Video News: ಮೊಸರ ನಾಡಿನ ಬಳಿ ರೂ. 32 ಲಕ್ಷ ದರೋಡೆ- ಲಾರಿ ಚಾಲಕ, ಕ್ಲಿನರ್ ಮೇಲೆ ಹಲ್ಲೆ ನಡೆಸಿ ಪರಾರಿಯಾದ ದುಷ್ಕರ್ಮಿಗಳು

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ದರೋಡೆ ನಡೆದಿದೆ.

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರ ವಲಯದಲ್ಲಿ ಶುಕ್ರವಾರ ತಡರಾತ್ರಿ ಕ್ಯಾಂಟರ್ ವಾಹವ ತಡೆದ ದುಷ್ಕರ್ಮಿಗಳು ಚಾಲಕ ಮತ್ತೋರ್ವನ ಮೇಲೆ ಖಾರದ ಪುಡಿ ಎರಚಿ ರಾಡ್ ನಿಂದ ಹಲ್ಲೆ ಮಾಡಿ ಕ್ಯಾಂಟರ್ ನಲ್ಲಿದ್ದ ರೂ. 32 ಲಕ್ಷ ರೂಪಾಯಿ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಈ ಘಟನೆಯಲ್ಲಿ ದರೋಡೆಕೋರರಿಂದ ಹಲ್ಲೆಗೀಡಾದ ಕ್ಯಾಂಟರ್ ಚಾಲಕ ಮಹಾಂತೇಶ ಕುಂಬಾರ ಹಾಗೂ ಕ್ಲೀನರ್ ಮಲ್ಲು ಕೊಡಚಿ ಅವರಿಗೆ ಕೊಲ್ಹಾರ ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸುದ್ದಿ ತಿಳಿದ ತಕ್ಷಣ ವಿಜಯಪುರ ಎಸ್ಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ದರೋಡೆಗೆ ಒಳಗಾದವರಿಂದ ಮತ್ತು ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದು ಆರೋಪಿಗಳ ಬಂಧನಕ್ಕೆ ಸೂಚನೆ ನೀಡಿದ್ದಾರೆ.

ಕೊಲ್ಹಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾಂಟರ್ ಚಾಲಕ, ಕ್ಲೀನರ್

ಘಟನೆಯ ಹಿನ್ನೆಲೆ

ಕಲಬುರಗಿ ಜಿಲ್ಲೆಯ ಜೀವರ್ಗಿ ಪಟ್ಟಣದ ಹತ್ತಿ ವ್ಯಾಪಾರಿ ಚಂದ್ರಕಾಂತ ಕುಂಬಾರ ಎಂಬುವರು ರೈತರಿಂದ ಹತ್ತಿ ಸಂಗ್ರಹಿಸಿದ್ದರು.  ಅಲ್ಲದೇ, ಈ ಹತ್ತಿಯನ್ನು ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿರೋ ಹತ್ತಿ ಕಾರ್ಖಾನೆಯಲ್ಲಿ ಮಾರಾಟಕ್ಕೆ ಕಳುಹಿಸಿದ್ದರು.  ಈ ಹತ್ತಿ ಮಾರಾಟ ಮಾಡಿದ ಕ್ಯಾಂಟರ್ ಚಾಲಕ ಮಹಾಂತೇಶ ಕುಂಬಾರ ಮತ್ತು ಕ್ಲೀನರ್ ಮಲ್ಲು ಕೊಡಚಿ ಹತ್ತಿ ಮಾರಾಟದಿಂದ ದೊರೆತ ರೂ. 32 ಲಕ್ಷ ನಗದು ಹಣದೊಂದಿಗೆ ಜೇವರ್ಗಿಗೆ ವಾಪಸ್ಸಾಗುತ್ತಿದ್ದರು.

ವಿಡಿಯೋ ನ್ಯೂಸ್:

ಆದರೆ, ಶುಕ್ರವಾರ ತಡರಾತ್ರಿ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಬಳಿ ಕೆಲವು ದುಷ್ಕ್ರಮಿಗಳು ಬುಲೆರೋ ವಾಹನ ತಂದು ನಿಲ್ಲಿಸಿ ಕ್ಯಾಂಟರ್ ವಾಹನವನ್ನು ಅಡ್ಡಗಟ್ಟಿದ್ದಾರೆ.  ಅಷ್ಟೇ ಅಲ್ಲ, ನಂತರ ಕ್ಯಾಂಟರ್ ಮೇಲೆ ಕಲ್ಲು ಎಸೆದು ಗಾಜನ್ನು ಜಖಂ ಮಾಡಿದ್ದಾರೆ.  ನಂತರ ಮಹಾಂತೇಶ ಕುಂಬಾರ ಮತ್ತು ಮಲ್ಲು ಕೊಡಚಿ ಅವರ ಕಣ್ಣಿಗೆ ಖಾರದ ಪುಡಿ ಎರಚಿಸಿದ್ದಾರೆ.  ಅಲ್ಲದೇ, ಕ್ಯಾಂಟರ್ ನಲ್ಲಿದ್ದ ಇವರಿಬ್ಬರ ಮೇಲೆ ರಾಡ್ ನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.  ಬಳಿಕ ಇವರ ಬಳಿಯಿದ್ದ ರೂ. 32 ಲಕ್ಷ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ರಸ್ತೆಯ ಮೇಲೆ ಬಿದ್ದಿರುವ ಖಾರದ ಪುಡಿ

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ, ಪರಿಶೀಲನೆ

ಈ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಕೊಲ್ಹಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.  ಅಲ್ಲದೇ, ಈ ಕುರಿತು ಮಾಹಿತಿ ಪಡೆದ ವಿಜಯಪುರ ಎಸ್ಪಿ ಋಷಿಕೇಶ ಸೋನಾವಣೆ ಕೂಡ ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಅಲ್ಲದೇ, ಈ ಪ್ರಕರಣದ ತನಿಖೆಗೆ ಪೊಲೀಸರ ತಂಡವನ್ನು ರಚಿಸಿದ್ದಾರೆ.  ಅಷ್ಟೇ ಅಲ್ಲ, ಆರೋಪಿಗಳ ಬಂಧನಕ್ಕೆ ಸೂಚನೆ ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ಕೊಲ್ಹಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ನಡೆದ ಈ ದರೋಡೆ ಪ್ರಕರಣ ಜಿಲ್ಲಾದ್ಯಂತ ಸಂಚಲನ ಮೂಡಿಸಿದ್ದು, ಜನತೆ ಬೆಚ್ಚಿ ಬಿದ್ದಿದ್ದಾರೆ.  ಪೊಲೀಸರು ಈ ಘಟನೆಯ ಸಮಗ್ರ ತನಿಖೆ ನಡೆಸಿದ ನಂತರ ಈ ಕುರಿತು ಹೆಚ್ಚಿನ ಮಾಹಿತಿ ಸಿಗಲಿದೆ.

Leave a Reply

ಹೊಸ ಪೋಸ್ಟ್‌