ಬೆಂಗಳೂರು: ಕೊನೆಯ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಇಬ್ಬರಿಗೆ ರೋಬೋಟಿಕ್‌ಸಹಾಯದಿಂದ ಅಪರೂಪದ “ಸಂಕೀರ್ಣ ಕಿಡ್ನಿ ಕಸಿ” ಶಸ್ತ್ರಚಿಕಿತ್ಸೆಯನ್ನು ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ನಡೆಸಿದೆ.
ಯೆಮೆನ್ ದೇಶದ 11 ವರ್ಷದ ಬಾಲಕ ಮತ್ತು ಬೆಂಗಳೂರಿನ 34 ವರ್ಷದ ವ್ಯಕ್ತಿ ಈ ಇಬ್ಬರಿಗೂ ರೋಬೋಟ್ ತಂತ್ರಜ್ಞಾನ ಬಳಸಿ ಯುರೋ ಆಂಕೊಲಾಜಿಸ್ಟ್ ಡಾ. ಮೋಹನ್ ಕೇಶವಮೂರ್ತಿ ಹಾಗೂ ನೆಫ್ರಾಲಜಿಸ್ಟ್ ಡಾ. ಎಸ್. ಮಂಜುನಾಥ್ ಅವರ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುರೋ ಆಂಕೊಲಾಜಿಸ್ಟ್ ಡಾ. ಮೋಹನ್ ಕೇಶವಮೂರ್ತಿ, ಯೆಮೆನ್ ದೇಶದ ೧೧ ವರ್ಷದ ಅಹ್ಮದ್ ಎಂಬ ಬಾಲಕನು ನಾಲ್ಕನೇ ವಯಸ್ಸಿನಿಂದಲೇ ಮೂತ್ರಪಿಂಡಕ್ಕೆ ಸಂಬಂಧಿಸಿದ ಸ್ಟೆರಾಯ್ಡ್ ರೆಸಿಸ್ಟೆಂಟ್ ನೆಫ್ರೋಟಿಕ್ ಸಿಂಡ್ರೋಮ್ (ಎಸ್‌ಆರ್‌ಎನ್‌ಎಸ್)ನಿಂದ ಬಳಲುತ್ತಿದ್ದರು. ನೆಫ್ರೋಟಿಕ್ ಸಿಂಡ್ರೋಮ್ ಒಂದು ಮೂತ್ರಪಿಂಡದ ಕಾಯಿಲೆಯಾಗಿದ್ದು, ಮೂತ್ರದಲ್ಲಿ ಪ್ರೋಟೀನ್ ಇರುವಿಕೆ, ರಕ್ತದಲ್ಲಿನ ಕಡಿಮೆ ಮಟ್ಟದ ಪ್ರೋಟೀನ್, ಅಧಿಕ ಕೊಲೆಸ್ಟ್ರಾಲ್ ಮತ್ತು ಊತದಿಂದ ಕೂಡಿರುತ್ತದೆ. ಎಸ್‌ಆರ್‌ಎನ್‌ಎಸ್‌ನಲ್ಲಿ, ಸ್ಟೀರಾಯ್ಡ್‌ಗಳ ಚಿಕಿತ್ಸೆಯ ಹೊರತಾಗಿಯೂ ಮೂತ್ರಪಿಂಡಗಳು ಹೆಚ್ಚಿನ ಪ್ರಮಾಣದ ಪ್ರೋಟೀನ್‌ಗಳನ್ನು ಮೂತ್ರಕ್ಕೆ ಸೋರಿಕೆ ಮಾಡುವುದನ್ನು ಮುಂದುವರಿಸುತ್ತವೆ. ಸ್ಟೀರಾಯ್ಡ್‌ಗಳಿಗೆ ಈ ಪ್ರತಿರೋಧವು ನಿರಂತರ ಅಥವಾ ಮರುಕಳಿಸುವ ನೆಫ್ರೋಟಿಕ್ ಸಿಂಡ್ರೋಮ್‌ಗೆ ಕಾರಣವಾಗಬಹುದು, ಇದರಿಂದ ಭವಿಷ್ಯದಲ್ಲಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಕಾರಣವಾಗಬಹುದು. ಇದೇ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕನಿಗೆ ಸಾಕಷ್ಟು ಕಡೆ ಚಿಕಿತ್ಸೆ ಕೊಡಿಸಿದ್ದರೂ ಸಹ, ಫಲಕಾರಿಯಾಗದೆ ಕಾಯಿಲೆ ಕೊನೆಯ ಹಂತಕ್ಕೆ ಬಂದು ತಲುಪಿತ್ತು. ಬಳಿಕ ಅವರು ಫೋರ್ಟಿಸ್ ಆಸ್ಪತ್ರೆಗೆ ದಾಖಲಾದರು. ಬಾಲಕನ ವಯಸ್ಸು ಕಡಿಮೆ ಇರುವ ಕಾರಣ, ಸಾಕಷ್ಟು ಮುತುವರ್ಜಿ ವಯಸಿಕೊಂಡು ರೋಬೋಟ್ ಸಹಾಯದ ಮೂಲಕ ಬಾಲಕನಿಗೆ ಕಿಡ್ನಿಕಸಿ ಮಾಡಲು ನಿರ್ಣಯಿಸಿದೆವು. ರೋಬೋಟ್ ಸಹಾಯದಿಂದ ಮಾತ್ರವೇ ನಿಖರವಾಗಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಬಾಲಕನ ಚಿಕ್ಕಮ್ಮನ ಒಂದು ಕಿಡ್ನಿಯನ್ನು ಹುಡುಗನಿಗೆ ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸಲಾಯಿತು. ಇದೀಗ ಬಾಲಕ ಆರೋಗ್ಯವಾಗಿದ್ದು, ಶಸ್ತ್ರಚಿಕಿತ್ಸೆಯ ಐದು ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.
ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ 34 ವರ್ಷದ ಚೇತನ್, ಮೊದಲಿನಿಂದಲೂ ಕೇವಲ ಒಂದು ಕಿಡ್ನಿಯನ್ನು ಮಾತ್ರ ಹೊಂದಿದ್ದರು, ಜೊತೆಗೆ ಅಧಿಕ ರಕ್ತದೊತ್ತಡ ಇದ್ದ ಕಾರಣ ಅವರ ಒಂದು ಕಿಡ್ನಿಯೂ ಸಹ ಕಾಯಿಲೆಗೆ ತುತ್ತಾಗಿತ್ತು, ಕೊನೆಯ ಹಂತಕ್ಕೆ ತಲುಪಿದ್ದರಿಂದ ಇವರ ಜೀವಕ್ಕೂ ಆಪತ್ತು ಕಾದಿತ್ತು. ಹೀಗಾಗಿ ಇವರಿಗೆ ೭೪ ವರ್ಷದ ಸ್ವಂತ ತಂದೆಯೇ ತಮ್ಮ ಕಿಡ್ನಿಯನ್ನು ದಾನ ಮಾಡಿದ್ದಾರೆ. ಇವರಿಗೂ ಸಹ ರೋಬೋಟ್ ಸಹಾಯದ ಮೂಲಕವೇ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಯಶಸ್ವಿಯಾಗಿದೆ ಎಂದು ವಿವರಿಸಿದರು.
ರೋಬೋಟ್ ಶಸ್ತ್ರಚಿಕಿತ್ಸೆಯು ಹೆಚ್ಚು ನಿಖರವಾದ ಛೇದನವನ್ನು ಅನುಸರಸಲಿದ್ದು, ಇತರೆ ಯಾವುದೇ ಅಂಗಾಂಗಳಿಗೆ ಘಾಸಿ ಮಾಡುವುದಿಲ್ಲ, ರೋಬೋಟಿಕ್ ಶಸ್ತ್ರಚಿಕಿತ್ಸೆಯಿಂದ ವೇಗವಾಗಿಯೂ ಚೇತರಿಸಿಕೊಳ್ಳಲು ನೆರವಾಗಲಿದೆ ಎಂದಿ ಹೇಳಿದರು.