ವಿಜಯಪುರ: ರೈತರ ಪರಿಹಾರದ ಹಣವನ್ನು ಸಾಲದ ಖಾತೆಗೆ ಜಮೆ ಮಾಡಿಕೊಂಡಿರುವ ಬಗ್ಗೆ ದೂರುಗಳು ಬಂದಿರುವುದರಿxದ ತಕ್ಷಣ ಮರುಪಾವತಿಸುವಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚನೆ ನೀೡಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕರ್ನಾಟಕ ಸರ್ಕಾರ ಜಿಲ್ಲೆಯ ರೈತರಿಗೆ ಬರ ಪರಿಹಾರವಾಗಿ ರೂ. 360.10 ಕೋ. ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರಕಾರದಿಂದ ನೇರವಾಗಿ ರೈತರ ಖಾತೆಗಳಿಗೆ ಬರ ಪರಿಹಾರದ ಹಣ ಬಿಡುಗಡೆ ಮಾಡಿದ ಹಣ ಇದಾಗಿದ್ದು, ಇದನ್ನು ರೈತರ ಸಾಲದ ಖಾತೆಗೆ ಜಮೆ ಮಾಡಿಕೊಳ್ಳಬಾರದು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಮತ್ತ ವಿಜಯಪುರ ಸಹಕಾರ ಸಂಘಳ ಇಲಾಖೆಯ ಉಪ ನಿಬಂಧಕರಿಗೆ ಸೂಚನೆ ನೀಡಲಾಗಿದೆ. ಆದರೂ, ಸಾಲದ ಖಾತೆಗಳಿಗೆ ಪರಿಹಾರದ ಹಣ ಜಮೆ ಮಾಡಿಕೊಂಡಿರುವುದು ಕಂಡು ಬಂದಿದೆ. ಹೀಗಾಗಿ ಕಡಿತಗೊಳಿಸಿದ ಹಣವನ್ನು ತಕ್ಷಣ ಮರು ಪಾವತಿಸಬೇಕು. ಇಲ್ಲದಿದ್ದರೆ ಅಂಥ ಬ್ಯಾಂಕ್‌ಗಳ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ-2005ರ ಅನ್ವಯ ಮತ್ತು ಇತರ ಕಾಯ್ದೆಯ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ರೈತರ ಅನುಮತಿ ಪಡೆಯದೇ ಅವರ ಬರ ಪರಿಹಾರ ಹಣವನ್ನು ಅನ್ನದಾತರ ಸಾಲದ ಖಾತೆಗೆ ಜಮೆ ಮಾಡಿಕೊಂಡರೆ ಆಯಾ ಬ್ಯಾಂಕುಗಳ ಮುಖ್ಯಸ್ಥರನ್ನು ಮತ್ತು ಶಾಖಾ ವ್ಯವಸ್ಥಾಪಕರನ್ನು ಜವಾಬ್ದಾರನಾಗಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸರಕಾರದಿಂದ ಬಿಡುಗಡೆಯಾದ ಯಾವುದೇ ತರಹದ ಪ್ರೋತ್ಸಾಹ ಹಣವನ್ನು ಸಾಲದ ಖಾತೆಗೆ ಹೊಂದಾಣಿಕೆ ಮಾಡದೆ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು. ಅಲ್ಲದೇ, ಅವರ ಜೊತೆ ಸಂಯಮದಿಂದ ವರ್ತಿಸಬೇಕು. ತಾಂತ್ರಿಕ ಸಮಸ್ಯೆ ಇದ್ದರೆ ಗ್ರಾಹಕರಿಗೆ ಸರಿಯಾದ ತಿಳುವಳಿಕೆ ನೀಡಿ ಮಾರ್ಗದರ್ಶನ ಮಾಡಿ ಅವರ ಸಮಸ್ಯೆಯನ್ನು ಬೇಗನೆ ಪರಿಹರಿಸಬೇಕು ಎಂದು ಟಿ. ಭೂಬಾಲನ್ ಸೂಚನೆ ನೀಡಿದ್ದಾರೆ.