ವಿಜಯಪುರ: ನಿವೃತ್ತ ನೌಕರರೊಬ್ಬರ ಗಮನ ಬೇರೆಡೆ ಸೆಳೆದು ಅವರ ಬಳಿಯಿದ್ದ ರೂ. 2.20 ಲಕ್ಷ ಹಣವನ್ನು ಇಬ್ಬರು ಕಳ್ಳರು ಹಾಡುಹಗಲೇ ಎಗರಿಸಿಕೊಂಡು ಪರಾರಿಯಾದ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ.
ತಾಳಿಕೋಟೆ ನಿವಾಸಿ ನಾಗಪ್ಪ ಅಮ್ಮಪ್ಪ ಕೆಂಭಾವಿ(61) ಕೊಡಗಾನೂರ ಬಸವೇಶ್ವರ ಪ್ರೌಢಶಾಲೆಯಲ್ಲಿ ಎಸ್ ಡಿ ಸಿ ಆಗಿ ಸೇವೆ ಸಲ್ಲಿಸಿ ಕಳೆದ ವರ್ಷ ನಿವೃತ್ತಿಯಾಗಿದ್ದರು. ಅಲ್ಲದೇ, ಈ ವೇಳೆ ಬಂದಿದ್ದ ಹಣವನ್ನು ಬ್ಯಾಂಕಿನಲ್ಲಿ ಇಟ್ಟಿದ್ದರು. ಮನೆ ಖರ್ಚಿಗಾಗಿ ತನ್ನ ಬ್ಯಾಂಕ್ ಖಾತೆಯಲ್ಲಿದ್ದ ಹಣದಲ್ಲಿ ರೂ. 2.20 ಹಣವನ್ನು ಡ್ರಾ ಮಾಡಿಕೊಂಡು ಹೋಗುವಾಗ ಇಬ್ಬರು ಕಳ್ಳರು ಆಗಮಿಸಿ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.
ತಾಳಿಕೋಟೆ ಪಟ್ಟಣದಲ್ಲಿರುವ ಯೂನಿಯನ್ ಬ್ಯಾಂಕಿಗೆ ತೆರಳಿದ್ದ ನಾಗಪ್ಪ ಅಮ್ಮಪ್ಪ ಕೆಂಭಾವಿ ಬೆಳಿಗ್ಗೆ 11.42ರ ಸುಮಾರಿಗೆ ಬ್ಯಾಂಕಿನಲ್ಲಿರುವ ತಮ್ಮ ಎಸ್. ಬಿ. ಖಾ.ತೆಯಿಂದ ರೂ. 2.20 ಲಕ್ಷ ಹಣ ವಿತ್ ಡ್ರಾ ಮಾಡಿಕೊಂಡಿದ್ದರು. ಅಲ್ಲದೇ, ಬ್ಯಾಂಕಿನಿಂದ ಹೊರ ಬಂದು ಮನೆಗೆ ಹೋಗಲು ಬೈಕ್ ಹತ್ತಿ ಹಣವನ್ನು ಪ್ಲಾಸ್ಟಿಕ್ ಕ್ಯಾರಿಬ್ಯಾಗಿನಲ್ಲಿಟ್ಟು ತಮ್ಮ ಬೈಕಿನ ಮುಂದಿನ ಟ್ಯಾಂಕ್ ಕವರ್‌ನಲ್ಲಿ ಇಟ್ಟು ಬೈಕ್ ಗೆ ಕಿಕ್ ಹೊಡೆಯುತ್ತಿದ್ದರು. ಈ ಸಂದರ್ಭದಲ್ಲಿ ಮೊದಲೇ ಹೊಂಚು ಹಾಕಿ ಕುಳಿತಿದ್ದ ಇಬ್ಬರು ಖದೀಮರು ಅಲ್ಲಿಗೆ ಹಿಂಬದಿಯಿಂದ ಬಂದು ಬಸ್ ಸ್ಟಾಂಡ್ ದಾರಿ ಯಾವ ಕಡೆಗೆ ಬರುತ್ತದೆ? ಎಂದು ಕೇಳಿದ್ದಾರೆ. ಆಗ ಕೈ ಮಾಡಿ ದಾರಿ ತೋರಿಸುವಷ್ಟರಲ್ಲಿಯೇ ಓರ್ವ ಆರೋಪಿ ಬೈಕಿನ ಟ್ಯಾಂಕರ್ ಮೇಲಿದ್ದ ಹಣವನ್ನು ಕಿತ್ತುಕೊಂಡು ಓಡಿ ಹೋಗಿದ್ದಾನೆ. ಇದೇ ವೇಳೆ, ಅಣತಿ ದೂರದಲ್ಲಿ ಬೈಕ್ ಸ್ಟಾರ್ಟ್ ಮಾಡಿ ನಿಂತಿದ್ದ ಮತ್ತೋರ್ವ ಆರೋಪಿ, ಓಡಿ ಬಂದ ಕಳ್ಳನನ್ನು ಬೈಕಿನಲ್ಲಿ ಕುಳ್ಳಿರಿಸಿಕೊಂಡು ಪರಾರಿಯಾಗಿದ್ದಾನೆ.
ತಾಳಿಕೋಟೆ ಪಟ್ಟಣದ ಬಸವೇಶ್ವರ ವೃತ್ತದ ಕಡೆ ಇಬ್ಬರೂ ಪರಾರಿಯಾಗುತ್ತಿರುವುದನ್ನು ಗಮನಿಸಿದ ನಾಗಪ್ಪ ಅಮ್ಮಪ್ಪ ಕೆಂಭಾವಿ ತಮ್ಮ ಬೈಕಿನಲ್ಲಿ ಕಳ್ಳರನ್ನು ಬೆನ್ನತ್ತಿದ್ದಾರೆ. ಆದರೆ, ಆರೋಪಿಗಳಿಬ್ಬರು ತಮ್ಮ ಬೈಕ್ ನ್ನು ಸ್ಪೀಡ್ ಆಗಿ ಓಡಿಸಿ ಪರಾರಿಯಾಗಿದ್ದಾರೆ.
ನಂತರ ತಾಳಿಕೋಟೆ ಪೊಲೀಸ್ ಠಾಣೆಗೆ ತೆರಳಿದ ನಾಗಪ್ಪ ಅಮ್ಮಪ್ಪ ಕೆಂಭಾವಿ ಹಣ ದೋಚಿ ಪರಾರಿಯಾದ ಘಟನೆಯ ಕುರಿತು ದೂರು ನೀಡಿದ್ದಾರೆ. ಆ ಬಳಿಕ ತಾಳಿಕೋಟೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ, ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ಆತಂಕದಲ್ಲಿ ತಾಳಿಕೋಟೆ ಜನತೆ
ಹಗಲು ಹೊತ್ತಿನಲ್ಲಿಯೇ ರೂ. 2. 20 ಲಕ್ಷ ಹಣವನ್ನು ದೋಚಿದ ಪ್ರಕರಣ ತಾಳಿಕೋಟೆ ಪಟ್ಟಣದಾದ್ಯಂತ ಸಂಚಲನ ಮೂಡಿಸಿದೆ. ಅಲ್ಲದೇ, ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದದ್ದರಿಂದ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಬ್ಯಾಂಕಿನ ಒಳಗಡೆ ಸಿಸಿ ಟಿವಿ ಅಳವಡಿಸಲಾಗಿದೆ. ಆದರೆ, ಬ್ಯಾಂಕಿನ ಹೊರಗಡೆ ಯಾವುದೇ ಸಿಸಿಟಿವಿ ಅಳವಡಿಕೆ ಮಾಡದಿರುವುದು ಬ್ಯಾಂಕಿನವರ ಲೋಪ ಎದ್ದು ಕಾಣುವಂತೆ ಮಾಡಿದೆ. ಈಗಲಾದರೂ ಅಧಿಕಾರಿಗಳು ಬ್ಯಾಂಕಿನ ಹೊರಗಡೆಯೂ ಸಿಸಿಟಿವಿ ಅಳವಡಿಸಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ತಾಳಿಕೋಟೆ ಪಟ್ಟಣದ ನಿವಾಸಿಗಳು ಆಗ್ರಹಿಸಿದ್ದಾರೆ.