ವಿಜಯಪುರ: ನಗರದ ಕುಡಿಯುವ ನೀರಿನ ತೊಂದರೆ ನೀಗಿಸಲು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಕೈಗೊಂಡ ಪ್ರಯತ್ನ ಫಲ ನೀಡಿದ್ದು, ಈಗ ಭೂತನಾಳ ಕೆರೆಗೆ ನೀರು ಹರಿದು ಬರುತ್ತಿದೆ.
ಭೀಕರ ಬರ ಹಾಗೂ ಬೇಸಿಗೆ ಇರುವದರಿಂದ ಕಾಲುವೆಗಳ ಮೂಲಕ ಕುಡಿಯುವ ನೀರು ಪೂರೈಸಲು ಸಚಿವರು ಒಂದು ತಿಂಗಳಿನಿಂದ ನಿರಂತರವಾಗಿ ಜಿಲ್ಲಾಧಿಕಾರಿಗಳ ಮೂಲಕ ಪ್ರಾದೇಶಿಕ ಆಯುಕ್ತರಿಗೆ ಕೋರಿದ್ದರು. ಅದಕ್ಕೆ ಆಯುಕ್ತರು ಸ್ಪಂದಿಸಿದ್ದು, ಚುನಾವಣೆ ಆಯೋಗದ ಅನುಮತಿ ಪಡೆದು ನೀರು ಬಿಡುಗಡೆ ಮಾಡಲು ಆದೇಶ ನೀಡಿದ್ದಾರೆ. ಈಗ ಆಲಮಟ್ಟಿ ಜಲಾಶಯದಿಂದ ತಿಡಗುಂದಿ ಅಕ್ವಾಡಕ್ಟ್ ಕಾಲುವೆ ಮೂಲಕ ಭೂತನಾಳ ಕೆರೆಗೆ ನೀರು ಹರಿಸಲಾಗುತ್ತಿದ್ದು, ಈ ನೀರು ಭೂತನಾಳ ಕೆರೆಗೆ ಹರಿದು ಬರುತ್ತಿದೆ.
ಈಗ ಭೂತನಾಳ ಕೆರೆಯಿಂದ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡು ಸಂಖ್ಯೆ 4, 5, 6, 10 ಮತ್ತು 12ರ ನಿವಾಸಿಗಳಿಗೆ ಬೇಸಿಗೆ ಮುಗಿಯುವವರೆಗ ಸಮರ್ಪಕವಾಗಿ ನೀರು ಪೂರೈಕೆಯಾಗಲಿದೆ.
ಈ ಮುಂಚೆಯೂ ನಗರದಲ್ಲಿ ನೀರಿನ ಸಮಸ್ಯೆ ಪರಿಹರಿಸಲು ತಿಡಗುಂದಿ ಕಾಲುವೆಯಿಂದ ಭೂತನಾಳ ಕೆರೆ ತುಂಬಿಸಿ, ನಗರದಲ್ಲಿ ಸಮಪರ್ಕವಾಗಿ ಕುಡಿಯುವ ನೀರು ಪೂರೈಸಲಾಗಿತ್ತು. ಈಗ ಮತ್ತೆ ಭೂತನಾಳ ಕೆರೆಗೆ ಹಾಗೂ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯಡಿ ತಿಡಗುಂದಿ ಅಕ್ವಾಡಕ್ಟ್ ಕಾಲುವೆ ಮೂಲಕ ಮೇ 28ರ ವರೆಗೆ ನೀರು ಹರಿಸಲಾಗುತ್ತಿದೆ ಎಂದು ಸಚಿವರ ಕಚೇರಿಯ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.