ವಿದ್ಯಾರ್ಥಿಯನ್ನು ಶೈಕ್ಷಣಿಕವಾಗಿ ದತ್ತು ಪಡೆದು ಬಸವ ಜಯಂತಿ ಆಚರಿಸಿದ ಶರಣ ಸಂಗಮೇಶ ಬಬಲೇಶ್ವರ ದಂಪತಿ

ವಿಜಯಪುರ: ನಗರದ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟಿನ ಸಂಸ್ಥಾಪಕ ಮತ್ತು ಶರಣ ಸಂಗಮೇಶ ಬಬಲೇಶ್ವರ ದಂಪತಿ ಬಡ ವಿದ್ಯಾರ್ಥಿಯೊಬ್ಬನನ್ನು ಶೈಕ್ಷಣಿಕವಾಗಿ ದತ್ತು ಪಡೆದು ಬಸವ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ನಗರದಲ್ಲಿರುವ ಟ್ರಸ್ಚಿನ ಕಾರ್ಯಾಲಯದಲ್ಲಿ ಬಸವ ಜಯಂತಿ ಕಾರ್ಯಕ್ರಮ ನಡೆಯಿತು.  ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿದ್ಯಾರ್ಥಿ ಅಶೋಕ ಜಾಧವ ಅವರನ್ನು ದತ್ತು ಪಡೆದು ಸಂಗಮಶ ಮತ್ತು ಅವರ ಪತ್ನಿ ಶ್ವೇತಾ ಬಬಲೇಶ್ವರ ದಂಪತಿ ಬಸವೇಶ್ವರರ ಆಶಯಗಳಿಗೆ ತಕ್ಕಂತೆ ಸಮಾಜಮುಖಿ ಕಾರ್ಯ ಮಾಡಿದರು.

ದತ್ತು ಪಡೆಯಲು ಪ್ರಮುಖ ಕಾರಣ

ನಾಲ್ಕು ತಿಂಗಳ ಹಿಂದೆ ತಾಯಿಯನ್ನು ಮತ್ತು ನಾಲ್ಕು ವರ್ಷದ ಹಿಂದೆ ತಂದೆಯನ್ನು ಕಳೆದುಕೊಂಡಿರುವ ಅಭಿಷೇಕ ಜಾಧವ ಎಂಬ ವಿದ್ಯಾರ್ಥಿ ಶಿಕ್ಷಣವನ್ನು ಮುಂದುವರಿಸಲು ಪರದಾಡುತ್ತಿದ್ದ.  ಪ್ರತಿಭಾವಂತ ಬಡ ಮಕ್ಕಳನ್ನು ಗುರುತಿಸಿ ಸಮಾಜದಲ್ಲಿ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿರುವ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಗೆ ಈ ವಿಷಯ ಗಮನಕ್ಕೆ ಬಂದಿತ್ತು.  ಟ್ರಸ್ಟಿನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರ ಮನೆಗೆ ಬರುತ್ತಿದ್ದ ಅಜ್ಜಿಯೊಬ್ಬರು ಸಂಗಮೇಶ್ವರ ಕಾಲೋನಿಯಲ್ಲಿಯೇ ಒಬ್ಬ ಹುಡುಗ ತಂದೆ ತಾಯಿಯನ್ನು ಕಳೆದುಕೊಂಡು ಮುಂದಿನ ಶಿಕ್ಷಣಕ್ಕಾಗಿ ತೊಂದರೆ ಅನುಭವಿಸುತ್ತಿರುವ ವಿಷಯವನ್ನು ಶ್ವೇತಾ ಬಬಲೇಶ್ವರ ಅವರಿಗೆ ತಿಳಿಸಿದ್ದರು.  ಈ ವಿಷಯವನ್ನು ಶ್ವೇತಾ ಬಬಲೇಶ್ವರ ಅವರು ತಮ್ಮ ಪತಿಯ ಗಮನಕ್ಕೆ ತಂದಿದ್ದರು.

ಬಸವ ಜಯಂತಿಯ ದಿನ ಸಂಗಮೇಶ ಬಬಲೇಶ್ವರ ಅವರು ಸಂಗಮೇಶ್ವರ ದೇವಾಲಯದ ಅರ್ಚಕ ಸಿದ್ದರಾಮಯ್ಯ ಹಿರೇಮಠ ಅವರಿಗೆ ಕರೆ ಮಾಡಿ ವಿದ್ಯಾರ್ಥಿಯನ್ನು ಕರೆದುಕೊಂಡು ಬರುವಂತೆ ಮನವಿ ಮಾಡಿದ್ದರು.  ಆಗ ಅರ್ಚಕರು ಒಂದು ಗಂಟೆಯಲ್ಲಿ ಅಭಿಷೇಕ ಜಾಧವನನ್ನು ಕರೆದುಕೊಂಡು ಬಂದರು.  ಅಲ್ಲದೇ, ಬಸವ ಜಯಂತಿ ಕಾರ್ಯಕ್ರಮಕ್ಕೆ ಆ ವಿದ್ಯಾರ್ಥಿಯನ್ನೇ ಮುಖ್ಯ ಅತಿಥಿಯಾಗಿ ಮಾಡಿದರು.  ಅಲ್ಲದೇ, ಅಭಿಷೇಕ ಜಾಧವ ಮುಂದಿನ ಶೈಕ್ಷಣಿಕ ವೆಚ್ಚವನ್ನು ಅರ್ಚಕರ ಮೂಲಕ  ಹಸ್ತಾಂತರಿಸಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಗಮೇಶ ಬಬಲೇಶ್ವರ, ತಂದೆ- ತಾಯಿ ಇಲ್ಲದ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ನನ್ನ ಬದುಕಿನ ಬಹು ಮುಖ್ಯ ಜವಾಬ್ದಾರಿಯಾಗಿದೆ.  ಈ ಸೇವಾ ಕಾರ್ಯದಲ್ಲಿ ಸಿಗುವ ಆತ್ಮತೃಪ್ತಿ ಬೇರೆ ಯಾವುದರಲ್ಲೂ ಸಿಗುವುದಿಲ್ಲ.  ತಂದೆ- ತಾಯಿಯನ್ನು ಕಳೆದುಕೊಂಡು ಬದುಕು ಕಟ್ಟಿಕೊಂಡವನು ನಾನು.  ಅಂಥ ಮಕ್ಕಳ ನೋವಿನ ಬದುಕು ಹೇಗಿರುತ್ತೆ ಎಂಬುದರ ಕುರಿತು ನನಗೆ ಎಲ್ಲರಿಗಿಂತ ಚೆನ್ನಾಗಿ ಗೊತ್ತಿದೆ.  ಪ್ರತಿ ವರ್ಷ ನಾವು  ಹಲವಾರು ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದುಕೊಂಡರೂ ಅದನ್ನು ಯಾವುದೇ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳೊಂದಿಗೆ ಹಂಚಿಕೊಳ್ಳುವದಿಲ್ಲ.  ಆದರೆ ನಮ್ಮ ಮನೆಗೆ ಬರುವ ಅಜ್ಜಿ ನಮಗೆ ಈ ವಿಷಯ ತಿಳಿಸಿರದಿದ್ದರೆ ಅಭಿಷೇಕ ಜಾಧವ ಸೇವೆ ಮಾಡುವ ಸೌಭಾಗ್ಯ ನಮಗೆ ದೊರೆಯುತ್ತಿರಲಿಲ್ಲ ಎಂದು ತಿಳಿಸಿದರು.

ನಿಮ್ಮ ಓಣಿಗಳಲ್ಲಿ, ಊರುಗಳಲ್ಲಿ ಶಿಕ್ಷಣದಿಂದ ವಂಚಿತರಾಗಿರುವ ಇಂಥ ಮಕ್ಕಳ ಕುರಿತು ಮಾಹಿತಿ ಇದ್ದರೆ ಅವರನ್ನ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿ.  ಇದಕ್ಕಿಂತ ಪುಣ್ಯದ ಸೇವೆ, ಭಗವಂತನ ಸೇವೆ, ಬಸವ ಸೇವೆ ಮತ್ತೊಂದು ಇರಲಾರದು ಎಂಬುದು ನನ್ನ ನಂಬಿಕೆಯಾಗಿದೆ.  ಸಾಧ್ಯವಾದರೆ ಅಂಥ ಮಕ್ಕಳನ್ನು ನಮ್ಮ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಗೆ ಪರಿಚಯಿಸುವ ಪುಣ್ಯದ ಕೆಲಸ ಮಾಡಿ  ಎಂದು ಸಂಗಮೇಶ ಬಬಲೇಶ್ವರ ವಿನಂತಿಸಿದರು

ಈ ಸಂದರ್ಭದಲ್ಲಿ ಪ್ರದೀಪ ಲಿಂಗದಳ್ಳಿ  ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌