಲಾ ಹಂತದ ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ವಿಶೇಷ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲದೇ ಶಾಲೆಯ ಮುಖ್ಯ ಗುರುಗಳು ಮತ್ತು ಶಿಕ್ಷಕರಿಗೂ ತಾಲೂಕು ಮಟ್ಟದಲ್ಲಿ ತರಬೇತಿಗಳನ್ನು ಆಯೋಜಿಸುವುದರ ಜೊತೆಗೆ, ಮಕ್ಕಳ ಕಲಿಕೆಯ ಕುರಿತಂತೆ ನಿರಂತರವಾಗಿ ಶಿಕ್ಷಕರು ಮತ್ತು ಪೋಷಕರೊಂದಿಗೆ ಅನುಪಾಲನೆ ಮಾಡಲಾಗಿತ್ತು.
ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಅನಂದ ಅವರು ಆಗಾಗ ಸಭೆಗಳನ್ನು ಆಯೋಜಿಸಿ, ಅಗತ್ಯ ಸೂಚನೆ ಮಾರ್ಗದರ್ಶನಗಳನ್ನು ನೀಡಿದ್ದು, ಅವುಗಳ ಅನುಸರಣೆ ಜೊತೆಗೆ ಜಿಲ್ಲೆಯ ಜನಪ್ರತಿನಿಧಿಗಳ ನಿರ್ದೇಶಗಳ ಪಾಲನೆ ಹಾಗೂ ಸಂಘಟಿತ ಪ್ರಯತ್ನದಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ.
ಎಸ್. ಎಸ್. ಎಲ್. ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಸರಕಾರಿ ಆದರ್ಶ ವಿದ್ಯಾಲಯದ ಮೂಲತಃ ಡವಳಗಿ ಗ್ರಾಮದ ವಿದ್ಯಾರ್ಥಿನಿ ಪವಿತ್ರಾ ಮಡಿವಾಳಪ್ಪಗೌಡ ಕೊಣ್ಣೂರ 625 ಅಂಕಗಳಿಗೆ 623, ಶೇ. 99.68, ದ್ವೀತಿಯ ಸ್ಥಾನ ಪಡೆದ ವಿಜಯಪುರ ತಾಲೂಕಿನ ಕಾರಜೋಳ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರತಿಭಾ ನರುತಿ 622 ಅಂಕ ಶೇ. 99.52 ಹಾಗೂ ತೃತೀಯ ಸ್ಥಾನದಲ್ಲಿರುವ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಖಾಸಗಿ ಶಾಲೆಯ ಭೂಮಿಕಾ ಜುಮನಾಳ 620 ಅಂಕ ಶೇ.99.2 ಪಡೆದಿರುವದಕ್ಕೆ ಜಿಲ್ಲಾಧಿಕಾರಿ ಅಭಿನಂದಿಸಿ,ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.
ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ದೃತಿಗೆಡುವ ಅವಶ್ಯಕತೆಯಿಲ್ಲ. ನಿಮಗೆ ಉತ್ತೀಣರಾಗಲು ಮತ್ತೊಂದು ಅವಕಾಶವಿದ್ದು, ಜೂನ್ 7 ರಿಂದ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆ-2 ರಲ್ಲಿ ತಮಗೆ ಪುನಃ ಪರೀಕ್ಷೆ ಬರೆಯಲು ಅವಕಾಶವಿದೆ. ಜಿಲ್ಲೆಯ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಶಿಕ್ಷಕರು ಪ್ರಸ್ತುತ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳಿ, ಪರೀಕ್ಷೆ-2 ಗೆ ಅವರಿಗೆ ಅಗತ್ಯ ತರಬೇತಿ ನೀಡುವುದರ ಮೂಲಕ ಅವರೂ ಕೂಡಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಜಿಲ್ಲೆಯು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಶೇ.100 ಸಾಧನೆ ಮಾಡಲು ತಮ್ಮ ಶಕ್ತಿ ಮೀರಿ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂ ಬಾಲನ್ ಅವರು ತಿಳಿಸಿದ್ದಾರೆ