ಅವೈಜ್ಞಾನಿಕ ಆಹಾರ ಪದ್ಧತಿಯಿಂದ ಕಾಯಿಲೆಗಳು ಉಲ್ಬಣ- ಪ್ರತಿನಿತ್ಯ ಔಷಧಿ ಖರ್ಚು ಹೆ್ಚ್ಚಳ- ಕನೇರಿ ಸ್ವಾಮೀಜಿ

ವಿಜಯಪುರ: ಅವೈಜ್ಞಾನಿಕ ಆಹಾರ ಸೇವನೆ ಪದ್ಧಯಿಂದಾಗಿ ಪ್ರತಿನಿತ್ಯ ಔಷಧಿಗಾಗಿ ಸರಾಸರಿ ರೂ. 150  ಹಣವನ್ನು ಖರ್ಚು ಮಾಡುತ್ತಿದ್ದೇವೆ ಎಂದು ಕೋಲ್ಹಾಪುರ ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದ್ದಾರೆ.  

ಬಬಲೇಶ್ವರ ತಾಲೂಕಿನ ಕಂಬಾಗಿಯಲ್ಲಿ ಮಧುರಾ ಆಯಿಲ್ ಇಂಡಸ್ಟ್ರೀಸ್‍ನಲ್ಲಿ ಕಟ್ಟಿಗೆ ಗಾಣದಿಂದ ಕುಸಬಿ, ಶೇಂಗಾ ಮತ್ತು ಕೊಬ್ಬರಿ ಎಣ್ಣೆ ಉತ್ಪಾದಿಸುವ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು

ಯಾವ ದೇಶದಲ್ಲಿ ಜನರ ಆರೋಗ್ಯ ಸರಿ ಇರುವುದಿಲ್ಲವೋ ಆ ದೇಶದ ಆರ್ಥಿಕ ಬೆಳವಣಿಗೆ ಸಾಧ್ಯವಿಲ್ಲ.  ರಿಫಾಯಿನ್ಡ್ ಎಣ್ಣೆ ಬಳಸುವದರಿಂದ ಮಧುಮೇಹ, ಹೃದಯ ರೋಗ, ಕ್ಯಾನ್ಸರ್ ಕಾಯಿಲೆಗಳು ಹೆಚ್ಚಾಗಿದ್ದು, ಇತ್ತೀಚಿನ ದಿನಗಳಲ್ಲಿ ಪ್ಯಾರಲೈಸಿಸ್ ಕಾಯಿಲೆಗೆ ನಾವು ಬಳಸುತ್ತಿರುವ ಎಣ್ಣೆ ಕೂಡ ಕಾರಣ ಆಗಿದೆ ಎಂದು ಅವರು ಹೇಳಿದರು.

ಒಂದು ಲೀಟರ್ ಶೇಂಗಾ ಎಣ್ಣೆ ತಯಾರಿಸಲು 3 ಕೆಜಿ ಶೇಂಗಾ ಕಾಳುಗಳು ಬೇಕು.  3 ಕೆ.ಜಿ ಶೇಂಗಾ ಕಾಳುಗಳ ಬೆಲೆ ರೂ. 330 ಆಗುತ್ತದೆ.  ಹಾಗಿದ್ದರೆ ರೂ. 110 ಗೆ ಶೇಂಗಾ ಎಣ್ಣೆ ಮಾರುಕಟ್ಟೆಯಲ್ಲಿ ಸಿಗಲು ಹೇಗೆ ಸಾಧ್ಯ? ಇದರಲ್ಲಿ ಮಿಕ್ಸಿಂಗ್ ಇದೆ.  ನಾವು ಬಳಸುವ ಪ್ರತಿಯೊಂದು ಪದಾರ್ಥಗಳಲ್ಲಿಯೂ ಮಿಕ್ಸಿಂಗ್ ಇದೆ.  ಐಸ್‍ಕ್ರೀಂ ತಯಾರಿಸಲು ದನದ ಕೊಬ್ಬನ್ನು ಬಳಸುತ್ತಾರೆ.  ಅದನ್ನು ನಾವು ಬಾಯಿ ಚಪ್ಪರಿಸಿ ಸೇವಿಸುತ್ತೇವೆ.  ತರಕಾರಿ ಮಾರುವವರು ಕೂಡ ತಾವು ಬೆಳೆದ ತರಕಾರಿಯನ್ನು ಸೇವಿಸುವುದಿಲ್ಲ.  ಬದಲಿಗೆ ಮಾರಾಟ ಮಾಡುತ್ತಾರೆ.  ಏಕೆಂದರೆ ಅದಕ್ಕೆ ಅಷ್ಟೊಂದು ರಾಸಾಯನಿಕ ಸಿಂಪಡಿಸಿರುತ್ತಾರೆ.  ಆ ವಿಷವನ್ನು ನಾವು ಪ್ರತಿನಿತ್ಯ ತಿನ್ನುತ್ತೇವೆ.  ಪ್ರತಿಯೊಬ್ಬರು ತಾವು ತಿನ್ನುವ ತರಕಾರಿಯನ್ನು ಮತ್ತು ಬಳಸುವ ಕಾಳು-ಕಡಿಗಳನ್ನು ತಾವೇ ಸ್ವತಃ ರಾಸಾಯನಿಕ ಮುಕ್ತವಾಗಿ ಬೆಳೆದುಕೊಳ್ಳಬೇಕು ಎಂದು ಶ್ರೀಗಳು ಕರೆ ನೀಡಿದರು.

ವಿಜಯಪುರ ಜಿಲ್ಲೆಯ ಕಂಬಾಗಿಯಲ್ಲಿ ಮಧುರಾ ಆಯಿಲ್ ಇಂಡಸ್ಟ್ರೀಸ್‍ನಲ್ಲಿ ಕಟ್ಟಿಗೆ ಗಾಣದಿಂದ ಕುಸಬಿ, ಶೇಂಗಾ ಮತ್ತು ಕೊಬ್ಬರಿ ಎಣ್ಣೆ ಉತ್ಪಾದಿಸುವ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಎಸ್.ಎಲ್.ಎಲ್.ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸ್ವಾಮೀಜಿ ಮತ್ತೀತರ ಗಣ್ಯರು ಸನ್ಮಾನಿಸಿ ಗೌರವಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, 30 ವರ್ಷಗಳಿಂದಿಚೆಗೆ ಹೃದಯ ಮತ್ತು ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಅದಕ್ಕನುಗುಣವಾಗಿ ಆಸ್ಪತ್ರೆಗಳ ಸಂಖ್ಯೆಯೂ ಹೆಚ್ಚಾಗಿದೆ.  ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಸಂಖ್ಯೆ ಹೆಚ್ಚಾಗಿ ರಾಜ್ಯ ಮಧುಮೇಹಿಗಳ ರಾಜಧಾನಿ ಎನಿಸಿಕೊಂಡಿದೆ.  ಇದಕ್ಕೆ ಆಹಾರ ಪದ್ಧತಿಯೇ ಕಾರಣವಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಅಪ್ಪು ಪಟ್ಟಣಶೆಟ್ಟಿ, ಎಸ್.ಆರ್.ಪಾಟೀಲ, ಮಾಜಿ ಶಾಸಕ ಆನಂದ ನ್ಯಾಮಗೌಡ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ, ಮುಖಂಡರಾದ ಕೆ. ಎಚ್. ಮುಂಬಾರೆಡ್ಡಿ, ಸಂಗಮೇಶ ಬಬಲೇಶ್ವರ, ಶ್ರೀಶೈಲಗೌಡ ಪಾಟೀಲ ನಿಡೋಣಿ ಮಾತನಾಡಿದರು.

ಈ ವೇಳೆ ಎಸ್. ಎಸ್. ಎಲ್. ಸಿ ಮತ್ತು ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮಧುರಾ ಆಯಿಲ್ ಇಂಡಸ್ಟ್ರೀಸ್ ಮಾಲೀಕ ಉಮೇಶ ಮಲ್ಲಣ್ಣನವರ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮರೇಗುದ್ದಿ ನಿರುಪಾಧೀಶ ಮಹಾಸ್ವಾಮಿಗಳು, ಶಿರೋಳ ಶಂಕರಾರೂಢ ಮಹಾಸ್ವಾಮಿಗಳು, ಮಮದಾಪುರ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು, ಗುಣದಾಳದ ಡಾ. ವಿವೇಕಾನಂದ ದೇವರು, ನಾವದಗಿ ಶ್ರೀಶೈಲ ಸ್ವಾಮಿಗಳು, ಕಂಬಾಗಿ ಚನ್ನಬಸಯ್ಯ ಹಿರೇಮಠ ಉಪಸ್ಥಿತರಿದ್ದರು.

ಎಸ್. ಎಂ. ಸೊನ್ನದ ಸ್ವಾಗತಿಸಿದರು.  ಸುಭಾಷಚಂದ್ರ ಕನ್ನೂರ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌